Tuesday, April 08, 2014

ರಾಮ ಎಂಬ ಎರಡಕ್ಷರದೊಳು.....



 
ಚಿತ್ರಕೃಪೆ : ಅಂತರ್ಜಾಲ
 ಸಖ , ಸಹೋದರ ಎಲ್ಲವೂ ಆಗಬಲ್ಲ ಕೃಷ್ಣ ಒಂದೆಡೆಯಾದರೆ ಪುರುಷೋತ್ತಮನಾಗಿ ಒಂದು ಅಂತರದಲ್ಲಿ ನಿಲ್ಲುವ ರಾಮ ಇನ್ನೊಂದು ತುದಿ. ಸಣ್ಣವರಾಗಿದ್ದಾಗ ಮನೆಯಲ್ಲಿ ಅಯ್ಯೋ  ಅಂದರೆ,  ನಮ್ಮಜ್ಜಿ,  ಮನೆಯಲ್ಲಿ,  ಅಯ್ಯೋ ಅನ್ನಬಾರದು ರಾಮ ರಾಮ ಅನ್ನು ಅನ್ನೋರು. ಈಗ ರಾಮನೇ ರಾಮ ರಾಮ ಅನ್ನೋ ಪರಿಸ್ಥಿತಿ ಬಂದಿದೆಯಾ ಅಂತ ಅನುಮಾನ ನಂಗೆ .   ಅದ್ಯಾಕೆ ಎಲ್ಲಾ ವಾದ ವಿವಾದಗಳಲ್ಲಿ ರಾಮ , ಕೃಷ್ಣ , ಬುಧ್ಧ , ಏಸು ಇವರುಗಳನ್ನು ನಾವು ಅಷ್ಟೊಂದು  ಎಳೆದು ತರ್ತಿವಿ ಎಂದು ಕೇಳಿದರೆ , ತಮ್ಮ ಕಲ್ ಹೊಡೆದ್ರೆ ದೊಡ್ಡ ಮರಕ್ಕೆ,  ಹಣ್ಣಿರುವ ಮರಕ್ಕೆ ಹೊಡಿಬೇಕೇ ಅಂದ. 


ರಾಮಾಯಣವನ್ನು ನಮ್ಮಲ್ಲಿ ಬಹುತೇಕ ಮಂದಿ ದೇವರ ಕಥೆಯೆಂದೇ  ಕೇಳುವುದು ಹೆಚ್ಚು. ರಾಮಾಯಣವನ್ನು ಕಾವ್ಯವಾಗಿ ಓದಿದರೆ ಇನ್ನೂ ಸೊಗಸಾಗಿರುತ್ತದೆ ಎಂದು ಶತಾವಧಾನಿ  ರಾ. ಗಣೇಶ್ ಹೇಳುತ್ತಿರುತ್ತಾರೆ. ವೈಯುಕ್ತಿಕವಾಗಿ ನನಗೂ ರಾಮ ಸಾಮಾನ್ಯ ಮನುಷ್ಯನಾಗಿ ಬುವಿಯಲ್ಲಿ ಹುಟ್ಟಿದ , ತಂದೆಯ ಮಾತಿಗಾಗಿ ಒಲಿದು ಬಂದ ಸಿಂಹಾಸನವನ್ನು ಬಿಟ್ಟು ಕಾಡಿಗೆ ಹೋದ, ಅಂತಃಪುರದ ತುಂಬಾ ಹೆಂಡತಿಯರನ್ನು ಹೊಂದುವ ಅವಕಾಶವಿದ್ದಾಗ್ಯೂ ಸೀತಾಪತಿಯಾಗಿ ಉಳಿದ ಎಂಬ ಅಂಶಗಳು ಹೆಚ್ಚು ಹತ್ತಿರವಾಗುತ್ತವೆ.

ರಾಮನ ಬಗ್ಗೆ ಇರುವ ಅತೀ ಮುಖ್ಯ ಅಪಾದನೆ ಗರ್ಭಿಣಿ ಹೆಂಡತಿಯನ್ನು ಕಾಡಿಗಟ್ಟಿದ, ಶೂದ್ರನಾದ ಶಂಭೂಕ ತಪಸ್ಸಿಗೆ ಕೂತಾಗ ವರ್ಣದ  ಕಾರಣಕ್ಕಾಗಿ ಅವನನ್ನು ಕೊಂದ , ವಾಲಿಯನ್ನು ಮರೆಯಲ್ಲಿ ನಿಂತು ಕೊಂದ ಎಂಬುದು.  

ಚಿತ್ರಕೃಪೆ : ಅಂತರ್ಜಾಲ


ವಿದ್ಯಾಲಂಕಾರ ಸಾ.ಕೃ. ರಾಮಚಂದ್ರರಾಯರ ವಿದ್ವತ್ತಿನಬಗ್ಗೆ ಹೇಳುವಷ್ಟು ನನಗೆ ಗೊತ್ತಿಲ್ಲ.  ಬರಹಗಾರನೊಬ್ಬ ಬರೆಯಲು ಪ್ರಾರಂಭಿಸುವ ಮುನ್ನ ತನ್ನದೇ ಆದ ಒಂದು ಭಾಷೆಯನ್ನೂ ಸೃಷ್ಟಿಸಿಕೊಳ್ಳ ಬೇಕು ಎಂದು ಸತ್ಯಕಾಮರು ಒಂದು ಕಡೆ ಹೇಳುತ್ತಾರೆ.  ರಾಮಚಂದ್ರರಾಯರ ಭಾಷೆಯ ಸೊಗಸಿನ ಬಗ್ಗೆ ಓದಿಯೇ ತಿಳಿಯುವುದು ಒಳ್ಳೆಯದು. ಒಂದು ಕಾರ್ಯಕ್ರಮದಲ್ಲಿ ಅವರ ರಾಮಾಯಣ ಪ್ರವಚನಮಾಲಿಕೆಯ ಸಿ.ಡಿ. ಸಿಕ್ಕಿತು. ರಾಯರನ್ನು ಓದಿದ್ದ ನಾವು ಕೇಳುವ ಆಸೆಯಿಂದ ಸಿ.ಡಿ. ತಂದೆವು. ಅವರ ದನಿ ಮತ್ತು ವಿಷಯವನ್ನು ತಿಳಿಸುವ ರೀತಿಯೂ ಅವರ ಬರಹದಷ್ಟೇ ಸುಂದರವಾಗಿದೆ.

ರಾಮಚಂದ್ರ ರಾಯರ , ಬನ್ನಂಜೆ ಗೋವಿಂದಾಚಾರ್ಯರ ಅಥವಾ  ಶತಾವಧಾನಿ ರಾ. ಗಣೇಶರ ಜ್ಞಾನದ ವಿಸ್ತಾರ ನನಗೆ ಎಟುಕುವುದಲ್ಲ.ಅವರುಗಳ  ಉಪನ್ಯಾಸ ಕೇಳಿ ನನಗೆ ತಿಳಿದದ್ದನ್ನು ಕೆಳಗೆ ಬರೆದಿದ್ದೇನೆ. ಮುಂದುವರೆಯುವ ಮುನ್ನ ಕೆಲ ವಿಷಯಗಳನ್ನು ಸ್ಪಷ್ಟಪಡಿಸುವುದು ಸೂಕ್ತ  : ನಾನು ರಾಮ ಭಕ್ತಳಲ್ಲ, ಯಾವುದೇ ಸಂಘಟನೆಯ ವಿಚಾರಗಳಲ್ಲೂ ನನಗೆ ನಂಬಿಕೆ ಇಲ್ಲ. ನನಗಿದ್ದ ಅನುಮಾನಗಳನ್ನು ಪರಿಹರಿಸಿಕೊಳ್ಳಲೆಂದು ಕೊಂಚ ಓದಿದೆ , ಕೊಂಚ ಕಿವಿಯಾದೆ ತಿಳಿದದ್ದಕ್ಕೆ  ದಾಖಲೆ ಇರಲಿ ಅಂತ ಈ ಪೋಸ್ಟು.

ಭಾರತದಲ್ಲಿ ಮೂಲ ವಾಲ್ಮೀಕಿ ರಾಮಾಯಣವಲ್ಲದೇ ಹಲವಾರು ರಾಮಾಯಣಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಹದಿನಾಲ್ಕಕ್ಕೂ ಹೆಚ್ಚನ್ನು ರಾಮಾಯಣದ ಅಧ್ಯಯನಕ್ಕೆ ಆಧಾರವನ್ನಾಗಿ ಮಾಡಿಕೊಳ್ಳ ಬಹುದು. ಈ ಹದಿನಾಲ್ಕರಲ್ಲಿ  ಬಂಗಾಳದ ವಂಗ ರಾಮಾಯಣ , ತಮಿಳಿನ ಕಂಬ ರಾಮಾಯಣ , ಕನ್ನಡದ ತೊರವೆ ರಾಮಾಯಣವೂ ಸೇರಿದೆ.

ಚಿತ್ರಕೃಪೆ : ಅಂತರ್ಜಾಲ
ರಾಮಾಯಣ ಎಂಬ ಪದದ ಅರ್ಥ ರಾಮ ನಡೆದ ದಾರಿ.  ರಾಮಾಯಣವನ್ನು  ಮುಖ್ಯ ಘಟನೆಗಳ ಆಧಾರದ ಮೇಲೆ ಕಾಂಡಗಳಾಗಿ ವಿಭಾಗಿಸಲಾಗಿದೆ . ಬಾಲಕಾಂಡ , ಅಯೋಧ್ಯಾಕಾಂಡ , ಅರಣ್ಯಕಾಂಡ, ಕಿಷ್ಕಿಂದಾಕಾಂಡ,  ಸುಂದರಕಾಂಡ,ಯುಧ್ಧ ಕಾಂಡ, ಉತ್ತರಕಾಂಡ ಹೀಗೆ. ಬಹುತೇಕ ರಾಮಾಯಣಗಳು ರಾಮ ರಾವಣರ ಯುಧ್ಧ ಮುಗಿದೊಡನೆ  ಯುಧ್ಧಕಾಂಡದಲ್ಲೇ ಸಮಾಪ್ತಿಯಾಗುತ್ತವೆ. ಈ ರಾಮಾಯಣಗಳು ಬಾಲ್ಯಕಾಂಡ ಮತ್ತು ಉತ್ತರಕಾಂಡ ಗಳನ್ನು ಮಾನ್ಯ ಮಾಡುವುದಿಲ್ಲ. ಅಲ್ಲದೇ  ಈ ಕಾಂಡಗಳ ರಚನೆ ಇತರ ಕಾಂಡಗಳಂತಿಲ್ಲ,  ಆದ್ದರಿಂದ ಇವುಗಳನ್ನು ಬೇರೆ ಯಾರೋ ಬರೆದು ರಾಮಾಯಣಕ್ಕೆ ಕಾಲಾನುಕ್ರಮದಲ್ಲಿ ಸೇರಿಸಲಾಗಿದೆ ಎಂಬ ಒಂದು ವಾದವೂ ಇದೆ.


ಚಿತ್ರಕೃಪೆ : ಅಂತರ್ಜಾಲ
ಸೀತಾ ಪರಿತ್ಯಾಗ ಬರುವುದು ಉತ್ತರಕಾಂಡದಲ್ಲಿ . ಆ ಕಾಂಡವೇ ವಾಲ್ಮೀಕಿಗಳು  ಬರೆದದ್ದಲ್ಲ ಎನ್ನುವುದನ್ನು ಒಪ್ಪಿದರೆ ಪ್ರಶ್ನೆಯೇ ಇಲ್ಲ  ಆದರೂ  ಉತ್ತರಕಾಂಡವನ್ನು ಬರೆದ ರಾಮಾಯಣಗಳಲ್ಲಿ ಏನಿದೆ ? ಅಲ್ಪ ಅಗಸನ ಕಲ್ಪನೆ ಮಾತಿಗೆ ರಾಜ ರಾಮ ಅಳುಕಿದನೆಂಬುದು ನಿಜವೇ ? ಸೀತೆಯನ್ನು ತೊರೆಯುವ ನಿರ್ಧಾರವನ್ನೇಕೆ ಕೈಗೊಂಡ ಸೀತಾಪತಿ ? ಎಂಬ ಪ್ರಶ್ನೆಗಳೊಡನೆ ಈ ರಾಮಾಯಣಗಳನ್ನು ಬೆದಕಿದಾಗ ಸಿಗುವ ಮೊದಲ ಅಂಶ : ಯಾವುದೇ ರಾಮಾಯಣದಲ್ಲೂ ಅಗಸನ ಪಾತ್ರವಿಲ್ಲ. ಶ್ರೀರಾಮ ಅಳುಕಿದ್ದು ಪ್ರಜಾ ಅಭಿಪ್ರಾಯಕ್ಕೆ . ಆ ಅಭಿಪ್ರಾಯ ಭವಿಷ್ಯದಲ್ಲಿ ಬೀರಬಹುದಾದ ಪರಿಣಾಮಕ್ಕೆ, ತನ್ನ ಪ್ರಿಯ ಪತ್ನಿಯ ಬಗ್ಗೆ ಎದ್ದಿದ್ದ ಘೋರವಾದ ಅನುಮಾನಕ್ಕೆ  . ಪ್ರಜಾಸಮೂಹದ ನೈತಿಕತೆಯನ್ನು ಕಾಪಾಡುವ ಭಾರ ಹೊತ್ತ ರಾಜನಾಗಿ , ಪತ್ನಿಯನ್ನು ಅತಿಶಯವಾಗಿ ಪ್ರೀತಿಸುವ ಪತಿಯಾಗಿ (ಹೌದು ಪ್ರೀತಿಸುವ ಪತಿಯಾಗಿ !)  ಸೀತೆಯನ್ನು ತ್ಯಜಿಸುವ ನಿರ್ಧಾರ ಕೈಗೊಳ್ಳುವ ರಾಮನ ಪಾಡು ಯಾರಿಗೂ ಬೇಡ.  ಪ್ರತೀ ಯುಗದ ಮಡಿಲಲ್ಲಿ ಅಡಗಿರುವ ದುಖವನ್ನು ಭರಿಸಲು ಮಹಾಪುರುಷನೊಬ್ಬ ಜನ್ಮಿಸುತ್ತಾನೆ , ಹಾಗೆ ತ್ರೇತೆಯ ಮಡಿಲ ದುಃಖವನ್ನು ತನ್ನುಡಿಗೆ  ಹಾಕಿಕೊಂಡವ ಶ್ರೀರಾಮ.  


ಸಾರ್ವತ್ರಿಕ ಅಭಿಪ್ರಾಯದಂತೆ ಸೀತೆಯನ್ನು ತೊರೆಯುವ ನಿರ್ಧಾರಕ್ಕೆ ಬರುವ ರಾಮ ಅವಳನ್ನು ವಾಲ್ಮಿಕಿಗಳ ಆಶ್ರಮದಲ್ಲಿ ಬಿಟ್ಟು ಬಾ ಎಂದು ಲಕ್ಷ್ಮಣನಿಗೆ ಹೇಳುತ್ತಾನೆ , ಕಾಡಿನಲ್ಲಿ ಅಲ್ಲ. ಉತ್ತರಕಾಂಡವನ್ನು ಬರೆದ ಎಲ್ಲ ರಾಮಾಯಣಗಳಲ್ಲೂ ಇದು ದಾಖಲಾಗಿದೆ. ಸತ್ಯಕಾಮರ ರಾಜಬಲಿಯಲ್ಲೂ ರಾಮ ಸೀತೆಯನ್ನು ಆಶ್ರಮದ ಬಳಿ ಬಿಟ್ಟು ಬಾ ಎಂದೇ ಹೇಳುತ್ತಾನೆ.
ಹಾಗೊಂದು ವೇಳೆ  ಸೀತೆಯನ್ನು ಆಶ್ರಮಕ್ಕೆ ಕಳುಹಿದ್ದು ತಪ್ಪು  ಎನ್ನುವುದಾದರೆ ರಾಮ ಏನು ಮಾಡಬೇಕಿತ್ತು ? ಎಂಬ ಪ್ರಶ್ನೆಯನ್ನು ಬನ್ನಂಜೆ ಆಚಾರ್ಯರು ತಮ್ಮ ಪ್ರವಚನದಲ್ಲಿ ಕೇಳುತ್ತಾರೆ. ಒಂದು ರೀತಿಯಲ್ಲಿ ರಾಮ ಸೀತೆಗಾಗಿ  ಸಿಂಹಾಸನ ತ್ಯಜಿಸಿದ್ದರೂ  ಸೀತೆಗೆ ಬಂದಿದ್ದ ಆಪಾದನೆ ತಪ್ಪುತ್ತಿರಲಿಲ್ಲ.  ಶಂಭೂಕ ವಧೆಗಾಗಿ  ಮತ್ತೆ ದಂಡಕಾರಣ್ಯಕ್ಕೆ  ಬರುವ ರಾಮ ಸೀತೆಯನ್ನು ನೆನೆದು ಕಣ್ಣೀರಿಟ್ಟ  ಎಂಬುದು ವಾಲ್ಮೀಕಿ ರಾಮಾಯಣದಲ್ಲಿ ದಾಖಲಾಗಿದೆಯಂತೆ. (ರಾಮ ಸೀತೆಯರು ತಮ್ಮ ವನವಾಸದ ಅವಧಿಯ ಹದಿಮೂರು ವಸಂತಗಳನ್ನು ದಂಡಕಾರಣ್ಯದಲ್ಲಿ ಕಳೆದದ್ದನನ್ನು ನೆನೆಯಬಹುದು).


ರಾಮಾಯಣದ ಪ್ರಕಾರ ದಶರಥನಿಗೆ ಅಂತಃಪುರದಲ್ಲಿ  ಕೌಸಲ್ಯೆ , ಕೈಕೇಯಿ, ಸುಮಿತ್ರೆಯರಲ್ಲದೆ ೩೦೦ ಜನ ಮಡದಿಯರಿದ್ದರಂತೆ. ದಾಶರಥಿ ಮಾತ್ರ ಸೀತಾಪತಿಯಾಗೇ ಉಳಿದ. ಸೀತೆ ದೂರಾದ ಮೇಲೂ ಸುವರ್ಣ ಸೀತೆಯೊಂದಿಗೆ ಯಜ್ಞ ಮಾಡಿದನೆ ಹೊರತು ಮತ್ತೆ ಮದುವೆಯಾಗಲಿಲ್ಲ. ಹಾಗೊಂದು ವೇಳೆ ರಾಮನಿಗೆ ಅನುಮಾನವಿದ್ದುದೇ  ನಿಜವಾದಲ್ಲಿ ರಾಮನೇಕೆ ಸೀತೆಯನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳುತ್ತಿದ್ದ ? ಲಂಕೆಯಿಂದ ಹಿಂತಿರುಗಿದ ಸೀತೆಯೊಡನೆ ಸಂಸಾರ ಮಾಡಿ, ತಮ್ಮ ಸಂತಾನ ಬುವಿಗೆ ಬರುವ ಹೊತ್ತಿನಲ್ಲೇಕೆ ಅವಳನ್ನು ತ್ಯಜಿಸುತ್ತಿದ್ದ ?

ಇನ್ನು ಶಂಭೂಕ ವಧೆಯ ಪ್ರಸಂಗವೂ ಉತ್ತರಕಾಂಡದಲ್ಲಿ ಬರುತ್ತಿದೆ. ಶಂಭೂಕ ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕೆಂಬ  ಇಚ್ಚೆಯೊಡನೆ  ತಪಸ್ಸು ಮಾಡುತ್ತಿರುತ್ತಾನೆ. ಸಶರೀರರಾಗಿ ಸ್ವರ್ಗಕ್ಕೆ ಹೋಗುವುದು ನಿಯಮ ಬಾಹಿರ ,  ದೇಶವೊಂದಕ್ಕೆ ಹೋಗಬೇಕಾದಾಗ ನಾವು ತೆಗೆದುಕೊಳ್ಳುವ ವೀಸಾದ  ರೀತಿ ಸ್ವರ್ಗಕ್ಕೆ ಹೋಗಬೇಕಾದಾಗಲೂ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು ಎಂಬುದು  ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ತಪ್ಪು ಇಚ್ಚೆಯೊಡನೆ ತಪಸ್ಸು ಮಾಡುತ್ತಿದ್ದುದರಿಂದ  ಶಂಭೂಕ ವಧೆಯಾಯಿತು ಎಂಬ ಕಾರಣ ಸಿಗುತ್ತದೆ. ಒಂದು ವೇಳೆ ರಾಮನಿಗೆ ಹುಟ್ಟಿನಿಂದ ಬರುವ ವರ್ಣದ ಚೌಕಟ್ಟನ್ನು ರಕ್ಷಿಸುವ ಇರಾದೆ ಇದ್ದುದೇ  ಹೌದಾದರೆ , ಆತ  ಶಬರಿಯ ಆತಿಥ್ಯ, ಗುಹನ ಆತಿಥ್ಯವನ್ನೇಕೆ ಸ್ವೀಕರಿಸುತ್ತಿದ್ದ ? ಶಬರಿಯ ಗುರುಗಳಾದ ಮತಂಗ ಮುನಿಗಳನ್ನೂ ಒಪ್ಪಿಕೊಂಡ ರಾಮ ಕೇವಲ ಜಾತಿಯ  ಕಾರಣದಿಂದ ಶಂಭೂಕ ನನ್ನು ಕೊಂದಿರಲಾರ ಎಂಬುದು ವಿದ್ವಾಂಸರು ಕೊಡುವ ಇನ್ನೊಂದು ಕಾರಣ.


ಚಿತ್ರಕೃಪೆ : ಅಂತರ್ಜಾಲ
ಇನ್ನು ವಾಲಿ ವಧೆ , ವಾಲಿ ತನ್ನ ತಮ್ಮ ಸುಗ್ರೀವನ ಹೆಂಡತಿಯಾದ ರುಮೆಯನ್ನು ಬಲವಂತದಿಂದ ಹೊತ್ತೊಯ್ದಿದ್ದ. ತಮ್ಮನ ರಾಜ್ಯವನ್ನು ಕಸಿದುಕೊಂಡಿದ್ದ ಎಂಬ ಆಪಾದನೆಗಳಿವೆ.  ವಾಲಿಯ ರಾಜ್ಯ ಕೋಸಲ ದೇಶದ  ಆಢಳಿತದಲ್ಲಿತ್ತು. ಆದ್ದರಿಂದ ರಾಮ ಅಯೋಧ್ಯೆಯ ರಾಜನಾಗಿ ವಾಲಿಗೆ ಶಿಕ್ಷೆ ಕೊಟ್ಟ. ಶಿಕ್ಷೆಯನ್ನು ಹೇಗೆ ಕೊಡಬೇಕೆಂಬುದು  ರಾಜನ ವಿವೇಚನೆಗೆ ಬಿಟ್ಟದ್ದು ಎಂಬ ಕಾರಣವನ್ನು ಕೇಳಿದ್ದೇನೆ. ಇತ್ತೀಚಿಗೆ ಬನ್ನಂಜೆಯವರ ಪ್ರವಚನದಲ್ಲಿ ತಿಳಿದ ಸಂಗತಿ , ಸುಗ್ರೀವ ಕೆಣಕಿದನೆಂದು ಅವನೊಂದಿಗೆ ಯುಧ್ಧಕ್ಕೆ ಹೊರಟ ವಾಲಿಯನ್ನು ಅವನ ಹೆಂಡತಿ ತಾರೆ ತಡೆಯುತ್ತಾಳೆ. ಎಂದೂ  ಸೊಲ್ಲೆತ್ತದ ಸುಗ್ರೀವ ಇಂದು ಕೆಣುಕುತ್ತಿದ್ದಾನೆಂದರೆ ಅವನ ಹಿಂದೆ ಯಾರೋ ಇರಬೇಕೆಂದು ಅನುಮಾನಿಸುತ್ತಾಳೆ . ಅದಕ್ಕೆ ವಾಲಿ, ಅಲ್ಲೊಂದು ವೇಳೆ ರಾಮನಿದ್ದರೆ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅವನನ್ನು ಅತಿಥಿಯಾಗಿ ಮನೆಗೆ ಕರೆ ತರುತ್ತೇನೆ ಎಂದು ಹೊರಡುತ್ತಾನೆ. ರಾಮನ ಬಾಣದಿಂದ ಧರೆಗುರುಳಿದ ವಾಲಿಯನ್ನು ರಾಮ ಬಾಣ ತೆಗೆದು ಮತ್ತೆ ಬದುಕಿಸುತ್ತೇನೆ ಎನ್ನುತ್ತಾನೆ ಆದರೆ ವಾಲಿ ಅದಕ್ಕೊಪ್ಪುವುದಿಲ್ಲ.

ಸೀತೆಯ ರಕ್ಷಣೆಗಾಗಿ ಲಕ್ಷ್ಮಣ ರೇಖೆಯನ್ನೆಳೆದದ್ದು, ರಾವಣನಿಗಿದ್ದ ಹತ್ತು ತಲೆಗಳು  ಮುಂತಾದವುಗಳು ರಾಮಾಯಣದಲ್ಲಿ ದಾಖಲಾಗಿಲ್ಲ. ಅವು ನಂತರದಲ್ಲಿ ಸೇರಿಸಲ್ಪಟ್ಟವು ಎಂಬ ಅಭಿಪ್ರಾಯವನ್ನು ರಾಮಚಂದ್ರರಾಯರ ಉಪನ್ಯಾಸದಲ್ಲಿ ಕೇಳಿದೆ.


ಎಷ್ಟೆಲ್ಲಾ ಹೇಳಿದಾಗ್ಯೂ  ಪ್ರಶ್ನೆಗಳು ಉಳಿಯಬಹುದು. ಹಿಂದೊಮ್ಮೆ ಇಲ್ಲಿ ಬರೆದಂತೆ
ನಂಬುವವರಿಗೆ ಕಾರಣಗಳು ಬೇಕಿಲ್ಲ
ನಂಬದವರು ಕಾರಣಗಳನೂ ನಂಬಲ್ಲ

ಎಷ್ಟು ಕ್ರೌಂಚಗಳು ಧರೆಗುರುಳಿರಬಹುದು
ತ್ರೇತೆಯ ನಂತರ
ಒಂದೂ ರಾಮಾಯಣ ಹುಟ್ಟಲಿಲ್ಲ
ತಂದೆಯೊಂದು ಮಾತಿಗಾಗಿ
ರಾಜ್ಯವನ್ನೇ ಬಿಟ್ಟೇನೆಂಬ ಮಗ ಜನಿಸಲಿಲ್ಲ !


ಆಧಾರ : ೧. ವಿದ್ಯಾಲಂಕಾರ ಸಾ.ಕೃ. ರಾಮಚಂದ್ರರಾಯರ  ರಾಮಾಯಣ ಪ್ರವಚನದ ಸಿ.ಡಿ.
೨. ಶತಾವಧಾನಿ ಡಾ. ರಾ. ಗಣೇಶರ ರಾಮಾಯಣ ಉಪನ್ಯಾಸಗಳು.
೩. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ.
ಎರಡನ್ನೂ  http://www.kannadaaudio.com/ ನಲ್ಲಿ ಕೇಳಬಹುದು.
೪. http://sachinsbhat.blogspot.in/2014/03/blog-post.html  ಬ್ಲಾಗ್ನಲ್ಲಿ ರಾಮಾಯಣದ ಬಗ್ಗೆ ಮಾಹಿತಿ ಪೂರ್ಣ ಬರಹಗಳಿವೆ.


9 comments:

  1. ವಾಹ್ ವಿದ್ವತ್ ಪೂರ್ಣ ಲೇಖನ, ನಾನು ಯೋಚಿಸುತ್ತಿದ್ದ ವಿಷಯಗಳನ್ನು ಬರೆದಿದ್ದಿರಿ, ಥ್ಯಾಂಕ್ಸ್ ಸ್ವರ್ಣ :-)

    ReplyDelete
  2. ರಾಮಾಯಣದ ಅನೇಕ ಮೂಲಗಳನ್ನು ಅಧ್ಯಯನ ಮಾಡಿ ಉತ್ತಮ ಲೇಖನವನ್ನು ಬರೆದಿರುವಿರಿ. ಆದರೆ ಅನೇಕ ಭಾರತೀಯರು ರಾಮಾಯಣವನ್ನು ಚಿಕ್ಕಂದಿನಿಂಲೂ ಕೇಳುತ್ತಿರುವುದರಿಂದ, ರಾಮ ತಪ್ಪು ಮಾಡಿದ ಎಂದು ಅವರಿಗೆ ಯಾವಾಗಲೂ ಅನ್ನಿಸಲೇ ಇಲ್ಲ. ಆದುದರಿಂದ ರಾಮನ ಕಾರ್ಯಗಳನ್ನು ಸಮರ್ಥಿಸಲು ಯಾವ ಕಾರಣವೂ ಬೇಕಿಲ್ಲ! ಇನ್ನು ಭರ್ತೃಹರಿಯು ತನ್ನ ‘ಉತ್ತರರಾಮಚರಿತ’ ನಾಟಕದಲ್ಲಿ ರಾಮಚಂದ್ರನ ಬಾಯಿಯಿಂದ ಹೀಗೆ ಹೇಳಿಸಿದ್ದಾನೆ: ‘ದುಃಖವನ್ನು ಸಹಿಸಿಕೊಳ್ಳಲೆಂದೇ ರಾಮನಲ್ಲಿ ಜೀವವನ್ನು ತುಂಬಲಾಗಿದೆ!’

    ReplyDelete
    Replies
    1. ರಾಮನ ಬಗ್ಗೆ ನನಗಿದ್ದ ಸಂದೇಹ ಪರಿಹಾರಾರ್ಥವಾಗಿ
      ಈ ಪೋಸ್ಟು ಕಾಕಾ. ಹೌದು ಧರ್ಮದ ಮೂರ್ತಿವೆತ್ತ ಸ್ವರೂಪವೇ ಶ್ರೀರಾಮ ಎಂದು
      ವಾಲ್ಮಿಕಿಗಳೇ ಹೇಳಿದ್ದಾರಂತೆ . ಧನ್ಯವಾದಗಳು

      Delete
  3. ಶ್ರೀರಾಮನ ಪಾತ್ರ ಪರಿಚಯವನ್ನು ಸಮರ್ಥವಾಗಿ ತೆರೆದಿಟ್ಟಿದ್ದೀರ.
    ಸಾ.ಕೃ. ರಾಮಚಂದ್ರರಾಯರ ಬಗ್ಗೆ ಪ್ರಸ್ತಾಪಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಶ್ರೀಯುತರ ಬಗ್ಗೆ ನಮಗೂ ಈ ಮೂಲಕ ಓದುವ ಹಂಬಲವಾಯಿತು.
    ಶಂಭೂಕ ಮತ್ತು ವಾಲಿ ವಧೆಗಳ ಬಗ್ಗೆ ನನಗೂ ಹಲವು ಪ್ರಶ್ನೆಗಳಿತ್ತು, ಅವಕ್ಕೆ ಇಂದು ಉತ್ತರ ಸಿಕ್ಕಂತಾಯಿತು.
    ತಮ್ಮ ಈ ಸಾಲು ’ನಂಬದವರು ಕಾರಣಗಳನೂ ನಂಬಲ್ಲ’ ಸರಿಯಾಗಿದೆ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್. ಸಾ.ಕೃ. ರಾಮಚಂದ್ರರಾಯರನ್ನು ಓದಿ. ಖಂಡಿತಾ ನಿಮಗೆ ಇಷ್ಟ ಆಗತ್ತೆ

      Delete
  4. ishtavaayhitu swarna :) maahiti prastuta padisida reeti..... innashtu bareyabahuditteno annisitu. Inn sachinnara blog oduva tavakavide, over to Sachin.....

    ReplyDelete
    Replies
    1. ಹೌದು ಬಿಳಿಮುಗಿಲು, ಇನ್ನೂ ಸ್ವಲ್ಪ ಬರೆಯ ಬೇಕಿದೆ.
      ಧನ್ಯವಾದಗಳು

      Delete
  5. ನನಗೆ ಪುರಾಣಗಳನ್ನು ಇಂದಿಗೂ ಸಾಹಿತ್ಯಿಕ ಆಕರಗಳಂತೆ ಪರಿಭಾವಿಸುವುದರ ಬಗ್ಗೆ ಜಿಜ್ಞಾಸೆ ಇದ್ದೇ ಇತ್ತು! ಅದನ್ನು ಮೀರಿ ಒಂದು ವಿದ್ವತ್ ಪೂರ್ಣ ಲೇಖನವನ್ನು ಓದಿಸಿದ್ದೀರಿ, ಧನ್ಯವಾದಗಳು. ನನ್ನ ಮನಸ್ಥಿತಿಯೂ ಹೀಗೇ ಆಗಿದೆ ಇತ್ತೀಚೆಗೆ, ಯಾವುದೇ ಮಹಾಕಾವ್ಯವನ್ನು ದೇವರ ಕಥೆ ಎನ್ನುವುದಕ್ಕಿಂಥ, ಕಾವ್ಯವೆಂದು ಓದುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಅಲ್ಲಿಗೆ ಅದು ಯಾಕೆ ಹೀಗೆ, ಹೇಗೆ ಹೀಗೆ ಎನ್ನುವ ಜಿಜ್ಞಾಸೆಗಳನ್ನು ಮೀರಿ ಆ ಕಾವ್ಯ ಇರುವುದೇ ಹಾಗೆ ಎನ್ನುವ ಪ್ರಜ್ಞೆ ಕಾವ್ಯವನ್ನು ಆಸ್ವಾಧಿಸಲು ಸಹಕಾರಿ ಎಂಬುದು ನನ್ನ ಅಭಿಮತ.

    - ಪ್ರಸಾದ್.ಡಿ.ವಿ.

    ReplyDelete