ಚಿತ್ರ ಕೃಪೆ :ಅಂತರ್ಜಾಲ
ಹುಟ್ಟು ಒಂದು ಪವಾಡವೋ ಆಕಸ್ಮಿಕವೋ ನಾನರಿಯೆ
ತಂದೆ ಮಾಡಿದ ಯಜ್ಞದಿಂದ ಬಂದವಳೆಂದು ಜನ ಯಾಜ್ಞಸೇನೆ ಅಂದರು,
ಪಾಂಚಾಲ ದೇಶದವಳೆಂದು ಪಾಂಚಾಲಿ ಎಂದರು,
ಬಣ್ಣ ನೋಡಿ(?) ಕೃಷ್ಣೆ ಎಂದರು
ಆಗಲೂ ನಾ ನಗುತ್ತಲೇ ಇದ್ದೆ
ರಾಜ ಕುಮಾರಿಯ ಬಾಲ್ಯ ಚೆನ್ನಾಗೇ ಇತ್ತು
ಆಮೇಲೆ ನಡೆದದ್ದು ಸ್ವಯಂವರ
ವೀರಾಧಿವೀರನನ್ನೇ ಅಳಿಯನಾಗಿ ಪಡೆಯಬೇಕೆಂಬ ಅಪ್ಪನ ಹಂಬಲ,
ಒಂದು ವಿಚಿತ್ರವೆನಿಸುವ (?) ಪಂದ್ಯ ಏರ್ಪಡುವಂತೆ ಮಾಡಿತ್ತು
ಆಗಲೂ ನಾ ನಗುತ್ತಲೇ ಇದ್ದೆ
ಕರ್ಣ ಬಿಲ್ಲನೆತ್ತ ಹೊರಟಾಗ ಗಾಭರಿಯಾಯಿತ? ಗೊತ್ತಿಲ್ಲ
ಆದರೆ ಅಷ್ಟರಲ್ಲಿ ಯಾರೋ ಅವನ ಕುಲದ ಪ್ರಶ್ನೆ ತೆಗೆದು,
ಅವನನ್ನು ಹಿಂದೆ ಕಳಿಸಿಯಾಗಿತ್ತು
ಇನ್ನುಳಿದವರು ಲೆಕ್ಕಕ್ಕೆ ಬಂದಿದ್ದರು
ಆಗಲೂ ನಾ ನಗುತ್ತಲೇ ಇದ್ದೆ
ಆಮೆಲೆದ್ದವನು ಪಾರ್ಥ
ಬಿಲ್ಲನೆತ್ತಿ , ಹೆಡೆಕಟ್ಟಿ ಬಾಣ ಹೂಡಿದಾಗ,
ನನ್ನ ಮುಖದಲ್ಲೊಂದು ಮಂದಹಾಸ ಮೂಡಿ,
ನಾ ತಲೆ ತಗ್ಗಿಸಿಯಾಗಿತ್ತು
ಆಗಲೂ ನಾ ನಗುತ್ತಲೇ ಇದ್ದೆ
ಮುಂದಿನದೆಲ್ಲ ಇತಿಹಾಸ
ಐವರು ಗಂಡಸರೊಂದಿಗೆ,
ಬದುಕೆಲ್ಲ ನಿಂದನೆ, ಕಣ್ಣೀರಲ್ಲಿ ಕಳೆದ ಅತ್ತೆಯೊಂದಿಗೆ
ಇಲ್ಲದ ರಾಜ್ಯದ ಪಟ್ಟ ಮಹಿಷಿಯಾಗಿ ನಡೆದೆ
ಆಗಲೂ ನಾ ನಗುತ್ತಲೇ ಇದ್ದೆ
ಗೆದ್ದು (?) ತಂದ ಪಾರ್ಥ ಮತ್ತೆ ಯಾರನ್ನೋ ಕರೆತಂದಾಗಲೂ
ಉಳಿದ ಗಂಡಂದಿರೂ ಅವನ ಹಾದಿ ಹಿಡಿದಾಗಲೂ
ದುರುಳನೊಬ್ಬ ಸೀರೆಯ ಸೆಳೆವಾಗಲೂ
ಮತ್ತೆ ಐವರೊಂದಿಗೆ ಕಾಡಿಗೆ ಹೊರಟಾಗಲೂ
ನಾ ನಗುತ್ತಲೇ ಇದ್ದೆ
ಆಮೇಲೆ ನಡೆದ ಕುರುಕ್ಷೇತ್ರದಲ್ಲಿ
ಹದಿನೆಂಟು ದಿನಗಳ ಘೋರ ನರಕ
ಗೀತೆಯ ತಂಪಿಗೂ,ಅದ್ದನ್ನಾರಿಸುವ ಶಕ್ತಿ ಇರಲಿಲ್ಲವೇನೋ
ಆಶ್ಚರ್ಯವಾಗಬಹುದು ಲೋಕಕ್ಕೆ, ಆದರೆ
ಆಗಲೂ ನಾ ನಗುತ್ತಲೇ ಇದ್ದೆ
ಈಗ ಹೇಳುವೆ ಕೇಳಿ ನನ್ನ ನಗುವಿನ ರಹಸ್ಯ,
ಅವನೇ,ನನ್ನನ್ನು ತನ್ನ ತಂಗಿ ಎಂದು ಬಗೆದ ಆ ಸ್ವಯಂಭು !
ಐವರೊಂದಿಗೆ ಹಸೆಮಣೆ ಏರಿದಾಗ ಬಂದ,
ಸವತಿಯರಿಗೆ ತುಂಬು ಹೃದಯದಿಂದ ಆಶಿರ್ವದಿಸುವಾಗ ನನ್ನೊಡನಿದ್ದ,
ರಾಜ್ಯ ಹೋದಾಗ ಬಂದ,
ಮಕ್ಕಳು ಇನ್ನಿಲ್ಲವಾದಾಗ ಬಂದ
ಆ ಅನುತ್ತಮನೆ ನನ್ನೊಟ್ಟಿಗಿದ್ದಾಗ ನಾ ನಗದೆ ಹೇಗೆ ಇರಲಿ?
ಅವ ಬಂದು ಕಾಯ್ವಾಗ ಒಮ್ಮೆ ಏನು, ಬಾರಿ ಬಾರಿ ದುರುಳರೆನ್ನ ಸಭೆಯಲ್ಲಿ ನಿಲ್ಲಿಸಲಿ.
ಆದರೊಂದೇ ಪ್ರಾರ್ಥನೆ ಅಣ್ಣಾ,
ದೇಹಕ್ಕೊಂದು ಮರೆ ಕೊಟ್ಟು
ಆತ್ಮದ ಮರೆಯ ಸರಿಸಿ
ನಿನ್ನಳೊಂದಾಗುವಂತೆ ಹರಸು
ದ್ರೌಪದಿಯ ಅಳಲನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ಕೊನೆಗೆ ಅವಳು ಕೃಷ್ಣನ ಮೇಲಿನ ತನ್ನ ವಿಶ್ವಾಸವನ್ನು ಸೂಚಿಸುವ ಬಗೆ ಕಣ್ಣಲ್ಲಿ ನೀರು ತರಿಸುವಂತಿದೆ. ಅಭಿನಂದನೆಗಳು.
ReplyDeleteಏನ್ ಹೇಳ್ಲಿ ಸರ್ ..?
ReplyDeleteಅವಳ ಅಳಲೇ ಅಂಥದೇನೂ ?
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಪಾಂಚಾಲಿಯ ಬ್ಗೆಗೆ ನಾನು ಈವರೆಗೆ ಓದಿದ ಕವನ, ಬರಹಗಳಲ್ಲಿ ಇದು ಅತ್ಯುತ್ತಮ ಮೇಡಂ.
ReplyDeleteದ್ವಾಪರ ಯುಗದ ಇಂತಹ ಹಲ ಪಾತ್ರಗಳಿಗೆ ಅರ್ಥವೇ ಇಲ್ಲ ಅನಿಸಿ ಬಿಡುತ್ತದೆ.
ದ್ರೌಪದಿಯ ಮನದ ತೊಳಲಾಟವನ್ನು ಇಲ್ಲಿ ನೀವು ಬಿಡಿಸಿಟ್ಟ ಪರಿ ಅವರ್ಣನೀಯ.
Facebook Profile : Badarinath Palavalli
ತಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದ ಬದರಿ ಸರ್.
ReplyDeleteನಿಮ್ಮ ಕವಿತೆಯಲ್ಲಿ ಪರಿಪೂರ್ಣತೆ ಕಂಡಿತು., ಬದುಕೊಂದು ವೃತ್ತವೆಂಬುದನ್ನು ನಾ ನಿಮ್ಮ ಕವಿತೆ ಮತ್ತೊಮ್ಮೆ ಸಾಭೀತು ಮಾಡಿದೆ., ರಾಜಕುಮಾರಿಯಾದ ದ್ರೌಪದಿ., ನಂತರ ತುಂಬಿದ ಸಭೆಯಲ್ಲಿ ಅವಮನಿತಳಾಗಿ., ಯಾರದೋ ಸೋಲಿಗೆ ತಾನು ವಮವಾಸ ಅನುಭವಿಸಿದ್ದು., ಮತ್ತೆ ಎಲ್ಲವೂ ಮುಗಿದ ನಂತರ ಸಂತಸವನ್ನು ಕಂಡದ್ದು., ಚಿನ್ಮಯನನ್ನು ನಂಬಿದರೆ ಎಲ್ಲವೂ ಒಳಿತಾಗುತ್ತದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ., ಅಭಿನಂದನೆಗಳು ಮಾನ್ಯರೇ..
ReplyDelete