Thursday, May 23, 2013

ವಿಧಿಯ ಮಗಳು

ಶಾಲೆಯಲ್ಲಿದ್ದಾಗ ಬಹುತೇಕ ಬೇಸಿಗೆ ರಜೆ ಕಳೆಯುತ್ತಿದ್ದುದು ಅಮ್ಮನ ಅಕ್ಕ ಅಂದರೆ ದೊಡ್ಡಮ್ಮನ ಮನೆಯಲ್ಲಿ  ದೊಡ್ಡಮ್ಮನಿಗೆ ಆಂಟಿ ಅನ್ನುತ್ತಿದ್ದ ನಾನು ದೊಡ್ಡಪ್ಪನಿಗೆ ಮಾತ್ರ ದೊಡ್ಡಪ್ಪ ಅನ್ನುತ್ತಿದ್ದೆ. ಸದಾ ಗರಿ ಗರಿ ಪಂಚೆ ಬಿಳಿ ಶರ್ಟು  ತೊಟ್ಟು ,ನಾಲ್ಕೇ   ಕೂದಲಿದ್ದ ತಲೆಗೆ ಘಮ್ಮೆನ್ನುವ ಡಾಬರ್ ಆಮ್ಲ  ಹಚ್ಚಿ, ಆಟೋದಲ್ಲಿ ಸರ್ಕಾರಿ ಕಛೇರಿಗಳಿಗೆ ಅಲೆಯುತ್ತಿದ್ದ ದೊಡ್ಡಪ್ಪ, ತಿಂಗಳಿಗೊ ಮ್ಮೆಯಾದರೂ ತಪ್ಪದೇ ವಿಧಾನ ಸೌಧಕ್ಕೆ  ಹೋಗುತ್ತಿದ್ದ  ದೊಡ್ಡಪ್ಪ, ಸದಾ ಲಂಕೇಶ್  ಪತ್ರಿಕೆ ಓದುತ್ತಿದ್ದ ದೊಡ್ಡಪ್ಪ,  ದೊಡ್ಡ ಧನಿಯ ದಿಲ್ದಾರ್ ಗಂಡಸು ದೊಡ್ಡಪ್ಪ.
ಚಟಗಳ  ದಾಸನಾಗಿದ್ದ  ದೊಡ್ಡಪ್ಪ ಕ್ಲಬ್ಬಿಂದ ಮನೆಗೆ ಬರುತ್ತಿದ್ದುದೇ  ರಾತ್ರಿ ಹನ್ನೊಂದು ದಾಟಿದ ನಂತರ, ಎಲ್ಲೋ ಕೆಲದಿನ ಸಂಜೆ ಮೀರುವ ಮುನ್ನ ಮನೆಗೆ ಬಂದರೆ,ನಮ್ಮೊಂದಿಗೆ ಮಸ್ತ್ ಹರಟೆ ಹೊಡಿತಿದ್ದರು. ರಾಜಕೀಯದಲ್ಲಿ ತಕ್ಕ ಮಟ್ಟಿಗಿನ ಆಸಕ್ತಿ ಇದ್ದ ಅವರ ಭಾವಾಭಿವ್ಯಕ್ತಿಯನ್ನ  ನೋಡಲು  ಮಜವಾಗಿರ್ತಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ದೊಡ್ಡಪ್ಪ ಕೆಲ ಜಾನಪದ ಕಥೆಗಳನ್ನ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು .
ಒಮ್ಮೆ ಅವರು ನನಗೆ "ಇಲ್ಲಿ ಬಾ ನಾನು ನಿಂಗೆ ವಿಧಿಯ ಮಗಳ ಕಥೆ ಹೇಳ್ತೇನೆ"  ಅಂತ ಕೆಳಗಿನ ಕಥೆ ಹೇಳಿದರು,ಕಥೆ ನನಗೆ ನೆನಪಿರುವಂತೆ :
 
ವಿಧಿದೇವಿಗೊಬ್ಬ  ಸುಂದರ ಮಗಳು
'ತಾಯಿ' ಬರೆದಳು  "ಹಾದರವ ಮಾಡುವಳಿವಳು"
ಘೋರ ಅನರ್ಥವಿದೆಂದು  ಬಗೆಯಿತು ಲೋಕ
ಸುಧ್ಧಿ ತಿಳಿದು ಬೆಚ್ಚಿ ಬಿದ್ದಿತು ನಾಕ
ಹರಿಹರ ಬ್ರಹ್ಮರು  ತಪ್ಪಿಸುವೆವು ನಾವಿದನೆಂದರು
ಅವಳು  'ಹೆಣ್ಣಾ'ಗಲು ಯಮನಿಗಿತ್ತು ಧಾರೆ ಎರೆದರು
ವಿಧಿಯ ಬರಹ ಸುಳ್ಳಾಯ್ತೆಂದು  ನಿಟ್ಟುಸಿರಿಟ್ಟರು
ಅಟ್ಟುವಾಗ ಅಗ್ನಿಯ ಕಂಡು ಮೊಹಿಸಿದಳು ಬಾಲೆ
ಅಗ್ನಿಗೂ ಮನಸಾಯ್ತು  ಅವಳ ಮೇಲೆ
ಪರದೆಯ ಹಿಂದೆ ನಡೆಯಿತು ಅನಾಯಾಸ ಲೀಲೆ
ನೋಡಿ ನಕ್ಕರು  ಲಕ್ಷ್ಮಿ, ಪಾರ್ವತಿ, ಸರಸ್ವತಿಯರು
ಗಂಡಂದಿರಿಗೆ  ಸತ್ಯದರ್ಶನವಾಗ ಬೇಕೆಂದು ಒಂದು ಔತಣವಿಟ್ಟರು
ಯಮನ ಪಕ್ಕ ಹಾಕಿರಿ ಎರಡು ಎಲೆ ಎಂದರು
ಒಂದು ವಿಧಿಯ ಮಗಳಿಗೆ, ಮತ್ತೊಂದು ಅವಳಿದ್ದ ಅಗ್ನಿಯ ಮಗುವಿಗೆಂದರು !
ವಿಧಿಯ ಬರಹವ ನೀವೂ ತಪ್ಪಿಸಲಾರಿರೆಂದು ಎಲ್ಲ ನಕ್ಕರು


ಇಲ್ಲಿನ ವಸ್ತು ಮತ್ತು ಜನಪದರು ಅದನ್ನು ಪ್ರಸ್ತುತ ಪಡಿಸಿದ ರೀತಿಗೆ ಹಲವಾರು 'ಚ' ಕಾರಗಳು ಉಧ್ಭವಿಸಬಹುದು, ಆದರೆ ಜಾನಪದ ಕಥೆಗಾರರ ಕಥೆ ಹೆಣೆವ ಜಾಣ್ಮೆಗೆ ಸಾಟಿಇಲ್ಲ ಎಂಬುದಕ್ಕೆ ಯಾವುದೇ ನಿರಾಕರಣೆಗಳು ಬರಲಾರವು.

"ವಿಧಿಯಾಟವನ್ನು ಬಲ್ಲವರು ಯಾರು
ಮುಂದೇನು ಎಂದು ಅರಿತವರು ಯಾರು "

6 comments:

  1. ದೊಡ್ಡಪ್ಪನ ಚಿತ್ರಣ ತುಂಬಾ ಚೆನ್ನಾಗಿ ಕೊಟ್ಟಿದ್ದೀರಾ. ಬದುಕಿನಲ್ಲಿ ಈ ರೀತಿ ಬಿಂದಾಸ್ ಆಗಿ ಬದುಕಬೇಕಪ್ಪ. ಸುಮ್ಮನೇ ಮುಗ್ಗಲು ಹಿಡಿದು ಕೂತರೇ ಮಜವೆಲ್ಲಿ ಬಂತು!

    ವಿಧಿಯ ಮಗಳ ಕಥೆ, ಯಾರು ಏನೇ ಅಪಸ್ವರವೆತ್ತಿದರೂ ಕಥೆಯ ಹೂರಣದಲ್ಲಿ ಒಂದು ಕಟುವಾಸ್ತವವಿದೆ. ಅರ್ಥೈಸಿಕೊಳ್ಳಬೇಕಾದ ಘೋರತೆ ಇದೆ.

    ಅಂದಹಾಗೆ, ಈ ನಡುವೆ ಸ್ವರ್ಣ ಅವರು, ಬ್ಲಾಗಿಗೆ ಕಡೆಮೆ ಬರುತ್ತಿದ್ದಾರೆ ಎನ್ನುವ ಆಪಾದನೆ ನನ್ನದು ಏನಂತಿರೋ? :-D

    ReplyDelete
    Replies
    1. ಧನ್ಯವಾದಗಳು ಬದರಿ ಸಾರ್ , ಒಂದು ಟ್ರೈನಿಂಗ್ನಲ್ಲಿ ಇದ್ದಿದ್ದರಿಂದ
      ಬ್ಲಾಗಿನ ಭೇಟಿ ಕಡಿಮೆಯಾಗಿತ್ತು. ಮತ್ತೆ ಬರುತ್ತೇನೆ .

      Delete
  2. ಜಾನಪದ ಪದಗಳು ಸೊಗಸು. ನಿಮ್ಮ ಬರಹ ಇಷ್ಟವಾಗುವ ರೀತಿ ಇಷ್ಟವಾಗುತ್ತದೆ. ಹಿಂದಿನ ಮನೆತನದಲ್ಲಿ ಈ ರೀತಿಯ ಜಾನಪದ ಗಾರುಡಿಗರು ಸದಾ ಇರುತ್ತಿದ್ದರು. ಸುಂದರ ಬರಹ

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್ ಭಾಯ್

      Delete
  3. ನೀವು ಹೇಳುವುದು ಸರಿ. ನಮ್ಮ ಜಾನಪದರ ನೈತಿಕತೆಯನ್ನು ನಾಗರಿಕ ಗ್ರಹಿಕೆಗಳ ಜೊತೆಗೆ ಹೋಲಿಸಲಾಗದು.

    ReplyDelete