Thursday, April 04, 2013

ಕಾಡುವ ರಾಧೆಯರು

ರಾಧೇ ಎಂಬ ಹೆಸರಿನ ಮಹಿಮೆ  ಆಗಾಧ ಎನಿಸತೊಡಗಿದೆ ನನಗೆ. ರಾಧಮ್ಮ ಅಂತ ಅಮ್ಮನ ಪರಿಚಯಿಸ್ಥರೊಬ್ಬರು ಇದ್ದಾರೆ. ಆಕೆ ತನ್ನ ಮಗನೊಂದಿಗೆ ಸೆಗಣಿ  ನೆಲದ , ವಿದ್ದ್ಯುದೀಪವಿಲ್ಲದ ಮನೆಯಲ್ಲಿ ತೊಂಬತ್ತರ ದಶಕಲ್ಲಿ ಬದುಕುತ್ತಿದ್ದಳೆಂದರೆ  ನೀವು ನಂಬ ಬೇಕು.  ಇದ್ದ  ಮೋಟು ಕೂದಲಿಗೆ ಅಲ್ಲಲ್ಲಿ ಬೆಳ್ಳಗಾದ  ಯಾವುದೋ  ಜಮಾನದ  ಒಂದೆರಡು ಕಪ್ಪು ಹೇರ್ ಪಿನ್ ಹಾಕಿ , ಒಂದು ಕಪ್ಪು ರಿಬ್ಬನ್  ಕಟ್ಟಿ ,  ಯಾರೋ ಕೊಟ್ಟ  ದಶಕದ ಹಿಂದಿನ ಸೀರೆಯನ್ನ  ತುಸು ಮೇಲೆ  ಉಟ್ಟು , ಒಪ್ಪದ ಕುಪ್ಪಸ ತೊಟ್ಟ ರಾಧಮ್ಮ,ಯಾವಾಗಲಾದರೂ ಕೆಲಸದ ಮನೆಯಿಂದ ವಾಪಾಸಾಗುವಾಗ  ತನ್ನ ಮನೆಯ ಹಾದಿಯಲ್ಲಿದ್ದ ನಮ್ಮ  ಮನೆಗೆ   ಮಟ ಮಟ ಮಧ್ಯಾಹ್ನ  ಬರುತ್ತಿದ್ದರು . ಅಮ್ಮ ಮತ್ತು ಆಕೆಯ ಸಂಭಾಷಣೆ ನನಗೆ ಅರ್ಥವಾಗಿದ್ದು ಕಡಿಮೆ.ಆದರೆ ಆಕೆಯ ಮುಖದಲ್ಲಿರುತ್ತಿದ್ದ ನಗುವಿನ ನೆನಪು ಚೆನ್ನಾಗಿದೆ.

 ರಾಧಮ್ಮ  ಅಷ್ಟು ಚುರುಕಿನ  ಹೆಂಗಸಲ್ಲ , ನಡೆವಾಗ  ಕಾಲು ಸ್ವಲ್ಪ ವಾಲುತ್ತಿತ್ತು.  ರಾಧಮ್ಮನ ಗಂಡ ಎನಿಸಿಕೊಂಡ ಪ್ರಾಣಿ  ತುಂಬು ಕುಟುಂಬದೊಂದಿಗೆ ರಾಯರ ಮಠದ  ಎದುರಿಗೆ ವಾಸಿಸುತ್ತಿದ್ದ , ಮಡಿ ಅಡುಗೆ ಮಾಡುತ್ತಿದ್ದ  ಗೋಪಾಚಾರ್ಯರು !
ಎರಡನೇ  ಮಗ ಹುಟ್ಟಿದ ನಂತರ ಮೊದಲ ಮಗನನ್ನ  ತಮ್ಮ ಬಳಿ ಇರಿಸಿಕೊಂಡು  ಗಂಡ ಮತ್ತು ಅತ್ತೆಮನೆಯವರೆಲ್ಲ ಸೇರಿ  ರಾಧಮ್ಮನನ್ನ ಹೊರಗೆ ಹಾಕಿದ್ದರು. ಎರಡನೆಯ ಮಗ ರಾಧಮ್ಮನೊಟ್ಟಿಗಿದ್ದರೆ  ದೊಡ್ಡ ಮಗ ತಂದೆಯ ಬಳಿ ಇದ್ದ.  ಎರಡನೆಯ ಮಗನೂ  ಕಾಲನ್ನ ಎಳೆದು ಹಾಕುತ್ತಿದ್ದ .  ರಾಧಮ್ಮ ವಾರಕ್ಕೋ ತಿಂಗಳಿಗೋ  ಗಂಡನ ಮನೆಗೆ ಹೋಗಿ ಸ್ವಲ್ಪ ಹಣ 'ಬೇಡಿ'  ತರುತ್ತಿದ್ದರು. ಕೆಲ ವರ್ಷದ ಬಳಿಕ ಮದರಾಸಿನ  ಚಂದನೆಯ  ಹೆಂಗಸು  ಗೋಪಾಚಾರ್ಯರ ಎರಡನೇ  ಮಡದಿಯಾಗಿ ಬಂದಳು.ಆಕೆಗೂ ಮಕ್ಕಳಾದವು   

 ಗಂಡ ಕೊಡುವ ಅಲ್ಪ ಹಣ ಸಾಕಾಗದೇ ರಾಧಮ್ಮ ಮನೆಗೆಲಸಕ್ಕೆ ಹೋಗುತ್ತಿದ್ದರು .ಇದು  ಎರಡು ದಶಕಗಳ ಹಿಂದಿನ ಮಾತು .  ಈಗ ರಾಧಮ್ಮ   ಎಲ್ಲಿದ್ದಾರೋ ಗೊತ್ತಿಲ್ಲ , ಅವರ ಎರಡನೇ  ಮಗ  ಕುರಿಯರ್ ತಲುಪಿಸುವ ಕೆಲಸ  ಮಾಡುವುದನ್ನ ನೋಡಿದ್ದೇನೆ .ರಾಮ  ರಾಜ್ಯ ಆಳಿದ್ರೂ ಸೀತೆಗೆ ರಾಗಿ ಬಿಸೋದು ತಪ್ಪಲಿಲ್ಲ ಅನ್ನೋಹಾಗೆ,  ಆಚಾರ್ಯರು ಕುಟುಂಬದೊಡನೆ ಸಮೃಧ್ಧ ಜೀವನ ನಡೆಸಿದರೆ ರಾಧಮ್ಮ ತನ್ನ ಮತ್ತು ಸಣ್ಣ ಮಗನ ಬದುಕು ಕಟ್ಟಲು ಹೋರಾಡುತ್ತಿದ್ದರು . 

 ಆಕೆಯಲ್ಲಿ ಅನುರಾಗವಿಲ್ಲವೆಂದ ಮೇಲೆ, ಆಚಾರ್ಯರು ಎರಡು ಮಕ್ಕಳನ್ನೇಕೆ ದಯಪಾಲಿಸಿದರು ? ಎಂಬ ಪ್ರಶ್ನೆಗೆ  ಕತ್ತಲ ವ್ಯವಹಾರಕ್ಕೆ ಕಣ್ಣಿಲ್ಲವೆಂಬುದೊಂದೇ ಉತ್ತರವಾಗಿರ ಬಹುದು.  ತನ್ನಿಂದಲೇ  ಹುಟ್ಟಿದ ಮಗನನ್ನ  ಬೀದಿಗೇಕೆ  ತಳ್ಳಿದರು ? ಇದರಲ್ಲಿ ರಾಧಮ್ಮನ ತಪ್ಪೆಷ್ಟು? ಉತ್ತರ ಯಾರೂ ಹೇಳಲಾರರು.


ಎಲ್ಲಿಂದಲೋ ಬೀಜ ಹೊತ್ತು ತರುವ ಗಾಳಿ
 ಬಿತ್ತಲ್ಲ  ಮಣ್ಣನ್ನ  ಹೇಳಿ ಕೇಳಿ
ಬಿತ್ತಿದ  ಬೀಜವಿನ್ನು  ಮಣ್ಣ   ಜವಾಬ್ದಾರಿ
 ಬಸಿರ ಸೀಳಿ ಬಂದ ಮೊಳಕೆಯದೇ  ಬೇರೆ ದಾರಿ
 ಸಸಿಯ ಆಸೆಗೆ  ಬಲಿಯಾಯ್ತೆ ಮಣ್ಣು?
ಹೊರುವುದು ಕರ್ತವ್ಯವೆಂದ  ಧರ್ಮಕ್ಕಿಲ್ಲವೇ  ಕಣ್ಣು ?

ಮೊನ್ನೆ ಅಮ್ಮ ಸಿಕ್ಕಾಗ ರಾಧಮ್ಮ ಎಲ್ಲಿ ಅಂತ ಕೇಳಿದ್ದಕ್ಕೆ, ಗೊತ್ತಿಲ್ಲ ಆದ್ರೆ "ಅವರ ಮೊದಲ ಮಗನಿಗೆ ಮದುವೆಯಾಗಿ ಮಗುವಿದೆ. ಬೇಜಾರಂದ್ರೆ  ಅವನೂ ತುಂಬಾ ಕುಡಿತ ಕಲ್ತು ಬಿಟ್ಟಿದ್ದಾನೆ" ಅಂದ್ರು. ಯಾಕೋ ರಾಧೆಯರಿಗೆ ನೆಮ್ಮದಿ ಎಂಬುದು ಮರೀಚಿಕೆ ಯಾಗೇ  ಉಳಿದಿದೆ.

5 comments:

  1. ಲೇಖನ ತುಂಬಾ ಮಾರ್ಮಿಕವಾಗಿದೆ. ರಾಧೇ ಎನ್ನುವ ಹೆಸರೇ ಹಾಗೋ ಅಥವಾ ಹೆಸರಿಟ್ಟುಕೊಂಡವರ ಹಣೆ ಬರಹ ಹಾಗೋ ಗೊತ್ತಿಲ್ಲ.. ನನಗೆ ಗೊತ್ತಿರುವ ರಾಧ (ಅವರ ಮೂಲ ಹೆಸರು ಬೇರೆ) ಆದರೆ ತಾನು ನೆಮ್ಮದಿಯಾಗಿರದೆ ಮಕ್ಕಳಲ್ಲೂ ದುರ್ಯೋಧನನ ಮತ್ಸರ ಗುಣ ತುಂಬಿ ಸಂಸಾರವನ್ನು ಗೋಳು ಮಾಡಿಕೊಂಡು ಗಂಡನನ್ನು ಜುಟ್ಟು ಹಿಡಿದು ಊರವರ ಮರ್ಯಾದೆ ಕೂಡ ಗಳಿಸದೆ ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಹೀಗೂ ಉಂಟೇನೋ. ಸಹೋದರಿ ಸ್ವರ್ಣ ತುಂಬಾ ಅರ್ಥ ಗರ್ಭಿತ ಲೇಖನ ನಿಮ್ಮದು.

    ReplyDelete
    Replies
    1. This comment has been removed by the author.

      Delete
    2. ನಾನು ಕಂಡ ರಾಧೆಯರಿಗೇಕೋ ಸುಖವಿಲ್ಲ.
      ಎಲ್ಲ ಇದ್ದು ಏನೂ ಇಲ್ಲದಿರುವವರಂತೆ ದುಃಖ ಪಡುವ ರಾಧೆಯರು ಇದ್ದಾರೆ .
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾಗಳು

      Delete
  2. ನಮ್ಮಲ್ಲಿ ಸಾಮಾಜಿಕ ಬದಲಾವಣೆ ಬರಬೇಕಾದರೆ ಹೆಣ್ಣುಮಗಳು ಆರ್ಥಿಕವಾಗಿ ಸ್ವತಂತ್ರಳೂ, ಸಬಲಳೂ ಆಗಬೇಕು. ಆ ದಿನಗಳು ಬಹಳ ದೂರವೇನಿಲ್ಲ.

    ReplyDelete
    Replies
    1. ಆ ದಿನ ಬೇಗ ಬರಲೆಂಬ ಆಶಯ ನಮ್ಮದೂ ಕಾಕಾ
      ಧನ್ಯವಾದಗಳು

      Delete