ಅದ್ಭುತ ಓದುಗರಾದ ಸಂಬಧಿಯೋಬ್ಬರ ಮನೆಗೆ ಹೋಗಿದ್ದೆ . ಪುಸ್ತಕಗಳ ಕಪಾಟಿನಲ್ಲಿ ಕೈ ಹಾಕಿದ ಕೂಡಲೇ
ಸಿಕ್ಕಿದ್ದು ' ಕನ್ನಡದ ಪ್ರಥಮ ಮನೋವೈಜ್ಞಾನಿಕ ಕಾದಂಬರಿ' ಎನ್ನುವ ಅಡಿ ಬರಹವಿದ್ದ 'ಅಂತರಂಗ' ವೆನ್ನುವ ಪುಸ್ತಕ .
ಲೇಖಕರು ದೇವುಡು. ಮಹಾತ್ರಯಗಳನ್ನು ಬರೆದ ಅದೇ ದೇವುಡು ನರಸಿಂಹ ಶಾಸ್ತ್ರಿಗಳು . ನನ್ನ ಸಂಬಧಿ ಚೆನ್ನಾಗಿದೆ ಪುಸ್ತಕ
ನಾನೂ ಬಹಳ ಹಿಂದೆ ಓದಿದ್ದು ಅಂದರು. ಅವರನ್ನ ಕೇಳಿ ಪುಸ್ತಕ ಮನೆಗೆ ತಂದೆ.
ಕಾದಂಬರಿಯ ಪ್ರಥಮ ಮುದ್ರಣ 1930ರಲ್ಲಿ , ನಾನು ಓದಿದ್ದು 1981ರಲ್ಲಿ ಪ್ರಕಟವಾದ ನಾಲ್ಕನೇ ಮುದ್ರಣ. ಅಧ್ಯಯನ ಅಧ್ಯಾಪನ ನಿರತ ಬ್ರಾಹ್ಮಣ ಭಟ್ಟರ ಅಂತರಂಗದ ತುಮುಲಗಳು ಕಾದಂಬರಿಯ ವಸ್ತು. ಭಟ್ಟರದು ಸುಖೀ ಸಂಸಾರ, ಮನವರಿತು ನಡೆವ ಮಡದಿ ಪಾತಮ್ಮ, ನಾಲ್ಕಾರು ಮಕ್ಕಳೊಂದಿಗೆ ತೃಪ್ತಿಇಂದಿದ್ದ ಭಟ್ಟರಿಗೆ ಒಮ್ಮೆಕುಕ್ಕೆ ಸುಬ್ರಮಣ್ಯಕ್ಕೆ ಹೋಗುವಂತೆ ಕನಸಾಗುತ್ತದೆ. ಯಾತ್ರೆಯ ಸಮಯದಲ್ಲಿ ಅವರು ಶಿವಾಲಯದಲ್ಲೇ ಇದ್ದು, ಶಿವನೊಬ್ಬನೇ ಪ್ರಪಂಚವಾಗಿದ್ದ , ಊರವರು ಬಸಮ್ಮ ಎಂದು ಗೌರವಿಸುತ್ತಿದ್ದ ಗೌರಿ ಎಂಬ ಬಸವಿಯನ್ನು ಭೇಟಿಯಾಗುತ್ತಾರೆ. ಗೌರಿಗೆ ಭಟ್ಟರಲ್ಲಿ ಆರಾಧನಾ ಭರಿತ ಪ್ರೇಮ ಉಂಟಾಗುತ್ತದೆ , ಭಟ್ಟರೂ ಗೌರಿಯೆಡೆಗೆ ಆಕರ್ಷಿತರಾಗುತ್ತಾರೆ . ಭಟ್ಟರು, ಗೌರಿ , ಭಟ್ಟರ ಸ್ನೇಹಿತ ರಾಯರು ಮತ್ತು ಪಾತಮ್ಮನ ನಡುವೆ ನಡೆವ ಮೌನ ಯುಧ್ಧಗಳು ,ಕೆಲ ಸಂಭಾಷಣೆಗಳು ಅಂತರಂಗದ ವಸ್ತು. ಅಸಲಿಗೆ, ಈ ಪುಸ್ತಕದಲ್ಲಿ ಈ ನಾಲ್ವರನ್ನು ಬಿಟ್ಟರೆ ಬಂದು ಹೋಗುವ ಇನ್ನೊಂದೆರಡು ಪಾತ್ರಗಳಿರಬಹುದು.
ಮುಕ್ಕಾಲು ಓದಿಯಾದ ಮೇಲೆ ನೋಡಿದರೆ ವ್ಯಕ್ತಿಯೊಬ್ಬನ ಅಂತರಂಗದ ಬಗ್ಗೆ ಇಷ್ಟೊಂದು ಬರೆಯಬಹುದೇ ? ಅಂತ ಆಶ್ಚರ್ಯವಾಗಿತ್ತು. ದೇವುಡು ಮಹಾನ್ ಲೇಖಕರೆಂದು ನಾನು ಹೇಳಬೇಕಿಲ್ಲ ,ಆದರೆ ಅವರು ಇಳಿವ ಆಳ ಕಂಡು ನಾ ಮೂಕಳಾಗಿದ್ದೆ . ಒಂದು ಸಂದರ್ಭದಲ್ಲಿ ಭಟ್ಟರು ಮತ್ತು ಗೌರಿಯ ನಡುವಿನ ಭಾವ ಸಮರ ತಿಳಿದ ಪಾತಮ್ಮ ಭಟ್ಟರೊಂದಿಗೆ ಮಲಗಲಾರೆನೆಂದು ಕೆಲ ದಿನ ಮಂಚಕ್ಕೆ ಆನಿಕೊಂಡು ನಿದ್ರಿಸುತ್ತಾರೆ.ಒಂದು ಸರಿ ರಾತ್ರಿ ಪಾತಮ್ಮ ಎಚ್ಚರವಾಗಿ ನೋಡಿದರೆ ಭಟ್ಟರು ಎದುರಿನ ಕುರ್ಚಿಯಲ್ಲಿ ನಿದ್ರಿಸುತಿರುತ್ತಾರೆ . ಗಂಡನ ಜೊತೆ ಮಲಗಲಾರೆನೆಂಬ ಹೆಂಡತಿ, ಹೆಂಡತಿಗೆ ಹಾಸಿಗೆ ಬಿಟ್ಟು ಕುರ್ಚಿಯಲ್ಲಿ ಮಲಗಿದ ಗಂಡ.ಪಾತಮ್ಮನವರಿಗೆ ಆ ಕ್ಷಣ ಗಂಡನೊಂದಿಗೆ ರಾಜಿಯಾಗಿ ಮತ್ತೆ ನಲಿವ ಮನೆಯ ಒಲಿದ ಮಡದಿಯಾಗುವ ಆಸೆ, ನಿರ್ಧಾರವಾಗುತ್ತದೆ. ಪಾತಮ್ಮನವರ ಆ ಕ್ಷಣದ ಯೋಚನೆಗಳನ್ನು ದೇವುಡು ಚಿತ್ರಿಸಿರುವ ಪರಿ ಅನನ್ಯ. ಮೊದಲ ಹೆಜ್ಜೆಗಿದ್ದ ಅನುರಾಗ,ಎರಡನೆಯದರಲ್ಲಿ ಸಂಶಯವಾಗಿ ಮೂರನೆಯದರಲ್ಲಿ ಭಟ್ಟರ ಮೇಲಿನ ಸಿಟ್ಟು ಮತ್ತೆ ತಲೆದೊರುವುದರೊಂದಿಗೆ ರಾತ್ರಿ ಮುಗಿಯುತ್ತದೆ.
ಗಂಡನೊಂದಿಗೆ ಮಾತಾಡಿ ಮತ್ತೆ ಮೊದಲಿನಂತಾಗಬೇಕೆಂಬ ಹೆಂಡತಿ, ಪತ್ನಿಯ ನಗು ಮೊಗವನ್ನ , ನಗುವ ಮನೆಯನ್ನ ಮತ್ತೆ ನೋಡ ಬಯಸುವ 'ಗಂಡ', ಗೌರಿಯನ್ನು ಬಿಟ್ಟಿರಲಾರದ 'ಭಟ್ಟ'ರು , ತಾನು ಆರಾಧಿಸಿದ ಭಟ್ಟರು ಸುಖದಿಂದಿರ ಬೇಕೆಂಬ ಗೌರಿ, ಗೆಳೆಯ ಚೆನ್ನಾಗಿರಬೇಕೆಂಬ ರಾಯರು ಒಟ್ಟಿನಲ್ಲಿ ಯಾರಿಗೂ ತಮ್ಮೊಡನಿರುವವರು ನೋಯುವುದು ಬೇಡ. ಎಂತಾ ಒಳ್ಳೆ ಪ್ರಪಂಚ !
ನನ್ನನ್ನು ಕಾಡಿದ ಸಾಲುಗಳು: "ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ದುಃಖವೇ ಹೆಚ್ಚು, ಇತರರ ದುಃಖವನ್ನು ಗಮನಿಸುವುದಕ್ಕೆ ಅವಕಾಶವೂ ಇಲ್ಲ, ಇಷ್ಟವೂ ಇಲ್ಲ ".
"ಯೆಲ್ಲಭಸೆ ನಿಜ ಕರ್ಮೊಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ* ಎಂಬ ವಾಕ್ಯವನ್ನು ನಂಬಿ ನಗುನಗುತ್ತ ಮುಂದುವರೆಯುತ್ತಿದ್ದವರು ಇಂದು ಸಂದೇಹ ಆತಂಕಗಳಿಗೊಳಗಾಗಿ ಎಲ್ಲಿಂದ ಏನು ಅಪಮೃತ್ಯು ಬರುವುದೋ ಎಂಬ ಭೀತಿಯಿಂದ ಶಂಕಿತರಾಗಿ ಹೊಲಕಾಯುವ ಗೌಡನಂತೆ ಎಚ್ಚರವಾಗಿ ಕುಳಿತಿದ್ದಾರೆ". ನನಗೆ ಓದಿದಾಕ್ಷಣ ಇಷ್ಟವಾಗಿದ್ದು ಇದರಲ್ಲಿನ ಉಪಮೆ ಹೊಲಕಾಯುವ ಗೌಡ, ಅದ್ಭುತ ! ಹೊಲ ಕಾಯುವಾಗ ಅವನ ದೇಹ ಮಾತ್ರ ಅಲ್ಲಿ, ಮನಸು ನಿದ್ದೆಯಲ್ಲಿ. ಅರ್ಧ ನಿದ್ದೆ ಅರ್ಧ ಎಚ್ಚರದ ಸ್ಥಿತಿ , ತನ್ನ ಪರಿಶ್ರಮದ ಫಲವಾದ ಬೆಳೆ ಹಾಳಾಗಬಾರದೆಂಬ ಎಚ್ಚರ ಒಂದು ಕಡೆಯಾದರೆ, ಸುಖಕ್ಕೆ ಎಳೆಯುತ್ತಿರುವ ನಿದ್ದೆ ಒಂದೆಡೆ. ಅಂತೆಯೇ, ಈ ಕಥೆಯಲ್ಲಿ ಭಟ್ಟರಿಗೆ ಗೌರಿಯ ಮೇಲೆ ಪ್ರೇಮವೂ ಇದೆ ಆದರೆ ಅದು ನೈತಿಕವಾಗಿ ತಪ್ಪೇ? ಎಂಬ ಪ್ರಶ್ನೆಯೂ ಇದೆ.
ಕೊನೆಯಲ್ಲಿ ಭಟ್ಟರು ಮನೆ ಬಿಟ್ಟು ಹೋಗುತ್ತಾರೆ, ಅವರನ್ನು ಮರಳಿ ಕರೆ ತರುವ ಗೌರಿ ತಾನೇ ಅವರ ಬದುಕಿನಿಂದ ದೂರಾಗುತ್ತಾಳೆ . ಪಾತಮ್ಮ ಗೌರಿಯನ್ನು ಮತ್ತೆ ಮನೆಗೆ ಕರೆ ತರುವಂತೆ ಹೇಳುತ್ತಾರೆ. ಅದಕ್ಕೆ ಭಟ್ಟರ ಮುಗುಳ್ನಗೆಯೇ ಉತ್ತರವಾಗುತ್ತದೆ . ಭಟ್ಟರು ತಮ್ಮ ಗೆಳೆಯ ರಾಯರಿಗೆ ಹೇಳುವ, ಕಥೆಯ ಕೊನೆಯ ಮಾತುಗಳು " ಇದು ಮೋಹದ ಬೊಂಬೆ, ಅದು ಪ್ರೇಮದ ಪುತ್ಥಳಿ .ಈ ಲೋಕದಲ್ಲಿ ಸಿಕ್ಕುವುದು ಇದು ಅದಲ್ಲ ಲೋಕ ಉಳಿದಿರುವುದು ಭೋಗದಿಂದಲ್ಲ ತ್ಯಾಗದಿಂದ". ಎಂತಹ ಸಾಲುಗಳು ! ಬರೆಯುತ್ತಾ ಹೋದರೆ ಕಾದಂಬರಿಯನ್ನು ಇಡಿಯಾಗಿ ಬರೆದು ಬಿಡಬಹುದೇನೋ ?
ಪುಸ್ತಕ ಓದುವಾಗ ಎಲ್ಲ ಸಾಲುಗಳನ್ನೂ ಗಮನವಿಟ್ಟು ಓದಲು ಬೇಕಾಗುವ ಏಕಾಗ್ರತೆ ನನಗಿಲ್ಲ. ಆದರೆ ದೇವುಡುರವರ ಪುಸ್ತಕಗಳು ಅಂತಹ ಏಕಾಗ್ರತೆಯನ್ನು ಡಿಮ್ಯಾಂಡ್ ಮಾಡುತ್ತವೆ. ಮೂರನೆಯ ಸಾಲು ತುಂಬಾ ಹಿಡಿಸಿದಾಗ ಛೆ, ಎರಡನೆಯ ಸಾಲನ್ನು ಹಾರಿಸಿದೆ ಅನ್ನೋದು ನೆನಪಾಗಿ ಮತ್ತೆ ಓದಿದ್ದೇನೆ. ಗಾತ್ರದಲ್ಲಿ ಸಾಮಾನ್ಯವಾಗಿರುವ ದೇವುಡು ಪುಸ್ತಕಗಳು ನನ್ನ ಮಟ್ಟಿಗೆ ತೆಗೆದುಕೊಳ್ಳುವ ಅವಧಿ ಹೆಚ್ಚು. ಮಹಾಬ್ರಾಹ್ಮಣ ಪುಸ್ತಕವನ್ನು ಮುಗಿಸಲು ನಾನು ಒಂದುವಾರಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದೆ.ಅರ್ಥವಾಗಲು ನನಗೆ ಸ್ವಲ್ಪ ಸಮಯಬೇಕಾಯಿತೆನ್ನಿ. ಅಂತರಂಗದಿಂದ ದೂರಾಗಿ ಬ್ರಾಹ್ಮಣದ ತನಕ ಬಂದುಬಿಟ್ಟೆ.
ಅಂತರಂಗದಲ್ಲಿ ನನಗಿಷ್ಟವಾದ ಮತ್ತೊಂದು ವಿಷಯ ಬಳಸಿದ ಭಾಷೆ ಮತ್ತು ಹಳೇ ಮೈಸೂರಿನ ಚಿತ್ರ . ಮೈಸೂರಿನಲ್ಲಿ ಒಂದು ಕಾಲದಲ್ಲಿ ಸಂಜೆ ತೋಪು ಹಾರಿಸುತ್ತಿದ್ದುದು , ಜಟಕಾ ಗಾಡಿ ಮುಂತಾದ ವಿವರಗಳು ಮೈಸೂರಿನ ಕಪ್ಪು ಬಿಳುಪು ಚಿತ್ರಗಳನ್ನ ನೆನಪಿಸಿದವು. ಕನ್ನಡ ಕಸ್ತೂರಿ ಎಂಬುದರಲ್ಲಿ ಸಂಶಯವಿಲ್ಲ.
ಕೊನೆಯದಾಗಿ ದೇವುಡುರವರ ಬಗ್ಗೆ : ಗೀತೆಯ ಉಪನ್ಯಾಸಕ್ಕೆಂದು ಎಲ್ಲಿಗೋ ಹೋದಾಗ , ಮಗನ ಮರಣದ ವಾರ್ತೆ ಬಂದರೂ ಶಾಸ್ತ್ರಿಗಳು ಉಪನ್ಯಾಸವನ್ನ ಮುಗಿಸಿ ಹೊರಟರಂತೆ . ನಂತರ ಕೇಳಲಾಗಿ , "ಗೀತೆಯ ಬಗ್ಗೆ ಉಪನ್ಯಾಸ ಮಾಡುವವನು ಸ್ವಲ್ಪ ಕಾಲವಾದರೂ ನಿರ್ಲಿಪ್ತತೆ ಬೆಳೆಸಿಕೊಳ್ಳಲಿಲ್ಲ ಎಂದರೆ ?" ಅಂದರಂತೆ. ಸರ್ಧಾರ್ ಪಟೇಲರ ಚರಿತ್ರೆಯಲ್ಲೂ ಇಂತಹದೆ ಘಟನೆ ಇರುವುದು ಎಲ್ಲರಿಗೂ ತಿಳಿದಿದೆ. ಆಡಿದಂತೆಯೇ ಆಚರಿಸುವ ಎಲ್ಲ ಆಚಾರ್ಯರುಗಳಿಗೂ ಸಾಷ್ಟಾಂಗ ಪ್ರಣಾಮಗಳು
* : 'ಯೆಲ್ಲಭಸೆ ನಿಜ ಕರ್ಮೊಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ' ಎಲ್ಲರಿಗೂ ತಿಳಿದಂತೆ ಇದು ಭಜ ಗೋವಿಂದಂ ನ ಒಂದು ಸಾಲು (" ಏನನು ಗಳಿಸಿದೆ ಅದರಿಂದಲೇ ನೀ ,ಪಡೆದುಕೋ ನೆಮ್ಮದಿ ಸಂತೋಷವನ್ನು" -http://shreeguruguha.blogspot.in/2009/09/blog-post_05.html).
ಹಸ್ತಿನಾವತಿಯಲ್ಲಿ
ತಾಳಿ ದಾಟಿ ಜೊತೆ
ಬಾಳ ಬೇಕಿತ್ತು
ಕುಂಕುಮವ ಮೀರಿ
ಅಂಕುರಿಸಬೇಕಿತ್ತು
ಉಸಿರ ದಾಟಿ
ಹೆಸರ ಬರೆಯ ಬೇಕಿತ್ತು
ಮಿಡಿತ ದಾಟಿ
ಮಿಳಿತ ವಾಗಬೇಕಿತ್ತು
ಯಾವುದೂ ಆಗಲಿಲ್ಲ
ಯುಗಯುಗದ ಕಂಬನಿ ಲೋಕಕ್ಕೆ ಕಾಣಲಿಲ್ಲ
ಸೆರಗೊಡ್ಡಿ ಬೇಡಲಾರೆ
ಬೆರಗಿಂದೆನ್ನ ದೇಹ ಕಾಣ ಬೇಡಿರೆಂದು
ಅಣ್ಣಂದಿರ ಕಾಡಲಾರೆ
ನನ್ನ ದೇಹವ ಕಾಯ್ದು ಕಾಪಾಡಿರೆಂದು
ಕಣ್ಣ ಕಾಮವ ತುಂಡು ಬಟ್ಟೆ ತಡೆವುದೆಂತು ?
ಕ್ಷಣ ಕ್ಷಣಕೂ ಕೃಷ್ಣ ಅವತರಿಸುವುದೆಂತು ?
ಬೇಸತ್ತೆ ನಾ ದೇಹದ ತನಕ ಮಾತ್ರ ಬಂದ ನಿಮ್ಮ ನೋಡಿ
ದೇಹ ದಾಟಿದ್ದರೆ ನಿಮ್ಮದಾಗುತಿತ್ತು ಅಮೃತದ ಮೋಡಿ
ಹೊರಟೆ ನಾ ದೇಹ ಕಳಚಿಟ್ಟು ನಿಜ ಗಮ್ಯದೆಡೆಗೆ
ಹುಟ್ಟಿಲ್ಲದೆ, ಸಾಗಲಿ ಈ ಪೊಳ್ಳು ಜನಾಂಗ ಅವನತಿಯ ಕಡೆಗೆ
ದೇವುಡು ಪ್ರಾತಃಸ್ಮರಣೀಯ ಸಾಹಿತಿ. ಅಂತರಂಗ ಬೇಗ ಹುಡುಕಿ ತಂದು ಓದುತ್ತೇನೆ.
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ ಸರ್
Deleteಸ್ವರ್ಣವ್ರೇ, ದೇವುಡು ಅದ್ಭುತ ಲೇಖಕರು ಎಂದು ಓದಿದ್ದೆ,,,ಆದರೆ ಅವರ ಕೃತಿಗಳನ್ನು ಓದುವ ಭಾಗ್ಯ ಸಿಕ್ಕಿಲ್ಲ... ನಿಮ್ಮ ವಿವವರ್ಣೆ ಅಂತಹ ಬಯಕೆ ಹುಟ್ಟುಹಾಕಿದೆ..
ReplyDeleteನಿಮ್ಮ ಕವನದ ಸಾಲುಗಳು..ಸಾಂದರ್ಭಿಕ ಮತ್ತು ಈಗಿನ ಅಮಾನುಷ ಅತ್ಯಾಚಾರಿ ಗಂಡಿಗೆ ಹಿಡಿದ ಕನ್ನಡಿ
ಸೆರಗೊಡ್ಡಿ ಬೇಡಲಾರೆ
ಬೆರಗಿಂದೆನ್ನ ದೇಹ ಕಾಣ ಬೇಡಿರೆಂದು
ಅಣ್ಣಂದಿರ ಕಾಡಲಾರೆ
ನನ್ನ ದೇಹವ ಕಾಯ್ದು ಕಾಪಾಡಿರೆಂದು
ಕಣ್ಣ ಕಾಮವ ತುಂಡು ಬಟ್ಟೆ ತಡೆವುದೆಂತು ?
ಕ್ಷಣ ಕ್ಷಣಕೂ ಕೃಷ್ಣ ಅವತರಿಸುವುದೆಂತು ?
ದೇವುಡುರನ್ನ ಓದಿ
Deleteಹ್ಮ್ಮ್ ಏನು ಹೇಳಲಿ ಸರ್ ?
ಧನ್ಯವಾದಗಳು
ಈ ಪುಸ್ತಕದ ಬಗ್ಗೆ ಕೇಳಿರಲಿಲ್ಲ.. ಧನ್ಯವಾದ.... ಹುಡುಕಿ ಓದಬೇಕು.... ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆ ಚೆನ್ನಾಗಿದೆ...
ReplyDeleteಪುಸ್ತಕಗಳೇ ಹಾಗೆ ಮಸ್ತಕದೊಳಗೆ ಇಳಿದು ಓಡಾಡಿಬಿಡುತ್ತವೆ..ಸುಂದರ ಪಕ್ಷಿ ನೋಟ ಪುಸ್ತಕದ ಬಗ್ಗೆ..
ReplyDeleteಸೊಗಸಾದ ಪ್ರತಿಕ್ರಿಯೆಗಾಗಿ ವಂದನೆಗಳು
Delete