ಗಾಂಧಿಬಜಾರಿನ ಭೇಟಿಯ
ಮುಖ್ಯ ಆಕರ್ಷಣೆಗಳಲ್ಲಿ ಒಂದು, ಅಂಕಿತಾದ ಪುಸ್ತಕ ರಾಶಿಯ ನಡುವಿನ ಸಂಧಿಗಳಲ್ಲಿ ಓಡಾಡುವುದು.
ಒಮ್ಮೆ ಹೀಗೆ
ಓಡಾಡುವಾಗ ಕಣ್ಣಿಗೆ ಬಿದ್ದದ್ದು ಎಂ.ಕೆ.ಇಂದಿರಾರ ‘ಸದಾನಂದ’. ಕಸ್ತೂರಿಯ ಪುಸ್ತಕ ವಿಭಾಗದಲ್ಲಿ ಸದಾನಂದ ದ ಒಂದು ಅಧ್ಯಾಯವನ್ನು ಓದಿದ್ದು ಬಿಟ್ಟರೆ ಇಂದಿರಾ ಅವರ ಯಾವ ಪುಸ್ತಕವನ್ನೂ ನಾನು ಆ ವರೆಗೂ
ಓದಿರಲಿಲ್ಲ , ಸದಾನಂದನನ್ನುಳಿದು ಈಗಲೂ ಬೇರಾವ ಪುಸ್ತಕವನ್ನೂ ಓದಿಲ್ಲ. ‘ಸದಾನಂದ’ದ ಪರಿಚಯ ಇದ್ದುದರಿಂದ ಪುಸ್ತಕ ಕೊಂಡೆ.
ಎಷ್ಟೋ ದಿನ ಸದಾನಂದ ಪುಸ್ತಕ ಕಪಾಟಿನಲ್ಲೇ
ಬೆಚ್ಚಗೆ ಮಲಗಿದ್ದ. ಒಂದು ಶುಭ ಮುಹೂರ್ತದಲ್ಲಿ ತೆಗೆದ ಮೇಲೆ ಬಿಟ್ಟು ಬಿಡದಂತೆ
ಕಾಡಿದ್ದ.
ಮಹಿಳಾ ಸಾಹಿತ್ಯವನ್ನು
ಅಡುಗೆ ಮನೆ ಸಾಹಿತ್ಯ ಅಂತ ಒಂದು ಕಾಲದಲ್ಲಿ ಮೂದಲಿಸುತ್ತಿದ್ದರಂತೆ. ಸಾಹಿತ್ಯಿಕವಾಗಿ ಇದರ
ವಿಮರ್ಶೆ ಮಾಡುವಷ್ಟು ನನಗೆ ಗೊತ್ತಿಲ್ಲ ಆದರೆ
ಮೂರ್ನಾಲ್ಕು ದಶಕಗಳನ್ನು ಅಡುಗೆಮನೆಯಲ್ಲೇ
ಕಳೆವ ಹೆಣ್ಣು ಅಡುಗೆ ಮನೆಯ ಬಗ್ಗೆ ಬರೆದಷ್ಟು ಸುಲಲಿತವಾಗಿ ಗಂಡಸರು ಬರೆಯ ಬಹುದೇ ? ಮೈಸೂರು ಸಿಲ್ಕಿನ ಸೀರೆ ,
ಸೀರೆಯ ಕಡ್ಡಿ ಅಂಚು , ಅಂಚಿನ ಕಡ್ಡಿಯ ಗಾತ್ರ ಇವುಗಳ ಸೊಗಸನ್ನು ವರ್ಣಿಸದೇ ಇರುವುದು ಹೇಗೆ ? ಉದುರುದುರಾದ ಬನ್ಸಿ ರವೆ ಉಪ್ಪಿಟ್ಟು
, ಮೆತ್ತಗೆ ಮುದ್ದೆಯಾಗಿ ಬೆಳ್ಳಗೆ ಹೊಳೆವ ಬೆಂಗಳೂರು ರವೆ ಉಪ್ಪಿಟ್ಟಿನ ನಡುವೆ ಕಪ್ಪಗೆ ನಗುವ ಸಾಸಿವೆ , ಕಮ್ಮಗೆ
ನುಣುಪಾದ ನೀರುಳ್ಳಿಯ ಕೆನ್ನೆಯ ರಂಗೇರಿಸಿದ ಚೂರು
ಅರಿಶಿನ, ಇವೆರಡು ಒಂದಾಗಿ ಬಿಳುಪಿನ ಅನ್ನದೊಡನೆ ಬೆರೆತು ತಯಾರಾದ ಚಿತ್ರಾನ್ನ.....ಹೀಗೆ ಹೆಜ್ಜೆ
ಹೆಜ್ಜೆಗೂ ದೊರಕುವ ಕಾವ್ಯವನ್ನು ಬರೆಯದಿರುವುದು ಹೇಗೆ ?
ನನ್ನ ಅನಿಸಿಕೆಯಂತೆ
ಕೆಲವು ಪುಸ್ತಕಗಳನ್ನು ಓದಲು ಶುರುವಿಟ್ಟರೆ
ಕೊನೆಯ ಸಾಲಿನವರೆಗೂ ಒಂದೇ ವೇಗದಲ್ಲಿ ಓದಿಸಿಕೊಂಡು ಬಿಡುತ್ತವೆ. ಈಚಿನ ಪುಸ್ತಕಗಳಲ್ಲಿ ಕೆ.ಎನ್.ಗಣೇಶಯ್ಯನವರ ಕಾದಂಬರಿಗಳು ಈ ರೀತಿಯವು. ಕೆಲವು ಪುಸ್ತಕಗಳನ್ನು
ಅರ್ಥೈಸಿಕೊಂಡು , ಅನುಭವಿಸಲು ಕೊಂಚ ಸಮಯ ಬೇಕು , ಅದಕ್ಕೆ ಅವುಗಳ ಓದು ನಿಧಾನ. ದೇವುಡು,
ಸತ್ಯಕಾಮರ ಪುಸ್ತಕಗಳು ಈ ಗುಂಪಿನವು. ಇನ್ನೂ ಕೆಲವು ಪುಸ್ತಕಗಳು ಒಂದು ಲೋಕವನ್ನು ಕಟ್ಟಿ
ಕೊಡುತ್ತವೆ, ಆ ಲೋಕದಲ್ಲಿ ವಿಹರಿಸಿ ಬರಲು ಸ್ವಲ್ಪ ಸಮಯ ಬೇಕಲ್ಲವೇ ? ಅದಕ್ಕೆ ಇವುಗಳನ್ನು
ನಿಧಾನಕ್ಕೆ ಪುಟ್ಟ ಮಗುವೊಂದು ತಿನ್ನುವ ಪೆಪ್ಪರಮೆಂಟಿನಂತೆ ಸಾವಕಾಶವಾಗಿ ಓದಿದ್ದೇನೆ. ಇಂದಿರಾರ ‘ಸದಾನಂದ’ ಅಂತಹ ಒಂದು ಕಥೆ.
ಹಳ್ಳಿಯ ಮನೆ , ಅದಕ್ಕೊಂದು
ಪುಟ್ಟ ಬಾಗಿಲು , ಕರಣೆ ಇಟ್ಟ ಹೊಸ್ತಿಲು , ಹೊಸ್ತಿಲಿಂದ ಎರಡು ಹೆಜ್ಜೆಗೆ ಮೂರು ಕುರ್ಚಿ ,
ಮೂಲೆಯಲ್ಲಿ ಮಂಚ , ಒಳಗಿನ ಬಾಗಿಲಿಗೆ ನೇತು ಹಾಕಿದ ಮ್ಯಾಟಿ ಬಟ್ಟೆಯ ಮೇಲೆ ಮೂಡಿದ ಎರಡು
ನವಿಲುಗಳು ...ಅಂತ ಓದಿ ಕತ್ತು ಮೇಲೆತ್ತಿದರೆ
ತಲೆಗೆ ಬಾಗಿಲು ಬಡಿಯತ್ತೋ, ಮುಖಕ್ಕೆ ನವಿಲು ಗರಿ ಬಡಿಯತ್ತೋ ಗೊತ್ತಿಲ್ಲ . ಚಿಕ್ಕಮಗಳೂರು, ದುಂಡುಮಲ್ಲಿಗೆ ,
ಮಾರುತಿ ಮೋಟಾರು , ನೂಕೋ ನರಸಿಂಹ ಎಲ್ಲದರಲ್ಲಿ
ಸುತ್ತು ಹಾಕಿ ಬರಲೆಂದೇ ನಾನು ಎಷ್ಟೋ ಬಾರಿ ಓದು
ನಿಲ್ಲಿಸಿದ್ದಿದೆ. ವಿಧವಾ ಮರುವಿವಾಹದ ಕಥೆಯುಳ್ಳ ಸದಾನಂದದ ಮುಖ್ಯ ಪಾತ್ರಗಳು ಸದಾನಂದ , ಕಮಲಾ, ರಾಜು ,ಗೌರಿ, ಅಚ್ಚಮ್ಮ , ರಾಮಣ್ಣ
, ಯೆಂಟತ್ತೆ, ಪುಟ್ಟಮ್ಮ , ತಮ್ಮಯ್ಯ. ಎಲ್ಲವೂ
ನೆನಪಿನಲ್ಲುಳಿವ ಭಿನ್ನ ವ್ಯಕ್ತಿತ್ವಗಳು.
ಹಿಂತಿರುಗಲು
ಕಷ್ಟವಾದ ಭೂತಕಾಲಕ್ಕೆ ಇಂತಹ ಕಥೆಗಳು ಕರೆದೊಯ್ಯುತ್ತವೆ. ನೂರಾರು ನೋವು ನಲಿವುಗಳನ್ನ ಸಮವಾಗಿ
ಸ್ವೀಕರಿಸಿ ನಾಲ್ಕು ಗೋಡೆಯ ಮಧ್ಯೆಯೇ ಬದುಕನ್ನ
ಕಳೆದ ಜೀವಗಳು , ಕೊಂಚ ಕೊಂಚವೇ ಜಗತ್ತಿಗೆ ತೆರೆದುಕೊಂಡು ಎರಡು ಲೋಕಗಳ ಮಧ್ಯೆ ಕೊಂಡಿಯಾದವರು, ‘ಇಲ್ಲ’ವೆಂಬುದೇ ಗೊತ್ತಿಲ್ಲದ ನಿತ್ಯ ತೃಪ್ತರು
ಎಲ್ಲರೂ ಇದ್ದಾರೆ ಇಲ್ಲಿ. ಅಚ್ಚಮ್ಮನ ಸಹನೆ
ಇಷ್ಟವಾಗುವ ಹೊತ್ತಿಗೆ ಯೆಂಟತ್ತೆಯ ನೇರ ಮಾತು ಸೆಳೆಯುತ್ತದೆ. ಧಿರೋದಾತ್ತ ರಾಜುವಿನಂತೆಯೇ
ಸ್ವಲ್ಪ ಹೆದರಿಕೆ ಸ್ವಲ್ಪ ಸ್ವಾರ್ಥದ ಮೂರ್ತಿಯೂ ಮನಸಲ್ಲಿ ನಿಲ್ಲುತ್ತಾರೆ. ನೋವುಗಳನೆಲ್ಲ ನುಂಗಿ
ನಗುವ ಗೌರಿಯಂತೆಯೇ ಮನದಲ್ಲೇ ಕಲ್ಲಾದ ಕಮಲಾ , ಸೂಕ್ಷ್ಮಳಾದ ಜಾನಕಿ ,
ನಿರ್ಭಿಡೆ ಮುಕ್ತಾ ಎಲ್ಲರೂ ಸೇರುತ್ತಾರೆ.
‘ಸದಾನಂದ’ ದಲ್ಲಿ ಸೆಳೆದ ಇನ್ನೂ
ಒಂದು ವಿಷಯವೆಂದರೆ ತಿಂಡಿಗಳ ಹೆಸರು . ಮಜ್ಜಿಗೆ ಕಡುಬು, ಅಕ್ಕಿ ರೊಟ್ಟಿ , ಆಕಳ ಬೆಣ್ಣೆ,
ಬುಟ್ಟಿ ತುಂಬಾ ಕರಿ ಗಡುಬು... ಅದೆಷ್ಟು
ವೈವಿಧ್ಯ. ಸೌದೆ ಒಲೆಯ ಮುಂದೆ ಕೂತು
ಬಿಸಿ ಬಿಸಿಯಾದ ಅಡುಗೆಯನ್ನು ಅಕ್ಕರೆಯಿಂದ ಬಡಿಸುವ ತಾಯಿ, ಅತ್ತೆಯರ ಚಿತ್ರವೇ ಮುದಗೊಳಿಸುತ್ತದೆ.ಸದಾನಂದ ಇಷ್ಟವಾಗಿ
ಮುಂದಿನ ಭಾಗವಾದ ಮಧುವನವನ್ನೂ ಓದಿದ್ದಾಯಿತು.
ನಿಕೋಲಸ್
ಸ್ಪಾರ್ಕ್ಸ್ ನ ಪ್ರಸಿಧ್ಧ ಕಾದಂಬರಿ 'ದಿ ವೆಡ್ಡಿಂಗ್' ಇಂತಹುದೇ ಮತ್ತೊಂದು ಕಥೆ .
ಅಲ್ಲಿ ವೃಧ್ಧ ನೋರ್ವ ಸತ್ತ ಹೆಂಡತಿ ಪಕ್ಷಿಯಾಗಿ ಹುಟ್ಟಿದ್ದಾ ಳೆಂದು ಪಕ್ಷಿಯೊಂದಿಗೆ ದಿನವೂ ಮಾತಿಗಿಳಿಯುತ್ತಾನೆ. ಇಂದಿರಾರ ಸದಾನಂದ
'ತೋತಾರಾಮ' ನಲ್ಲಿ ಆ ರೀತಿಯ
ಬಾಂಧವ್ಯವನ್ನು ಬಹುಹಿಂದೆಯೇ ಕಂಡು ಕೊಂಡಿದ್ದಾನೆ
ಇತ್ತೀಚಿಗೆ ಬಂದ ತೆಲುಗು ಚಿತ್ರ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೇ ಚಟ್ಟು’ ನಲ್ಲಿ ಹೆಚ್ಚೇನೂ ನಡೆಯುವುದೇ
ಇಲ್ಲ. ಎಲ್ಲ ಒಳ್ಳೆಯವರು , ಏನೋ ಒಂದು ಸಣ್ಣ ಸಮಸ್ಯೆ ಕೊನೆಗೆ ಅದೂ ಸುಖಾಂತ್ಯ ಕಂಡು
ಶುಭಂ . ಅದರಲ್ಲಿ ಒಂದು ಕಡೆ ತಂದೆ (ಪ್ರಕಾಶ್ ರೈ) ಮಕ್ಕಳಿಗೆ ಹೇಳುತ್ತಾನೆ “ಬದುಕಲ್ಲಿ ಬೇರೆ ಏನೂ ಇಲ್ಲ , ಎದುರಾದವರನ್ನು ನಗುವಿನೊಂದಿಗೆ
ಪ್ರೀತಿಯಿಂದ ಎದುರುಗೊಳ್ಳಿ , ಅಷ್ಟೇ ಬದುಕು “. ಈ ಮಾತು ನಾವೆಲ್ಲರೂ ಎಷ್ಟೋ ಬಾರಿ ಬೇರೆ ಬೇರೆ ಕಡೆ ಬೇರೆ ಬೇರೆ
ರೀತಿಯಲ್ಲಿ ಕೇಳಿರಬಹುದಾದರೂ ಸಿನೆಮಾದಲ್ಲಿ ನಟನಿಂದ ಈ ಮಾತು ಕೇಳಿದಾಗ ಎಷ್ಟೋ ದಿನ ನನಗೆ
ಅದರದ್ದೇ ಗುಂಗು ಹಿಡಿದಿತ್ತು. ಹಾಗೆ ಇಂದಿರಾರ ‘ಸದಾನಂದ’ ಕೂಡ , ಎಲ್ಲ ಒಳ್ಳೆಯವರು ಕೊನೆಗೆಲ್ಲ ಶುಭಂ. ಒಂಥರಾ ರಾಜಶ್ರಿ ಪಿಕ್ಚರ್ಸ್ ನ ಸಿನೆಮಾದ ತರಹ
. ಬದುಕಿನ ಓಟದಲ್ಲಿ ಒಂದು ಕ್ಷಣ ಸಾವಕಾಶವಾಗಿ
ನಿಂತು ಕನಸಿನ ಒಂದು ಲೋಕಕ್ಕೆ ಹೋಗಿ ಬರಲು , ಕೆಲವು ವ್ಯಕ್ತಿತ್ವಗಳನ್ನೂ ಅರಿಯಲು ಇಂತಹ
ಕಥೆಗಳನ್ನೂ ಓದಬೇಕು.
ಟಿಪ್ಪಣಿ : ಈ ಬರಹ ಗೆಳತಿಯೋಬ್ಬರ ಪುಸ್ತಕ ಬಿಡುಗಡೆಯ ಸವಿ ನೆನಪಿಗಾಗಿ ಬರೆದದ್ದು
ಟಿಪ್ಪಣಿ : ಈ ಬರಹ ಗೆಳತಿಯೋಬ್ಬರ ಪುಸ್ತಕ ಬಿಡುಗಡೆಯ ಸವಿ ನೆನಪಿಗಾಗಿ ಬರೆದದ್ದು
ಹಾಗೆ ಫಾರ್
ರೆಕಾರ್ಡ್ಸ್ : ಹದಿನಾಲ್ಕು ವರ್ಷದ ವನವಾಸ
ಇತ್ತಿದ್ದೊಂದು
ಅಗ್ನಿಪರೀಕ್ಷೆ
ಮತ್ತೆಂದೂ ಮುಗಿಯದ ವನವಾಸ
ನನ್ನದೂ ಅಷ್ಟೇ ಕಣೆ
ಭೂಜಾತೆ
ನಿತ್ಯ
ಅಸ್ತಿತ್ವಕ್ಕಾಗಿ ವನವಾಸ ಕನಸುಗಳಲ್ಲೇ ಆವಾಸ
ಇರಲಿ ಬಿಡು ಕಡು
ವಿರಹದಲ್ಲೂ ಬದುಕನರಸುವ ಕಲೆ
ನಮಗಲ್ಲದೇ
ಇನ್ಯಾರಿಗೆ ಗೊತ್ತು ?
ಸ್ವರ್ಣಾ,
ReplyDeleteಒಂದು ಕಾದಂಬರಿಯ essence ಅನ್ನು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿದೆಯೆ? ಅಲ್ಲದೆ, ಪುರುಷರು ಸ್ತ್ರೀಸಾಹಿತ್ಯವನ್ನು ಅಡುಗೆಮನೆ ಸಾಹಿತ್ಯ ಎಂದು ಮೂದಲಿಸುವುದೇ ಅಪಹಾಸ್ಯಕರವಾಗಿದೆ! ಜೊತೆಗೆ ನೀವು ಸಿನೆಮಾದ ಬಗೆಗೆ ಬರೆದ ಟಿಪ್ಪಣಿ ಹಾಗು ಕೊನೆಯ ಚುಟುಕು ಸೊಗಸಾಗಿವೆ.
ಸ್ವಲ್ಪ ಕಾಲ ಗುಪ್ತವಾಗಿದ್ದರೂ, ಇದೀಗ ಒಳ್ಳೆಯ ಲೇಖನ ನೀಡಿದ್ದೀರಿ. ಧನ್ಯವಾದಗಳು.
Deleteಕಾಕಾ, ನಿಮ್ಮ ನಿರಂತರ ಪ್ರೋತ್ಸಾಹ ಇಷ್ಟರಮಟ್ಟಿಗೆ ನಡೆಸಿದೆ. ಆಶಿರ್ವಾದವಿರಲಿ.
ಧನ್ಯವಾದಗಳು
ಮೇರು ಲೇಖಕಿ ಎಂ.ಕೆ.ಇಂದಿರಾರ ‘ಸದಾನಂದ’ ನಾನೂ ಓದುತ್ತೇನೆ.
ReplyDeleteಮಹಿಳಾ ಸಾಹಿತ್ಯವು ಶ್ರಷ್ಟತಮ ಸಾಹಿತ್ಯ ೆನ್ನುವುದಲ್ಲಿ ಎರಡು ಮಾತಿಲ್ಲ.
ಮಜ್ಜಿಗೆ ಕಡುಬು, ಅಕ್ಕಿ ರೊಟ್ಟಿ , ಆಕಳ ಬೆಣ್ಣೆ, ಬುಟ್ಟಿ ತುಂಬಾ ಕರಿ ಗಡುಬು.. ಪಟ್ಟಿ ಹಾಕಿ ಬಾಯಿ ನೀರೂರಿಸಿಬಿಟ್ಟಿರಿ!
“ಬದುಕಲ್ಲಿ ಬೇರೆ ಏನೂ ಇಲ್ಲ , ಎದುರಾದವರನ್ನು ನಗುವಿನೊಂದಿಗೆ ಪ್ರೀತಿಯಿಂದ ಎದುರುಗೊಳ್ಳಿ , ಅಷ್ಟೇ ಬದುಕು “. ನಾನೂ ಫಾಲೋ ಮಾಡಿ ನೋಡುತ್ತೇನೆ.
ಕಡೆಯಲ್ಲಿ ಉಲ್ಲೇಖಿಸಿದ ಕವನ ತಮ್ಮದೋ ತಮ್ಮ ಗೆಳತಿದೋ?
ತುಂಬಾ ಥ್ಯಾಂಕ್ಸ್ ಬದರಿ ಸರ್...ಓದಿ ಇಂದಿರಾರ ಕೃತಿಗಳು ನಿಮಗೂ ಇಷ್ಟವಾಗಬಹದು. ಹನಿಯನ್ನು ಬರೆದದ್ದು ನಾನೇ :)
Deleteಎಮ್ ಕೆ ಇಂದಿರಾರವರ ಹಲವು ಪುಸ್ತಕಗಳನ್ನು ಓದಿರುವೆ, ಅವರ ಸರಳ ಬಾಷೆ ಹಾಗು ಸಾಮಾನ್ಯ ಮಲೆನಾಡಿನ ಹಿನ್ನಲೆಯ ಕತೆಗಳು ನನಗಂತು ಇಷ್ಟವಾಗುತ್ತಿತ್ತು
ReplyDeleteಥ್ಯಾಂಕ್ಸ್ ...ನಿಮಗೂ ಅವರ ಕೃತಿಗಳು ಸೇರಿದವೆಂದು ತಿಳಿದು ಖುಷಿಯಾಯ್ತು
Delete