Thursday, April 18, 2013

ಹಳ್ಳ ಸೇರದ ಹನಿಗಳು....ಭಾವಬನಿಗಳು - ೬

೧. ಬೋನ್ಸಾಯ್ ಗಿಡಗಳನ್ನು ಕಂಡಾಗ ಕಾಣುವುದು ನನಗೆ
ಕಲೆಯೊಂದಿಗೆ ಕುಂಟಿತಗೊಂಡ ಹಸಿರಿನ ಬೆಳವಣಿಗೆ !


೨. ನಿನ್ನ ಪಾದದಡಿಯ ಮಣ್ಣ ಕಣದಲ್ಲಿ
ಒಳಗಣ್ಣನಿಟ್ಟಿದ್ದೆ
ಯುಗದ ದೈವ ಕಲ್ಲೆಂದು
ಮರೆತೇ ಬಿಟ್ಟಿದ್ದೆ !

೩. ಹೆಜ್ಜೆಗಳನೆಲ್ಲ
ನಿನ್ನಂಗಳದಲ್ಲಿ  ಬಿಟ್ಟು
ಸವೆಯದ ದಾರಿಯಲಿ
ಹೊರಟೆ ನಾ
ನನ್ನೊಳಗನ್ನ ನಿನ್ನ ಬಾಗಿಲ ತೋರಣವಾಗಿಸಿ 
ನಿರ್ಜೀವ ದೇಹ  ಹೊತ್ತು ಹೊರಟೆ ನಾ 


೪. ಹಿಂದಿನವರು ಬರೆದದ್ದನ್ನೆ ಇಂದಿನವರು ಹೊಸ ಶೈಲಿಯಲ್ಲಿ ಬರೆಯುವುದು
ಇರುವ ಬುವಿಯನ್ನೇ ಹವಣಾಗಿಸಬೇಕೆ ಹೊರತು ಹೊಸ ನೆಲದ ಸೃಷ್ಟಿ ಸಾಧ್ಯವಿಲ್ಲವಲ್ಲ ?

೫. ಬಾಲ್ಯ ಚೆನ್ನಾಗಿತ್ತು
ಚುಕ್ಕಿ ತಾರೆ ಕೈಗೆ ಸಿಗುತಿತ್ತು
ಆಕಾಶಕ್ಕೆ ಮೆಟ್ಟಿಲು ಕಟ್ಟಬಹುದಿತ್ತು
ಈಗ ಚುಕ್ಕಿ ತಾರೆ ಎಂದರೆ  ವಿಜ್ಞಾನ
ಆಕಾಶದ ತುಂಬೆಲ್ಲಾ ನಮ್ಮದೇ ಉಪಗ್ರಹಗಳು !

 ೬. ನನ್ನೆಲ್ಲ ಕನಸುಗಳ
ನಿರ್ದಯವಾಗಿ ಕೊಂದ
ನೀನೊಬ್ಬ ಕೊಲೆಗಾರ
ಆದರೆ,
ಹೋದ ದಾರಿಗೆ ಕಂಬನಿಯ
ರಂಗವಲ್ಲಿಯನಿಡುವ 
ಶಿಕ್ಷೆ ಮಾತ್ರ ಮತ್ತೆ ನನಗೆ


೭. ಬಜಾರಿನಲ್ಲಿ ತಂದು ನಿಲ್ಲಿಸಿದವ : ತಲೆಹಿಡುಕ
ಆನಂದ (?) ಪಟ್ಟವ  : ರಸಿಕ
ಪಶ್ಚ್ಚಾತ್ತಾಪಕ್ಕಾಗಿಬರೆದು ಗಳಿಸಿದವ : ಲೇಖಕ
ಇವರಾರಿಗೂ ಕಾಣದ್ದು :  ನನ್ನ ಅಂತರಂಗ


೮. ನನ್ನ ಪಾಲಿನ ಪ್ರಳಯವಾಗಲೇ
ಆಗಿ ಹೋಗಿದೆ
ನೀನು ನಾನು ದೂರಾದ ಮೇಲೆ
ಪ್ರಳಯಕ್ಕಾಗಿ ಕಾಯುವುದರಲ್ಲಿ
ಅರ್ಥವೇನಿದೆ ?


೯. ಉತ್ಕಟವಾಗಿ ಪ್ರೇಮಿಸಬೇಕು
ಒಂದೋ ಪ್ರೇಮದಲ್ಲೊಂದಾಗಬಹುದು
ಇಲ್ಲ ಕೆಲ ಕವಿತೆಗಳು  ಕಾಲಿಗೆ ತೊಡರಬಹುದು


೧೦. ನಾ ಬರೆದ ಕವಿತೆಗಳೆಲ್ಲ ಮೊನ್ನೆ ಕಳೆದುಹೋದವು
     ಇದು ಅವುಗಳ ಫಿರ್ಯಾದು !

8 comments:

  1. ಉಸಿರನ್ನು ಅಮುಕಿ ಜೀವನದ ಪಾತ್ರವನ್ನು ಬದಲಿಸುವ ಒಂದು ಕಲೆ ಈ ಕಾವ್ಯ.
    ಇರುವ ಅರ್ಧ ಶತಕದಷ್ಟು ಅಕ್ಷರಗಳನ್ನು ಹಿಂಡಿ, ಭಾವ ಸುರಿದು ಕಲಸಿ ಬೆರೆಸಿ ಪೋಣಿಸಿರುವ ಪದಗಳ ರಾಶಿ ತುಂಬಾ ಸೊಗಸಾಗಿದೆ. ಪ್ರತಿಯೊಂದು ಪುಟಗಳಷ್ಟು ವಿವರಿಸಬಹುದಾದ ಚುಟುಕಗಳು. ಸೂಪರ್ ಆಗಿವೆ.

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಯೇ ಒಂದು ಕವಿತೆಯಂತಿದೆ. ಧನ್ಯವಾದಗಳು ಶ್ರೀಕಾಂತ್ ಭಾಯ್ :)

      Delete
  2. ಹಳ್ಳ ಸೇರದ ಹನಿಗಳು....ಭಾವಬನಿಗಳು - ೬ ಚೆನ್ನಾಗಿವೆ. 'ನಾ ಬರೆದ ಕವಿತೆಗಳೆಲ್ಲ ಮೊನ್ನೆ ಕಳೆದುಹೋದವು ಇದು ಅವುಗಳ ಫಿರ್ಯಾದು' ಸಾಲುಗಳು ತುಂಬ ಇಷ್ಟವಾದವು.

    ReplyDelete
    Replies
    1. ಬಹಳ ದಿನಗಳ ನಂತರ ತಮ್ಮ ಭೇಟಿ ಕುಮಾರ ರೈತ ಸಾರ್, ಧನ್ಯವಾದಗಳು

      Delete
  3. ಹೊಗಳಲು ಎಲ್ಲಿಂದ ಶುರುವಿಡಲಿ ಕವಿಯತ್ರೀ?

    ೧. ಇದು ಆಧುನಿಕತೆಯ ಪೊಳ್ಳಿಗೂ ಅನ್ವಯ.

    ೨. ವೈರುಧ್ಯ ಭಾವ. ಇಲ್ಲಿ ದೇವನೇ ಕಲ್ಲು ಅಹಲ್ಯ ಕಣ್ ತೆರೆದು ಕಾದ ಶಾಪಗ್ರಸ್ತೆ, ನನ್ನಂತೆ!

    ೩. ಸಂಪೂರ್ಣ ಕಳೆದುಕೊಂಡ ಮನಸ್ಸು. ಇಲ್ಲಿ ಅರೆ ಜೀವ ಯಾರಿಗಾಗಿಯೋ ನಿರ್ಜೀವ!

    ೪. ಅದೂ ನಿಜವೇ, ಕಣದಿಂದಲೇ ಕಣದ ಸೃಷ್ಟಿ. ಹೊಸ ಕಣದ ಹುಟ್ಟು ನಮ್ಮಿಂದಾಗದ ಕ್ರಿಯೇ.

    ೫. ಅಮಾಯಕತೆ ಕಣ್ಣಿಗೆ ಇಂದು ಅರಿವಿನ ಚಾಳೀಸು. ನಂಬಿಕೆಯ ಕೊಕ್ಕೆಗೆ ಜಾರು ಪ್ರಶ್ನಾ ಸರಪಣಿ.

    ೬. ಕ್ಷಮಯಾ ಸ್ತ್ರೀ, ಆಕೆ ಶಿಕ್ಷೆಯಲ್ಲೂ ಸಾರ್ಥಕ್ಯವನ್ನು ಕಾಣೋ ಮಮತಾಮಯೀ.

    ೭. ಕೆದಕಿದವ : ಮಾದ್ಯಮ

    ೮. ಪ್ರಣಯವಿದ್ದೀತು ಕವಿಯತ್ರಿ ದಯತೋರಿ ಎರಡನೇ ಅಕ್ಷರ ಬದಲಿಸಿ ನೋಡಿ.

    ೯. ಉತ್ಕಟ ಪ್ರೇಮಕ್ಕೆ ಸಮಯದ ಕೊರತೆ, ಅದಕ್ಕೆ ಬರಿಯ ಕಾವ್ಯ ಕಲಾಪ.

    ೧೦. ಇದು, ನಾನು ಬರೆಯಲು ಸಾದ್ಯವೇ ಇಲ್ಲದಂತಹ ಸಾಲುಗಳು. ನೆನಪಿಸಿಕೊಳ್ಳಲು ಮನಸ್ಸಿನಲ್ಲದ ಸಾಲುಗಳನ್ನು ಮುಚ್ಚಿಡುವ ಪ್ರಯತ್ನ.

    ಮೂಕನನ್ನು ಕೆದಕಿದ್ದಾರೆ ಮೌನವೇ ಉತ್ತರ.

    ReplyDelete
  4. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು ದಾಖಲಿಸುವ ಬದರಿ ಸಾರ್ , ತಾಳ್ಮೆಗೆ ಶರಣು

    ReplyDelete
  5. ಸ್ವರ್ಣಾ,
    ಇವು ಅದ್ಭುತ ಬನಿಗಳು. ಈ ಕವಯತ್ರಿಗೆ ತಲೆ ಬಾಗುತ್ತಿದ್ದೇನೆ.

    ReplyDelete
    Replies

    1. ಇವುಗಳಲ್ಲಿ ಅದ್ಭುತ ಕಾಣುವ ನಿಮ್ಮ ಸಹೃದಯತೆಗೆ ನಾನು ವಂದಿಸುತ್ತೇನೆ ಕಾಕಾ
      ಧನ್ಯವಾದಗಳು

      Delete