“ಹೌದು , ಇಲ್ಲ , ಗೊತ್ತಿಲ್ಲ ಎನ್ನುವ ಸಿಧ್ಧ ಮಾದರಿಯ
ಉತ್ತರಗಳು ಬದುಕಿನ ಪ್ರಶ್ನೆಗಳಿಗೆ ಉತ್ತರವಾಗಲಾರವು” ಹೀಗಂತ ಅವನು ಹೇಳಿದಾಗ ಹೇಗೆ ವಿವರಿಸಬೇಕೆಂದು ತಿಳಿಯಲಿಲ್ಲ.
![]() |
ಚಿತ್ರಕೃಪೆ :
ಅಂತರ್ಜಾಲ
|
ಎಲ್ಲ ಆಸ್ತಿಯನ್ನೂ
ಮಾರಿ ಕೊನೆಗೆ ವೀಣೆಯನ್ನು ಮಾತ್ರವೇ ಮಾರದೇ
ಉಳಿಸಿಹೋದ ಅಜ್ಜನ ಮೊಮ್ಮಗಳು ನಾನು.
ಶರದೃತುವಿನ ಮೂಲಾನಕ್ಷತ್ರದಲ್ಲಿ ಧೂಳು ಒರಸಿ
ಒಂದಷ್ಟು ಅರಿಸಿನ , ಕುಂಕುಮ , ಹೂವು ಕಾಣಿಸಿದರೆ ವೀಣೆಯ ಆ ವರ್ಷದ ವಾಯುವಿಹಾರ
ಮುಗಿಯುತ್ತಿತ್ತು . ಒಂದು ವರ್ಷ ಪೂಜೆ ಮುಗಿಸಿದ
ಅದನ್ನು ಮತ್ತೆ ಅಟ್ಟ ಸೇರಲು ನಾ ಬಿಟ್ಟಿರಲಿಲ್ಲ
. ನನಗಾಗ ಮೂರು ವರ್ಷ. ಒಂದು ತಂತಿ ಹಿಡಿದು
ಜಗ್ಗುತ್ತಿದ್ದರೆ ನನಗಾಗಿ ಅಲ್ಲೊಂದು ಲೋಕ ಸೃಷ್ಟಿಯಾಗುತ್ತಿತ್ತು. “ಅಮ್ಮಾ ಇದನ್ನು
ಬಾರಿಸ್ತಾರಾ?” ಅಂದ್ರೆ ಅಪ್ಪಟ ಮೈಸೂರು ಕನ್ನಡ
ಮಾತಾಡುತ್ತಿದ್ದ ಅಜ್ಜಿ “ ಲೇ ವೀಣೆನ
ನುಡಿಸ್ತಾರೆ ಕಣೆ “ ಅಂದಿ ದ್ದರು. ಮುಳ್ಳ ಜಾಲಿಯನ್ನೇ
ಹಸಿರೆಂದು ಬಗೆಯುವ ಅಪ್ಪಟ ಬಯಲುಸೀಮೆಯಲ್ಲಿ ಮೈಸೂರು ಕಡೆಯ ಹಳ್ಳಿಯಿಂದ ಬಂದ ಅಜ್ಜಿ ಭಾಷಾ ಅಲ್ಪಸಂಖ್ಯಾತಳು . ಅದ್ಯಾವ ದೈವದ ಪುಣ್ಯವೋ ನಮ್ಮ ಮನೆಯ ಪಕ್ಕ ಬಿಡಾರ
ಹೂಡಲು ಬಂದ ಬ್ಯಾಂಕಿ ನವರ ಸಂಸಾರದಲ್ಲಿ ಒಬ್ಬ
ಅಜ್ಜ ಇದ್ದರು ಮತ್ತು ಅವರಿಗೆ ವೀಣೆ ನುಡಿಸೋಕೆ ಬರುತ್ತದೆ ಎಂದು ಯಾರೋ ಹೇಳಿದರು .
ಒಂದು ದಿನ ಅಮ್ಮ
ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದಳು , ವೀಣೆ ಕಲಿಯೋಕೆ ದುಡ್ಡು ಹೆಚ್ಚಂತೆ ಅದನ್ನೆಲ್ಲಿಂದ
ಹೊಂದಿಸುವುದು ಎಂಬ ಪ್ರಶ್ನೆಯ ನಡುವೆಯೂ ನನ್ನನ್ನು ಅಲ್ಲಿಗೆ ಕರೆದೊಯ್ದ ಅಮ್ಮನ ಧೈರ್ಯ
ದೊಡ್ಡದು. ಹೆಣ್ಣು ಮಕ್ಕಳಿಗೆ ಹಾಡು ಹಸೆ ಕಲಿಸುವ
ಕ್ರಿಯೆಯ ಭಾಗವಾಗಿ ಅಮ್ಮ , ಬಾಲವಾಡಿಗೆ ಹೋಗುತ್ತಿದ್ದ ನನಗೆ ‘ಅಂಗಾಳದೊಳು ರಾಮನಾಡಿದ ...’ ಎನ್ನುವ ಹಾಡನ್ನು ಕಲಿಸಿದ್ದಳು. ಅಜ್ಜ “ಏನಾರಾ
ಅನ್ನವ್ವಿ “ ಅನ್ನುತ್ತಿದ್ದ ಹಾಗೆ ಅಮ್ಮನ ಆಣತಿಯಂತೆ ಅದನ್ನೇ ಹಾಡಿದ್ದಾಯಿತು .
ವೀಣೆ ಕಲಿಯೋಕೆ ಸ್ವಲ್ಪ ಮಟ್ಟಿಗಿನ
ಹಾಡುಗಾರಿಕೆಯನ್ನು ಕಲಿಯಬೇಕು ಎಂಬುದು ನನಗಾಗ ತಿಳಿದಿರದ ವಿಚಾರ. “ಅವ್ವಿ ಈ ಹೊತ್ತಿನ್ಯಾಗ ಈ
ರಾಗ ಅನ್ನ್ಬೇಕ್ ನೋಡು “ ಅಂತ ಶುರುವಿಟ್ಟು ಅಜ್ಜ ಅದೆಷ್ಟು ರಾಗಗಳನ್ನು ಕಲಿಸಿದನೋ ನಾನೆಷ್ಟು ಕಲಿತೆನೋ ಇಬ್ಬರೂ ಲೆಖ್ಕ
ಇಟ್ಟಿಲ್ಲ. ಹಾಗಂತ ನಾ ಸಂಗೀತಾಭ್ಯಾಸವನ್ನು ಇಂದು
ಮುಂದುವರೆಸಿಲ್ಲ. ಬದುಕಿನ ಬಂಡಿಗೆ ರಂಗಜ್ಜ ತುಂಬಿದ ಇಂಧನದ ಅರಿವಾಗಿದ್ದು ಇತ್ತೀಚಿಗೆ.
ಹೈ ಸ್ಕೂಲ್ ಮುಗಿಸಿ
ಕಾಲೇಜು ಸೇರುವಾಗ ಒಮ್ಮೆ ನಾನು ಅಜ್ಜ ಅವರ ಯಾವುದೋ ಸಂಬಧಿಕರ ಮನೆಗೆ ಮೈಸೂರಿಗೆ ಹೋಗಿದ್ದೆವು .
ಅಜ್ಜ ಹಾಡುವಾಗ ಅವನ ಜೊತೆ ನಾನೂ ಹಾಡಿದ್ದೆ. ಅಲ್ಲಿ ಪರಿಚಯವಾದವನು ಅವನು. ಯಾರೋ ಇವನ ಹೆಸರು
ಅವಿನಾಶ್ ಎಂದರೆ , ‘ಹಾಯ್, ಹೆಲೋ’ ಹೇಳಲೂ ಗೊತ್ತಿರದ ಸಣ್ಣ ಪಟ್ಟಣದ ಹುಡುಗಿ ಪೆಚ್ಚಾಗಿ
ನಕ್ಕಿದ್ದೆ . ಹದಿನೈದಕ್ಕೆ ಹರೆಯ ಕಾಲಿಟ್ಟರೂ
ಕನಸು ಕಾಣುವ ಕಣ್ಣುಗಳಿನ್ನೂ ಮುಚ್ಚಿಕೊಂಡಿದ್ದವೇನೋ ?
ಮತ್ತೆ
ಅವಿನಾಶನನ್ನು ಭೇಟಿಯಾಗಿದ್ದು ಪದವಿ ಸೇರಿದ ನಂತರ ಮತ್ತೊಂದು ಬಾರಿ ಮೈಸೂರಿಗೆ ಹೋದಾಗ. ಅಜ್ಜನಿಗೂ
, ನನಗೂ ಇಷ್ಟವಾದ ‘ನಾನು ಬ್ರೋವಮನಿ ಚಪ್ಪವೆ...’
ಎಂಬ ಭದ್ರಾಚಲ ರಾಮದಾಸರ ಕೃತಿ ಹಾಡುವಾಗ ಅವನು
ಬಂದಿದ್ದ. ಮೊದಲ ಬಾರಿಗೆ ಯಾರಿಗೋ ನಾ ಹಾಡುತ್ತೆನೆಂದು ತಿಳಿಯಿತೆಂದು ನಾ ಹಿಗ್ಗಿದೆನಾ ?
ನೆನಪಿಲ್ಲ. ಅಂತರ್ಜಾಲದ ದೆಸೆಯಿಂದ ಇಮೇಲ್ ಎಂಬ
ಸೌಲಭ್ಯ ದೊರೆತದ್ದು ಕಾಲ ನಮ್ಮ ಪೀಳಿಗೆಗಿತ್ತ ವರ.
ದೀಪಾವಳಿಗೊಂದು ಶುಭಾಷಯ , ನ್ಯೂ ಇಯರ್ಗೊಂದು
ವಿಶ್ಶು ಇಷ್ಟು ಬಿಟ್ಟರೆ ಆ ಮೇಲ್ಗಳಲ್ಲಿ ಮತ್ತೇನೂ ಇರುತ್ತಿರಲಿಲ್ಲ.
ಸಂಗೀತವನ್ನು ಅಷ್ಟು
ಪ್ರೀತಿಸುತ್ತಿದ್ದರೂ ನಾನೇಕೆ ಪದವಿಯಲ್ಲಿ ಬೇರೆ ವಿಷಯ ಓದಿದೆ ? ಎಂಬುದು ಇಂದಿಗೂ
ನನಗರ್ಥವಾಗಿಲ್ಲ. ಹಣ , ಅಂತಸ್ತು , ಮನೆಯವರ ಒತ್ತಡ
ಅದೂ ಇದೂ ಎಂಬ ಯಾವ ಸುಳ್ಳು ಕಾರಣವನ್ನೂ ನಾನು ಕೊಡಲಾರೆ. ಬಹುಶಃ ಸಂಗೀತದ ಬಗ್ಗೆ
ನನಗಷ್ಟು ಒಲವಿರಲಿಲ್ಲ ಎಂಬ ಸತ್ಯವನ್ನು ನಾನೀಗ ಒಪ್ಪಿಕೊಳ್ಳಲೇ ಬೇಕು . ಈಗ ಒಲವು ಮೂಡಿದ್ದರೂ
ಪದವಿ ತೋರಿಸಿದ ಹಾದಿಯಲ್ಲಿ ನಡೆದಾಗಿದೆ.
ಪದವಿ ಮುಗಿಸಿ
ಮನೆಯವರ ಮಾತು ಮೀರಿ ಉದ್ಯೋಗವನ್ನರಸಿ ಮಹಾನಗರಿಗೆ ಬಂದ ನಂತರ ಒಂದೆರಡು ಬಾರಿ ಭೇಟಿಯಾಗಿದ್ದ.
ಸಾಮಾನ್ಯ ಕಾಲೇಜಿನ ಸಾಧಾರಣ ವಿಧ್ಯಾರ್ಥಿಯಾದ ನನಗೆ ಕೆಲಸ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ.
ಮಾರನೆಯ ದಿವಸವಿದ್ದ ಯಾವುದೋ ಸಂದರ್ಶನದ ತಯಾರಿಗಾಗಿ ನಾನು ಇಮೇಲ್ ತೆಗೆದರೆ ಅವನ ಹೆಸರು
ಕಂಡಿತ್ತು . ಸಮಯ ಸ್ಥಳದ ವಿವರ ಕೊಟ್ಟು ಅಂದು ಸಂಜೆ ಭೇಟಿಯಾಗುವುದಾಗಿ ತಿಳಿಸಿದ್ದ. ಭೇಟಿ ಸಾಧ್ಯವಾ ಎಂದು ಕೇಳಿಲ್ಲ ? ಭೇಟಿ ಮಾಡು ಎಂದು
ಆಜ್ಞೆ ಮಾಡಿದ್ದಾನೆ ಎಂಬ ಕೋಪದ ನಡುವೆಯೇ ಅವನನ್ನು ಭೇಟಿಯಾದೆ. ಕೆಲಸ ಸಿಗದ ನೋವು ಮಾತಿನಲ್ಲಿ ಜಿನುಗಿತ್ತು . “ಸಿಗುತ್ತೆ
ಬಿಡು” ಎಂಬ ಅವನ ಸಾಮಾನ್ಯ ಭರವಸೆಯೂ ನನಗಾಗ ಪರಮ ಸತ್ಯದಂತೆ ಕಂಡಿತ್ತು . “ಎಲ್ಲೆಲ್ಲೋ
ಸಿಕ್ಕಿಲ್ಲ ಇನ್ನು ಅಂಥಾ ದೊಡ್ಡ ಕಂಪನಿಯಲ್ಲಿ ಸಿಗತ್ತಾ ?” ಎಂದರೆ
“ಪ್ರಯತ್ನ ಪಡುವಾಗ ಸಾಧ್ಯ ಎಂಬ ಭರವಸೆಯೇ ಅರ್ಧ ಕೆಲಸ ಮಾಡಿಸತ್ತಮ್ಮ “ ಅಂದಿದ್ದ. ಅವನ
ಮಾತಿನ ಪ್ರಭಾವವೋ ನನ್ನ ಅದೃಷ್ಟವೋ , ಸಾಮರ್ಥ್ಯವೋ ಅಂತೂ
ಕೆಲಸ ಸಿಕ್ಕಿತ್ತು.
![]() |
ಚಿತ್ರಕೃಪೆ :
ಅಂತರ್ಜಾಲ
|
೩ ವರ್ಷಗಳ ನಂತರ , ಹೋದವಾರ
ಅವನಿಂದ ಮತ್ತೊಂದು ಮೇಲ್ ಬಂತು ನಾಳೆ ಭೇಟಿಯಾಗು . ಹಿಂದಿನ ಭೇಟಿಯ ಭರವಸೆಯಿಂದ ಸಿಕ್ಕ ಕೆಲಸ ಕೋಪ ಕಡಿಮೆ ಮಾಡಿತ್ತು . ಭೇಟಿಯಾಗಿ ಕೆಲಸದ ಬಗ್ಗೆ
ಕೇಳಿದ ನಂತರ ಅಚಾನಕ್ಕಾಗಿ ಅವನ ಓದು , ಕೆಲಸ ,
ಕುಟುಂಬದ ಬಗ್ಗೆ ಚುಟುಕಾಗಿ ಹೇಳಿದ .೧೦ ವರ್ಷದ
ಪರಿಚಯದಲ್ಲಿ ೪-೫ ವಾಕ್ಯಗಳಲ್ಲಿ ಮುಗಿಯುತ್ತಿದ್ದ ಸಂಭಾಷಣೆಯಲ್ಲಿ ಪ್ರಶ್ನೆ ಉತ್ತರಗಳಿಗೆ
ಸಮಯವಿರಲಿಲ್ಲ. ಮೊದಲ ಬಾರಿಗೆ ಸಂಭಾಷಣೆಯ ಅವಧಿ ಹೆಚ್ಚಾಗುತ್ತಿದೆ ಎನಿಸುತ್ತಿತ್ತು . ಮಧ್ಯೆ
ಅವನು ಕೊಳಲು ನುಡಿಸುವುದನ್ನು ಕಲಿತ ವಿಚಾರವೂ ಬಂದಿತ್ತು. ವೀಣೆ ಮತ್ತು ಕೊಳಲು ಸಂಗೀತದ ಮೂಲಭೂತ
ಸ್ವರ ಸಾಧನಗಳು ಎಂದು ಕೇಳಿದ್ದ ನೆನಪಾಯಿತು. ಮಾತು ಮುಗಿಯುವ ಹಂತಕ್ಕೆ ಬಂದಾಗ ಅದೇ ದೃಢತೆಯಿಂದ
“ನನ್ನನ್ನು ಮದುವೆಯಾಗ್ತಿಯಾ ?” ಎಂದಿದ್ದ .
ಹುಡುಗ ಮಂಡಿಯೂರಿ ಕೇಳುತ್ತಿದ್ದಂತೆ ಹಾರುವ ವಯಸ್ಸು ಮುಗಿದಿದೆ ಹಾಗಂತ ಕನಸು ಕಟ್ಟುವ
ವಯಸು ಮುಗಿದಿಲ್ಲ. ಚಂದದ ಹುಡುಗ , ಸದಾ ನಗುವ ಕಣ್ಣುಗಳು , ಕೈಲಿದ್ದ ಒಳ್ಳೆ ಕೆಲಸ ಏನು
ಹೇಳುವುದು ?ವಿಚಾರ ಮಾಡಿ ಹೇಳು ಎಂದು ಅವನು ಹೊರಟು ಹೋದ.
ಸಂಬಂಧಗಳನ್ನು
ನಿಭಾಯಿಸುವುದರಲ್ಲಿ ಅವುಗಳ ಬೆಲೆಯನ್ನು ಅರಿಯುವುದರಲ್ಲಿ ನಾ ಸೋತಿದ್ದೇನೆ ಎಂಬುದು ನನಗೀಗ ಅರಿವಾಗಿದೆ . ಸ್ವಂತದವರಿಂದ ಹಿಡಿದು
ರಂಗಜ್ಜನವರೆಗಿನ ಬಂಧಗಳ ಬೆಲೆ ನನಗೆ ಗೊತ್ತಾಗಿದ್ದು ಇತ್ತಿಚಿಗಷ್ಟೇ, ಮಹಾನಗರಿಗೆ ಬಂದು ಒಂಟಿತನದ ತೆಕ್ಕೆಯಲ್ಲಿ ಬಿದ್ದ
ಮೇಲೇನೆ. ಏನು ಹೇಳಲಿ ? ಅವನ ಮಾತಿನಲ್ಲಿದ್ದ
ಖಚಿತತೆಯ ಅರ್ಧ ಭಾಗವೂ ನನಗಿಲ್ಲ .ಸಂಗೀತವನ್ನು ಪ್ರೀತಿಸುತ್ತಲೇ ಪದವಿಯ
ವರ್ತುಲಕ್ಕಿಳಿದು ಈಗ ಉದ್ಯೋಗ ತರುವ ಹಣದ ಹಿಂದೆ ಓಡಿದವಳಿಗೆ ಅವನ ಖಚಿತತೆ ಬರಲು ಹೇಗೆ ಸಾಧ್ಯ ?
ಇದು ಹತ್ತು ವರ್ಷದ ಪ್ರೀತಿಯಾ ? ಹುಡುಗನೊಬ್ಬ ಹತ್ತು ವರ್ಷ ನೆನಪಿಟ್ಟುಕೊಳ್ಳುವ ಕದರ್ರೇ ನನ್ನದು ?ಒಂದು ವೇಳೆ ಅದು ನಿಜವಾಗಿದ್ದರೆ ಅವನಿಗೆ
ನನ್ನ ಬಗ್ಗೆ ಅದೆಷ್ಟೋ ಸಂಗತಿಗಳನ್ನು ಹೇಳಬೇಕಲ್ಲವೇ? ಯಾವುದನ್ನು ಹೇಳುವುದು ? ಪಿ.ಯು.
ದಿನಗಳಲ್ಲಿ ನಾನು ಸದಾ ನೋಡುತ್ತಿದ್ದ ಅವನೆಂದೂ ತಿರುಗಿ ನೋಡದ ಜಾಣರ ಜಾಣ ಸಾಬರ ಸಲೀಮನ ಬಗ್ಗೆ
ಹೇಳೋದಾ? ನೋಟದಿಂದ ಮುಂದುವರೆಯದೇ
ಹೋದರೂ ಪದವಿಯಲ್ಲಿ ಪರಿಚಯವಾದವರ ಬಗ್ಗೆ ಹೇಳುವುದಾ? ಇಲ್ಲಿ ಬಂದ ಮೇಲೆ ಆಸೆಯಿಂದ ನೋಡಿ ಕಡೆಗೆ
ಏನೂ ಆಗದೆ ಉಳಿದ ಸಹೋ ದ್ಯೋಗಿಗಳ ಬಗ್ಗೆ ಹೇಳೋದಾ ? ಈಗಾಗಲೇ ನಾನು ಉಪ್ಪಿಟ್ಟು, ಕೇಸರಿ ಬಾತು
ಸಮಾರಾಧನೆಯಲ್ಲಿ ಭೇಟಿಯಾದ ಹುಡುಗರ ಬಗ್ಗೆ ಹೇಳಲಾ ? ದಪ್ಪ ಎಂದು , ತುಟಿ ಕೊಂಕೆಂದು , ಉದ್ದ
ಕೂದಲ ಹಳ್ಳಿ ಹುಡುಗಿ ಎಂಬ ನಿರಾಕರಣೆಯಲ್ಲಿ ಸತ್ತ ಆತ್ಮ ವಿಶ್ವಾಸ , ಕಲಿಕೆಯ ಹಾದಿಯಲ್ಲಿ ಬಿಟ್ಟ
ಸಂಗೀತ , ಅರ್ಥವಾಗದ ರಂಗಜ್ಜನಂತವರ ವಾತ್ಸಲ್ಯ ಎಲ್ಲವೂ ನನಗೆ ನನ್ನ ಬಗ್ಗೆ ತಿರಸ್ಕಾರವನ್ನುಂಟು
ಮಾಡಿದ್ದವು . ಸಮಾಜ ಸೇವೆಯ ಕನಸುಗಳನ್ನು ಕೇಳಿ ನನ್ನನ್ನು ನಿರಾಕರಿಸಿ, ನಿಮ್ಮ ಮಗಳಿಗೆ ಇಂತಹ
ಹುಚ್ಚು ಕನಸುಗಳಿವೆ ಎಂದು ನನ್ನ ಮನೆಯವರನ್ನೂ ಸೇರಿಸಿ ಕೆಲವರು ಮಾಡಿದ ಅವಮಾನದ ವಿಚಾರ ಈ
ಡೈರಿಯಲ್ಲಿ ಇಂದಿನವರೆಗೂ ದಾಖಲಾಗಿದ್ದಿಲ್ಲ. ಆದ ಅವಮಾನದಿಂದ ಕುದ್ದು ಹೋದ ಅಪ್ಪ ಇನ್ನು ನಿನ್ನ
ಮದುವೆ ನಮ್ಮ ತೀರ್ಮಾನ ಎಂದು ಶರಾ
ಬರೆದಾಗಿತ್ತು. ಇದನ್ನೆಲ್ಲಾ ಎಲ್ಲಿಂದ ಶುರು
ಮಾಡಿ ಅವನಿಗೆ ಹೇಳುವುದು ? ಕೆಲವು ಕಣ್ಣುಗಳನ್ನು ಕಂಡಾಕ್ಷಣ ಬೆತ್ತಲಾಗುತ್ತಿರುವ ಭಯ
ಕಾಡತೊಡಗುತ್ತದೆ. ಅವನ ಕಣ್ಣಲ್ಲಿ ಆ ಪ್ರಾಮಾಣಿಕತೆ ಇದೆ. ನನ್ನಲ್ಲಿಲ್ಲದ ಅದನ್ನು ನಾ ಹೇಗೆ
ಎದುರಿಸಲಿ ? "ಅವನ ಸಾಂಗತ್ಯದಲ್ಲಿ ಬದುಕಿನ ಬಗ್ಗೆ ಭರವಸೆ ಇದೆ ಕಣೆ ಆ ಪಾಸಿಟಿವ್ ವೈಬ್ಸ್
ಗೊಸ್ಕರವಾದರೂ ಹೂಂ ಅಂದು ಬಿಡು “ ಅನ್ನೋದು ತಂಗಿಯ ಸಲಹೆಯಾಗಿತ್ತು. ರಂಗಜ್ಜ ಮತ್ತು ಇತರರ ಮುಂದೆ
ಈ ಪ್ರಶ್ನೆಯನ್ನು ಇಡುವ ಧೈರ್ಯವಾಗಲಿಲ್ಲ. ಪ್ರಶ್ನೆಗಳು ಹೆಚ್ಚಾದವೇ ಹೊರತು ಉತ್ತರ ಮಾತ್ರ
ದೊರೆಯಲಿಲ್ಲ.
ಅವನು ಹೇಳಿದ ದಿನವೂ
ಬಂತು. “ಏನು ಹೇಳ್ತಿ “ ಅಂದವನಿಗೆ ಸೀದಾ “ಇಲ್ಲ”
ಅಂದೆ. ಆಗವನು ಹೇಳಿದ ಮಾತು “ಹೌದು , ಇಲ್ಲ , ಗೊತ್ತಿಲ್ಲ ಎನ್ನುವ ಸಿಧ್ಧ ಮಾದರಿಯ ಉತ್ತರಗಳು ಬದುಕಿನ ಪ್ರಶ್ನೆಗಳಿಗೆ ಉತ್ತರವಾಗಲಾರವು.”
“ಯಾಕೆ ಆಗಲ್ಲ ಕಾರಣ ಹೇಳು ಅಷ್ಟು ಕೇಳಬಹುದಲ್ವಾ“
ಒಂದೆರಡು ದಿನ ಬಿಟ್ಟು ಭೇಟಿ ಮಾಡುವಂತೆ ಅಪ್ಪಣೆ ಕೊಟ್ಟು ಫೋನಿಟ್ಟ. ಭೇಟಿ ಮಾಡಿ ಏನು
ಹೇಳೋದು ?
ಕಾಲು ಶತಮಾನದ
ಬದುಕಿನಲ್ಲಿ ಸುಳ್ಳು ಕೇಳಿದ್ದೇನೆ , ಸುಳ್ಳು ಹೇಳಿದ್ದೇನೆ , ಮೋಸ ಹೋಗಿದ್ದೇನೆ , ಮೋಸ ಮಾಡಿರಲೂ
ಬಹುದು. ಇವನ ಮುಂದೆ ಯೋಚಿಸಿ ಪೋಣಿಸಿದ ಪದಗಳು ಕೆಲಸಕ್ಕೆ ಬಾರವೆಂದು ತಿಳಿದಾಗಿತ್ತು.
“ಹೇಳು ಯಾಕೆ ನನ್ನನ್ನ ಮದುವೆಯಾಗಬಾರದು ?” ಎಂದವನ ಪ್ರಶ್ನೆಗೆ
“ನಿನಗೆ ನನ್ನ
ಬಗ್ಗೆ ಸರಿಯಾಗಿ ಗೊತ್ತಿಲ್ಲ “
“ತಿಳಿದುಕೊಂಡರಾಯಿತು
ಬಿಡು “ ಅಂತ ಆರಾಮಾಗಿ ನಕ್ಕ.
“ನಾನೆಷ್ಟು ಜನರನ್ನ
ಇದುವರೆಗೂ ಮದುವೆಯ ಸಲುವಾಗಿ ಭೇಟಿಯಾಗಿದ್ದೇನೆ ? ಅವರೇಕೆ ನನ್ನನ್ನು ನಿರಾಕರಿಸಿದರು ಅಥವಾ
ನಾನೇಕೆ ಅವರನ್ನು ನಿರಾಕರಿಸಿದೆ ? ಇದೆಲ್ಲಾ ನಿನಗೆ ಗೊತ್ತಿಲ್ಲ “
“ತಿಳಿದುಕೊಳ್ಳುವ
ಅಗತ್ಯ, ಆಸೆ ಎರಡೂ ನನಗಿಲ್ಲ “.
“ಸಂಗೀತಾಭ್ಯಾಸ
ಬಿಟ್ಟು ವರ್ಷಗಳಾದವು “
“ಇಷ್ಟ ಇದ್ರೆ
ಮತ್ತೆ ಶುರುಮಾಡು ಅಷ್ಟಕ್ಕೂ ನೀನು ಹಾಡ್ತಿಯಾ ಅಂತ ನಿನ್ನನ್ನು ಮದುವೆಯಾಗ್ತೀನಿ ಅಂತ ನಾನು
ಹೇಳಿಲ್ಲ “ .
ವಜ್ರವನ್ನು ತುಂಡು
ಮಾಡುತ್ತಾ ಇವನ ಮಾತುಗಳು
ಇವನ ಮಾತಿನಲ್ಲೇಕೆ
ಇಷ್ಟೊಂದು ಭರವಸೆ ಇಣುಕುತ್ತಿದೆ ? ವಯಸಿನ ಮಾಯೆ
ಆಗಿರಲಾರದು. ಸತ್ಯದ ತಳಹದಿ ಇರದ ಸಂಬಂಧಗಳು ಬಾಳಲಾರವು.
“ಬದುಕಿನಲ್ಲಿ ಸಾಕಷ್ಟು ತಪ್ಪು ಮಾಡಿದ್ದೇನೆ . ಅದರಿಂದಾಗಿ ಗೊಂದಲಗಳಲ್ಲಿ ಬಿದ್ದು
ಒದ್ದಾಡುತ್ತಿದ್ದೇನೆ. ಈಗ ಮದುವೆ ಎಂಬ ತೀರ್ಮಾನವೇನಿದ್ದರೂ ಮನೆಯವರದ್ದು.ಆದ್ದರಿಂದ ನಿನಗೆ
ನಾನೇನೂ ಹೇಳಲಾರೆ “ ಎಂದವನ ಮುಖ ನೋಡಿದರೆ ಓದಲಾಗಲಿಲ್ಲ.
ಅಷ್ಟು ಹೇಳಿದ ಮೇಲೆ
ಇನ್ಯಾವ ಹುಡುಗ ತಾನೆ ಮತ್ತೆ ಮಾತಾಡುವ ಗೋಜಿಗೆ ಹೋದಾನು ? ಅವನೂ ಹಾಗೆ ಎರಡು ನಿಮಿಷಕೂತಿದ್ದು
ಸರಿ ಬರ್ತೀನಿ ಎಂದು ಹೊರಟು ಹೋದ. ಹೊರಟವನನ್ನು
ತಡೆಯುವ ಹಕ್ಕನ್ನು ನಾನೇ ಕಳೆದುಕೊಂಡಿದ್ದೆ. ಅವನು ಕನಸುಗಳು ಬಾಡಿಹೋದ ಕಥೆಗಳನ್ನು , ನನ್ನ
ವಿಶ್ವಾಸ ನೆಲಕಚ್ಚಿರುವುದನ್ನೂ ಕೇಳಿದ್ದರೆ ? ನಾನೇ ಮೊದಲು ನನ್ನ ಬಗ್ಗೆ ಕೇಳು ಆಮೇಲೆ ನೋಡೋಣ
ಎಂದು ಎಲ್ಲವನ್ನೂ ಹೇಳಿದ್ದರೆ ? ಬದುಕಿನಲ್ಲಿ ಈ
‘ರೆ’ ಕೊಟ್ಟಷ್ಟು ನೋವನ್ನು ಬೇರಾವ
ಶಬ್ಧವೂ ಕೊಡಲಾರದು .
ಇಷ್ಟು ವರ್ಷಗಳಲ್ಲಿ
ನಾನೆಂದೂ ಅವನ ಬಗ್ಗೆ ಪ್ರಶ್ನೆ ಕೇಳಿಲ್ಲ ಕೇಳುವ ಅವಕಾಶವನ್ನೂ ಅವನು ಕೊಟ್ಟಿರಲಿಲ್ಲ. ಅವನೂ
ಕೇಳಿರಲಿಲ್ಲ. ಅವನು ಕೇಳದೆಯೇ ನಾನು ನನ್ನ ಪದವಿ ಕೆಲಸದ ಬಗ್ಗೆ ಹೇಳಿದ್ದೆ. ನಾವು ಬದುಕುತ್ತಿರುವ
ಗೂಗಲ್ ಜಗತ್ತಿನಲ್ಲಿ ವ್ಯಕ್ತಿವೊಬ್ಬನ ಬಗ್ಗೆ ತಿಳಿಯುವುದು ಅತೀ ಸುಲಭ. ಮೊದಲ ಬಾರಿಗೆ ಅವನ
ಬಗ್ಗೆ ತಿಳಿಯಬೇಕೆಂದಿನಿಸಿತ್ತು. ವಸ್ತುವೊಂದು ಕಳೆದುಹೋದ ಮೇಲೆ ಬೆಲೆ ಇಷ್ಟೇ ಬಿಡು ಎಂಬ ಸಮಾಧಾನ ಮಾಡಿಕೊಳ್ಳುವ ಪೊಳ್ಳು
ಪ್ರಯತ್ನ . ಆದರೆ ಪೊಳ್ಳು ಪ್ರಯತ್ನ ಸತ್ಯದ
ಮತ್ತೊಂದು ಮುಖದ ದರ್ಶನ ಮಾಡಿಸಿತ್ತು. ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅವನು ಪ್ರತಿಷ್ಟಿತ
ಕಾಲೇಜುಗಳಲ್ಲಿ ಓದಿದ್ದ. ಅರೆ , ಇಂಥವನು ಬಂದು ತಾನಾಗಿ ಕೈ ಒಡ್ಡಿದಾಗ ಕೈ ಚಾಚದೇ ಹೋದೆನಾ ?
ಎಂದು ಒಂದು ಕ್ಷಣ ಅನ್ನಿಸಿದರೆ , ಸಾಮಾನ್ಯವಾಗಿ ಸಾಧಕರ ಜೋತೆಗಾರರು ಸುಖದಿಂದಿದ್ದು ಕಡಿಮೆ,
ನಾ ಮಾಡಿದ್ದೇ ಸರಿ ಎಂಬ ಹುಳಿ
ದ್ರಾಕ್ಷಿ ಸಿಧ್ಧಾಂತಕ್ಕೆ ಮೊರೆಹೊಗುತ್ತಿದ್ದೆ.
ಒಂದೆರಡು ವಾರಗಳ ನಂತರ ಫೋನ್ ಮಾಡಿದ್ದ ಅಮ್ಮ “ಯಾರೋ ಮೈಸೂರಿಂದ ಫೋನ್
ಮಾಡಿದ್ದರು ಕಣೆ . ಹುಡುಗನ ಹೆಸರು ಅವಿನಾಶ್ ಅಂದಹಾಗಾಯಿತು. ನಿನ್ನ ಮೇಲ್ ಐಡಿ ಕೊಟ್ಟಿದ್ದೇವೆ ,
ನೀ ಹೋಗಿ ಮಾತಾಡು. ನಿನ್ನ ಹುಚ್ಚು ಕನಸುಗಳ ಬಗ್ಗೆ ಹೇಳಬೇಡ. ತೆಪ್ಪಗೆ ಅವನು ಹೇಳಿದ್ದನ್ನ ಕೇಳಿ
ಬಾ” ಎಂದಳು .
ಅವನು ಹೋದಾಗಿನಿಂದ
ಅವನ ಹೆಸರು ನೋಡಲಾಗದೆ ಅಳಿಸಲಾಗದೆ ಆ ಮೇಲ್
ಬಾಕ್ಸ್ ತೆಗೆದಿರಲಿಲ್ಲ. ಇಂದು ತೆಗೆದರೆ
ಅವನಿಂದ ೨ ಸಾಲಿನ ಮೇಲ್ ಇತ್ತು “ನಿನ್ನ ಮನೆಯವರ ತೀರ್ಮಾನದಂತೆಯೇ ಭೇಟಿ ಮಾಡು “ ಎಂದು ಹೇಳಿ
ಎಂದಿನಹಾಗೆ ಸ್ಥಳ ಸಮಯ ತಿಳಿಸಿದ್ದ. Love is a
verb ಎಂದು ಎಲ್ಲೋ ಓದಿದ್ದ ಸಾಲು ನೆನಪಾಯಿತು . ಗೊಂದಲಗಳ ಅಂತ್ಯ ಸಮೀಪಿಸಿತ್ತು .
ಈ ಬರಹ ಅವಧಿಯಲ್ಲಿಪ್ರಕಟಗೊಂಡಿದೆ


ಛಂದದ ಕಥೆ ಸ್ವರ್ಣಾ ಮೇಡಮ್...ಸರಳವಾಗಿದ್ದು ಓದಿಸಿಕೊಂಡು ಹೋಯಿತು...ಬರೆದ ರೀತಿ ಮನಸ್ಸನ್ನು ಪ್ರಪುಲ್ಲವಾಗಿಸುತ್ತದೆ...ಜ಼ೊತೆಗೆ ಕಥೆ ಹೇಳಲು ಬಳಸಿದ ವೀಣೆ-ಕೊಳಲಿನ ಸಂಯೋಜನೆ ಇಷ್ಟವಾಯಿತು :)
ReplyDeleteಬರೆಯುತ್ತಿರಿ :) ನಮಸ್ತೆ :)
ಥ್ಯಾಂಕ್ಸ್ ಚಿನ್ಮಯ್ :)
Deleteಯಾವುದೋ ಗುನುಗು ಮತ್ತು ಆ ಶಂಕರಾಭರಣ
ReplyDeleteಬ್ರೋಚೇಚಾಡೆವಡುರಾ ನಿನುವಿನಾ ರಘುವರ...
ಒಂದು ಮಾತಂತೂ ನಿಜ ಲೋಕ ಜ್ಞಾನಕಿಲ್ಲ ಬೆಲೆ,
ಓದಿದ ಪ್ರತಿಷ್ಠಿತ ಸಂಸ್ಥೆ ಮತ್ತು ಪದವಿಯ ವಸ್ತುವೊಂದಕ್ಕೇ
ಮುಖ ಬೆಲೆ!
ಸಮಾಜ ಸೇವಾಕಾಂಕ್ಷೆಯ ವಿವರಗಳು ಹಳೆ ಬರಹಗಳನ್ನು ಕೆದಕಿದರೆ ನಮಗೂ ಸಕ್ಕಾವೇನೋ? ಪ್ರಯತ್ನಿಸಿ ನೋಡುತ್ತೇನೆ.
ಪರಿಚಯದ ಹುಡುಗ, ಹೆತ್ತವರ ಮೂಲಕವೂ ಅರ್ಜಿ ಗುಜರಾಯಿಸಿದಾಗ ಕಣ್ಣು ಮುಚ್ಚಿ ಕೂರಬಾರದು ಭಾಮೆಯೂ!
ಹುಡುಕಿ ಬದರಿ ಸರ್ ... ನಿಮ್ಮ ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್ :)
Deleteಸ್ವರ್ಣಾ,
ReplyDeleteಊರಲ್ಲಿ ಇರಲಿಲ್ಲ. ಹೀಗಾಗಿ ನಿಮ್ಮ ಕತೆಯನ್ನು ಈಗ ತಾನೇ ನೋಡಿದೆ. ನಿಮ್ಮ ಶಾಯರಿಯ ಹಾಗೇ ನಿಮ್ಮ ಕಥೆಯೂ ಸಹ ಭಾವಲಹರಿಯಲ್ಲಿ ಓದುಗನನ್ನು ಸೆಳೆದುಕೊಂಡು ಹೋಗುತ್ತದೆ. ಒಳ್ಳೆಯ ಕಥೆಗಾಗಿ ಧನ್ಯವಾದಗಳು.
ನಮಸ್ತೆ ಕಾಕಾ , ನನಗೂ ನಿಮ್ಮ ಪ್ರತಿಕ್ರಿಯೆಯ ಕೊರತೆ ಕಾಡಿತು . ಬಹುಶಃ ಬರಹದಲ್ಲೇ ಏನೋ ಕೊರತೆ ಇರಬಹುದು ಅದಕ್ಕೆ ಕಾಕಾ ಪ್ರತಿಕ್ರಿಯಿಸಿಲ್ಲ ಅಂದುಕೊಂಡೆ .
Deleteಧನ್ಯವಾದಗಳು