ನಾಗಾಭರಣ ಅವರು
ದೂರದರ್ಶನಕ್ಕಾಗಿ ಕೆಲವು ಹಾಡುಗಳನ್ನು ದೃಶ್ಯ ಮಾದ್ಯಮಕ್ಕಿಳಿಸಿದಾಗ ಬಹುಶಃ ಮೊದಲ ಬಾರಿ ಮೈಸೂರು
ಮಲ್ಲಿಗೆಯ ಹಾಡುಗಳನ್ನು ಕೇಳಿದ್ದು. ಹಾಡಿನ
ಮೊದಲು ಬರುವ ನಿರೂಪಕಿಯ ಮಾತು ಅರ್ಥವಾಗುತ್ತಿರಲಿಲ್ಲ. ಶಾಲೆಗೆ ಹೋಗಿರದ ಅಜ್ಜಿ ಕೂಡ ‘ಶಾನುಭೋಗರ ಮಗಳು ತಾಯಿ ಇಲ್ಲದ ಹುಡುಗಿ ...’ ಅಂತ ಹಾಡೋದು ಕೇಳಿ ಬಹುತೇಕರಂತೆ ನಾನೂ ಕೂಡ ಇವು ಜಾನಪದ
ಗೀತೆಗಳು ಅಂತಲೇ ಅಂದುಕೊಂಡಿದ್ದೆ. ನಂತರ
ಕೇಳಿದ್ದು ‘ಮೊದಲ ದಿನ ಮೌನ ...’
. ಅಳುವೇ ತುಟಿಗೆ ಬಂದಂತೆ ..’
ಅನ್ನೋದನ್ನ ಕೇಳಿ ಅಳು
ತುಟಿಗೆ ಬರೋದು ಎಂದರೇನು ? ಎಂಬ ಪ್ರಶ್ನೆ
ಎದುರಾಗಿ ಮುಂದಿನ ಹಾಡು ಅರ್ಥವಾಗಿರಲಿಲ್ಲ .
ಮಲ್ಲಿಗೆ ಮಾಲೆ ತಂದ
ಕೂಡಲೇ ಹುಡುಕಿದ ಮೊದಲ ಹಾಡು ಇದೇ. ಕವಿತೆಯ ಹೆಸರು ಗೊತ್ತಿಲ್ಲದೇ ಮಲ್ಲಿಗೆಯ ಮಾಲೆಯಲ್ಲಿ ಈ ಹಾಡು ಹುಡುಕಲು ಸ್ವಲ್ಪ ಸಮಯ
ಬೇಕಾಯಿತು. ‘ಮನೆಗೆ ಬಂದ ಹೆಣ್ಣು
‘ ಎಂಬ ಕವಿತೆ
ಪ್ರಕಟವಾಗಿರುವುದು ‘ಉಂಗುರ’ ಕವನ ಸಂಕಲನದಲ್ಲಿ
ಬದುಕಿನ
ವಿವಿಧ ಘಟ್ಟಗಳಲ್ಲಿ , ಬೇರೆ ಬೇರೆ ರೀತಿಯಲ್ಲಿ ಹಾಡುಗಳು ನಮ್ಮದಾಗುತ್ತವೆ.
ಹಾಗೇ ‘ಮೊದಲ ದಿನ ಮೌನ..’ ಕೂಡ. ಇದು
ಸೀತೆಯ ದುಃಖ, ಅಹಲ್ಯೆಯ ಶಾಪ ,
ರಾಧೆಯ ಚಿರವಿರಹ, ಊರ್ಮಿಳೆಯ ತಪಸ್ಸಿನ ಹಾಡಲ್ಲ, ಹೆಣ್ಣೊಬ್ಬಳು ಮಾತ್ರವೇ ಅನುಭವಿಸಬಹುದಾದ ಒಂದು ಕಾಲ
ಘಟ್ಟ . ಪ್ರೇಮಿಸಿ ವರಿಸಿದ್ದೋ ಅಥವಾ ಹಿರಿಯರು
ನಿಶ್ಚಯಿಸಿ ನಡೆದ ಮದುವೆಯೋ ಅಂತೂ ಹೆಣ್ಣಿಗೆ ಅವನ ಮನೆಗೆ ಹೋಗುವುದು ತಪ್ಪಿದ್ದಲ್ಲ. ಅಲ್ಲಿ
ಅವಳ ಪಾಡೇನು ? ಇದು ನನ್ನ ಮನೆ, ಮನೆಯಂಗಳದ ರಂಗೋಲಿಯಿಂದ ಹಿತ್ತಲಿನ
ತುಳಸಿಕಟ್ಟೆಯವರೆಗೆ ಇಲ್ಲೆಲ್ಲವೂ ನನ್ನದು ಎಂದು
ಕಣ್ಣಲ್ಲೇ ಅಪ್ಪಣೆ ಕೊಡುವ ಅತ್ತೆ , ಇದು ನಾವು ಹುಟ್ಟಿದ
ಮನೆ ಆದ್ದರಿಂದ ಮೊದಲ ಮಣೆ ನಮಗೆ ಎಂದು ನೇರ
ಮಾತಿನಲ್ಲೇ ಸಾರುವ ಅತ್ತಿಗೆ ನಾದಿನಿಯರು ,
ಮನೆಯ ವ್ಯವಹಾರ ನಮ್ಮದಲ್ಲ
ಎನ್ನುವ ಗಂಡಸರು ! ಎಲ್ಲಿಗೆ ಬಂದೆ ನಾ ಎಂಬ
ಗೋಜಲು ಗೂಡಿನಲ್ಲಿರುವ ಮದುವಣಗಿತ್ತಿ. ಅವಳಿಗೂ ಹಾಡಿದೆ ಎಂದರಿತ ಕವಿಗೆ ವಂದನೆಗಳು.
ಹೊಸ್ತಿಲಿನ ಮೇಲಿನ
ಅಕ್ಕಿಯನ್ನು ಚಿಮ್ಮಿಸಿ ಮನೆಯೊಳಕ್ಕೆ ಕಾಲಿಡುವವರೆಗೂ ಜೊತೆಗಿದ್ದವರಾರೂ ಹೊಸ್ತಿಲಿನಿಂದಿಚೀಗೆ
ಬಂದಿಲ್ಲ. ಬೆಸೆದ ಬೆರಳುಗಳು ಬೇರೆಯಾಗಿ ರಾಯರದ್ದು ಪಡಸಾಲೆಯ ಲೋಕವಾದರೆ ಇವಳಿನ್ನು ಒಂದು ಹೆಜ್ಜೆ
ಮುಂದೆ ಅಡುಗೆ ಮನೆಯ ಕಡೆ ನಡೆಯಬೇಕು . ತುಟಿಯ ಮೇಲಿನ ಮಾತುಗಳು ಮರೆತು ಕಂಬನಿ ತುಟಿಗೆ
ಬಂದಂತಿದೆ. ಮದುವೆ ಮನೆಯ ಗೌಜಿಯಲ್ಲೂ ಅವಳಲ್ಲೊಂದು ತೀರದ ಮೌನ. ಕ್ಷಣಕ್ಕೊಂದು ಹೊಸಚಿಂತೆಯ ಬಿಡಿ
ಹೂ ಮನದಲ್ಲಿ. ಮಾಲೆಯಲ್ಲಿ ಒಂದೇ ರೀತಿಯ ಹೂಗಳು , ಅವಕ್ಕೊಂದು ಬಿಗಿ ಕಟ್ಟು ಆದರಿಲ್ಲಿ ಅಂಕೆಗೆ ಸಿಗದೆ ಎಲ್ಲೆಲ್ಲೂ ಹರಡುವ ಆದರೆ
ನಿರ್ಲಕ್ಷಿಸಲಾರದ ಬಿಡಿ ಹೂಗಳು. ಈ ಮನೆಯ ‘ಒಳ’ ಪ್ರವೇಶಿಸಲು ,ಸೊಡರ ತುದಿಯಂತೆ
ಕೆಂಪಾದ ಕಣ್ಣು ಹಾಯಿಸಿ ದೀಪ ಹುಡುಕುತ್ತಾಳೆ
. ತವರಿನ ಜಾತ್ರೆ ಮುಗಿದಿದೆ , ಇಲ್ಲಿನ ಜಾತ್ರೆ ಇನ್ನೂ ತನ್ನದಾಗಿಲ್ಲ . ಅದೆಷ್ಟು
ಭಾವಗಳು ಕಾಡುತ್ತಿವೆ ಅವಳನ್ನು ?
ಮೊದಲ ರಾತ್ರಿ
ಕಳೆದು , ರಂಗೋಲಿ ಇಡುವ
ನೆಪದಲ್ಲಿ ಅಂಗಳ , ನೀರೆರೆವ ನೆಪದಲ್ಲಿ
ತುಳಸಿ ಇಬ್ಬರೂ ಒಂದಷ್ಟು ಹತ್ತಿರವಾಗಿದ್ದಾರೆ. ಮೂಗುತಿಯ ಮಿಂಚು ಅವಳೊಳಗೂ ಹೊರಗೂ ... ‘ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು ..’ ಈ ಸಾಲಿಗೆ ಆಹಾ ...
ಅನ್ನದೇ ಬೇರೇನೂ ಹೇಳಲಾಗದು . ವಿಜ್ಞಾನದ ಹಾದಿಯಲ್ಲಿ
ನಡೆದರೆ ಇಷ್ಟು ಡೆಸಿಬಲ್ಗಿಂತ ಕಡಿಮೆ
ಶಕ್ತಿಯ ಶಬ್ದ ನೀರಿನಲ್ಲಿ ಕೇಳಿಸದು ಎಂಬ ತೀರ್ಮಾನಕ್ಕೆ ಬರಬಹುದು. ಆದರೆ ಮನಸ್ಸಿನ ಸುಂದರ
ಲೋಕದಲ್ಲಿ ಮೌನಕ್ಕೂ ಮಾತಿದೆ , ಮಿಡಿತವಿದೆ.
ಅವಳು ಆಗೀಗ ‘ನೀರೊಳಗೆ ವೀಣೆ ಮಿಡಿದಂತೆ..’ ಅಷ್ಟಿಷ್ಟು ಮಾತನಾಡುತ್ತಿದ್ದಾಳೆ , ಮಿಡಿತ ಯಾರಿಗೆ ಕೇಳುತ್ತಿದೆ ? ‘ಬೇಲಿಯಲಿ ಹಾವು ಹರಿದಂತೆ ‘ ಈ ಸಾಲಿನ ಬಗ್ಗೆ ಹೇಳುವುದೇನಿದೆ ?. ಬೇಲಿಯಲ್ಲಿ
ಹರಿದಾಡುವ ಹಾವು ಅಷ್ಟು ಸುಲಭಕ್ಕೆ ಕಣ್ಣಿಗೆ ಬೀಳದು , ಅದರ ಹೆಜ್ಜೆಯ ಜಾಡು ಹಿಡಿವುದೂ ಕಷ್ಟ ಅಂತೆಯೇ ಹೊಸ ಮನೆಯ ಗೋಡೆಗಳಲ್ಲಿ ತನ್ನ ಬಿಂಬ ಹುಡುಕುತ್ತಿರುವ
ಅವಳ ಮನಸನರಿವುದು .
ಮೂರನೆಯ ಹಗಲಿನ ಹೊತ್ತಿಗೆ ಬಿಡಿ ಹೂವುಗಳು ‘ದಂಡೆ’ಯಾಗಿದೆ. ಹೇರಳನೇರಿ ಅವಳನಲಂಕರಿಸಿದೆ. ‘ಚಿಂತೆ ಬಿಡಿ ಹೂವ ಮುಡಿದಂತೆ ‘ ಎಂದ ಕವಿ ಎರಡು ಹಗಲು ಕಳೆದ ನಂತರ ‘ಹೆರಳಿನ ತುಂಬ ದಂಡೆ ಹೂ , ಹೂವಿಗೂ ಜೀವ ಬಂದಂತೆ ‘ ಎಂದು ದೃಶ್ಯ ಕಾವ್ಯವನ್ನು ಸಂಪೂರ್ಣ ಮಾಡುತ್ತಾರೆ
. ಈ ಹೊತ್ತಿಗಾಗಲೇ ಅವಳಿಗೆ ಮನೆಯ ಯಾವುದೋ ಮೂಲೆ , ಯಾವುದೋ ಗೂಡು ತನ್ನದೆನಿಸತೊಡಗಿದೆ . ನವದಂಪತಿಗಳು ಕಾಯುವ ಸಂಜೆ ಇಳಿದು ರಾತ್ರಿಯ ಹಾಲು
ಸುರಿವ ಸಮಯವನ್ನು ಕೊನೆಯ ಎರಡು ಸಾಲುಗಳಲ್ಲಿ ಕವಿ ಸುಂದರವಾಗಿ ಕಟ್ಟಿಕೊಡುತ್ತಾರೆ. ಈ ಕವಿತೆ
ಬರೆವ ಕಾಲದಲ್ಲಿ ಅಷ್ಟೇಕೆ ಈಗ್ಗೆ ಒಂದೆರಡು ದಶಕಗಳ ಹಿಂದಿನವರೆಗೂ ಗಂಡಹೆಂಡಿರಿಗೆ ಏಕಾಂತ
ದೊರೆಯುತ್ತಿದ್ದುದೇ ಚಂದ್ರ ರೋಹಿಣಿಯರ ಸನ್ನಿಧಿಯಲ್ಲಿ
ಪ್ರತೀ ಸಾಲಿಗೂ
ಒಂದು ಚಿತ್ರವನ್ನೇ ಕಣ್ಣ ಮುಂದೆ ರಚಿಸುವ ಕವಿತೆಗಳು ಯಾರಿಗೆ ತಾನೇ ಇಷ್ಟವಾಗವು ? ಹೂಬುಟ್ಟಿಯಲ್ಲಿ
ಬಳೆಗಾರನ ಹಾಡಿನ ಬಗ್ಗೆ ಬರೆಯುತ್ತಾ, ಇವರ ಹಾಡಿನಲ್ಲೇ ಕಥೆ ಹೆಣೆದು ಧಾರಾವಾಹಿಯೊಂದಕ್ಕೆ ಒಂದೈವತ್ತು ಎಪಿಸೋಡು ಮಾಡಬಹುದು ಎನ್ನುವ
ಕುಸುಮಬಾಲೆಯ ಮಾತು ಜ್ಞಾಪಕ ಆಯ್ತು .
ಬಿರುಬಾನಿಗೆ
ಹುಣ್ಣಿಮೆ ಹರಿಯುತ್ತಲೇ ಇದೆ. ಗಂಡನ ಮನೆಗೆ
ಕಾಲಿಟ್ಟ ಮದುವಣಗಿತ್ತಿ ನರಸಿಂಹ ಸ್ವಾಮಿಗಳ
ಹಾಡನ್ನು ಹಾಡುತ್ತಲೇ ಇದ್ದಾಳೆ.
ಮೊದಲ ದಿನ ಮೌನದಿಂದ
ಮೂಡಿದ ಸಾಲುಗಳು :
ಉಕ್ಕುವ ನದಿಗೆ
ರೆಪ್ಪೆ ಕಾವಲು
ಉಪನದಿಗಳು ಕಾದಿವೆ
ಸುತ್ತ ಮುತ್ತಲೂ
ಕಾಡಿಗೆ ಕಂಗಳ
ನೆನೆದು ಅಮ್ಮ
ಕುಸಿದು
ಕೂರುತ್ತಾಳೆ
ಅಪ್ಪನಿಗೆ ಅದೂ
ಸಾಧ್ಯವಿಲ್ಲ !
ಈ ಮನೆಯ ಗೇಟು
ಅಬ್ಬಾ ! ಅದೆಷ್ಟು
ಸದ್ದು ಮಾಡತ್ತೆ
ಕಾಣೆಯಾಯಿತೇ
ತೆರೆದ ಬಾಗಿಲಿನ
ಆ ಮನೆಯ ಹಾದಿ ?
ಅಂಗಳದ ಪಾರಿಜಾತ
ಕಂಡದ್ದೇ ,
ಮೂಡಿದೆ
ಮೊಗದಲ್ಲೊಂದು
ಮಂದಹಾಸ
ಗೇಟೊಳಗಿನ
ಪಾರಿಜಾತದ
ಜಗಲಿಯಿಂದ
ಈ ಮನೆಯ ಒಳಕ್ಕೆ ,
ಆ ತೆರೆದ ಬಾಗಿಲಿನ
ಮನೆಗೆ , ಸೇತುವೆಯೊಂದ
ಕಟ್ಟಲನುವಾಗಿ ಅವಳು
ಸೆರಗ ಕಟ್ಟಿದಳು .
ಮೊದಲ ದಿನ ಮೌನ
ಹಾಡನ್ನು ಕೆಳಗಿನ ಕೊಂಡಿಯಲ್ಲಿ ಕೇಳಬಹುದು
https://www.youtube.com/watch?v=mgyZ17EXXA8
ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ.
ಸ್ವರ್ಣಾ,
ReplyDelete‘ಮೊದಲ ದಿನ ಮೌನ’ ಕವನಕ್ಕೆ ತುಂಬ ಸುಂದರವಾದ ವ್ಯಾಖ್ಯಾನ ಬರೆದಿದ್ದೀರಿ. ಅಭಿನಂದನೆಗಳು. ಈ ಕವನದಿಂದ ಮೂಡಿದ ಸಾಲುಗಳೂ ಸಹ ಮೂಲಕವನದಷ್ಟೇ ಸುಂದರವಾಗಿವೆ. ಅದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು!
ಧನ್ಯವಾದಗಳು ಕಾಕಾ
Deleteತಾವು ಉಲ್ಲೇಖಿಸಿದ ದೂರದರ್ಶನ ಕಾರ್ಯಕ್ರಮಕ್ಕೆ ದಿ. ಬಿ.ಸಿ. ಗೌರೀಶಂಕರ್ ಅವರ ಛಾಯಾಗ್ರಹಣವಿತ್ತು.
ReplyDeleteಕೆ.ಎಸ್.ನ ಅವರ ಸಾದೃಶ್ಯ ಕವಿತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರ.
ಮಲ್ಲಿಗೆ ಕವಿಯ ಸಾಲುಗಳು ಅತ್ತೆ ಮನೆಯ ಮೊದಲ ದಿನವನ್ನು ಚಿತ್ರಿಸಿಕೊಟ್ಟರೆ, ತಮ್ಮ ಕವನವು ತೌರುಮನೆಯ ಆಗಿನ ಸ್ಥಿತಿಯ ಅನಾವರಣ ಮಾಡುವಂತಿದೆ.
ಥ್ಯಾಂಕ್ಸ್ ಬದರಿ ಸರ್ , ಕಾಕಾ ಮತ್ತು ತಮ್ಮ ಪ್ರೋತ್ಸಾಹದಿಂದ ಈ ಬ್ಲಾಗ್ ಮುನ್ನಡೆಯುತ್ತಿದೆ
Delete