Thursday, March 21, 2013

ಹೆಣ್ಣಾಗಬೇಕಿದೆ ತಾಯಿ

ಸುಟ್ಟ ರೊಟ್ಟಿಗೆ 
ಕೆಟ್ಟ ಪಲ್ಯಕ್ಕೆ
ನಿತ್ಯವೂ ಜಗಳ
ಅಮ್ಮ ಕೇಳುತ್ತಿದ್ದಳು  ನೀನು ನಿಜಕ್ಕೂ ಮಗಳಾ  ?
ಅವಳಕಟ್ಟ ಕಡೆಯ ಮಾತು,
"ನೀನೂ  ತಾಯಾಗು ಆಗ ನಿನಗೆ ತಿಳಿದೀತು"


ಹರೆಯದ ಕುಂಚ
ಸ್ವಪ್ನ  ಪ್ರಪಂಚ
ಕ್ಷಣಕ್ಕೊಂದು ಬಣ್ಣ
ಸಂಜೆಯಾದರೆ ಅಮ್ಮ ಬಾಗಿಲೆಡೆಗೇ  ನೆಟ್ಟಿರುತ್ತಿದ್ದಳು ಕಣ್ಣ
ಕುಂಚ ಹಿಡಿಯದ ಅಮ್ಮನ ಚಿತ್ರ
ಹರೆಯದೊಡನೆ ಓಡುತ್ತಿದ್ದ  ಮಗಳೆಂಬ ಪಾತ್ರ


ಮನೆ ಬೇರೆ
ಜನ ಬೇರೆ
ಎಲ್ಲ ಹೊಸದು
ಅಮ್ಮನೊಂದಿಗಿನ  ಜಗಳವಿಲ್ಲ, ಹೊತ್ತೇ ಹೋಗದು
ಜಗ ಕಾಣದ ಅಮ್ಮನ  ತಂತ್ರ
ಸತ್ಯ ಗೆಲ್ಲುವುದೆಂಬ ನಂಬಿಕೆಯ  ಮಂತ್ರ


ಒಡಲಾಳದ ಚೂರು  ಈ  ಜೀವ
 ಹೊರ ಬಂತು, ಬಿರಿದು  ನೋವ
ಅದೇ ರೊಟ್ಟಿ, ಪಲ್ಯ
ಮಗು ಕೇಳತ್ತೆ , "ನಿಂಗೆ ಬೇರೆಂತೂ ಮಾಡಕ್ಕೆ ಬರಲ್ಯಾ ?"
ಇಂದು ಕೇಳಿತು ಅಮ್ಮನ ದನಿ
ಅಮ್ಮನೆಂಬ 'ದೈವ'   ಯಾವತ್ತಿಗೂ ಮೌನಿ


ಆದರೆ, ದೈವದ ಪಟ್ಟ  ಬೇಡ 'ನನ'ಗೆ
'ನನ್ನ' ಕೊಂದು ಬಾಳಲಾರೆ ಕೊನೆಗೆ
ಕನಸಿಗೆ ಬಣ್ಣ ತುಂಬಬಲ್ಲೆ
ಮನಸಿನ ಹಣತೆ ಹಚ್ಚ ಬಲ್ಲೆ 
'ತಾಯಾ'ಗಿಯೂ 'ಹೆಣ್ಣಾ'ಗ  ಬೇಕಿದೆ  ನಾ
ಕುಂತಿ, ಸೀತೆಯರ ದಾರಿ ಹುಡುಕ ಬೇಕಿದೆ ನಾ 

10 comments:

  1. ದಡದಲ್ಲಿದ್ದಾಗ ಕೆರೆಯ ಆಳ ತಿಳಿಯೋಲ್ಲ ಆಳಕ್ಕೆ ಇಳಿದಾಗ ದಡ ಕಾಣೋಲ್ಲ. ತಾಯಿಯಾದಾಗ ಸಿಗುವ ಅರಿವಿನ ಗುರು ನಾವು ಮಕ್ಕಳಾದಾಗ ಸಿಗದು. ಎಷ್ಟು ಸುಂದರವಾಗಿ ಹರಿದಿದೆ ಭಾವ ಲಹರಿ.

    ReplyDelete
    Replies
    1. ತಾನ್ ಸಾಯ್ ಬೇಕು ಸ್ವರ್ಗ ಪಡಿ ಬೇಕು ಅಂತಾರಲ್ಲ ಹಾಗೆ
      ಧನ್ಯವಾದಗಳು

      Delete
  2. ಒಳ್ಳೆಯ ವಿಚಾರಧಾರೆ. ತಾನು ಕೇವಲ ‘ತಾಯಿ’ಯ ಪಾತ್ರವನ್ನು ಮಾತ್ರ ನಿರ್ವಹಿಸಬೇಕೋ ಅಥವಾ ತನ್ನತನವನ್ನು ಗುರುತಿಸಿಕೊಂಡು ಬದುಕಬೇಕೊ?
    ವಿಚಾರಧಾರೆಗೆ ಹೊಂದುವಂತಹ ಕವನ-ಶರೀರ. ಅಭಿನಂದನೆಗಳು.

    ReplyDelete
  3. ಈ ನಡುವೆ ನಾನು ಓದಿಕೊಂಡ ನಿಜವಾದ ಕಾವ್ಯವೆಂದರೆ ಇದು. ಮನಸ್ಸಿನ ಭಾವತೀವ್ರತೆ ಪದಗಳಲ್ಲಿ ಕಾಣಲು ಮಾತ್ರ ಕವಿತೆಗೂ ನಿಜ ಅಸ್ತಿತ್ವ.

    ಉದಾಹರಿಸಲು:
    "ನೀನೂ ತಾಯಾಗು ಆಗ ನಿನಗೆ ತಿಳಿದೀತು"
    "'ತಾಯಾ'ಗಿಯೂ 'ಹೆಣ್ಣಾ'ಗ ಬೇಕಿದೆ ನಾ"

    ಹೀಗೆ ಸಾಲು ಸಾಲಾಲೂ ಹೂರಣದ ಸತ್ಯ ಅನಾವರಣ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್

      Delete
  4. ಚೆನ್ನಾಗಿದೆ... ಇಷ್ಟ ಆಯ್ತು !!!

    ReplyDelete
    Replies
    1. ಇಲ್ಲಿಗೆ ಸ್ವಾಗತ, ಧನ್ಯವಾದಗಳು

      Delete
  5. ನನ್ನ ಕೊಂದು ಬಾಳಲಾರೆ ನಾ .. ತಾಯಾಗಿಯೂ ಹೆಣ್ಣಾ ಗಬೇಕಿದೆ ನನಗೆ ....

    ಎಷ್ಟು ಜನ ಈ ಧೈರ್ಯ ಮಾಡ್ತಾರೆ
    ಅಂತಹ ಹೆಣ್ಣಿಗೆ ನನ್ನ ನಮನ ...

    ಮನಸ್ಸನ್ನು ಕಲಕುವ ಕವನ

    ReplyDelete
    Replies
    1. ಧನ್ಯವಾದಗಳು ನಿವೇದಿತಾ ಅವರೇ

      Delete