Thursday, January 10, 2013

ಏನೆಂದು ಹಾಡಲಿ ?

ಚಿತ್ರಕೃಪೆ : ಅಂತರ್ಜಾಲ

 
ಇಂದು ಬಲು ಸುಂದರವಾದ  ಒಂದು ಕವಿತೆ ಓದಿದೆ.
ಮತ್ತೆ ಹುಟ್ಟು ಹಿಡಿದು ಹಾಯಿದೋಣಿ ಏರಿದೆ
ಹೂವು, ದುಂಬಿ, ಅವನು, ನಾನು
ಇವನ್ನು  ಮೀರಿದ ಜಗತ್ತಿಲ್ಲವೇನು ?

ಆಗುಹೋಗು, ನಿತ್ಯದ ಕಾಯಕಗಳ
ಹಿಡಿದು ಅಕ್ಕರಗಳಲಿ ಬಂಧಿಸುವ ಕಲೆ ಒಲಿದಿಲ್ಲ
ಕಂಬನಿಯ ಆಳಕ್ಕಿಳಿದು, ಮೌನ ಮುರಿದು
ನೋಡಿದರೆ  ನನ್ನ ಸರಕೆಲ್ಲ   ಬರಿದು

 ಇತಿಹಾಸ, ಪುರಾಣಗಳನೆಲ್ಲ ಜಾಲಾಡಿ
ಅರ್ಥೈಸಿ ಉಸುರುವಷ್ಟು ಜ್ಞಾನ ಲಬ್ಧವಿಲ್ಲ
ಜಗಹೃದಯನನ್ನ ಧ್ಯಾನಿಸಿ , ಒಲಿಸಲು
ಇನ್ನೆಷ್ಟಾಯು  ಬೇಕು  ಅಷ್ಟು ಮಾಡಲು  ?

ಕಂಬಗಳ ಮಧ್ಯದ ದಾರದ ಮೇಲೆ
ದೊಂಬರ  ಹುಡುಗಿಯ ಯಾಂತ್ರಿಕ  ನಡೆ 
ತಾನು ಬೀಳದಂತೆ , ಆಯ  ತಪ್ಪದಂತೆ
ನಡೆವ ಕಸರತ್ತು, ಬರೆಯಲಿನ್ನೇನುಳಿಯಿತು ?

14 comments:

  1. ಏನೆಂದು ಹಾಡಲಿ ಎಂದೇ ಎಲ್ಲ ವಿಷಯಗಳನ್ನು ಹೊರಹಾಕಿರುವ ನಿಮ್ಮ ಬರವಣಿಗೆಯ ಗಮ್ಮತ್ತು ಸೊಗಸಾಗಿದೆ..ಅಟ್ಟಕ್ಕೆ ಹಾರಲು ಆಗದೆ ಬೆಟ್ಟಕ್ಕೆ ಹಾರಲು ಬಯಸುವ ಮಾನವ ಜೀವನ ದೊಂಬರಾಟದಲ್ಲೇ ಕಳೆಯುತ್ತೆ ಎನ್ನುವ ಮಾತು ನಿಜ ಅನ್ನಿಸುತ್ತದೆ...ಸೊಗಸಾಗಿದೆ ಪದಗಳ ಹಾಯಿ ದೋಣಿ...

    ReplyDelete
    Replies
    1. ಧನ್ಯವಾದ ತಮ್ಮ ಸೊಗಸಾದ ಪ್ರತಿಕ್ರಿಯೆಗೆ

      Delete
  2. ಇನ್ನೇನು ಬರೆಯಲು ಬೇಕು?
    ಕೆಲವೊಮ್ಮೆ ಪಕ್ವಾನ್ನ,
    ಕೆಲವೊಮ್ಮೆ ಉಪ್ಪಿನಕಾಯಿ,
    ನನಗೆ ಇಷ್ಟೇ ಸಾಕು!

    ReplyDelete
    Replies
    1. ಕಾಕಾ, ಹೀಗೆ ಬಡಿಸುತ್ತಿರೆಂಬ ಹಾರೈಕೆ ಇರಲಿ.
      ಧನ್ಯವಾದಗಳು

      Delete
  3. ಕವಿಯ ನೋಟ ಕಿರಿದಾದಾಗ ೋದುಗನಿಗೆ ಲಭ್ಯವಾಗುವುದೇ ಗುಲಗಂಜೀ. ಅದೇ ಪ್ರಿಯೇ, ಅದೇ ಮುರಿದ ಹೃದಯ ಅವೇ ಬೀಳದ ಕನಸುಗಳು ಮತ್ತು ತನ್ನದಲ್ಲದ ಮನಸಿನ ಕವನಗಳು. ಒಳ ಕಣ್ಣು ತೆರೆದರೆ ತಾನೇ ಶಿವನನು ಕಾಣುವುದು ಎನುವಂತೆ ಕವಿಯ ಗ್ರಹಿಕೆಯು ವಿಸ್ತಾರವಾಗಬೇಕು.

    ಒರೆದಂತೆ ಬರೆಯುವ ಕವಿಗಳಿಗಿದು ಕಿವಿ ಹಿಂಡು ಕವನ.

    ಅಂದ ಹಾಗೆ ನೀವೇ ಉಲಿದಂತೆ:
    "ಕಂಬಗಳ ಮಧ್ಯದ ದಾರದ ಮೇಲೆ
    ದೊಂಬರ ಹುಡುಗಿಯ ಯಾಂತ್ರಿಕ ನಡೆ
    ತಾನು ಬೀಳದಂತೆ , ಆಯ ತಪ್ಪದಂತೆ
    ನಡೆವ ಕಸರತ್ತು, ಬರೆಯಲಿನ್ನೇನುಳಿಯಿತು ? "

    ಅದೇ ಕಾವ್ಯ....

    ReplyDelete
    Replies
    1. ಹೌದು ಬದರಿ ಸರ್, ಕವಿಯ ನೋಟ ವಿಶಾಲವಾಗಿರಬೇಕು, ಅದನ್ನ ನೀವು
      ಚೆನ್ನಾಗಿ ಬಲ್ಲಿರಿ. ಧನ್ಯವಾದಗಳು

      Delete
  4. ಚೆನಾಗಿತ್ತು ಮೇಡಮ್..
    "ಕಂಬಗಳ ಮಧ್ಯದ ದಾರದ ಮೇಲೆ
    ದೊಂಬರ ಹುಡುಗಿಯ ಯಾಂತ್ರಿಕ ನಡೆ "
    ಎಂಬ ಸಾಲುಗಳು ಬಹಳ ಇಷ್ಟವಾಯ್ತು..
    ಅದಕ್ಕೆ ಅರ್ಥಕೊಡುವ ಚಿತ್ರ ಬೇರೆ...
    ಬರೆಯುತ್ತಿರಿ :)..
    ನಮಸ್ತೆ :)

    ReplyDelete
    Replies
    1. ಧನ್ಯವಾದಗಳು ಚಿನ್ಮಯ್

      Delete
  5. ಒಬ್ಬ ಕವಿಯ ಕವನಗಳನ್ನು ಓದಿದಾಗ ಕವಿಯ ಮನಸ್ಸಿನಲ್ಲಿಯ
    ಭಾವಗಳೇ ನಮಗೆ ಗೋಚರಿಸುತ್ತದೆಂದಲ್ಲಾ....
    ಆದರೆ ಆ ಸಾಲುಗಳನ್ನು ಓದುವಾಗ ನಮ್ಮ ಮನಸ್ಸಿನಲ್ಲಿ
    ಮತ್ತೆ ಹತ್ತು ಹೊಸ ಸಾಲುಗಳು ಹೊಸ ಹೊಸ ಕಲ್ಪನೆಗಳು
    ಉದ್ಭವಿಸುತ್ತದಲ್ಲಾ...
    ಅದೊಂದು ಗಾಣದ ಬಗೆ....
    ಅರೆ ಅರೆದಂತೆ ರಸ......
    ಸೊಗಸಾಗಿದೆ.....

    ReplyDelete
    Replies
    1. ನೀವು ಹೇಳಿದ್ದು ಸರಿ, ಧನ್ಯವಾದಗಳು

      Delete
  6. ಸ್ವರ್ಣಕ್ಕ,
    ಕಂಬಗಳ ಮಧ್ಯದ ದಾರದ ಮೇಲೆ
    ದೊಂಬರ ಹುಡುಗಿಯ ಯಾಂತ್ರಿಕ ನಡೆ
    ತಾನು ಬೀಳದಂತೆ , ಆಯ ತಪ್ಪದಂತೆ
    ನಡೆವ ಕಸರತ್ತು, ಬರೆಯಲಿನ್ನೇನುಳಿಯಿತು ?
    ಬಹು ಚೆಂದದ ಸಾಲುಗಳು....ಸೂಕ್ತವಾದ ಚಿತ್ರ...
    ಏನೆಂದು ಹಾಡಲಿ ಎನ್ನುತ್ತಲೇ ಎಲ್ಲವನ್ನು ಹಾಡಿ ಮುಗಿಸಿದ್ದೀರಿ.ಒಂದೊಳ್ಳೆ ಕವನ ಓದಿ ಖುಷಿಯಾಯ್ತು.ಅಭಿನಂದನೆಗಳು.:-)

    ReplyDelete
  7. ಸ್ವರ್ಣಾ ನನ್ನದೂ ಬಹಳ ದಿನಗಳ ನಂತರ ನಿಮ್ಮಲ್ಲಿಗೆ ಭೇಟಿ...ಕ್ಷಮೆಯಿರಲಿ. ಜೀವನದ ಸೂಕ್ಷ್ಮಗಳ ತೆಳುಹಗ್ಗದ ಮೇಲಿನ ನಡೆ..ಚನ್ನಾಗಿ ಮೂಡಿದೆ ಕವನದಲ್ಲಿ

    ReplyDelete
    Replies
    1. ಧನ್ಯವಾದಗಳು ಸರ್
      ಅರೆರೆ ಕ್ಷಮೆ ಅನ್ನೋದು ದೊಡ್ಡ ಮಾತು, ನಿಮಗಿರುವ ಧಾವಂತದಲ್ಲಿ ನೀವುಗಳು ಕಾಮೆಂಟ್ ಮಾಡುತ್ತಿರೆಂಬುದೇ ಖುಷಿ

      Delete