Thursday, March 07, 2013

ಶಿಲೆಯಾದವಳ ಭಾವವನೆಂತು ಪೇಳ್ವುದು ?

  ಚಿತ್ರ ಕೃಪೆ : ಅಂತರ್ಜಾಲ

ಕಲ್ಲಾಗುವನೆ  ಗೌತಮ? ಇದು ಬ್ಲಾಗೊಂದರಲ್ಲಿ ಇತ್ತೀಚಿಗೆ ಓದಿದ ಸಾಲು. ಎಷ್ಟೋ ದಿನ ಪ್ರಶ್ನೆಯಾಗಿ ನನ್ನ ಹಿಂದೆ ಬಂದ ಸಾಲು. ಒಂದು ದಿನ ಅನ್ನಿಸಿತು, ಗೌತಮ ಕಲ್ಲಾಗಿದ್ದಕ್ಕೆ ಅಲ್ಲವೇ, ಅಹಲ್ಯೆಯನ್ನು  ಕಲ್ಲು ಮಾಡಿದ್ದು ?ಈ ಸಂದರ್ಭದಲ್ಲಿ  ವ್ಯಕ್ತವಾದ ಹೆಣ್ಣಿನ ಆಸೆ ಸಹಜವೋ, ಗಂಡಿನ ಸಿಟ್ಟು ಸಹಜವೋ ಎಂದು ವಿಮರ್ಶಿಸುವಷ್ಟು  ಮನೋವಿಜ್ಞಾನವಾಗಲಿ ಅಥವಾ ಅದರ ಹಿಂದಿನ ಪೌರಾಣಿಕ ಸಂದರ್ಭಗಳಾಗಲಿ  ನನಗೆ ತಿಳಿದಿಲ್ಲ .

 ಯಾವುದೇ ತಪ್ಪಿಗೆ ಸ್ಪಂದನೆ ಇಲ್ಲದ  ಕಲ್ಲಾಗುವುದು ಅತೀ  ಘೋರ ಶಿಕ್ಷೆ. ಕೋಮಾದಲ್ಲಿರುವ ವ್ಯಕ್ತಿಯ ಸ್ಥಿತಿ. ನನಗ್ಯಾಕೋ  ತಪ್ಪೇ ಮಾಡದೆ, ಸ್ಪಂದನೆಗಳನೆಲ್ಲ  ಕಳೆದುಕೊಂಡು  ಮಲಗಿದ ಅರುಣಾ ಶಾನಭಾಗ್ ನೆನಪಾಗುತ್ತಾಳೆ.


ಕಲ್ಲಾದ ಅಹಲ್ಯೆಯನ್ನ ಉಧ್ಧರಿಸಿದ  ದಾಶರಥಿ, ಪುನೀತೆಯನ್ನೇಕೆ ತೊರೆದ  ಎಂಬ ಪ್ರಶ್ನೆಯೂ ಇದೆ ?  ಶಶಿಕಲಾ ವೀರಯ್ಯ -ಸ್ವಾಮಿಯವರ  "ಬೆಲ್ಲ ಮತ್ತು ಕಲ್ಲು " ಕವಿತೆಯಲ್ಲಿ  ಇದೇ  ಪ್ರಶ್ನೆ ಕೆಳಗಿನ ಸಾಲುಗಳಲ್ಲಿ ವ್ಯಕ್ತವಾಗಿದೆ 


"ಅದೊಂದು ದಿನ ಗೆಳತಿ ಅಂದಳು
ಕಲ್ಲಾದ ಅಹಲ್ಯೆಯ ಮೈಯ ನೇವರಿಸಿ
ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು
ಶ್ರಿರಾಮ, ಕರುಣಾಸಾಗರ, ಸದ್ಗುಣದಾಗರ
ಉಘೇ ಉಘೇ ಎಂದಿತು ಜನಸಾಗರ
ಜಗಕೆಲ್ಲಾ ಹೆಮ್ಮೆಯೋ ಹೆಮ್ಮೆ
ಆದರಿನ್ನೊಮ್ಮೆ
ಇದೇ ಮಹಾತುಮ ಉಕ್ಕುವ ಜೀವಗಳನು ಹೊತ್ತ
ಗರ್ಭಸ್ಥೆ ಮಂದಸ್ಮಿತೆ
ಜೀವನೋತ್ಸಾಹದಲ್ಲಿ ವಿಜೃಂಭಿಸುವ ಸತಿ ಸೀತೆ
ಯನ್ನು ಕಾಡುಪಾಲಾಗಿಸಿ ಕೈ ತೊಳೆದನೀ ಸೀತಾರಾಮ
ಕರುಣಾಳು ರಾಘವನಲಿ ತಪ್ಪಿಲ್ಲ
ಎಂದತ್ತಳು ಮಾತೆ ಸೀತೆ ಅಲ್ಲವೇನೆ?"

ಕವಿತೆಯ ಪೂರ್ಣ ಪಾಠವನ್ನ  ಓದಲು ಇಲ್ಲಿ ಚಿಟುಕಿಸಿ
ಇತ್ತೀಚಿಗೆ ಅಹಲ್ಯೆಯ ಬಗ್ಗೆ ಸುಧಾ ಚಿದಾನಂದಗೌಡ ಅವರು ಬರೆದ ಕಥೆ  ತುಂಬಾ ಇಷ್ಟವಾಯಿತು , ಅದನ್ನು ಓದಲು ಇಲ್ಲಿ ಚಿಟುಕಿಸಿ .

ಮೇಲಿನ ಕವಿತೆ ಮತ್ತು ಕಥೆಯನ್ನು ಓದುವ ಮುಂಚೆ ನಾನು ಬರೆದ ಕಥೆ, ನನಗೆ ತಿಳಿದಂತೆ ಅಹಲ್ಯೆಯ  ಕಥೆ :

 ಅಜನಿಂದ ಆದಿಯಲ್ಲಿ ಸೃಷ್ಟಿಯಾದವಳು
ಅಪರೂಪ  ಸೌಂದರ್ಯದ  'ಅಹಲ್ಯೆ'ಯವಳು
'ಗೋವುತ್ತಮ'ನಿಗೆ  ಧಾರೆಯೆರೆಯಲ್ಪಟ್ಟವಳು

ವಜ್ರಾಯುಧಪತಿ ಕರಗಿದ ಅವಳ ನೋಡಿ
ಅವಳ ಸಂಧಿಸಿದ ನಾನಾ ಮೋಡಿ ಮಾಡಿ
ಅರಿತೋ, ಮರೆತೋ ಸುಖಿಸಿದರು ಕೂಡಿ

ಮುನಿ ಮುನಿದ ಈರ್ವರ ಸಂಗ ಕಂಡು
ತೆರಳಿದ ಇಂದ್ರ ಋಷಿಯ ಶಾಪ ಉಂಡು
ಬೆದರಿದಳು ಬಾಲೆ  ಇನ್ನೀಗ ಗತಿ ಏನೆಂದು

ಭಾವಗಳನೆಲ್ಲ ಸುಟ್ಟು ಅವಳ ಶಿಲೆ ಮಾಡಿದ
ಪತಿತಳಾದೆ ಎಂದು ಬಹು ದೂರ ಹೋದ
ರಾಮ ಬರುವ ತನಕ ಶಿಲೆಯಾಗೆಂದ 

ಶಿಲೆಯ ಮತ್ತೆ ಚಿಗುರಿಸಿದ ಸೀತಾರಾಮ
'ಭೂತ' ಮರೆತು ಬಾಳಿ ಎಂದ ಪಾವನ ರಾಮ
ತಪ್ಪು ಒಪ್ಪುಗಳ ಮರೆತು ಸಲಹಿದ ರಾಜ ರಾಮ

ಶಿಲೆಯಾಗವಳತ್ತಳೇ  ಹೇಗೆ ಹೇಳ್ವುದು ?
ಅತ್ತಿದ್ದರೂ ಅವಳ ನೋವು ಯಾರಿಗೆ ಕೇಳ್ವುದು ?
ಶಿಲೆಯಾದವಳ ಭಾವವನೆಂತು  ಪೇಳ್ವುದು ?

ಮೇಲಿನ ಸಾಲುಗಳು ಅಹಲ್ಯೆಯ ಪೌರಾಣಿಕ ಕಥೆಯನ್ನ ಮಾತ್ರ ಹೇಳುತ್ತವೆ .
ಆದರೆ ಹೆಣ್ಣಾಗಿ ಅವಳ ಭಾವವೆನಾಗಿತ್ತು ? ಈ ಪ್ರಶ್ನೆಗೆ ಸಮಂಜಸ ಉತ್ತರ  ನನಗಿನ್ನೂ ಸಿಕ್ಕಿಲ್ಲ

ಕಲ್ಲಾದವಳನ್ನ ಮತ್ತೇಕೆ ಎಬ್ಬಿಸಿದೆ ರಾಮ ?
ಶಿಲೆಗೆ ನೋವಿಲ್ಲ, ಸಾವಿಲ್ಲ
ಅಳಲು ಕಂಬನಿಯ ಹಂಗಿಲ್ಲ
ಬಳಸಲೊಂದು  ತೋಳು ಬೇಕಿಲ್ಲ
ರೂಪದ ಪರಿವೆ ಇಲ್ಲ
ವಿರೂಪದ ಅರಿವಿಲ್ಲ
ತಟಸ್ಥಳಾಗಿ ನಿಂತು ಒಂದುದಿನ ಪುಡಿಯಾಗುತ್ತಿದ್ದೆ
ಮುಂದಿನ ಮೊಳಕೆಯ ಸಾರವಾಗಿ ಮಡಿಯಾಗುತ್ತಿದ್ದೆ

 ಹೀಗೆ ಹೇಳ ಬಹುದೇ ಅಹಲ್ಯೆ ?

ಈ ಬರಹವನ್ನ  ಪೋಸ್ಟ್ ಮಾಡ ಬೇಕೇ ಬೇಡವೇ ಎಂಬ ತಾಕಲಾಟ ಕೆಲ ತಿಂಗಳುಗಳಿಂದ ಇದೆ. ಇಲ್ಲಿನ ಪ್ಯಾರಾಗಳಲ್ಲಿ ಸಂಬಧವಿಲ್ಲ , ಬರಹಕ್ಕಿರಬೇಕಾದ  ಓಘವಿಲ್ಲ. ಆದರೂ, ಯಾಕೋ ಇದನ್ನ ಬಹಳ ದಿನ ಡ್ರಾಫ್ಟ್ನಲ್ಲಿಡಲು ಮನಸೋಪ್ಪಲಿಲ್ಲ .

9 comments:

  1. ಕಲ್ಲಿನ ಹೋಲಿಕೆ ಇಷ್ಟವಾಯ್ತು ....:)
    ಕಲ್ಲಿಗೆ ನೋವಿಲ್ಲ ಸಾವಿಲ್ಲ ಎಂಬ ಸಾಲುಗಳು...
    ಹಮ್...ಇಲ್ಲ ಎನ್ನುವುದುರಲ್ಲೂ ಬೇಕು ಎನ್ನುವ ಭಾವ...
    ಇಷ್ಟವಾಯ್ತು....

    ReplyDelete
    Replies
    1. ಬೇಕು ಮತ್ತು ಇಲ್ಲ ಒಟ್ಟಿಗೆ ಇರುವ ಮಿತ್ರವೈರಿಗಳಲ್ಲವೇ ? ಧನ್ಯವಾದಗಳು

      Delete
  2. ಸ್ವರ್ಣಾ,
    ಗೌತಮ ಋಷಿ ಪತಿಯಾಗಿ ತನ್ನ ಹೆಂಡತಿ ಅಹಲ್ಯೆಯ ಬಗೆಗೆ ತನಗಿರುವ ಕರ್ತವ್ಯವನ್ನು ಮರೆತಿದ್ದ. ಆದುದರಿಂದ ಅಹಲ್ಯೆ ದೇಹಸುಖವನ್ನು ಮತ್ತೊಬ್ಬನಿಂದ ಬಯಸಿದರೆ ಅದರಲ್ಲಿ ತಪ್ಪಿಲ್ಲ; ಅದು ನಿಸರ್ಗಸಹಜ. ನಿಜ ಹೇಳಬೇಕೆಂದರೆ ಗೌತಮನೆ ಕಲ್ಲು!
    ಅಹಲ್ಯೆಯನ್ನು ಶ್ರೀರಾಮನು ‘ಉದ್ಧರಿಸಿದ’ ಮೇಲೆ, ನೀವು ಎತ್ತಿರುವ ಪ್ರಶ್ನೆ ಅತ್ಯಂತ ಸರಿಯಾದ ಪ್ರಶ್ನೆ: ‘ಕಲ್ಲಾದವಳನ್ನು ಮತ್ತೇಕೆ ಎಬ್ಬಿಸಿದೆ,ರಾಮ?’
    ನಮ್ಮ ಸಂಸ್ಕೃತಿಯ ವಕ್ತಾರರು ಇದಕ್ಕೆ ಏನೆಂದು ಉತ್ತರ ಕೊಟ್ಟಾರು?!
    ಸುಂದರ, ಸಮುಚಿತ ಕವನಕ್ಕೆ ಅಭಿನಂದನೆಗಳು.

    ReplyDelete
    Replies
    1. ಪೌರಾಣಿಕ ಸ್ತ್ರೀಯರಲ್ಲಿ ಅಹಲ್ಯೆ ನನಗೆ ಅಷ್ಟು ಚೆನ್ನಾಗಿ ಇನ್ನೂ ಅರ್ಥವಾಗಿಲ್ಲ .ನಿಮ್ಮ ಅಭಿಪ್ರಾಯ ಎಂದಿನಂತೆ ಖುಷಿ ಕೊಟ್ಟಿತು . ಧನ್ಯವಾದಗಳು ಕಾಕಾ

      Delete
  3. ನೀವು ಚರ್ಚಿಸಿರುವ ಎಲ್ಲ ಸಾಲುಗಳೂ ಒಂದಕ್ಕೊಂದು ತಳಕು ಹಾಕಿಕೊಂಡೇ ಇವೆ.. ಬರಹ ಇಷ್ಟವಾಯಿತು.. ಅಹಲ್ಯೆಯ ಬಗ್ಗೆ ಬರೆಯುವಷ್ಟು ನಾನವಳ ಬಗ್ಗೆ ಓದಿಲ್ಲ.. ನೀವು ಅವಳ ಕುರಿತು ಇನ್ನೂ ಬರೆಯಿರಿ, ನಾ ಓದಿ ತಿಳಿದುಕೊಳ್ಳುತ್ತೇನೆ.. :-)

    ReplyDelete
    Replies
    1. ಬಲ್ಲಿದರು ಬಲ್ಲೆ ಎಂದು ಹೇಳೋದು ಕಡಿಮೆ ಬಿಡಿ :)ಧನ್ಯವಾದಗಳು ಮಂಜುಳಾ

      Delete
  4. ನಾವು ನೋಡುವ ಪರಿ ಕಥೆಯಾಗಲೀ, ಪುರಾಣವಾಗಲಿ ಯಾವತ್ತು ಏಕ ಮುಖವೇ. , ವಿಶ್ಲೇಷಣೆಯ ಲೋಕ ಹೊಕ್ಕಾಗ ಅದರ ಇನ್ನೊಂದು ಮುಖ ಗೋಚರಿಸಬಹುದೇನೋ. ಕಾಮನಬಿಲ್ಲು ಚಿತ್ರದಲ್ಲಿ ಅಣ್ಣಾವ್ರು "ಊರವರ ಕಷ್ಟಕ್ಕೆ ಮರುಗುತಿದ್ದೆ ತಾವು ಮನೆಯಲ್ಲಿ ತುಂಬಿದ ದರಿದ್ರ ನೋಡಲಿಲ್ಲ".. ಎಂದು ಬಿಕ್ಕಿ ಬಿಕ್ಕಿ ಅತ್ತಾಗ ಅನಂತ್ ನಾಗ್ ಹೇಳುತ್ತಾರೆ "ಯಾವುದೇ ವಿಷಯ ಒಂದು ರೀತಿಯಲ್ಲಿ ನೋಡಿದಾಗ ತಪ್ಪು ಇನ್ನೊಂದು ರೀತಿಯಲ್ಲಿ ತಪ್ಪಲ್ಲ". ಹೀಗೆ ವಿಶ್ಲೇಷಣೆಯ ಒರಳಿಗೆ ವಿಷಯ ಸಿಕ್ಕಾಗ ಮಾತ್ರ ಅದು ಪುಡಿಯಾಗಿ ನಿಜಾಂಶ ಹೊರಬರಲು ಸಹಾಯವಾಗುತ್ತದೆ. ನೀವು ಕಡೆಯಲ್ಲಿ ಹೇಳಿರುವ ಗೊಂದಲ... ಲೇಖನದಲ್ಲಿ ಕಾಣಲಿಲ್ಲ. ಸೊಗಸಾಗಿದೆ ಓದೋಕೆ ಇಷ್ಟವಾಗುತ್ತದೆ

    ReplyDelete
    Replies
    1. ಹೌದು ಸರ್ ಎಲ್ಲಕ್ಕೂ ವಿಶ್ಲೇಷಣೆ ಅಗತ್ಯ ಆದರೆ ಕೆಲವೊಮ್ಮೆ ನಮ್ಮ ಪುರಾಣಗಳು ಅತೀಯಾದ ವಿಶ್ಲೇಷಣಗೆ ಒಳಾಗಾಗುತ್ತಿದೆ ಏನೋ ಅನ್ನಿಸತ್ತೆ .ಅಣ್ಣಾವ್ರ ಕಾಮನಬಿಲ್ಲು ನೋಡಿಲ್ಲ ,ಪ್ರತಿಕ್ರಿಯೆಗಾಗಿ ಧನ್ಯವಾದಗಳು

      Delete
  5. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದ ಶುಭಾಶಯಗಳು.

    ನಾನು ಕವನಗಳಲ್ಲಿ ಪದೇ ಪದೇ ಬಳಸುವ ಕೆಲವು ಪ್ರತಿಮೆಗಳಲ್ಲಿ ಅಹಲ್ಯೆ ಮತ್ತು ಶಬರಿ ಅತಿ ಹೆಚ್ಚು ಬಾರಿ ಬಂದಿರಬಹುದು. ಗೌತಮನು ಕಲ್ಲಾಗುವನೇ ಅತ್ಯಂತ ಪ್ರಸಕ್ತ ಪ್ರಶ್ನೆ.

    ಶಶಿಕಲಾ ವೀರಯ್ಯ -ಸ್ವಾಮಿ ಅವರ ಕವನವೂ ಬಹಳ ಚೆನ್ನಾಗಿದೆ.

    ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೇ ಈ ಪೋಸ್ಟ್ ಓದಬೇಕೆಂದಿದ್ದೆ ಅದಾದರೂ ಈಗ ನೆರವೇರಿತು. ನಮಗಾಗಿ ಒಳ್ಳೆಯ ಸಾಹಿತ್ಯ ಪೋಣಿಸಿಕೊಟ್ಟಿದ್ದೀರಾ.

    ReplyDelete