Sunday, March 29, 2015

ಋಣದ ಗೀತೆಗಳು




ಚಿತ್ರ ಕೃಪೆ : ಅಂತರ್ಜಾಲ 

ಅವಧಿಯ ಸಂಯೋಜಕಿ ಸಂಧ್ಯಾರಾಣಿಯವರು ಬರೆದ ನಾ ಬರೆವ ಪ್ರತಿ ಅಕ್ಷರಕ್ಕೂ ಯುಗಗಳ ಬಾಯಾರಿಕೆಯಿದೆ.ಎಂಬ ಸಾಲು ಓದಿದಾಕ್ಷಣ ರಾಧೆ , ಮೀರೆಯರ ದಾಹ  ಮತ್ತೆ ನೆನಪಾಗಿತ್ತು .  ಬಂದೇ  ಬರುವನೆಂಬ ನಂಬಿಕೆಯೊಡನೆ ಕಾಯುವುದು ಕನಸಿನೂರಿಗೆ ದಾರಿಯಾದರೆ ಬರುವನೋ ಬಾರನೋ ಎಂಬ ಪ್ರಶ್ನೆ ಮಡುಗಟ್ಟಿದ ವಿಷಾದದ ಹೊನಲಿನಲ್ಲಿ ತೇಲಿಸುತ್ತದೆ .  ಮಡುಗಟ್ಟಿದ ವಿಷಾದ ಎಂದೊಡನೆ ನನಗೆ ನೆನಪಾಗುವುದು ಗುಲ್ಜಾರರ ಕೆಲವು ಗೀತೆಗಳು . ಅದರಲ್ಲೊಂದು मै  एक सदी से  बैटी हूँ...”  ಹೃದಯನಾಥ್ ಮಂಗೇಶ್ಕರ್ ಸಂಗೀತ ನಿರ್ದೇಶನದಲ್ಲಿ , ಲತಾ ಮಂಗೇಶ್ಕರ್  ದನಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಗೀತೆ . 

ಕೆಳಗಿನ ಸಾಲುಗಳು ಮೂಡಲು ಮೇಲೆ ಹೇಳಿದ ಎಲ್ಲರೂ  ಕಾರಣ .  ಆದ್ದರಿಂದ ಇದು  ಋಣದಲ್ಲರಳಿದ ಗೀತೆ

ಈ ಹಾದಿಯಲ್ಲಿ ಕಾದಿರುವೆ
ಕಾಲದ ಪರಿವೆ ಇಲ್ಲದೇ
ಮಣ್ಣ ಮೇಲೆ ಹೆಜ್ಜೆ ಮೂಡಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ

ಮುಚ್ಚಿದ ಕಣ್ಣ ಮುಂದೆ ತೇಲಿದವು 
ಒಂದಷ್ಟು ಚಂದಿರನ ರಥಗಳು 
ಆದರೆ , ಒಳಗಣ  ಚಂದಿರ
ಅಂಗಳಕ್ಕಿಳಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ

ಮರಳಿನಂತೆ ಹಾರುತ್ತಿವೆ  
ಹಗಲು ರಾತ್ರಿಗಳು
ಅಂಗಳದ ರಂಗವಲ್ಲಿಯ ಹಿಂದಿನ
ನೆರಳನು  ಯಾರೂ ಹಿಡಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ

ಎಲ್ಲ ಜೋಳಿಗೆಗಳಲಿ
ಒಂದಷ್ಟ ತುಂಬುತ್ತಾನೆ ಆಕಾಶಜ್ಜ
ನಾ ರೆಪ್ಪೆ ತಿಕ್ಕಿ , ಹಿಂಡಿ ಹರವಿದರೂ
ಹನಿಯೊಂದು ಉದುರಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ


ಚಿತ್ರ ಕೃಪೆ : ಅಂತರ್ಜಾಲ 


ಅಡಿಗರ “ಶ್ರೀ ರಾಮ ನವಮಿಯ ದಿವಸ” ಎಂಬ ಕವಿತೆಯನ್ನು  ಅಲ್ಲಲ್ಲಿ ಕೇಳಿದ್ದರೂ ವಿವರಣೆಯೊಂದಿಗೆ ಓದಿದ್ದು ಇತ್ತೀಚಿಗೆ.
ರೋಹಿತ್ ಚಕ್ರತೀರ್ಥ ನಿಲುಮೆ ಎಂಬ ತಾಣದಲ್ಲಿ ಇದರ ಬಗ್ಗೆ ಬರೆದಿದ್ದರು .

ಓದಿದ ನಂತರ ಮೂಡಿದ ಸಾಲುಗಳು ಕೆಳಗಿವೆ :

ರೇಡಿಯೋದಲ್ಲಿ  ‘ರಾಮನ ಅವತಾರ..’ ಕೇಳುವುದರೊಂದಿಗೆ
ಹುಟ್ಟಿದ ಬೆಳಗು . “ಕೋಸುಂಬರಿ , ಕರಬೂಜ ದೇಹಕ್ಕೆ ಲೇಸು”
ಯೋಗ ಗುರು. ಮರೆತ ರಾಮನ ತೊಟ್ಟಿಲು ಇಂದು ಮತ್ತೆ
ದೇವರ ಮುಂದೆ. ಬೆಂದ ಊರಿನ ಬೀದಿ ಬೀದಿಯಲ್ಲಿ ಎದ್ದ
ಪಾನಕದ ಶಾಮಿಯಾನ. ಮೊಳ ಮಲ್ಲಿಗೆಯ ನಡುವೆ ನಕ್ಕ
ಸೀತಾರಾಮ . “ಸಧ್ಯ  ಕೃಷ್ಣನಂತೆ ಇವನು ಮಧ್ಯ ರಾತ್ರಿ
ಹುಟ್ಟಲಿಲ್ಲ “ ಮಗನ ಉವಾಚ . “ಅದೇನು ರಾಮನಿನ್ನೂ
ಎಳೆ ಮಗುವೇ? ವರುಷ ವರುಷವೂ ಎಂತಕ್ಕೆ ತೊಟ್ಟಿಲು
ಅವನಿಗೆ ?”  ಮಗಳ ಪ್ರಶ್ನೆ .  ದಶರಥನ ಪುತ್ರಕಾಮೇಷ್ಟಿಗೆ
ಕೊನೆ ಎಲ್ಲಿ  ? ಕೈಕೇಯಿ ಇಲ್ಲದೆಯೂ ಕಾಡು ಪಾಲಾದ ರಾಮ
ವನವಾಸಕ್ಕಿಲ್ಲಿ ಕೊನೆ ಇಲ್ಲ . ಅಗಸನಿಲ್ಲದ ಅನುಮಾನಕ್ಕೆ ನೂರು
ಹೆಸರು , ಕಾಯುವ ಕೈಗೆ ಹುತ್ತ ಕಟ್ಟಿ ಕಾಲವಾಯಿತು . ವರುಷಕ್ಕೊಮ್ಮೆ
ನೆನಪಾದರೆ , ಪುರುಸೊತ್ತಿದ್ದರೆ  ‘ರಾಮ ಲಾಲಿ ...’ ; ಅಲ್ಲಲ್ಲಿ ಮಿಡಿವ ವೀಣೆ
ಉಳಿದಂತೆ ಖಾಲಿ ಕೈಯ್ಯ ಕೋದಂಡಪಾಣಿ ಸದಾ ತೊಟ್ಟಿಲಲ್ಲಿ !

3 comments:

  1. ಋಣದ ಗೀತೆಗಳನ್ನು ಬರೆದ ನಿಮಗೆ, ಬರೆಯಿಸಿದ ಸಂಧ್ಯಾರಾಣಿ ಹಾಗು ರೋಹಿತ ಚಕ್ರವರ್ತಿಯವರಿಗೆ ನಾನು ಋಣಿಯಾಗಿದ್ದೇನೆ!

    ReplyDelete
  2. ಇದೇ ಶೀರ್ಷಿಕೆಯನು ದಾಖಲಿಸದೆ ನಾವೂ ಅದೆಷ್ಟು ಕವಿತೆ ಕಟ್ಟಿದೆವೋ? ತಮ್ಮ ಪ್ರಾಮಾಣಿಕತೆಗೆ ನಮ್ಮ ನಮನ.

    ಎಲ್ಲ ಜೋಳಿಗೆಗಳಲಿ
    ಒಂದಷ್ಟ ತುಂಬುತ್ತಾನೆ ಆಕಾಶಜ್ಜ
    ತುಂಬಿಕೊಳ್ಳುವ ಪ್ರಾಪ್ತಿಯೂ ನಮಗಿರಬೇಕಲ್ಲ!

    ಅಡಿಗರು ನನಗೆ ಸದಾ ಅಚ್ಚರಿಯ ಮಾಯಾಗೋಲ.

    ReplyDelete
    Replies
    1. ಇದನ್ನು ಗುರುತಿಸುವುದೇ ನಿಮ್ಮ ಸಹೃದಯತೆಯ ಸಾಕ್ಷಿ ಸರ್. ಧನ್ಯವಾದಗಳು

      Delete