Thursday, September 11, 2014

ಕರ್ಮ




ಚಿತ್ರಕೃಪೆ : ಅಂತರ್ಜಾಲ
ಇದು ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.ಇಲ್ಲಿ ಬರೆದದ್ದು ನನ್ನನ್ನು ಹೆಚ್ಚು ಓದಿಗೆ,ಇದೇ ಪುಸ್ತಕದ ಮರು ಓದಿಗೆ ಪ್ರೇರೇಪಿಸಲೆಂದು ಈ ಬರಹ. 

ಇತ್ತೀಚಿಗೆ ಓದಿರುವ ಕಾದಂಬರಿಗಳ ಸಂಖ್ಯೆ  ಕಡಿಮೆ. ಅದರಲ್ಲೂ  ಎರಡನೇ ಬಾರಿಗೆ ಮತ್ತೆ ಓದಬೇಕೆನಿಸಿದ ಕಾದಂಬರಿಗಳು ನನ್ನ ಓದಿನ ಮಟ್ಟಿಗೆ ಇನ್ನೂ ಕಡಿಮೆ .  ಇತ್ತೀಚಿನ ಪ್ರಸಿಧ್ಧಿಯಿಂದ ಕರ್ಮ ಓದಲು ಶುರುವಿಟ್ಟೆ. ಲೇಖಕರೇ ಹೇಳುವಂತೆ, ಕನ್ನಡದ ಕಾದಂಬರಿಲೋಕ ನಿಂತ ನೀರಾಗಿದೆ ಎಂಬ ಅಭಿಪ್ರಾಯಕ್ಕೆ ಉತ್ತರವಾಗಿ ಬರೆದ ಕಾದಂಬರಿ : ಕರ್ಮ.

ಸಾಫ್ಟ್ವೇರ್ ತಂತ್ರಜ್ಞ ಸುರೇಂದ್ರನ  ತಂದೆ ಶ್ರೀಕಂಠ ಜೋಯಿಸರ ಸಾವಿನೊಂದಿಗೆ ಆರಂಭವಾಗುವ ಕಥೆ ಅವರ ಅಪರ ಕರ್ಮಗಳೊಂದಿಗೆ  ಮುಗಿಯುತ್ತದೆ.  ಗಂಡು ಹೆಣ್ಣಿನ ಸಂಬಂಧ , ಸಂಪ್ರದಾಯ , ಲಿವ್ ಇನ್  ನಂತಹ ಇಂದಿನ ಪಧ್ಧತಿಗಳು , ಶ್ರಧ್ಧೆ ನಂಬಿಕೆಗಳ ತಾಕಲಾಟ ಮುಖ್ಯ ಕಥಾವಸ್ತು . ೧೩-೧೫ ದಿನದಲ್ಲಿ ನಡೆಯುವ ಕಥೆಯಾದರೂ ಓದಿಸಿಕೊಂಡು ಹೋಗುತ್ತದೆ. ಅಪರ ಕರ್ಮಗಳ ಬಗ್ಗೆ ವಿವರಣೆ ತುಸು ಹೆಚ್ಚಾಯಿತು ಎಂದು ನನಗೆ ಆಗಾಗ ಅನಿಸಿದ್ದು ಉಂಟು.ಆದರೆ ಅದು ಕಥೆಯಲ್ಲಿ ಬೆರೆತು ಹೋಗುವುದರಿಂದ ಓದಿನ ವೇಗಕ್ಕೆ ಅಷ್ಟೇನೂ ತೊಂದರೆ ಮಾಡುವುದಿಲ್ಲ. ಕಥೆಯನ್ನು ಕಟ್ಟಿ ಕೊಡುವುದರಲ್ಲಿ ಯಶಸ್ಸು ಸಾಧಿಸುವ ಪವನ್ ರವರು ಪಾತ್ರ ಚಿತ್ರಣದಲ್ಲಿ ಅಷ್ಟಾಗಿ ಹಿಡಿಸಲಿಲ್ಲ. ಒಂದಿಬ್ಬರು ಸ್ತ್ರೀ ಪಾತ್ರಗಳಿಗೆ  ದನಿ  ಇದ್ದರೂ ಆ ದನಿ ತಪ್ಪೆಂದು ಬಿಂಬಿತವಾಗಿರುವುದರಿಂದ  ಸ್ತ್ರೀ ದನಿ ಇಲ್ಲವೆಂದೇ ಹೇಳಬಹುದು .  ಪುರುಷ ಪಾತ್ರದಲ್ಲಿ ಅತೀ ಗಟ್ಟಿ ಎನ್ನ ಬಹುದಾದ ಪಾತ್ರಗಳು  ವೆಂಕಟೇಶ ಭಟ್ಟರದ್ದು.  ಜೋಯಿಸರಾದ  ವೆಂಕಟೇಶ ಭಟ್ಟರು ಜಾತಿ ಧರ್ಮ ನೋಡದೇ ಮೊಮ್ಮಗನ ಸ್ನೇಹಿತರನ್ನು  ಮನೆಯ ಒಳಗೆ ಕರೆದು ಆದರಿಸುವಲ್ಲಿ ಅವರ ವಿಶಾಲ ಮನೋಭಾವ ಚಿತ್ರಿಸಲ್ಪಟ್ಟಿದೆ. ಸಂಪ್ರದಾಯಗಳನ್ನು ನಂಬುವ ಅಜ್ಜ ಅದಕ್ಕೊಂದು ಹೊಸ ವಾಖ್ಯಾನ ಕೊಡುವ ಮೊಮ್ಮಗ ಇರುವ ಭಟ್ಟರ ಕುಟುಂಬದ ಚಿತ್ರಣ ಆಪ್ತವೆನಿಸುತ್ತದೆ. ಇನ್ನೊಂದು ಕುಟುಂಬವಾದ ಶ್ರೀಕಂಠ ಜೋಯಿಸರ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ. ಸಂಪ್ರದಾಯಗಳನ್ನು ಸದಾ ಪ್ರಶ್ನೆ ಮಾಡುವ  ಇಂಜಿನಿಯರಾದ  ಹಿರಿ ಮಗ , ಅವುಗಳನ್ನು ಚಾಚೂತಪ್ಪದೇ  ಪಾಲಿಸಿ ತಂದೆಯಂತೆಯೇ  ಪುರೋಹಿತನಾದ ಕಿರಿಮಗ, ಸಂಪ್ರದಾಯಗಳಿಗೆ ಸಂಪೂರ್ಣವಾಗಿ ಶರಣಾದ  ತಂದೆ ತಾಯಿ. ಮನೆ ಎಂಬುದು ಘರ್ಷಣೆಯ ಗೂಡು.

ಶ್ರೀಕಂಠ ಜೋಯಿಸರ ಪಾತ್ರವನ್ನು ಉದಾತ್ತವೆಂಬಂತೆ  ಚಿತ್ರಿಸಲಾಗಿದ್ದರೂ , ಕಥೆಯಲ್ಲೆಲ್ಲೂ ಅದು ಕಾಣುವುದಿಲ್ಲ. ಅಕ್ಕನ ಕೊರಗನ್ನು ಅಳಿಸಲು ಅವಳ ಕೋರಿಕೆಯ ಮೇರೆಗೆ ಅಕ್ಕನ ಮಗಳನ್ನು ಮದುವೆಯಾಗುವ ಜೋಯಿಸರು ಹೆಂಡತಿಯನ್ನು ಚೆನ್ನಾಗೇ  ನೋಡಿಕೊಳ್ಳುತ್ತಾರೆ. ಆದರೆ  ಆಕೆಗೆ ಹುಟ್ಟಿದ ಮಗನಿಗೆ ದಾರಿ ತೋರಿಸುವಲ್ಲಿ ಸೋಲುತ್ತಾರೆ. ಕಾದಂಬರಿಯಲ್ಲಿ ಜೋಯಿಸರು ಮಗನನ್ನು ತಿದ್ದಲು ಮಾಡುವ ಪ್ರಯತ್ನಗಳನ್ನು ಅಷ್ಟೇನೂ ಪರಿಣಾಮಕಾರಿಯಾಗಿ ಚಿತ್ರಿಸಲಾಗಿಲ್ಲ. 

ಇನ್ನು ಸುರೇಂದ್ರನ ನಡತೆ ಕೆಲವು ಕಡೆ ವಿರೋಧಾಭಾಸವೆನಿಸುತ್ತದೆ. ಹೆಂಡತಿಯಂತೆ ಜೊತೆ ಬಾಳುತ್ತಿರುವವಳ ಉಡುಪು ಹಾಗೂ ವರ್ತನೆಯ ಕಾರಣ  ಸೂಳೆಗೆ ಹೋಲಿಸುವ ಸುರೇಂದ್ರ ತನ್ನತ್ತೆಯ ಮಗಳು ಸೀರೆ ಉಟ್ಟು, ಅರಿಶಿನ ಕುಂಕುಮ ಶೋಭಿತೆ  ವಾಣಿಗೆ ಮಾತ್ರ ಕೈ ಎತ್ತಿ ಮುಗಿಯಬೇಕೆನಿಸುವುದು ಎಂಬಂತಹ ಮಾತನಾಡುತ್ತಾನೆ .  ಆದರೆ ಬಟ್ಟೆ ಒಣಗಿಸುತ್ತಿದ್ದ ಅವಳ ಎದೆಯನ್ನು ಕಾಣುತ್ತಲೇ ವಿಚಲಿತನಾಗುತ್ತಾನೆ. ಸೀರೆ ಉಟ್ಟು , ಅರಿಶಿನ ಕುಂಕುಮ ಇಟ್ಟ ಹೆಣ್ಣನ್ನು  ಎಂತಹ ಕಾಮುಕನಿಗೂ ಕಾಮಿಸಬೇಕೆನಿಸುವುದಿಲ್ಲ ಎನ್ನುತ್ತಲೇ ಕಾಮಿಸುತ್ತಾನೆ. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಿಗೆ ಅವಳ ಉಡುಪು ಕಾರಣ ಎಂಬುದು ಒಂದು ವಾದ. ಅನಾಹುತಕ್ಕೆ ಉಡುಪೇ ಕಾರಣವಾಗಿದ್ದರೆ ಹಾಲುಗೆನ್ನೆಯ ಹಸುಳೆಯಿಂದ, ಜೋಲಾಡುವ ಚರ್ಮದ ಮುದುಕಿಯರೇಕೆ ಅತ್ಯಾಚಾರಕ್ಕೊಳಗಾಗುತ್ತಿದ್ದರು ? ಎ.ಏನ್. ಮೂರ್ತಿರಾಯರು ರೂಪಾಂತರಿಸಿದ ಮೊಲಿಯೇರ್ ನ ತಾರ್ತೂಫ್ ನಾಟಕದಲ್ಲಿ ಒಂದು ಸಂಭಾಷಣೆ ಇದೆ. ಮನೆಯ ಸೇವಕಿ ದೊರಿನ  ಕಪಟ ಸನ್ಯಾಸಿ ತಾರ್ತೂಫ್ ನ ಬಳಿ  ಮಾತನಾಡಲು ಹೋದಾಗ , ಆತ ಎದೆಯ ಮೇಲೆ ಕರವಸ್ತ್ರವನ್ನಾದರೂ  ಹಾಕೊಮ್ಮ ,ನಾನು ನೋಡಲಾರೆ ಎನ್ನುತ್ತಾನೆ. ಅದಕ್ಕೆ ದೊರಿನ ಕೊಡುವ ದಿಟ್ಟ ಉತ್ತರ   ಹೆಣ್ಣಿನ ಎದೆ ಕಂಡಾಕ್ಷಣ ನಿಮ್ಮ ಮನಸ್ಸು ಇಳಿಯುವುದಾದರೆ ಅದೆಂತಾ ಸನ್ಯಾಸ   ಮುಂದುವರೆದು ಆಕೆ ಹೇಳುತ್ತಾಳೆ ಈ ಕ್ಷಣ ನೀವು ನನ್ನ ಮುಂದೆ ಕಾಲಿಂದ ತಲೆಯವರೆಗೂ ಬೆತ್ತಲಾದರೂ ನನ್ನ ಮನಸು ಇಳಿಯುಲ್ಲ. ಕರ್ಮ ಓದುವ ಮೊದಲು ಓದಿದ್ದು ಕಾರಂತರ  ಮೈ ಮನಗಳ ಸುಳಿಯಲ್ಲಿ.  ಬೇಡ ಬೇಡವೆಂದರೂ  ಸ್ತ್ರೀಯನ್ನು ಅಲ್ಲಿ ಚಿತ್ರಿಸಿರುವುದಕ್ಕೂ ಇಲ್ಲಿ ಚಿತ್ರಿಸಿರುವುದಕ್ಕೂ ತುಲನೆ ಮಾಡುವುದನ್ನು ನಿಲ್ಲಿಸಲಾಗಲಿಲ್ಲ.

ಕೆಲವು ಸಮುದಾಯದಲ್ಲಿ ಗಂಡ ಸತ್ತ ಹತ್ತನೇ ದಿನ ಹೆಂಡತಿ ಕುಂಕುಮವನ್ನು ಮೊದಲುಗೊಂಡು , ಬಳೆ , ಕಾಲುಂಗುರ ಮುಂತಾದ ಅಲಂಕಾರಿಕ ವಸ್ತುಗಳನ್ನು ತೆಗೆದು ಮತ್ತೆಂದೂ ತೊಡದಿರುವುದು ಸಂಪ್ರದಾಯ.  ಕಾದಂಬರಿಯಲ್ಲೂ ಈ ಸಂಪ್ರದಾಯದ  ಚಿತ್ರಣವಿದೆ  , ಜೋಯಿಸರ ಮಡದಿಯ ಪಾತ್ರಕ್ಕೆ ಇದು ಸಹಜ ವರ್ತನೆಯಾದರೂ ನನಗೇಕೋ ಸಮಂಜಸವೆನಿಸಲಿಲ್ಲ. ಗಂಡನಿಲ್ಲದಾಗ ಅಲಂಕಾರಿಕ ಸಾಮಾಗ್ರಿಗಳನ್ನು ತೊರೆದು ಬಿಡುವ ವೈರಾಗ್ಯ ಎಲ್ಲಾ ಹೆಣ್ಣುಮಕ್ಕಳಿಗೂ ಇರುವುದಿಲ್ಲ , ಅವರ ವಯಸ್ಸು , ಮುಂದಿರುವ  ಸಾಮಾಜಿಕ ಬದುಕು ಇನ್ನೂ ಮುಂತಾದ ಕಾರಣಗಳಿಂದ  ಹಾಗೆ ಮಾಡುವುದು ಅಸಾಧ್ಯವಾಗಬಹುದು. ಪದ್ಧತಿಯಂತೆ ಗಂಡ ಸತ್ತ ಹತ್ತನೇ ದಿನ ಈ ಕಾರ್ಯ ನಡೆಯುತ್ತದೆ. ಅಂದು ಆಕೆಯನ್ನು ಅಪರ ಕರ್ಮ ಮಾಡುತ್ತಿರುವ ಕರ್ತೃವನ್ನು  (ಸಾಮಾನ್ಯವಾಗಿ   ಮಗ) ಬಿಟ್ಟು ಬೇರಾರೂ ನೋಡುವಂತಿಲ್ಲ. ಕಾದಂಬರಿಯಲ್ಲೂ ಇದನ್ನೇ ಚಿತ್ರಿಸಲಾಗಿದೆ.  ಇದಕ್ಕೆ ಕೊಡುವ ಕಾರಣ ಆಕೆಯನ್ನು ಆಕೆಯ ಪಾಡಿಗಿರಲು ಬಿಡಿ .  ಮತ್ತೆ ಇಲ್ಲಿ ಆಕೆಯ ವಯಸ್ಸು , ಮನಸ್ಥಿತಿ ಎಲ್ಲವೂ ಮುಖ್ಯ. ಕಾದಂಬರಿಯ ಪಾತ್ರವಾದ ಶಾರದಮ್ಮ ಈ ಪಧ್ಧತಿಗೆ ಯಾವುದೇ ಪ್ರತಿರೋಧ ವೊಡ್ಡುವುದಿಲ್ಲವಾದರೂ ಇಂದಿನ ಸಾಮಾಜಿಕ ಸ್ಥಿತಿ ಗತಿಗೆ ತಕ್ಕಂತೆ ಪುನರ್ವ್ಯಾಖ್ಯಾನ ಮಾಡಬಹುದಿತ್ತು. ಸಂಪ್ರದಾಯದ  ವಿರುಧ್ಧ ಎತ್ತಲಾಗುವ ಹಲವು ಪ್ರಶ್ನೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುವ ವೆಂಕಟೇಶ ಭಟ್ಟರು  ಕೆಲವು ಪ್ರಶ್ನೆಗಳಿಗೆ ಶ್ರಧ್ಧೆಯತ್ತ ಬೊಟ್ಟು ಮಾಡುತ್ತಾರೆ .



ಶ್ರಧ್ಧೆ ಅಚಲ ನಂಬಿಕೆ ಚಂಚಲ ಎಂಬ ಮಾತು ಕಥೆಯಲ್ಲಿ ಮತ್ತೆ ಮತ್ತೆ ಬರುತ್ತದೆ.  ನಂಬಿಕೆ ಇರದೆಡೆ  ಶ್ರಧ್ಧೆ ಉಳಿಯಬಹುದಾದರೂ  ಆ ಶ್ರಧ್ಧೆಗೆ ಬೆಲೆ ಇದೆಯೇ ?

ಪ್ರತೀ ಬರಹಗಾರನ ದೃಷ್ಟಿ ಸೃಷ್ಟಿ ಎರಡೂ  ಬೇರೆ. ಈ ಕಾರಣ ಗಳಿಂದಾಗಿ ಇಲ್ಲಿನ ವೈರುಧ್ಯಗಳಂತೆ  ತೋರುವ ಸಂಗತಿಗಳನ್ನು ಕಡೆಗಣಿಸಬಹುದು. ಹೊಸ ಬರಹಗಾರನೊಬ್ಬ ಕನ್ನಡಕ್ಕೆ ದಕ್ಕಿರುವುದರಿಂದ ಕರ್ಮ ವನ್ನು ಸ್ವಾಗತಿಸಬಹುದು.

ಅವಧಿಯಲ್ಲಿ ಪ್ರಕಟವಾದ  ಮೈಮನಗಳ ಸುಳಿಯಲ್ಲಿ ಬರಹವನ್ನು ಇಲ್ಲಿ ಓದಬಹುದು 


2 comments:

  1. ಕರಣಂ ಅವರ ಈ ಕಾದಂಬರಿ ಪೂರ್ಣ ಓದಿ ಮತ್ತೆ ಅವಕಾಶವಾದರೆ ಕಮೆಂಟಿಸುವೆ.
    ತಮ್ಮ ಇಂತಹ ಪ್ರೇರಕ ಬರಹಗಳು ಮತ್ತಷ್ಟು ಬರಲಿ.
    ಅವಧಿಗೂ ವಂದನೆಗಳು.

    ReplyDelete
  2. Swarna,
    Thank you for an effective commentary on the essence of the book. `Mai managala suliyalli of Karant' is a great book by a great person!

    ReplyDelete