Friday, January 13, 2012

ಬುಕ್ ಡಿಪೋದ ಮಾತು

                                                                ಚಿತ್ರ ಕೃಪೆ: ಅಂತರ್ಜಾಲ



ಬಹುಷಃ ಆಗ ನಾನು ೮ನೆ ತರಗತಿಯಲ್ಲಿದ್ದೆ. ವಯಸ್ಸು, ಇಂಗ್ಲಿಷಿನ ಟೀನೇಜಿನ ಮೊದಲ ವರ್ಷವಾಗಿತ್ತೇನೋ.
ಅವ ೯ನೆ ತರಗತಿಯಲ್ಲಿದ್ದ.  ಇನ್ನು ಕೆಲವು ವಿಷಯಗಳನ್ನ ಇಲ್ಲಿ ಕ್ಲಿಯರ್ ಮಾಡುವುದು ಸೂಕ್ತ,
ನಮ್ಮಿಬ್ಬರ ಹಿನ್ನಲೆಗಳು ತುಂಬಾ ಭಿನ್ನವಾಗಿದ್ದವು.  ಅವನದು ಸ್ಥಿತಿವಂತರ ಕುಟುಂಬವಾದರೆ ನನ್ನದು ಮಧ್ಯಮವರ್ಗದ
ಹಿನ್ನಲೆ

ನಮ್ಮ ನಗುವಿನ ಎಕ್ಸ್ಚೆಂಜ್ ಆಗಿ,  ಸ್ವಲ್ಪ ದಿನಕ್ಕೆ  ಪರೀಕ್ಷೆ ಮುಗಿಯಿತು, ಬೇಸಿಗೆ ರಜ ಬಂತು.   ರಜೆಯಲ್ಲೂ ನಾನವನ ಬಗ್ಗೆ ಕನಸುಕಂಡೆನ? ನೆನಪಿಲ್ಲ. ಹರೆಯ ಕಾಲಿಟ್ಟರೂ, ಬಾಲ್ಯ ತನ್ನತ್ತ  ಜಗ್ಗುವ ವಯಸದು. ಆಟ, ಅಜ್ಜಿ ಮನೆ, ಆ ಮನೆ, ಈ ಮನೆಯ ತಿರುಗಾಟದಲ್ಲಿ ನಾನವನನ್ನ ಮರೆತಿರಲಿಕ್ಕೂ ಸಾಕು.

 ಅದೇನೋ ಸ್ಕೂಲಲ್ಲಿ ಹೋಂ ವರ್ಕ್ ಅಂತ ಕೊಟ್ಟಿರುತ್ತಾರೆ ಬೇಸಿಗೆ ರಜೆಯಲ್ಲೂ.ರಜೆ ಮುಗಿದ ಮೇಲೆ ಪಾಸಾದರೆ  ಮುಂದಿನ  ತರಗತಿ.ತೀರ ಫೇಲ್ ಆಗುವಷ್ಟು ಮಟ್ಟದ ಹುಚ್ಚಿರಲಿಲ್ಲ ಆಗ.  ಸೊ ಮುಂದಿನ ತರಗತಿಗೆ ಹೋಗುವುದು ಖಾಯಂ, ಹಾಗಿದ್ದಾಗ ಹಿಂದಿನ ಕ್ಲಾಸಿನ ಟೀಚರ್ ಕೊಟ್ಟ ಹೋಂ  ವರ್ಕ್ ಏಕೆ ಮಾಡ ಬೇಕು? ಎಂಬುದು ಲಾಜಿಕಲ್ ಪ್ರಶ್ನೆ.
ಆಕಾಸ್ಮಾತ್ ಅದೇ ಟೀಚರ್  ಮತ್ತೆ ನಮ್ಮ ಕ್ಲಾಸ್ ಟೀಚರ್ ಆದರೆ ಅಥವಾ ಒಂದು ಸಬ್ಜೆಕ್ಟ್ ತೊಗೊಂಡರೆ, ಹಿಂದಿನ ಹೋಂ ವರ್ಕ್ ನೋಡದಿದ್ದರೂ ಕೇಳುತ್ತಾರೆ. ಮಾಡಿದ್ದೇನೆ ಅನ್ನಲು ಮಾಡಿರಬೇಕಲ್ಲ.  ಸುಳ್ಳು ಸರಾಗವಾಗಿ ಬರದ ವಯಸದು.  ಬದುಕು ತರ್ಕಕ್ಕೆ ಮೀರಿದ್ದು, ಅದರಲ್ಲೂ ಶಾಲೆಯ ಟೀಚರ್ಗಳ ಕಣ್ಣಲ್ಲಿ ಒಳ್ಳೆ ವಿಧ್ಯಾರ್ಥಿ ಅಂತನ್ನಿಸಿಕೊಳ್ಳುವ  ಹಂಬಲ ಎಲ್ಲ ತರ್ಕಕ್ಕೂ ಮಿಗಿಲು . ಹಾಗಾಗಲು ಹಿಂದಿನ ಟೀಚರ್ ಕೊಟ್ಟ ಹೋಂ ವರ್ಕ್ ಮಾಡಲೇ ಬೇಕು. ಹೀಗೆ ಸೈಧ್ಧಾಂತಿಕ  ಮತ್ತು ಲೌಕಿಕ  ಕಾರಣಗಳ ಹುಡುಕಿ ಹೋಂ ವರ್ಕ್ ಮಾಡಲು ಮನಸು ಮಾಡಿದೆ. ತಂಗಿಗೂ ಕಾರಣಗಳ ವಿವರಿಸಿ ಹೋಂ ವರ್ಕ್ ಮಾಡಲು ಮನ ಒಲಿಸಿದೆ. ಅಸಲಿನ ಕಾರಣ, ನಾ ಹೋಂ ವರ್ಕ್ ಮಾಡುವಾಗ ಅವಳೇಕೆ ಸುಖವಾಗಿ ಆಡ ಬೇಕು? ಎಂಬುದಾಗಿತ್ತು. ಅದವಳಿಗೆ ತಿಳಿಯಲಿಲ್ಲ, ಪೆದ್ದಿ ಒಪ್ಪಿಕೊಂಡಳು.

ಇನ್ನೇನು ರಜೆ ಮುಗಿಯುತ್ತ ಬಂದಿತ್ತು.  ಎಲ್ಲೋ ಎಸೆದಿದ್ದ ಪೆನ್ನು ಹುಡುಕಿ, ಹತ್ತಿರವೇ ಇದ್ದ  ದರ್ಶನ್ ಬುಕ್ ಡಿಪೋಗೆ  ಹಾಳೆ, ಪೆನ್ನಿನ ರಿಫಿಲ್  ತರಲು ಹೋದೆ.ಯಾರೋ ಬಂದು  ಸೈಕಲ್ ನಿಲ್ಲಿಸಿದಂತಾಯಿತು. ತಿರುಗಿದರೆ ಅವನೇ!. ಅಂಗಡಿಯವ ನನ್ನ ಪೆನ್ನಿಗೆ ಸರಿಹೊಂದುವ ರಿಫಿಲ್ ಹುಡುಕುತ್ತಿದ್ದ. ನಾ ಸುಮ್ಮನೆ ನಿಂತಿದ್ದೆ. 

"ಏನು  ಹೋಂ ವರ್ಕ್ ಶುರು ಮಾಡ್ತಿದಿಯ?" ಅಂದ, "ಹೌದು, ನಿಂದಾಯ್ತಾ?" ಅಂದೆ , "ಶುರು ಮಾಡ್ಬೇಕು" ಅಂದ.
ಅದೇನೋ ಸ್ಕೂಲಲ್ಲಿ  ಏಕ ವಚನ ಸರಾಗವಾಗಿ ಬಾಯಿಗೆ ಬರತ್ತೆ.  ಅದಷ್ಟೇ ಸಂಭಾಷಣೆ ಅಂದು ನಡೆದದ್ದು.
ಆಮೇಲೆ ನನ್ನ ವ್ಯವಹಾರ ಮುಗಿಸಿ ನಾ ಹೊರಟು ಬಂದೆ. ಅವನೇನು ಮಾಡಿದನೋ ಗೊತ್ತಿಲ್ಲ.

ಮೊದಲ ಬಾರಿ ಅವನ ದನಿ ಕೇಳಿ ಏನನ್ನಿಸಿತು? ಯಾರಿಗೆ ಗೊತ್ತು?  ಮತ್ತೆ ಮತ್ತೆ ಆ ಸಂಭಾಷಣೆಯನ್ನ ಮೆಲುಕು ಹಾಕುವುದರಲ್ಲಿ
ಮುಳುಗಿರುವಾಗ ಮುಂದಿನ ಭಾವಗಳ ಭಾವಿಸಲು ಪುರುಸೊತ್ತು ಯಾರಿಗಿತ್ತು?  ಹಾಂ, ಇದ್ದ ಇನ್ನ್ನು  ಒಂದು ಯೋಚನೆ  ಎಂದರೆ,ಗೆಳತಿಗೆ ಇದನ್ನ ಹೇಳಬೇಕು, ಹೊಟ್ಟೆ ಉರಿಸಬೇಕು."ನೋಡು ನೀ ಅವನಿಗೆ ಎಷ್ಟು ವರ್ಷದಿಂದ ಗೊತ್ತು ಯಾವತ್ತಾರ ಅಂವ  ನಿಂತು ನಿನ್ನ ಮಾತಾಡ್ಸಾನ?" ಅಂತ ಉತ್ತರ ಗೊತ್ತಿದ್ದ ಪ್ರಶ್ನೆ ಕೇಳಬೇಕು.
ಅವನು ನನ್ನ ಮೊದಲ ಪ್ರೀತಿಯೇ ಅಥವಾ ಇಂಗ್ಲಿಷಿನ ಕ್ರಷ್ಷೆ? ತಿಳಿಯದು. ಆದರೆ ಮೊದಲ ಮಧುರ ಭಾವ ಅವನು.

"ಈ ಸಂಭಾಷಣೆ  ಅತಿ ನವ್ಯ , ರಸ ಕಾವ್ಯ".

ವಿ. ಸೂ : ಪ್ರೇಮದ ಅರ್ಥ ತಿಳಿದಿರಲಿಲ್ಲ. ಸೊ ಅದು ಪ್ರೇಮ ಸಂಭಾಷಣೆ ಅಲ್ಲ. ಅದಕೆ ಹಾಡನ್ನ ಕಟ್ ಮಾಡಿದ್ದೇನೆ.
 ಮುಂದುವರಿಯುವುದು ....

10 comments:

  1. ಕಿಶೋರಾವಸ್ಥೆಯ ಆರಂಭದ ಮುಗ್ಧ ಕುತೂಹಲದ ದಿನಗಳಲ್ಲಿ ಇದು ಅನೇಕರ ಅನುಭವ. ನೀವು ಬಯಲು ಮಾಡಿದ ಬಗೆ ಚೆನ್ನಾಗಿದೆ.

    ReplyDelete
  2. ಹದಿಹರೆಯದ ಪ್ರಾರಂಭದ ಮಧುರ ಅನುಭವವನ್ನು ಸೊಗಸಾಗಿ, ಆಪ್ತವಾಗಿ ನಮ್ಮೆದುರಿಗೆ ಬಿಚ್ಚಿಟ್ಟಿದ್ದೀರಿ. ಒಳ್ಳೆಯ ಲೇಖನ.

    ReplyDelete
  3. ಈ ಮುಂದುವರಿಕೆಯಂತೂ ನನ್ನನ್ನು ನನ್ನ ಬಾಲ್ಯಕ್ಕೆ ಎತ್ತೊಯ್ಯಿತು.

    ಅಯ್ಯೋ ಹೋಂ ವರ್ಕ್ ಎಂಬ ಭೂತವೇ!

    ಅದು ಕ್ರಷಾ? ಅಥವ ಎಳವೆ ಪ್ರೀತಿ ಅಕ್ಕರೆಯ? ಪ್ರಶ್ನೆ!!!!

    ReplyDelete
  4. ಪ್ರತಿಕ್ರಯಿಸಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ವಂದನೆಗಳು

    ReplyDelete
  5. ತುಂಬಾ ಚೆನ್ನಾಗಿದೆ..
    ಹೌದು ಬದುಕು ತರ್ಕಕ್ಕೆ ನಿಲುಕದ್ದು,
    ಓದ್ತಾ ನಾನುನೂ ಹಿಂದೆ ತಿರುಗಿದ್ದೆ,ಆ ವಯಸ್ಸಿನಲ್ಲಿ ನನಗಾದದ್ದು ಪ್ರೇಮವೋ ಅಥವಾ ಏನೋ ತಿಳಿಯದು,ನಾನದಕ್ಕೆ 8 ವರ್ಷದಿಂದ ಪ್ರೇಮದ ಅರ್ಥ ಕೊಡುತ್ತ ಬಂದಿದ್ದೇನೆ.
    ನನ್ ಲವ್ಸ್ಟೋರಿ ಓದಿ.

    ReplyDelete
  6. ಧನ್ಯವಾದಗಳು ಮನಸಿನ ಮನೆಯವರಿಗೆ

    ReplyDelete
  7. ಮಧುರ ನೆನಪಿನ ಮೆಲುಕು ಓದಿಸಿಕೊಂಡು ಹೋಗುತ್ತದೆ, ಸೊಗಸಾಗಿದೆ!!!

    ReplyDelete
  8. ಧನ್ಯವಾದಗಳು ಸರ್

    ReplyDelete
  9. No comments.. all who reads might have walked back on their teans.. :) Chennagide ri..

    ReplyDelete