Thursday, May 09, 2013

ಪ್ರಭಾಸ - ಪ್ರಭಾತ

ಚಿತ್ರಕೃಪೆ : ಅಂತರ್ಜಾಲ


ಸಾಯಂಕಾಲದ ಹಾಲು ಕರೆದು ಮಡಕೆಯನ್ನ ಒಲೆಯ ಮೇಲಿಟ್ಟೆ, . ಬೇಡ ಬೇಡವೆಂದರೂ ಅವನ  ನೆನಪು ನುಗ್ಗಿ ಬರುತ್ತಿತ್ತು. ಇದು ಇಂದಿನ ಕತೆ ಮಾತ್ರವಲ್ಲ ಅನುಕ್ಷಣವನ್ನು  ಅವನ ಸ್ಮರಣೆಯಲ್ಲೇ ಕಳೆವ ನನ್ನಂತ ಅದೆಷ್ಟೋ ಹೆಂಗಳೆಯರ ನಿತ್ಯದ ಕತೆ. ಹಾಲಿಟ್ಟು ಮೈ ಮರೆತವಳನ್ನು ಎಚ್ಚರಿಸಿದ್ದು ಮೊಮ್ಮಗನ ದನಿ. "ಅಜ್ಜಿ ನಾಡಿದ್ದು ಗ್ರಹಣ ಕಾಲದಲ್ಲಿ  ತರ್ಪಣ ಕೊಡಲು ನಾವೆಲ್ಲಾ ನಾಳೆ ಪ್ರಭಾಸಕ್ಕೆ  ಹೋಗ್ತಿದಿವಿ, ನೀನೂ ಬರ್ತೀಯಾ ?"  ಹುಟ್ಟಿದ ಮನೆಯನ್ನು ಬಿಟ್ಟು  ಗಂಡನ ಮನೆಗೆ ಬಂದದ್ದು ನನ್ನ ಬದುಕಿನ ಏಕ ಮಾತ್ರ ಪಯಣ. ಪಯಣಿಸಬೇಕೆಂಬ ಆಸೆಯೂ ಇರಲಿಲ್ಲ. ಯಾಂತ್ರಿಕವಾಗಿ ಇಲ್ಲ ವೆಂದೆ. ಸ್ವಲ್ಪ ಹೊತ್ತಿಗೆ ಬಂದ ಮಗ ಅದೇ ಪ್ರಶ್ನೆ ಕೇಳಿ  ಮಥುರೆಯ ರಾಜ ಪರಿವಾರವೂ  ಬರುತ್ತಿದೆ  ಪ್ರಭಾಸಕ್ಕೆ  ಅಂತ ಸೇರಿಸಿದ. ದಶಕಗಳ ಹಿಂದೆ ಓಡಿದ್ದೆ ನಾ.

ವೃಂದಾವನದ ತುಂಬೆಲ್ಲಾ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದ ವಯಸು, ಜೊತೆ ಕುಣಿಯಲು ಅವನಿದ್ದನಲ್ಲ ! ಹೊತ್ತು ಹುಟ್ಟುತ್ತಲೇ ತುರು ಕಾಯಲು ಅವ ಯಮುನಾ ತೀರಕ್ಕೆ ಹೊರಟರೆ ಎಲ್ಲ ಹೆಣ್ಣುಗಳೂ ಒಂದೊಂದು ನೆಪ ಹೂಡಿ ಅವನ ಹಿಂದೆ ಯಮುನೆಯ ಮಡಿಲಿಗೆ.  ಅಲ್ಲೊಂದು ಹೊಂಗೆ ಮರ , ಅದರ ಕೆಳಗೊಂದು ಸಣ್ಣ ಬಂಡೆ , ಅದರ ಮೇಲೆ ಕುಳಿತ ಅವನು ಮುರಳಿಯನ್ನ ತುಟಿಗಿಟ್ಟರೆ ನಮ್ಮ ಆನಂದ ಮೇರೆ ಮೀರುತ್ತಿತ್ತು, ಗೆಜ್ಜೆ ತಾನೇ ಕುಣಿಯುತ್ತಿತ್ತು . ಮುರಳಿಯ ಗಾನ ನಿಂತರೆ ಅವನ ಮಾತಿನ ಗಾನ ಆರಂಭವಾಗುತ್ತಿತ್ತು. ಮೊಗದ ನಗೆಯ ಗೆರೆಯಲ್ಲಾದ ಸೂಕ್ಷಾತಿಸೂಕ್ಷ್ಮ ಬದಲಾವಣೆಯನ್ನು ಅವನಿಂದ ಮುಚ್ಚಿಡಲು ನಾವು ಸೋಲುತ್ತಿದ್ದೆವು. ಇನ್ನು ಯಾರ ಕಣ್ಣಲ್ಲಾದರೂ ಕಂಬನಿ ಕಂಡರೆ ಮುಗಿದೇ ಹೋಯಿತು , ಇನ್ನಿಲ್ಲದಂತೆ ರಮಿಸುತ್ತಿದ್ದ . ಒಮ್ಮೆ ಮರೆಯಲ್ಲಿ ನಮ್ಮನ್ನು ಕಂಡ ಅಪ್ಪ  ನಾ ಮನೆಗೆ  ಬಂದ ಕೂಡಲೇ ಅಂದಿದ್ದರು "ಮಗಳೇ ನೀನು, ನಿನ್ನಂತ ಹೆಣ್ಣುಗಳೇ ಪುಣ್ಯವಂತರು, ಅವನಿಂದ ರಮಿಸಿಕೊಳ್ಳಲಾದರೂ ಹೆಣ್ಣು ಜನ್ಮ ಕೊಡೆಂದು ಪ್ರಾರ್ಥಿಸುತ್ತೇನೆ" ಉಬ್ಬಿ ಹೋಗಿದ್ದೆ ನಾನು. ಈಗ ಅನ್ನಿಸುತ್ತೆ , ಹೌದಲ್ಲವೇ, ಹೆಣ್ಣಿಗೆ ಪ್ರೇಮದಲ್ಲಿ ಸೋಲುವುದು ಗೊತ್ತು , ಸೋತು ಸೊರಗುವುದು ಗೊತ್ತು , ಸೊರಗಿ ಕರಗುವುದು ಗೊತ್ತು , ಕರಗಿ ಒಂದಾಗುವುದು ಗೊತ್ತು. ನಮ್ಮ ಯಮುನೆ ಆಸ್ತಿತ್ವಮರೆತು  ನಾ ಸಾಗರವನ್ನು ಸೇರಲಾರೆ ಎಂದು ಹೇಳಿದ್ದುಂಟೇನು ? ಸಾಗರವನ್ನು ಸೇರಿ, ಮೋಡವಾಗಿ ತೇಲಿ, ಹನಿಯಾಗಿ ಹನಿದು ಮತ್ತೆ ನದಿಯಾಗುವ ಕಲೆ ಅವಳಿಗೆ ಗೊತ್ತು .  ಅವನ ಸಂಗಡದಲ್ಲಿ ಬಾಲ್ಯ ಕಳೆದದ್ದೇ ಗೊತ್ತಾಗಲಿಲ್ಲ, ಮಥುರೆಯಿಂದ ಅಕ್ರೂರನೆಂಬ ಕ್ರೂರಿ ಬರುವವರೆಗೂ !


ಬಂದ ಅಕ್ರೂರ ಅವನ ಮನೆಯಲ್ಲೇ ತಂಗಿದ. ಅಂದು ಸಂಜೆ ಹೊಂಗೆ ನೆರಳಿಗೆ ಬಂದ ಅವನ ಕೈಯಲ್ಲಿ ಕೊಳಲಿರಲಿಲ್ಲ !  ನಾಳೆ ನಾನು ಮಾವನ ಮನೆಗೆ , ತಂದೆ ತಾಯರನ್ನು ಕಾಣಲು ಹೊರಡಬೇಕು ಎಂದ. ಕಂಬನಿಯನ್ನ ಯಮುನೆಯಲ್ಲಿ ಮುಚ್ಚಿಟ್ಟು ಅವನ ಮಾತನ್ನು ಕೇಳಿದೆವು ನಾವು .  ಮಥುರೆಯಲ್ಲಿ ಬಿಲ್ಲ ಹಬ್ಬವಿದೆ ರಾಜನ ಆಹ್ವಾನ ಬಂದಿದೆ ಅದಕ್ಕೆ ಹೋಗ್ತೀದಿನಿ ಅಂದ. 'ಬಿಲ್ಲ  ಹಬ್ಬವಂತೆ ಬೀದಿ ಸಿಂಗಾರವಂತೆ ' . ಅವನಿನ್ನು ಇಲ್ಲಿಗೆ ಬರಲಾರನೆಂಬುದು ಹೇಳಿದ ಅವನಿಗೂ ಗೊತ್ತಿತ್ತು ಕೇಳಿದ ನಮಗೂ. ಅವನು ಹುಟ್ಟಿದ್ದು ದುಷ್ಟ ಶಿಕ್ಷಣೆ ಶಿಷ್ಟರಕ್ಷಣೆಗಾಗಿ  ಅಂತೆ. ರಕ್ಷಣೆ ಶಿಕ್ಷಣೆಗಾಗಿ ಅದೆಷ್ಟೋ ಅವತಾರ ಎತ್ತಿದವನು ಪ್ರೇಮಕ್ಕಾಗಿ ಒಂದಾದರೂ ಅವತಾರ ಎತ್ತ ಬಹುದಿತ್ತಲ್ಲ ?

ಯಾರಿಲ್ಲವೆಂದರೂ ಉರುಳುವ ಕಾಲ ಉರುಳುತ್ತಲೇ ಇರುತ್ತದೆ. ನನಗೂ ಮದುವೆಯಾಯಿತು , ಮದುವೆಯಾದವಳು ಮತ್ತೊಬ್ಬನನ್ನು ನೆನೆವುದು ತಪ್ಪೋ ಸರಿಯೋ ? ಪ್ರಶ್ನೆಗಳು ನಮ್ಮನ್ನು ಕಾಡುವುದಿಲ್ಲ. ನಮ್ಮದೇನಿದ್ದರೂ ಕರೆವ ಬದುಕು. ಯಮುನೆಯ ಪಾತ್ರವನ್ನು ಯಾರಾದರೂ ನಿರ್ಧರಿಸುತ್ತಾರೇನು ? ಅವನಿಲ್ಲದೇ ಕಳೆದ ಉಗಾದಿಗಳೆಷ್ಟೋ ? ಬಣ್ಣವೇ ಇಲ್ಲದ ಹೋಳಿಗಳೆಷ್ಟೋ ? ದಿನವೂ ಯಮುನೆಯ ತೀರಕ್ಕೆ ಹೋಗಿ  ಹೊಂಗೆ ಮರದಡಿಯಲ್ಲಿ ಕೂತು ಬರುವುದು ನನ್ನ ವಯಸ್ಸಿನ ಎಲ್ಲ ಹೆಂಗಳೆಯರ ವ್ರತವಾಗಿತ್ತು . ಹೊಂಗೆಯ ಎಲೆಗಳ ನಡುವೆ ಸುಳಿವ ಗಾಳಿಯ ಸದ್ದಲ್ಲಿ ಮುರಳಿ ನಾದವನ್ನೂ , ಯಮುನೆಯ ಹರಿವಲ್ಲಿ ಗೆಜ್ಜೆಯ ನಾದವನ್ನೂ ಹುಡುಕುವ ಎದೆಂದೂ ಫಲ ಕೊಡದ ವ್ರತ. ಮಧ್ಯೆ ಅವನ ಸುಧ್ಧಿಗಳೂ ತಿಳಿಯುತ್ತಿದ್ದವು. ಎಷ್ಟೋ ಘೋರ ಯುಧ್ಧಗಳನ್ನು ಮಾಡಿದನಂತೆ, ದುಷ್ಟರನ್ನು ಕೊಂದನಂತೆ. ಮೊನ್ನೆ ಅದಾವುದೋ ಯುಧ್ಧದಲ್ಲಿ  ಮಧ್ಯಮ ಪಾಂಡವನಿಗೆ  ಯುಧ್ಧ ಭೂಮಿಯಲ್ಲೇ ಉಪದೇಶ ಮಾಡಿದನಂತೆ. ಅವನ ಮುರಳಿಯನ್ನ ಒಮ್ಮೆ ನುಡಿಸಿದ್ದರೆ ಸಾಕಿತ್ತು ಬೇರಾವ ಉಪದೇಶದ ಅಗತ್ಯವೂ ಇರಲಿಲ್ಲ.

ಮಗ ಬಂದು ರಾಜ ಪರಿವಾರ ಬರುತ್ತದೆ ಅಂದಾಕ್ಷಣ ನಾನೂ ಹೊರಟೆ ಪ್ರಭಾಸಕ್ಕೆ. ಮನೆಯಲ್ಲಿ ಪಯಣದ ಸಡಗರ, ನನ್ನ ಮನದಲ್ಲಿ ಬೇರೆಯದೇ ಲೋಕ. ವೃಂದಾವನದ ಎಲ್ಲ ಹೆಂಗಳೆಯರೂ , ಗಂಡಸರೂ ಹೊರಟಿದ್ದರು. ಊರು ಬಿಟ್ಟು ಮಥುರೆಗೆ ಹಾಲು ಕೊಡಲು ಹೋಗದವರು ಪ್ರಭಾಸಕ್ಕೆ ಹೊರಟರೆ ಮಕ್ಕಳೆಲ್ಲ ಬೆರಗಾಗಿದ್ದರು. ಗಂಡಂದಿರಿಗೆ ನಿಜದ ಕಾರಣ ಗೊತ್ತಿತ್ತು , ಅವರೂ ಅದೇ ಕಾರಣಕ್ಕೆ ಮುಪ್ಪನ್ನು ಲೆಕ್ಕಿಸದೇ ಹೊರಟವರಲ್ಲವೆ. ಸಮುದ್ರ ತೀರದಲ್ಲಿ ಪ್ರತೀ ಕುಟುಂಬಕ್ಕೂ ಒಂದು ಗುಡಾರ ಕಟ್ಟಿ ಸಮುದ್ರದ ಹರಿವು ನೋಡುತ್ತಾ ಕುಳಿತೆವು. ಸೌಮ್ಯ ಯಮುನೆಯ ಮುಂದೆ ಅಬ್ಬರಿಸುವ ಸಾಗರ ನನಗೇಕೋ ರುಚಿಸಲಿಲ್ಲ . ಅಲ್ಲಿಂದ ಎದ್ದು ಸ್ವಲ್ಪ ಮುಂದೆ ಬಂದೆ. ಅನತಿ ದೂರದಲ್ಲಿ  ಆಡಂಬರದ ಅರಮನೆಯಂತ ಗುಡಾರಗಳು ಕಂಡವು , ಬಹುಶಃ ರಾಜ ಪರಿವಾರದ್ದವರಿದ್ದರಬೇಕು . ಅಲ್ಲಿದ್ದವರು ಮಾತನಾಡುತ್ತಿದರು, ಅವನಿಗೀಗ ಅದೆಷ್ಟೋ ಜನ ಹೆಂಡತಿಯರಂತೆ. ಆಷ್ಟ ಸಿಧ್ಧಿಗಳಂತೆ ಆಷ್ಟ ಮಹಿಷಿಯರಂತೆ. ನರಕಾಸುರನ ಸೆರೆಯಿಂದ ಬಿಡಿಸಿದ ಹದಿನಾರು ಸಾವಿರ ಜನರನ್ನು ಅವನು ಮದುವೆಯಾದ ಬಗ್ಗೆ ಕೇಳಿದ್ದೆ. ಯಾರದೋ ಮನೆಯಲ್ಲಿ ಅದೂ ನರಾಕಾಸುರನಂತವನ ಸೆರೆಯಲ್ಲಿದ್ದವರನ್ನ  ಕೈ ಹಿಡಿವುದು ಅವನಂತವರಿಗೆ ಮಾತ್ರ ಸಾಧ್ಯ . ಯೋಚನೆಯಲ್ಲಿ ನಾ ಮಗ್ನಳಾಗಿರುವಾಗಲೇ ಯಾರೋ ರಾಜ ಪರಿವಾರದವರು ಬಂದರು ಅಂತ ಕೂಗುವುದು ಕೇಳಿಸಿತು. ನಾ ಎಚ್ಚರಗೊಂಡು ನೋಡುವಷ್ಟರಲ್ಲಿ ಎಲ್ಲರೂ ಗುಡಾರದ ಒಳಗೆ ಹೋಗಿದ್ದರು. ಹಳದಿ ಪೀತಾಂಬರದ ಚುಂಗು ಮಾತ್ರ ಕಾಣಿಸಿತು . ಸಂದೇಹವೇ ಇಲ್ಲ ಅದು ಅವನೇ ಇರಬೇಕು. ಗುಡಾರದ ಹತ್ತಿರ ಹೋದರೆ ನೋಡಬಹುದು, ಹೋಗಲೇ ? ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದು ನಾನು ಮತ್ತೆ  ಕುಟುಂಬವಿದ್ದ ಕಡೆ ಹಿಂತಿರುಗಿದೆ.

ಆಕಾಶದಲ್ಲಿ ತಾರೆಗಳು ಮೂಡುತ್ತಿದ್ದಂತೆ ಎಲ್ಲರೂ ಮಲಗಲು ತಯಾರಿ ನಡೆಸಿದ್ದರು, ನನಗೆಲ್ಲಿಯ ನಿದ್ದೆ ? ಬೆಳಗಿನ ಹಾಲು, ಮೊದಲ ಬೆಣ್ಣೆಯ ಅವನ ಪ್ರೀತಿಯನ್ನು ಅರಿತ ಎಲ್ಲ ಹೆಂಗಸರು ತಮ್ಮಲ್ಲಿದ್ದ ಉತ್ತಮ ಹಸುಗಳನ್ನ ತಮ್ಮೊಡನೆ ಕರೆ ತಂದಿದ್ದೆವು. ಹೊತ್ತು ಮೂಡುವ ಮುಂಚೆ ಏಳುವುದು ನಮಗೆ ಅಭ್ಯಾಸವಾದರೂ ನಾಳೆ ತಡವಾದರೆ ? ಎಂಬ ಧಾವಂತ ಎಲ್ಲರಲ್ಲೂ ಮನೆ ಮಾಡಿತ್ತು . ಸುಮ್ಮನೆ ಹಾಸಿಗೆಯಲ್ಲುರುಳಿದರೆ ಬರಿ ಹಳದಿ ಚುಂಗೇ ಕಣ್ಣ ಮುಂದೆ. ರಾತ್ರಿಗಳು ಇಷ್ಟು ದೀರ್ಘವಾಗಿರುತ್ತವೆಂದು ಇಂದೇ ಗೊತ್ತಾಗಿದ್ದು. ಎಣ್ಣೆ ಮುಗಿದು ಗುಡಾರದಲ್ಲಿಟ್ಟಿದ್ದ  ದೀಪ ನಂದಿತು . ದೀಪ ಆರಿದಾಗ ಇದ್ದೂ ಇಲ್ಲದಂತಿರುವ ವಾಸನೆ ಬರತ್ತೆ. ಕೆಲಸವಾಯಿತೆಂಬ ಎಣ್ಣೆಯ ನಿಟ್ಟುಸಿರೋ ? ಬದುಕು ಮುಗಿಯಿತೆಂಬ ಬತ್ತಿಯ ನಿಟ್ಟುಸಿರೋ ? ಅಥವಾ ಗಾಳಿಯಲೊಂದಾದ ಜ್ಯೋತಿಯ ನಿಟ್ಟುಸಿರೋ ? ದಿನವೂ ಈ ವಾಸನೆ ಬರುವ ವೇಳೆಗೆ ನಿದ್ದೆಯಲ್ಲದ ನಿದ್ದೆಯಲ್ಲಿ ಅವನ ಕನಸು ಮುಗಿದು ಮತ್ತೆ ನೆನಪು ಕಾಡುತ್ತಿತ್ತು , ಇಂದು ಕನಸೂ ಇಲ್ಲ. ಕಾಡುವ ನೆನಪು ಮಾತ್ರ. ಅಂತೂ  ಇಂತೂ  ಬ್ರಾಹ್ಮಿ ಮುಹೂರ್ತದ ಲಕ್ಷಣಗಳು ಕಾಣ ತೊಡಗಿದವು. ಎದ್ದು ಮುಖ ಮಾರ್ಜನ ಮುಗಿಸಿ ಮಡಿಕೆ ಹಿಡಿದು ಹಸು ಕಟ್ಟಿದ್ದ ಸ್ಥಳಕ್ಕೆ ಹೋದೆ . ಅಲ್ಲಾಗಲೇ ಗೆಳತಿಯರು ಇದ್ದರು. ಯಾರ ಬಳಿಯೂ ನಿದ್ದೆ ಸುಳಿದಿಲ್ಲವೆಂದು ಅವರ ಕಣ್ಣುಗಳು ಸಾರುತ್ತಿದ್ದವು .

ಹಾಲು ಕರೆಯುತ್ತಿದ್ದ ಹಾಗೆ ಒಂದು ಯೋಚನೆ : ಅವನೀಗ ರಾಜ ಪರಿವಾರದವನು , ಸ್ವತಃ ರಾಜನಾಗುವ ಎಲ್ಲ ಅವಕಾಶಗಳಿದ್ದೂ ಬೇರೆಯವರಿಗೆ ಪಟ್ಟ ಬಿಟ್ಟು ಕೊಟ್ಟವನು, ಅವನಿಗೆ ಮಣ್ಣಿನ ಮಡಕೆಯಲ್ಲಿ ಹಾಲು , ಬೆಣ್ಣೆ  ಕೊಡಲೇ ? ಬಂಗಾರ , ಬೆಳ್ಳಿ ಇಲ್ಲವಾದರ ಕೊರಗು  ಬದುಕಲ್ಲಿ ಮೊದಲ ಬಾರಿ ಕಾಡಿತ್ತು. ತಕ್ಷಣವೇ ಕಾರ್ತ್ಯಯನಿ ವ್ರತ ಮಾಡೋವಾಗ ಅವನು ಹೇಳಿದ್ದ ಮಾತು ನೆನಪಾಯಿತು. ನಾವೆಲ್ಲಾ ಅವನೇ ಗಂಡನಾಗಲೆಂದು ಮಾಡಿದ್ದ ವ್ರತವದು . ಬಟ್ಟೆ ತೆಗೆದು ಯಮುನೆಯಲ್ಲಿ ಮಡಿಯಾಗುತ್ತಿದ್ದರೆ ಯಾವುದೋ ಮಾಯೆಯಲ್ಲಿ ನಮ್ಮ ಬಟ್ಟೆ ಹೊತ್ತೋಯ್ದು ಸತಾಯಿಸಿದ್ದ. ನಮ್ಮ ಕಣ್ಣೀರಿಗೆ ಮಣಿದು ಬಟ್ಟೆ ಕೊಟ್ಟು ಹೇಳಿದ್ದ  'ಬೆತ್ತಲಾಗುವ ಭಯವಿದ್ದವರು, ಬೆತ್ತಲಾಗದವರು ಬಾಳಲಾರರು'.  ಮಡಕೆಯಲ್ಲಿ ಹಾಲು ಕರೆದು ಹೆಪ್ಪಿಟ್ಟಿದ್ದ ಮೊಸರು ಕಡೆದು ಬೆಣ್ಣೆ ತೆಗೆದು ಮಡಕೆಗಳಲ್ಲಿ  ತುಂಬಿಸಿಟ್ಟೆ. ಸ್ನಾನ ಮಾಡಿ ಅವನ ಗುಡಾರಕ್ಕೆ ಹೋಗುವುದೆಂದು ಎಲ್ಲ ಗೆಳತಿಯರಲ್ಲಿ ಮಾತಾಗಿತ್ತು .

ಮಿಂದು ಮಡಿಯನುಟ್ಟು , ಗಂಧ ಸಿಂಧೂರವಿಟ್ಟು ತಯಾರಾದೆ.  ಮಕ್ಕಳೆಲ್ಲ ನಮ್ಮ ಸಡಗರ ನೋಡಿ ನಗುತ್ತಿದ್ದರು. ಗಂಡಸರು  ನೀವು ಹೋಗಿ ಸ್ವಲ್ಪ ಹೊತ್ತಿನ ಬಳಿಕ ನಾವೂ ಬರುತ್ತೇವೆ ಅಂದರು. ಅವರಿಗೆ ಗೊತ್ತಿತ್ತು ನಮ್ಮ ಅವನ ನಡುವೆ ಯಾರೂ ಬರಲಾರರೆಂದು. ನಾಲ್ಕು ಹೆಜ್ಜೆ ಗೆಳತಿಯ ಜೊತೆ ಹೋದ ನಂತರ ಮಡಕೆಗಳನ್ನು ಅವಳ ಕೈಗಿತ್ತು ಅವನಿಗೆ ಕೊಡಲು ಹೇಳಿ ಹಿಂತಿರುಗಿ ಬಂದುಬಿಟ್ಟೆ. ರಾಜಕಾರಣದಲ್ಲಿ ಮುಳುಗಿದ್ದವನನ್ನ ಕಾಣುವ ಆಸೆ ಒಮ್ಮಿಂದೊಮ್ಮೆಲೆ ಮಾಯವಾಯ್ತು ಅಥವಾ ಒಲವಿನ ಸಾಕ್ಷಾತ್ಕಾರವಾಗಿತ್ತು.

ಅವನಾರೆಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ , ನನ್ನ ಹೆಸರು ಲೋಕಕ್ಕೆ ತಿಳಿಯಬೇಕಿಲ್ಲ.

ಟಿಪ್ಪಣಿ :  ವೃಂದಾವನ ಬಿಟ್ಟ ಕೃಷ್ಣ ಕೆಲ ದಶಕಗಳ ನಂತರ ಪ್ರಭಾಸ ಕ್ಷೇತ್ರದಲ್ಲಿ  ಕೃಷ್ಣ ಮತ್ತೆ ಗೋಪಿಕೆಯರನ್ನು ಸಂಧಿಸುತ್ತಾನೆ . ನಮ್ಮನ್ನೇಕೆ ತೊರೆದೆ ಎಂಬ ಪ್ರಶ್ನೆಗೆ  "ನಾನೆಲ್ಲಿ ನಿಮ್ಮನ್ನು ತೊರೆದೆ ? ನಿಮ್ಮೊಳಗೆ ಇದ್ದೆನಲ್ಲ. ಒಂದಾಗುವುದೇ ಅಗಲುವುದಕ್ಕೆ , ಮೇಲೇರುವುದೇ ಇಳಿಯುವುದಕ್ಕೆ. ಮಿಲನದಲ್ಲೇ ಅಗಲುವಿಕೆಯ ಬೀಜವಿದೆ " ಎನ್ನುತ್ತಾನೆ.
ಪ್ರಭಾಸ ಕ್ಷೇತ್ರ ಈಗಿನ ಗುಜರಾತಿನಲ್ಲಿದೆ. 

ಇದು ಗೆಳತಿಯೊಬ್ಬಳ  ಹುಟ್ಟುಹಬ್ಬದ ಉಡುಗೊರೆಗಾಗಿ ಬರೆದ ಕಥೆ.

9 comments:

  1. ಸ್ವರ್ಣಾ,
    ಇದೊಂದು ಅಪೂರ್ವ ಘಟನೆ. ಗೋಪಿಯ ಮನಸ್ಸನ್ನು ಸೂಕ್ಷ್ಮವಾಗಿ ಅರಿತುಕೊಂಡು, ಅಷ್ಟೇ ಎಳೆ‍ಎಳೆಯಾಗಿ ಚಿತ್ರಿಸಿರುವಿರಿ. ಪ್ರೀತಿಯಲ್ಲಿ, ಆರಾಧನೆಯಲ್ಲಿ ಮುಳುಗಿದವಳ ಮನೋಚಿತ್ರಣವನ್ನು ನಿಮ್ಮಂತೆ ಕೊಡಲು ಬೇರಾರಿಗೂ ಸಾಧ್ಯವಿಲ್ಲ!
    ತುಂಬ ಇಷ್ಟವಾಯಿತು.

    ReplyDelete
    Replies
    1. ಕಾಕಾ,
      ಈ ಅಕ್ಷರಗಳ ಹಿಂದೆ ತಮ್ಮ ನಿರಂತರ ಪ್ರೋತ್ಸಾಹ ಮತ್ತು ಆಶೀರ್ವಾದವಿದೆ.
      ವಂದನೆಗಳು ಮತ್ತು ಧನ್ಯವಾದಗಳು

      Delete
  2. ಮುಂದಿನ ತಿಂಗಳು ನಾನು ಗುಜರಾತಿಗೆ ಹೋಗುವುದಿದೆ ಅಲ್ಲಿ ನನ್ನ ಕೆಲಸ ಮುಗಿದ ಬಳಿಕ ನೋಡಾ ಬೇಕಾದ ಸ್ಥಳಗಳ ಪಟ್ಟಿ ಮಾಡುತ್ತಿದ್ದೆ, ಅದರಲ್ಲಿ ಪ್ರಭಾಸ ಕ್ಷೇತ್ರವನ್ನು ನೀವು ಈಗಷ್ಟೇ ಸೇರಿಸಿದಿರಿ.

    ಇಲ್ಲಿ ಬರುವ ಆ 'ಪಾತ್ರ' ಮತ್ತು ಅದು ನಮ್ಮೊಳಗೆ ಇಂದಿನವರೆಗೂ ಉಂಟುಮಾಡಿರುವ 'ಪ್ರೇಮ ಭಾವ' ಇಲ್ಲಿ ವಿಷಾದ ಮತ್ತು ವಿರಹದ ರೂಪದಲ್ಲಿ ಮೂಡಿಬಂದಿದೆ. ಆಕೆಯ 'ನಿಟ್ಟುಸಿರು' ತಲುಪಬಲ್ಲದಾದರೆ ಗೋಪಿಕಾವಲ್ಲಭನಿಗೆ ಅದೇ ಸಾರ್ಥಕ್ಯ ಆಕೆಗೂ.

    ತುಂಬಾ ಗಾಢವಾಗಿ ತಟ್ಟುವಂತೆ ಬರೆದಿದ್ದೀರಾ.

    ReplyDelete
    Replies
    1. ಬದರಿ ಸಾರ್ ,
      ಖಂಡಿತಾ ಹೋಗಿ, ಒಂದಷ್ಟು ಫೋಟೋ ತೆಗೆದು ನಮಗೂ ತೋರಿಸಿ.
      ಧನ್ಯವಾದಗಳು

      Delete
  3. ಎಷ್ಟು ಜನ ಇಷ್ಟು ಉತ್ತಮ ಉಡುಗೊರೆ ಕೊಟ್ಟಾರು....
    ಎಷ್ಟು ಚಂದ.....

    ಭಾವಗಳು ಮತ್ತೆ ಮತ್ತೆ ಮನಸ್ಸಿಗೆ ಮೂಡುವಂತಿದೆ.....
    ತುಂಬಾ ನಯವಾಗಿ ಪೋನಿಸಿದ ಅಕ್ಷರಗಳು....

    ತುಂಬಾ ಖುಷಿಯಾಯಿತು.

    ReplyDelete
  4. ಮೆಚ್ಚಿದ ನಿಮಗೆ ಧನ್ಯವಾದಗಳು

    ReplyDelete
  5. ಹುಟ್ಟು ಹಬ್ಬದ ಉಡುಗೊರೆ ನಿಜಕ್ಕೂ ಚೆನ್ನಾಗಿದೆ .
    ಮೃದು ಮಧುರ ಭಾವಗಳನ್ನೂ ,ನಿರಾಸೆಯ ನೋವುಗಳನ್ನೂ ,ಯಾಂತ್ರಿಕವಾಗಿ ಪಯಣಿಸಬೇಕೆಂಬ ಆಸೆಯಿಲ್ಲ ಅನ್ನೋ ಅವಳ ಮನದ ಭಾವಗಳನ್ನ ಎಳೆ ಎಳೆಯಾಗಿ ಬಿಡಿಸಿದ್ದೀರ .
    ಖುಷಿ ಆಯ್ತು

    ReplyDelete
    Replies
    1. ಸ್ವಾಗತ ಭಾಗ್ಯ. ಧನ್ಯವಾದಗಳು

      Delete
  6. ತುಂಬಾನೇ ಚೆನ್ನಾಗಿದೆ

    ReplyDelete