Thursday, October 18, 2012

ಮರೆಯದೀ ಮನಸು

ಇನ್ನೊಂದೆರಡು ದಿನದಲ್ಲಿ ನಾ ವಾಪಾಸ್ ಹೋಗಬೇಕಿತ್ತು. ಗೆಳತಿಯೊಬ್ಬಳ ಮನೆ ನಮ್ಮ ಸಣ್ಣ ಊರಿನಲ್ಲೂ ದೂರವಿದ್ದುದರಿಂದ
ಬಸ್ಸಿಗೆ ಕಾಯುತ್ತಾ ನಿಂತಿದ್ದೆ. ಹಿಂದೆಯೇ ಅವನ ಪದವಿ ಪೂರ್ವ ಕಾಲೇಜಿತ್ತು, ಇಲ್ಲಿ ನಡೆದ ಭೇಟಿ ನೆನಪಾಗಿ ನಕ್ಕೆ. ಸುಂದರ ವಯಸಿನ ಸುಂದರ ಭೇಟಿಗಳು. ಇನ್ನು   ಅಂತಹ ಭೇಟಿಗಳು ಸಾಧ್ಯವೇ ಎನ್ನುವ  ಪ್ರಶ್ನೆಯೊಂದು ಮಿಂಚಿ ಮಾಯವಾಯ್ತು. ಎಂತಹ ಮೌನದಲ್ಲೂ ಮನ ಮೋಹ ಬಿಡದು !  ಮೋಹ, ಮನಸ್ಸುಗಳಿಂದ  ಹೊರ ಬಂದು ರಸ್ತೆ ನೋಡಿದರೆ ಅಲ್ಲಿ ಒಂದು ಗುಂಪಿನೊಂದಿಗೆ ಅವನೇ ಬರುತ್ತಿದ್ದ.  ಶಬ್ಧವಿಲ್ಲದೆಯೂ ಜಗದಲ್ಲಿ ಮಾತು ನಡೆಯಬಹುದಿತ್ತು ! ಅವನ ಪರಿಚಯವಾದ ಇಷ್ಟು ವರ್ಷಗಳಲ್ಲಿ ಅವನು ಮಾತಾಡಿಸಲಿ ಅಂತ  ಮೊದಲ ಬಾರಿ ನನಗೆ ಅನ್ನಿಸಲಿಲ್ಲ.   ಅಲ್ಲೆಲ್ಲೋ ದೂರದಲ್ಲಿದ್ದರಿಂದ  ನೋಡದೆ ಹೋದರೆ ಹೋಗಲಿ ಅನ್ನುವ ಭಾವವೂ ಇದ್ದಿರಬಹುದು. ನನ್ನ ಬಸ್ ಬಂತು ನಾ ಹತ್ತ  ಬೇಕೆನ್ನುವಷ್ಟರಲ್ಲಿ ಅವನೇ ಕರೆದಿದ್ದ.
ಅವನ 
ದನಿಯಲ್ಲಿ ಹೆಸರು ಕೇಳಿ ಮತ್ತೆಲ್ಲೋ ಹೋಗುತ್ತಿದ್ದೆನೋ ಏನೋ ? ಅಷ್ಟರಲ್ಲಿ ಮಾತಾಡಿದ್ದ.
"ಏನ್ ಹುಡುಕಲಾರದಷ್ಟು ದೂರ ಹೋದೆಯಲ್ಲ ?" ಅವನ ಮುಖವನ್ನೇ ನಾ ನೋಡಲಿಲ್ಲ.
"ಹಾಗೇನಿಲ್ಲ  "  ಯಾಕೋ ಅವನನ್ನೆನೂ ಕೇಳಬೇಕಿನಿಸಲಿಲ್ಲ . ಏನೂ ಹೇಳಬೇಕಿನಿಸಲಿಲ್ಲ.
ನನ್ನ ಉತ್ತರದಿಂದ ಅವನಿಗೂ ಮಾತಾನಾಡುವ ಹುಮ್ಮಸ್ಸು ಹೋಯ್ತೇನೋ ? ಅವನೂ ಏನೂ ಕೇಳಲಿಲ್ಲ ಏನೂ ಹೇಳಲಿಲ್ಲ.
"ನನ್ನಿಂದ ಲೇಟ್ ಆಯ್ತಾ ?"
"ಹಾಗೇನಿಲ್ಲ"
"ಬೈ"
ಅಂದವನಿಗೆ  ಉತ್ತರವನ್ನೂ ಕೊಡದೆ ಬಂದ ಬಸ್ಸಿಗೆ ಹತ್ತಿದ್ದೆ .   "ಅವನ ಬಗ್ಗೆ ಇದ್ದ ಬೆಟ್ಟದಷ್ಟು ಆದರ, ವಿಶ್ವಾಸ, ಪ್ರೀತಿ ಅದೇನೇ ಇರಲಿ, ಇದ್ದಿದ್ದರೆ ಹೀಗೆ ಮಾಡುತಿದ್ಯ ?" ಎಲ್ಲಿಂದಲೋ ಬಂದ ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ.    ದಕ್ಕಿತು ಎಂದುಕೊಂಡ ಮೌನ ದಕ್ಕಿರಲಿಲ್ಲ.  ಹಿಂತಿರುಗಿದರೆ  ಕೂತಿದ್ದ ಬಸ್ಸು ಮುಂದೆ ಸಾಗಿತ್ತು, ಅವನ ಗಾಡಿ ವಿರುಧ್ಧ ದಿಕ್ಕಿನಲ್ಲಿ ಸಾಗಿತ್ತು.

ಕಂಡರೆಕ್ಷಣದಲ್ಲಿ  ಕಟ್ಟಿದ್ದ ಆಣೆಕಟ್ಟು ಒಡೆ
ದಿತ್ತು. ಖಂಡಿತ ಈ ಮನ ಸ್ಥಿತಿಯಲ್ಲಿ ಊರು ಬಿಡಲಾರೆ ಇನ್ನೆಲ್ಲಿಗೆ ಹೋದರೂ ಈ ಘಟನೆ ಕಾಡತ್ತೆ.ಆದರೆ ಮತ್ತೆ ಅವನನ್ನ ಹೇಗೆ ಭೇಟಿ ಮಾಡುವುದು ? ಮಾಡಿದರೂ  ಏನೆಂದು ಮಾತಾಡುವುದು ? ಗೋಜಲು ಗೂಡಿಗೆ  ನಾ ಹಿಂತಿರುಗಿದ್ದೆ.  ಮತ್ತೆ ಗುಡಿಯ ಆವರಣವನ್ನರಸಿ ಹೋದೆ.  

" ಯಾರಿಗೋ ಏನೇನೊ ನೀಡುವ ದೇವನೇ ನನ್ನಯ ಮನವಿ ಸಲ್ಲಿಸಲೇನು ? "


ಅದ್ಯಾವ ದೇವರು  ಪ್ರಾರ್ಥನೆ ಆಲಿಸಿದನೋ ಗೊತ್ತಿಲ್ಲ.ದೇವರ ಮೇಲೆ ಸಿಟ್ಟು ಬಂದು ಹೊರ ಬಂದರೆ  ಅದೆಲ್ಲಿಗೋ ಗಾಡಿಯಲ್ಲಿ ಹೋಗುತ್ತಿದವ  ನಿಲ್ಲಿಸಿದ.
" ನೀನ್ಯಾವಾಗಿಂದ ಗುಡಿಗೆ ಬರ್ತಿಯಮ್ಮ? "  ಇವನ ಮೊಗದಲ್ಲಿ ನಗೆ ಯಾವತ್ತೂ ಮಿಂಚುತಿರಲಿ. ಪ್ರಾರ್ಥನೆ ಕೇಳುವುದೇ ಒಳಗಿನ ದೇವರಿಗೆ ?
"ತುಂಬಾ ವರ್ಷದಿಂದ  "
"ಏನೋ  ಹೆಣ್ಮಕ್ಕಳಿಗೆ ದೇವರು ಜಾಸ್ತಿ
ಕ್ಲೋಸಪ್ಪ"
"ದೇವರಲ್ಲೋ,  ಗುಡಿ ಜಾಸ್ತಿ ಕ್ಲೋಸು !" ಅಂತ ನಾನಂದರೆ ಚಂದದ ನಗೆಯೊಂದು ಮೂಡಿತ್ತು.
"ಏನು ಆಚಾನಕ್ಕಾಗಿ ಪಿ.ಎಚ್.ಡಿ. ಮಾಡೋ ನಿರ್ಧಾರ? ಊರು ಸಾಕಾಗಿತ್ತ? ಅಥವಾ ಯಾರಿಂದಲಾದ್ರು ಓಡಿ ಹೋಗೋ ಪ್ರಯತ್ನಾನ ?"
ನಾ ಸುಮ್ಮನೆ ನಕ್ಕೆ.
"ಹೇಗಿದೆ ಹೊಸ ಊರು? ಹಾಸ್ಟೆಲ್ ಚೆನ್ನಾಗಿದ್ಯಾ ?" ಅಂತ ಶುರುಮಾಡಿ ೧೫-೨೦ ನಿಮಿಷ ಮಾತಾಡಿದ್ದ.
"ಸರಿ ನಾ ಹೊರಡ ಬೇಕು ನಿನ್ನ ಹಾಸ್ಟೆಲ್ ಫೋನ್ ನಂಬರ್ ಕೊಡು" ಕ್ಷಣ ಯೋಚಿಸದೆ ನಾ ಕೊಟ್ಟೆ.
"ಜಾಸ್ತಿ ಯೋಚಿಸ ಬೇಡ ಬದುಕಿರುದು  ಬದುಕೋಕೆ , ಯೋಚಿಸೋಕಲ್ಲ. ಸಿಕ್ತೀನಿ  "  ಅಂತ ಹೊರಟ.

ಕೈ ಜಾರಿ ಸಮುದ್ರದಲ್ಲಿ ಬಿದ್ದ ಅಂದದ ಕಪ್ಪೆ ಚಿಪ್ಪೊಂದು ಮತ್ತೆ ಸಿಕ್ಕಿತ್ತು. ಅಂದಿನ ನನ್ನ ವರ್ತನೆಯ ಬಗ್ಗೆ ಅವನೇನೂ ಕೇಳಲೇ ಇಲ್ಲ.  ನಾನಾದರೂ ಒಂದು ಸ್ಸಾರಿ ಹೇಳಬೇಕಿತ್ತಲ್ಲವೇ ? ನಾನೂ ಹೇಳಲಿಲ್ಲ. ಅವ ಇನ್ನು ಕೆಲ ಕ್ಷಣ ನಿಲ್ಲ ಬಾರದಿತ್ತೆ ಎನಿಸಿತ್ತು.  ಕೃಷ್ಣ 'ಕೃಷ್ಣ' ನಾಗಿರದಿದ್ದರೆ ಚೆನ್ನಿತ್ತು.

"ಕರೆಯೇ ಕೋಗಿಲೆ ಮಾಧವನ ..."

" आपको भुलाना इतना आसान कहाँ ?
जब आप  ही में हैं हमारा जहाँ "

The way that you spoke
left me speechless, helpless
in the face of your sweetness.
~Rumi

7 comments:

  1. ಬಸ್ ಸ್ಟಾಂಡಿನಲ್ಲಿ ಇನ್ನೂ ಸ್ವಲ್ಪ ಮಾತಾಡಬಹುದಿತ್ತು?

    ಆತನನ್ನೂ ಗುಡಿಗೆ ಕರೆದುಕೊಂಡು ಹೊಗಿದ್ದರೆ ಇನ್ನಷ್ಟು ಹೊತ್ತು ಕಳಿಯಬಹುದಿತ್ತೇನೋ?

    ReplyDelete
    Replies
    1. ಹೌದಲ್ವಾ ಬದರಿ ಸರ್ :)
      ಧನ್ಯವಾದಗಳು.

      Delete
  2. ‘ಕೈ ಜಾರಿ ಸಮುದ್ರದಲ್ಲಿ ಬಿದ್ದ ಅಂದದ ಕಪ್ಪೆ ಚಿಪ್ಪೊಂದು ಮತ್ತೆ ಸಿಕ್ಕಿತ್ತು.’
    ಸ್ವರ್ಣಾ,ಕಥಾನಾಯಕಿಯ ಮನೋಲಹರಿಯನ್ನು ಎಷ್ಟು ಚೆನ್ನಾಗಿ ಚಿತ್ರಿಸುತ್ತ ಹೋಗುತ್ತಿದ್ದೀರಿ. ಈ ತರಹದ ಕತೆಯನ್ನು ಓದಿ ಎಷ್ಟು ಕಾಲವಾಗಿತ್ತೊ! ತುಂಬ ಸುಂದರವಾದ narration. ನಿಮಗೆ ಅಭಿನಂದನೆಗಳು.

    ReplyDelete
    Replies
    1. ಈ ಪ್ರೋತ್ಸಾಹಕ್ಕೆ ವಂದನೆಗಳನಲ್ಲದೆ ಏನೂ ಹೇಳಲಾರೆ ಕಾಕಾ
      ಸ್ವರ್ಣಾ

      Delete
  3. ಹಿತಮಿತವಾದ ಸ೦ಭಾಷಣೆ, ಹದವಾದ ನಿರೂಪಣೆ, ತು೦ಬಾ ಚೆನ್ನಾಗಿ ಬರೆದಿದ್ದೀರಿ ಸ್ವರ್ಣಾ:)

    ReplyDelete
  4. ತುಂಬಾ ಸುಂದರ ನಿರೂಪಣೆ ಅಕ್ಕಾ.. ಕೊನೆಗೊಂದು ರೂಮಿಯ ಮಾತೂ. ಚೆನ್ನಾಗಿದೆ.

    ReplyDelete