ದಿನವೂ ಸಾರ್ವಜನಿಕ
ಸಾರಿಗೆ ಉಪಯೋಗಿಸುವುದರ ಲಾಭಗಳಲ್ಲಿ ಒಂದು : ದಿನವೂ ಒಂದಷ್ಟು ಹೊಸ ಜನರನ್ನ ಭೇಟಿ ಆಗಬಹುದು , ಅವರ ಬದುಕನ್ನ
ತುಸು ಹತ್ತಿರದಿಂದ ಕಾಣಬಹುದು. ವಿಜಯನಗರದಿಂದ
ಜಯನಗರಕ್ಕೆ ಹೋಗುವುದೊಂದು ಬಸ್ಸಿದೆ ೬೦ಎ
ಅಂತ. ಕಪ್ಪು ಬೋರ್ಡು, ಕೆಂಪು ಬೋರ್ಡು ,
ಪುಷ್ಪಕ ಅಂತ ಎಲ್ಲಾ ಸ್ಥರಗಳ ಬಸ್ಸೂಗಳೂ ಇವೆ ಈ ಮಾರ್ಗದಲ್ಲಿ . ಮೊದಲ ಸ್ಟಾಪಿನಲ್ಲಿ ಹತ್ತಿದರೆ
ಮಾತ್ರ ಸಾಮಾನ್ಯವಾಗಿ ಈ ಬಸ್ಸಿನಲ್ಲಿ ಸ್ಥಳ ಸಿಗೋದು. ಜಯನಗರದ ಪ್ರಭಾವವೋ , ಅಲ್ಲಿಗೆ ಹೊರಟವರ
ಮನೋಭಾವವೋ , ವಿಜಯನಗರದ ಮುಖ್ಯ ನಿಲ್ದಾಣದಲ್ಲಿ
೬೦ಎ ಹೊರಡುವ ವೇಳೆಗೆ ಪ್ರಯಾಣಿಕರು ಸಾಲಾಗಿ ನಿಂತು ಶಿಸ್ತಾಗಿ ಬಸ್ಸು ಹತ್ತುವುದನ್ನ ನೋಡಬಹುದು.
ನಾನು ವಿಜಯನಗರದಿಂದ ಬಸವನಗುಡಿಯ ರಾಮಕೃಷ್ಣ ಆಶ್ರಮಕ್ಕೆ ಹೋಗಬೇಕಾಗಿತ್ತು. ವಿಜಯನಗರದಿಂದ
ಆಶ್ರಮಕ್ಕೆ ಬೇಕಾದಷ್ಟು ಬಸ್ಸುಗಳಿವೆ, ಆದರೂ ೬೦ಎ.ನ ಆಕರ್ಷಣೆಗೆ ಬಿದ್ದು ಹಲಬಾರಿ ನಾನು
ಅದರಲ್ಲಿ ಹೋಗಿದ್ದಿದೆ.
ಆಶ್ರಮದ ಹತ್ತಿರ
ಇಳಿದ ಮೇಲೆ ಕಛೇರಿಯನ್ನು ತಲುಪಲು ಸ್ವಲ್ಪ ದೂರ ನಡೆಯಬೇಕಿತ್ತು.
ದೊಡ್ಡ ಬಸವನ ಗುಡಿ ರಸ್ತೆಯ ದೊಡ್ಡ ದೊಡ್ಡ ಮರಗಳಲ್ಲಿ ಮನೆ ಮಾಡಿರುವ ಮೈನಾಗಳ ಸರಸ ಸಂಭಾಷಣೆ ಕೇಳುತ್ತಾ ನಡೆವುದೇ ಸೊಗಸು.
ಒಂದಷ್ಟು ವರ್ಷಗಳ ಹಿಂದೆ
ಹೀಗೆ ನಡೆವಾಗ ದಿನವೂ
ಮುಚ್ಚಿರುತ್ತಿದ್ದ ಅಂಗಡಿಯಿಂದ ಮಾತು ಕೇಳಿ ಬಂದು
ಅತ್ತ ತಿರುಗಿದೆ. ಅಂಗಡಿಯಾತನಿಗೆ ಮಂಗಳಮುಖಿಯೋಬ್ಬರು ದುಡ್ಡು ಕೊಡುವಂತೆ ಕೇಳುತ್ತಿದ್ದರು , ಆಗಿನ್ನೂ
ಅವರೆಲ್ಲಾ ಸಿಗ್ನಲ್ಗಳಲ್ಲಿ ಕಾಣುತ್ತಿರಲಿಲ್ಲ. ಅಲ್ಲೇನು ನಡೆದಿದೆ ಎಂಬ ಕುತೂಹಲವಿದ್ದರೂ
ತಿರುಗಿನೋಡುವುದಕ್ಕೆ ಮನಸಾಗಲಿಲ್ಲ.
ಕೆಲ ದಿನಗಳ ನಂತರ
ಮತ್ತದೇ ದನಿ ಕೇಳಿ ಬಂತು. ಆಕೆ ಯಾವುದೋ ಆಟೋದವರ ಬಳಿ ಹಣ ಕೇಳುತ್ತಿದ್ದರು. ಹಾಗೆ ಕೇಳುವುದು
ಸರಿಯೋ ತಪ್ಪೋ ಎಂಬ ವಿಶ್ಲೇಷಣೆ ಅಂದಿಗೆ ನನಗೆ ಬೇಡವಾಗಿತ್ತು, ಇಂದಿಗೂ ಬೇಡ. ಆಕೆಯನ್ನೇ ನೋಡುತ್ತಾ ಎರಡು ಹೆಜ್ಜೆ ನಡೆದೆ , ಆಟೋದವನ
ಬಳಿ ಹಣ ತೆಗೆದುಕೊಂಡು ಆಕೆ ನನ್ನೆಡೆಗೆ ಬರುತ್ತಿದ್ದರು.
ರೆಡ್ ಬೋರ್ಡ್ ಬಸ್ಸಿಗೆ ದುಡ್ಡು ಜಾಸ್ತಿ ಅಂತ ಬ್ಲಾಕ್ ಬೋರ್ಡ್ ಹತ್ತಿ ಒಂದೂವರೆ ರುಪಾಯಿ ಉಳಿಸುವ ಜಾತಿಯವಳಾದ ನನಗೆ, ನನ್ನನ್ನೂ ದುಡ್ಡು
ಕೇಳ್ತಾಳಾ ? ಎಂಬ ಪ್ರಶ್ನೆ ಎದುರಾಗಿ ಫಜೀತಿಕ್ಕಿಟ್ಟು
ಕೊಂಡಿತು. ಬಂದು ಕೇಳಿದ ಮೇಲೆ ತಾನೆ ಮುಂದಿನ
ಮಾತು ಎಂದು ನಾನು ಅದೇ ಗತ್ತಿನಲ್ಲಿ ನಡೆದು ಹೋಗುತ್ತಿದ್ದೆ. ಬೇಡವೆಂದರೂ ಕೆಲವು ನಿರಾಕರಣೆಗಳನ್ನ ಬದುಕು
ಕಲಿಸುತ್ತದೆ. ನನ್ನ ಪಕ್ಕಕ್ಕೆ ಬಂದ ಆಕೆ
ನನ್ನನ್ನು ದುಡ್ಡು ಕೇಳಲಿಲ್ಲ. “ಆಫೀಸಿಗಾ ಬೇಬಿ “ ಎಂದು ಅವರ ಗೊಗ್ಗರು ದನಿಯಲ್ಲಿ ಕೇಳಿದರು .
ಹೌದೆಂಬಂತೆ ತಲೆಯಾಡಿಸಿ ನಾನು ಮುನ್ನಡೆದು ಬಿಟ್ಟೆ. ಸ್ವಭಾವತಃ ಮಾತುಗಾರ್ತಿಯಾದ ನನಗೆ ಆಮೇಲೆ “ಅಯ್ಯೋ ಆಕೆ ಹತ್ತಿರ
ಒಂದಷ್ಟು ಹೊತ್ತು ಮಾತನಾಡಬಹುದಿತ್ತಲ್ಲ” ಎನಿಸಿದ್ದು ನಿಜ.
ಮಾರನೆಯ ದಿವಸ ಆಕೆ
ನನ್ನ ಕಚೇರಿಯ ಬಳಿಯೇ ಕಂಡರು. ಆಕೆಯ ನಗುವಿಗೆ ಪ್ರತಿಯಾಗಿ ನಾನೂ ನಕ್ಕೆ. ಆಮೇಲೊಂದಷ್ಟು ದಿನ ಆಕೆ
ಕಾಣಲಿಲ್ಲ. ಮನೆಯ ಮೂಲೆಯಲ್ಲಿ ಹಳೆಯದು ಮಾಯವಾಗಿ ಹೊಸ ಪೊರಕೆ ಬಂದರೆ ಏನೋ ಕಾಣೆಯಾಗಿದೆ ಎನ್ನುವ ಮನಸಿಗೆ ಆಕೆ ಕಾಣದಿದ್ದುದು ಏನನ್ನೋ
ಕಳೆದುಕೊಂಡಂತಾಗಿತ್ತು. ಸುಮಾರು ಎರಡು ವಾರಗಳ ನಂತರ ಆಕೆ ಮತ್ತೆ ರಸ್ತೆಯಲ್ಲಿ ಕಂಡರು.
ಯಾರೊಂದಿಗಾದರೂ ಮಾತು ಶುರುಮಾಡೋಕೆ ಒಂಚೂರು ಧೈರ್ಯ ಬೇಕು ಅನ್ಸತ್ತೆ. ಒಂದುವೇಳೆ ಅವರು ನಮ್ಮ
ಮಾತಿಗೆ ಉತ್ತರ ಕೊಡದೇ ಹೋದರೆ ? ಎಂಬ ಪ್ರಶ್ನೆಯೇ ಎಷ್ಟೋ ಬಾರಿ ಸಂಭಾಷಣೆಗೆ ಅತೀ ದೊಡ್ಡ
ಗೋಡೆಯಾಗುತ್ತದೆ. ಗೋಡೆ ಹಾರಿ “ಇಷ್ಟು ದಿನ ಕಾಣಿಸಲಿಲ್ಲ “ ಅಂದೆ . “ಹಾಂ ಬೇಬಿ ಮೈ
ಹುಷಾರಿರಲಿಲ್ಲ” ಒಂದು ಕ್ಷೀಣ ನಗುವಿನೊಂದಿಗೆ ಆಕೆ ಉತ್ತರಿಸಿದ್ದರು. “ನಿಮ್ಮ ಜೊತೆ ಯಾರಿರ್ತಾರೆ? ಯಾರು ನಿಮ್ಮನ್ನ ನೋಡ್ಕೋತಾರೆ” ಅಂತ ಕೇಳುವ ಮನಸಾದರೂ ಪ್ರಶ್ನೆಗಳು ಆಕೆಯನ್ನು ಇರಿಯಬಹುದೆಂದು
ಸುಮ್ಮನ್ನಾಗಿ ಬಿಟ್ಟೆ.
ಅಂದು ಸಂಜೆ
ಕಚೇರಿಯಿಂದ ಆಶ್ರಮದ ಬಸ್ ಸ್ಟಾಪಿಗೆ ನಡೆದು ಹೋಗುತ್ತಿರುವಾಗ ಆಕೆ ಮತ್ತೆ ಸಿಕ್ಕರು. ಒಂದು
ಬಾರಿ ಮಾತನಾಡಿದ ಸಲಿಗೆ ಇಬ್ಬರನ್ನೂ ನಿಲ್ಲುವಂತೆ ಮಾಡಿತ್ತು. “ನಿಮ್ಮ ಹೆಸರೇನು “ ಎಂಬ ಪ್ರಶ್ನೆಗೆ. ಮುಸ್ಸಂಜೆಯ ಮಬ್ಬು ಬೆಳಕಲ್ಲಿ ನಗುವಿನೊಂದಿಗೆ
ಆಕೆಯಿಂದ “ತಂಗಮ್ಮ” ಎಂಬ ಉತ್ತರ ಬಂತು . ಆಕೆಗೆ ನನ್ನೊಡನೆ ಮಾತನಾಡುವ ಮನಸಿದೆಯೋ ಇಲ್ಲವೋ
ಎಂಬ ಗೊಂದಲದಲ್ಲಿ ನಾನು ಎರಡು ಹೆಜ್ಜೆ
ಮೌನವಾದೆ. “ದಿನಾ
ಬಸ್ಸಲ್ಲೇ ಬರ್ತಿಯಾ ಬೇಬಿ ?” ಆಕೆಯ ದನಿಯಲ್ಲಿ ‘ಬೇಬಿ ‘ ಅಂತ ಕೇಳೋಕೆ ಖುಷಿಯಾಗ್ತಿತ್ತು. “ಹೌದು ತಂಗಮ್ಮ. ಆಟೋಗೆ ದುಡ್ಡು ಹಾಕೋಕೆ ಮನಸು ಬರಲ್ಲ”. ಖರ್ಚು ಮಾಡುವ ವಿಷಯದಲ್ಲಿ ನಾನು ಕಂಜೂಸು , ಆದ್ದರಿಂದ ಆಕೆ ನನ್ನಿಂದ
ಹಣದ ಅಪೇಕ್ಷೆ ಪಡಬಾರದೆಂದು ಸೂಚ್ಯವಾಗಿ ಹೇಳೋಕೆ
ನಾನು ಹಾಗೆ ಹೇಳಿದೆನಾ ? ಅನುಮಾನ ನನಗೆ. ಆಕೆ ಮಾತ್ರ ಸಹಜವಾಗಿ “ಹೌದು ಬೇಬಿ ಆಟೋಗೆ ದುಡ್ಡು ಹಾಕೋಕೆ ಮನಸೋಪ್ಪಲ್ಲ ಬಿಡು” ಅಂದರು.
ವಾರದಲ್ಲಿ ಒಂದೆರಡು
ಬಾರಿ ತಂಗಮ್ಮನ ಭೇಟಿ ನನ್ನ ದಿನಚರಿಯ ಭಾಗವಾಯಿತು. ಯಾವತ್ತೂ ಆಕೆ ತನ್ನ ಬಗ್ಗೆ, ತನ್ನ ಕುಟುಂಬದ
ಬಗ್ಗೆ ಹೇಳಲಿಲ್ಲ. ನಾನು ಕೇಳಲಿಲ್ಲ. ನಾನೂ ಹೇಳಲಿಲ್ಲ. “ಬೇಬಿ ಇವತ್ತೇನ್ ತಿಂಡಿ ತಿಂದೆ ?” “ಚೆನ್ನಾಗಿ ತಿನ್ನು,ಆರೋಗ್ಯ ನೋಡ್ಕೋ “ “ಕತ್ತಲಾಗಿದೆ ಒಬ್ಳೇ ಹೋಗ್ತಿಯಾ ನಾನು ಮನೆತನಕ ಬಿಟ್ಟು ಬರ್ಲಾ ?” ಅಂತ ತಂಗಮ್ಮ
ಹೇಳುತ್ತಿದ್ದರೆ ನನಗೇನೋ ಆನಂದ . ಆಕೆಯಲ್ಲಿ ನನಗ್ಯಾವತ್ತೂ ಭಿನ್ನತೆ ಕಾಣಲಿಲ್ಲ. ಮನೆವರೆಗೂ
ಬಿಡ್ಲಾ ಅಂತ ಆಕೆ ಕೇಳಿದಾಗಲೆಲ್ಲಾ ನಾನು “ಇರ್ಲಿ ಬಿಡಿ ತಂಗಮ್ಮ ನಾನು ಹೋಗ್ತೀನಿ , ಈ ಊರು ಅಷ್ಟು ಧೈರ್ಯ
ಕಲಿಸಿದೆ “ ಅಂತ ನಕ್ಕು
ಬಿಡುತ್ತಿದ್ದೆ. ಆದ್ದರಿಂದ ಆಕೆ ಎಂದೂ ನಮ್ಮ ಮನೆ ತನಕ ಬರಲಿಲ್ಲ.
ಕಚೇರಿಯಲ್ಲಿನ ಕೆಲ
ಸ್ನೇಹಿತರೊಂದಿಗೆ ತಂಗಮ್ಮನ ಬಗ್ಗೆ ಹೇಳಿದ್ದೆ. ಅವರೆಲ್ಲ್ಯಾರು ಅತೀಯಾದ ಕುತೂಹಲ ತೋರಲಿಲ್ಲ. ಒಂದು ದಿನ ಕಚೇರಿಯ ಕೆಲಸದ ಮಧ್ಯೆ ನಾವು ಕಾಫಿಗೆಂದು
ಹೊರಗೆ ಬಂದರೆ ಹೊಟೇಲಿನ ಹತ್ತಿರ ತಂಗಮ್ಮ ಕಂಡರು. ನಾನು ಗುಂಪಿನಲ್ಲಿ ಇದ್ದುದರಿಂದ
ಮಾತನಾಡಿಸುತ್ತೇನೋ ಇಲ್ಲವೋ ಎಂಬ ಗೊಂದಲದಲ್ಲಿ
ಸುಮ್ಮನೆ ನಿಂತರು . ಕೆಲವು ಸಂಬಂಧಗಳನ್ನ ಗುಂಪಿನಲ್ಲಿರುವಾಗ ಅಥವಾ ಸಮಾಜದ ಮುಂದೆ ನಾವು
ಒಪ್ಪಿಕೊಳ್ಳುವುದೇ ಇಲ್ಲ. ಇದೇಕೆ ಹೀಗೆ ?
ಒಪ್ಪಿಕೊಳ್ಳಲಾರದ ಬಂಧಗಳನ್ನು ಮುಚ್ಚಿಟ್ಟು ಕಾಪಾಡಿಕೊಳ್ಳುವುದಾದರೂ ಏಕೆ ? ಈ ಪ್ರಶ್ನೆಗಳಿಗೆ
ಬೇರೆ ಬೇರೆ ರೀತಿಯ ಉತ್ತರಗಳು ಸಿಗಬಹುದು.
ಆಕೆ ತಂಗಮ್ಮ ಎಂದು
ಕಂಡುಕೊಂಡ ಸಹೋದ್ಯೋಗಿ ಗೆಳತಿ “ಅರೆ ನೀವು ತಂಗಮ್ಮ
ಅಲ್ಲ ? “ ಅಂತ
ಅವರೊಂದಿಗೆ ಮಾತು ಶುರುವಿಟ್ಟು , “ಬನ್ನಿ ನಂ ಜೊತೆ ಕಾಫಿ ಕುಡಿಯಣ “ ಅಂತ ಅವರ ಉತ್ತರಕ್ಕೂ ಕಾಯದೇ ಕರ್ಕೊಂಡು
ಬಂದಳು. ಆ ಗೆಳತಿ ಇದ್ದದ್ದೇ ಹಾಗೆ, ಎಲ್ಲರೊಡನೆ ನಗುತ್ತಾ ಒಂದಷ್ಟು ಮಾತು , ಅನಿಸಿದನ್ನು
ಮುಲಾಜಿಲ್ಲದೇ ಮುಖದ ಮೇಲೆ ಹೇಳಿ ಬಿಡುವ ಸ್ವಭಾವದವಳು.
ಆವತ್ತು ತಂಗಮ್ಮನಿಗೆ ಇನ್ನೊಂದಿಬ್ಬರು ಬೇಬಿಗಳು
ಸಿಕ್ಕರು . ಆಕೆ ಯಾರನ್ನೂ ನಿನ್ನ ಹೆಸರೇನು ಎಂದು ಕೇಳಲೇ ಇಲ್ಲ. ಕಡೆಗೆ ಆಕೆಗೆ ನನ್ನ ಹೆಸರೂ
ಗೊತ್ತಿರಲಿಲ್ಲ. ನಮ್ಮೊಂದಿಗಿದ್ದ ಗೆಳೆಯನಿಗೆ
ತಂಗಮ್ಮ ‘ಮುನ್ನಾ’ ಎಂದು ನಾಮಕರಣ ಮಾಡಿದರು.. ಅವರು ಹೋದ ಮೇಲೆ ನಾವೂ ‘ಮುನ್ನಾ’ ಅಂತಿವೋ ಅಂತ ಅವನನ್ನ ರೆಗಿಸಿದ್ದಕ್ಕೆ “ಧಾರಾಳವಾಗಿ , ನಾನೂ ನಿಮ್ಮನ್ನ ಬೇಬಿ ಅಂತೀನಿ “ ಅಂದ. ಹಾಗಾಗಿ
ಮುನ್ನಾ, ಬೇಬಿ ತಂಗಮ್ಮನಿಗೆ ಮಾತ್ರ ಸೀಮಿತವಾಯಿತು .
ದೀಪಾವಳಿ ಹಬ್ಬಕ್ಕೆ
ಒಂದೆರಡು ದಿನ ಇರೋವಾಗ ತಂಗಮ್ಮ ಕಾಫಿ ಸಮಯದಲ್ಲಿ ಸಿಕ್ಕರು. “ ಹಬ್ಬ ಜೋರಾ ?” ಎಂಬ ಅವರ ಪ್ರಶ್ನೆಗೆ
“ ಹಾಂ ಮತ್ತೆ ನಿಮ್ಮದು ? “ ಗೆಳತಿ ಮರು ಪ್ರಶ್ನೆ ಎಸೆದಿದ್ದಳು . “ಹೂಂ ಮಾಡ್ತಿವಿ “ ಎಂದು ಸುಮ್ಮನಾದವರಿಗೆ
“ಏನ್ ಸ್ವೀಟು
? ನಮಗೆಲ್ಲ ಸ್ವೀಟು ಕೊಡಲ್ವಾ “ ಮುಂದಿನ ಬಾಣ ಸಿಧ್ಧವಾಗಿತ್ತು “ನಾನು ಕೊಟ್ರೆ ತಿಂತಿರಾ?” ತಂಗಮ್ಮನ ದನಿಯಲ್ಲಿ
ನೋವಿತ್ತಾ, ಹೊರ ಬರಲಾರದ ಕಂಬನಿ ಇತ್ತಾ, ಬೇಬಿ ಮುನ್ನಾರ ಬಗ್ಗೆ ವಾತ್ಸಲ್ಯವಿತ್ತಾ
ಗೊತ್ತಿಲ್ಲ . “ ಅಯ್ಯೋ ತಂಗಮ್ಮ ತಿನ್ನೋಕೆ ಕೊಡ್ತೀವಿ ಅಂದ್ರೆ ನಾವು ಎಲ್ಲಿಗೆ
ಬೇಕಾದರೂ ಹೋಗ್ತಿವಿ ..ನೀವೊಳ್ಳೆ ನಮ್ಗೆ ಈ ಪ್ರಶ್ನೆ
ಕೇಳ್ತಾ ಇದ್ದಿರಲ್ಲ “ ಅಂದು ಬಿಟ್ಲು ನಮ್ಮ ಮಾತಿನಮಲ್ಲಿ . ಮಾರನೆ
ದಿನ ನಾವು ಕಾಫಿಗೆ ಒಂದರ್ಧ ಗಂಟೆ ತಡವಾಗಿ ಹೋದೇವು ತಂಗಮ್ಮ ಹೊಟೇಲ್ ಬಾಗಿಲಿನಲ್ಲಿ ನಮಗಾಗಿ
ಕಾಯ್ತಾ ಇದ್ದರು .ಒಂದು ಡಬ್ಬ ಕೈಗಿತ್ತು ನಂಗೆ
ಕೆಲಸ ಇದೆ ಬರ್ತೀನಿ ಅಂತ ಹೊರಟೇ ಹೋದರು . ನಾವು
ಕಾಫಿ ಮುಗಿಸಿ ಬಂದು ಕಚೇರಿಯ ಟೇಬಲ್ ಮೇಲೆ ಡಬ್ಬ ಇಟ್ಟು
ಎಲ್ಲರನ್ನ ಕರೆದೆವು . ಆಫೀಸಿನ ಸಮಯದಲ್ಲಿ ತಿನ್ನುವ ಯಾವುದೇ ವಸ್ತುವನ್ನು ಇಟ್ಟರೂ ಅದು ನಿಮಿಷಗಳಲ್ಲಿ ಖಾಲಿಯಾಗುತ್ತದೆ. ತಂಗಮ್ಮನ
ಬರ್ಫಿಯೂ ಹಾಗೆ ಖಾಲಿಯಾಯಿತು . ಅಮ್ಮ ಮಾಡಿದಷ್ಟೇ ರುಚಿಯಾಗಿತ್ತು ಎಂದರೆ ಕ್ಲೀಷೆಯಾಗಬಹುದು ಹಾಗೆ ಹೇಳದಿದ್ದರೆ ಸುಳ್ಳಾಗಬಹುದು.
ಮಾರನೆ ದಿನ
ಸಿಕ್ಕ ತಂಗಮ್ಮನಿಗೆ ನಾವು ಖಾಲಿ ಡಬ್ಬ ಕೊಟ್ಟು ,
“ನಮಗೆ ಬರ್ಫಿ ಮಾಡಕ್ಕೆ ಬರಲ್ಲ “ ಅಂದರೆ ಆಕೆ ಜೋರಾಗಿ ನಕ್ಕು ಬಿಟ್ಟಿದ್ದರು . ಹೀಗೆ ನಮ್ಮ ತಂಗಮ್ಮನ
ಸ್ನೇಹ ಸಾಗಿತ್ತು. ಸುತ್ತಲಿನವರು ಏನೆಂದುಕೊಂಡರು, ಆಕೆಯೊಂದಿಗೆ ಕಾಫಿ ಕುಡಿಯುವಾಗ ಹೊಟೇಲಿನವರ
ಮುಖ ಭಾವ ಹೇಗಿತ್ತು ಇನ್ನೂ ಮುಂತಾದ ಪ್ರಶ್ನೆಗಳು ನಮ್ಮನ್ನು ಕಾಡಲಿಲ್ಲ.
ದೀಪಾವಳಿಯಾಗಿ ಕೆಲ
ತಿಂಗಳುಗಳ ನಂತರ ನಮ್ಮ ಕಚೇರಿಯ ವಿಳಾಸ ಬದಲಾಯಿತು.
ಅದಕ್ಕೆ ಹದಿನೈದು ದಿನಗಳ ಮುಂಚಿಂದಲೂ ತಂಗಮ್ಮ ನಮಗೆ ಸಿಗಲಿಲ್ಲ. ಹಾಗಾಗಿ ನಮ್ಮ ಕಚೇರಿ
ಬದಲಾಗುತ್ತಿರುವ ವಿಷಯವನ್ನ ಆಕೆಗೆ ಹೇಳಲು ಸಾಧ್ಯವಾಗಲಿಲ್ಲ. ಕಾಫಿ ಕುಡಿಯುವಾಗಲೆಲ್ಲ ತಂಗಮ್ಮನ
ನೆನಪಾದರೂ ನಾವು ಮತ್ತೆ ಆಕೆಯನ್ನು ಹುಡುಕುವ ಪ್ರಯತ್ನ ಮಾಡಿದ್ದು ಕೆಲ ತಿಂಗಳುಗಳ ನಂತರ. ಹುಡುಕುತ್ತಾ ಬಸವನಗುಡಿಯ ರಸ್ತೆಗೆ ಹೋದರೆ ನಮ್ಮ
ಗುರುತುಗಳು ಅಲ್ಲಿರಲಿಲ್ಲ. ಹೊಟೇಲಿನಲ್ಲಿ ಕೇಳಿದರೆ ಅವರು ತಂಗಮ್ಮನನ್ನು ಕಂಡಿಲ್ಲ
ಎಂದರು. ಸಿಗ್ನಲ್ಗಳಲ್ಲಿ ತಂಗಮ್ಮ ಸಿಗಬಹುದೆಂದು ಕೆಲವರ್ಷ ಹುಡುಕಿದರೂ ಆಕೆ ಈ ವರೆಗೂ ನಮ್ಮಲ್ಲಿ
ಯಾರಿಗೂ ಮತ್ತೆ ಸಿಕ್ಕಿಲ್ಲ. ಫೋನ್ ನಂಬರ್ ಏನು
ನಮ್ಮ ಹೆಸರನ್ನೂ ಕೇಳದ ತಂಗಮ್ಮನ ಬಾಯಲ್ಲಿ ಮತ್ತೆ ‘ಬೇಬಿ , ಮುನ್ನಾ ‘ ಅಂತ ಕೇಳುವ ಆಸೆ
ಮಾತ್ರ ಈ ಕ್ಷಣಕ್ಕೂ ಜೀವಂತ.
ನಿಜವಾಗಲೂ ಮನಸು ಮ್ಲಾನವಾಯಿತು. ಕೆಲ ಚಹರೆಗಳ ಮತ್ತು ಅವುಗಳ ಇರುವಿಕೆಯ ಮತ್ತು ಮರೆಯಾಗುವಿಕೆಯ ಗುರುತುಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ.
ReplyDeleteತಂಗಮ್ಮ ನನ್ನಲ್ಲಿ ಉಂಟುಮಾಡಿದ ಮನೋ ಕಂಪನ ಹೇಳಲಸದಳ! ಸಾಮಾನ್ಯವಾಗಿ ಮುಖ್ಯವಾಹಿನಿಗೆ ಬೆರೆಯದ ಇವರನ್ನು ಮಾತನಾಡಿಸುವವರೂ ಅಪರೂಪವೇ. ಅಸಲು ಅವರು ಹತ್ತಿರಬಂದರೆ ಇನ್ನೆಲ್ಲಿ ಕಾಸಿಗೆ ಕಂಟಕವೋ ಎಂದು ಅವರಿಂದ ತಪ್ಪಿಸಿಕೊಂಡು ಓಡುವವರ ನಡುವೆ ಕಥಾ ನಾಯಕಿ ನನಗೆ ವಿಭಿನ್ನವಾಗಿ ಕಂಡರು. ಮುನ್ನ ಮತ್ತು ಮಾತಿನ ಮಲ್ಲಿಯರ ಮೇಲೆ ತಂಗಮ್ಮನ ಪ್ರಭಾವ ಅತ್ಯಲ್ಪ ಅದಕ್ಕಾಗಿಯೇ ಅವರು ನೆನೆಯದಿದ್ದರೂ, ಕಥಾ ನಾಯಕಿಯ ಮೇಲೆ ಆಕೆ ಬೀರಿದ ಪ್ರಭಾವವು ವಿಶೇಷವೇ.
ತಾವು ಉಲ್ಲೇಖಿಸಿದ 60A ಬಸ್ಸು ನನಗೂ ಹಳೇ ದೋಸ್ತಿಯೇ, ಏಕೆಂದರೆ ನನ್ನ ಹಾಸ್ಟಲ್ ಇದ್ದದ್ದು ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿ. ಅಲ್ಲಿನ ಪರಿಸರವು ನನಗೆ ಈಗಲೂ ನೆಚ್ಚಿನದೇ.
ಇಡೀ ಕಥನ ಓದಿದ ನನಗೆ ಬಾಯಲಿ ಉಳಿದದ್ದು ಅದೇ ಬರ್ಫಿಯ ರುಚಿ.
ಮಂಗಳಮುಖಿಯರ ಬಗೆಗೆ ಇಷ್ಟು ಆತ್ಮೀಯವಾಗಿ ಬಂದಂತಹ ಕತೆ ಇದೇ ಮೊದಲನೆಯದೇನೊ? ತಂಗಮ್ಮ ಬಹುಶಃ ನಮಗಿಂತ ಹೆಚ್ಚು ಮಾನವಳು. ಪ್ರೀತಿಯನ್ನು ಸಂಕೋಚವಿಲ್ಲದೆ ನೀವೆಲ್ಲರೂ ಹಂಚಿಕೊಂಡ ಪರಿ ಆರ್ದ್ರವಾಗಿದೆ. ಕತೆಯ ಕೊನೆ ಪ್ರಶಂಸನೀಯ. ಅಭಿನಂದನೆಗಳು.
ReplyDelete