![]() |
| ಚಿತ್ರ ಕೃಪೆ : ಅಂತರ್ಜಾಲ |
ಪದವಿಗಾಗಿ ರಣ ಬಿಸಿಲಿನ ಮಣ ಖಾರ ತಿನ್ನುವ ಊರು ಬಳ್ಳಾರಿಗೆ ಹೋದಾಗ ಆ ಊರು, ಊರು ಅನ್ನಿಸಿಯೇ ಇರಲಿಲ್ಲ ! ಮಕ್ಕಳು ರಸ್ತೆಯ ಮೇಲೆ ಮಾಡಿದ ಚಿತ್ತಾರವನ್ನು ಹಾರುತ್ತಾ ಮಡಿ ಮಡಿ ಅನ್ನೋರು , ವಾರದಿಂದ ವಾರಕ್ಕೆ ನೀರು ಬಂದರೆ ಸ್ನಾನ ಮಾಡೋರು ಥರಾವರಿ ಜನ ಆ ಊರಲ್ಲಿ. ಅಲ್ಲಿನ ಭಾಷೆಯೂ ಅಲ್ಲಿನ ಒಂದು ವೈಶಿಷ್ಟ್ಯ . ಮನೆಯಲ್ಲಿ ಅಜ್ಜಿಯದು ಸಣ್ಣ ದನಿಯ ಮೈಸೂರು ಕನ್ನಡ, "ಸೌಖ್ಯವೇ ....." ಅಂತ ರಾಗ ಎಳೆದು ಮಾತಾಡಿದ್ರೆ ನಮ್ಮೂರಿನ ಬಯಲು ಸೀಮೆ ಜನಕ್ಕೆ ನಗುವುದಕ್ಕೊಂದು ಸರಕು. ನಾವು "ಆರಾಮ, ಚೆನ್ನಾಗಿದೀರ ?" ಅಂದು ಮುಗಿಸಿ ಬಿಡ್ತಿದ್ವಿ. ಆದ್ರೆ ಈ ಊರಲ್ಲಿ ಹೊಸ ಪದ "ಭೇಷ್ ಇದ್ದಿಯೇನು ?" ಅನ್ನೋರು. ಚಂದ , ಸುಂದರ ಅನ್ನೋದು ಅವರ ಭಾಷೇಲಿ ' ಭೇಷ್ ' ಆಗಿತ್ತು. ಅತ್ತ ತೆಲುಗಲ್ಲಿ ಬಳಸದ ಇತ್ತ ಕನ್ನಡದಲ್ಲೂ ಅಷ್ಟಾಗಿ ಬಳಸಲ್ಪಡದ ಈ ಪದ ಅದೆಲ್ಲಿಂದ ಬಂದು ಬಳ್ಳಾರಿ ಸೇರಿತೋ ಭಾಷಾ ಪಂಡಿತರೇ ಹೇಳಬೇಕು.
ಬೇರೆ ಊರಿಂದ ಹೋದ ಒಂದಷ್ಟು ಹುಡುಗಿಯರಿಗೆ ಒಂದು ಮಠದ ಬೀದಿಯಲ್ಲಿ ಒಂದು ಸಣ್ಣ ಮನೆಯಲ್ಲಿ ಹಾಸ್ಟೆಲ್ ಅಂತ ಮಾಡಿದ್ದರು. ಕಾಲೇಜ್ನಲ್ಲಿ ಒಂದಷ್ಟು ಜನ ಹುಡುಗಿಯರು ಬಳ್ಳಾರಿಯವರೇ ಇದ್ದರು. ಅದೇನೋ ಯಾವುದೇ ಕಾಲೇಜ್ನಲ್ಲಿ ಹೋದರೂ ಅದೇ ಊರಿನವರಾದ, ಲೋಕಲೈಟ್ಸ್ ಅಂತ ಕರೆಸಿಕೊಳ್ಳುವ ಸ್ಥಳೀಯರಿಗೂ ಹಾಸ್ಟೆಲ್ನಲ್ಲಿರುವ ಹಾಸ್ಟಲೈಟ್ಸ್ಗಳಿಗೂ ನಡುವೆ ಒಂದು ಅಂತರ ಇರತ್ತೆ. ಹೋಗಿ ಕೆಲ ದಿನಗಳ ನಂತರ ನಾನು ಕ್ಲಾಸ್ ಒಳಗೆ ಅಡಿ ಇಟ್ಟ ಕೂಡಲೇ ಕಂಡದ್ದು ಕಾಲು ಕೆಜಿ ಅರಿಶಿನ ಕೆನ್ನೆಗೆ ಬಳಿದುಕೊಂಡ, ನೋಡಲು ಅಪ್ಪಟ ತಮಿಳು ಹುಡುಗಿಯಂತ್ತಿದ್ದ , ಕಪ್ಪಗಿನ ಲಕ್ಷಣವಾದ ಹುಡುಗಿಯೊಬ್ಬಳನ್ನ. ಮೊದಲ ಬಾರಿ ಮನೆ ಬಿಟ್ಟುಹಾಸ್ಟೆಲ್ಗೆ ಹೋದ ಹುಡುಗಿಯರು ಸರತಿಯಂತೆ ದಿನಾ ಕ್ಲಾಸಿನಲ್ಲಿ ಅಬ್ಬಾಯಿ ನಾಯ್ಡು ಸಿನೆಮ ಹಿರೋಯಿನ್ ಥರ ಅಳ್ತಿದ್ವಿ. ನನ್ನ ಪಾಳಿಯ ಪಾತ್ರ ಮಾಡಿ, ಅತ್ತು ಸುಸ್ತಾಗಿ ಕಣ್ಣಿರ ಖೋಟಾ ಮುಗಿಸಿ ಕೂತಿದ್ದಾಗ, ಆ ಹುಡುಗಿ ಪಕ್ಕ ಬಂದು ಕೂತು " ಈಗ ಭೇಷ್ ಆದಿ?" ಅಂತ ಮುಗುಳ್ನಗೆಯೊಂದಿಗೆ ಕೇಳಿದರೆ ಇದೊಳ್ಳೆ 'ಭೇಷ್' ಆಯ್ತಲ್ಲಪ್ಪಅಂತ ನಾ ಅವಳ ಮುಖ ನೋಡಿದೆ. ಗುಂಡು ಮುಖ, ತುಂಬಿದ ಕೆನ್ನೆಯ ಸುಂದರಿಯವಳು. "ನನ್ ಹೆಸರು ರಾಧ" ಅಂದ್ಲು. ಒಂದೆರಡು ನಿಮಿಷ ಬಿಟ್ಟು "ಮಂಡಾಳ್ ಒಗ್ಗಣಿ ತಂದೀನಿ ತೊಗೋ" ಅಂತ ಒಂದು ಡಬ್ಬ ಮುಂದೆ ಹಿಡಿದರೆ, ಈ ಮಂಡಾಳ್ ಅಂದ್ರೆ ಯಾವ ಪ್ರಾಣಿಯಪ್ಪ ಅಂತ ನಾ ಮನದಲ್ಲೇ ಎನ್ಸೈಕ್ಲೋಪಿಡಿಯ ತೆಗೆದಿದ್ದೆ.ಡಬ್ಬ ತೆಗೆದರೆ ಅಲ್ಲಿದದ್ದು ಮೈಸೂರ್ ಕಡೆ ಪುರಿ , ಕೆಲ ಕಡೆ ಮಂಡಕ್ಕಿ ಅಂತ ಕರೆಸಿಕೊಳ್ಳುವ ಭತ್ತದ ಒಂದು ರೂಪ. ನಮ್ಮೂರಿನ ಮಂಡಕ್ಕಿ ಉಸುಳಿ, ಆದರೆ ನಮ್ಮ ಮಂಡಕ್ಕಿಗಿಂತ ಬಳ್ಳಾರಿ ಪುರಿ ದಪ್ಪ, ರುಚಿಯೂ ಬೇರೆ. ಹಾಸ್ಟೆಲ್ ಊಟ ತಿಂದು ಬರಗೆಟ್ಟ ಹಾಸ್ಟಲೈಟ್ಸ್ಗಳು ಕಾರ್ಗಿಲ್ ಯುಧ್ಧ ವೀರೆಯರಂತೆ ಡಬ್ಬಕ್ಕೆ ಮುತ್ತಿಗೆ ಹಾಕಿದ್ದ ಕಂಡು, ಮಾರನೆ ದಿನ ದಿಂದ ಅವಳು ನಮಗೇ ಅಂತ ಒಂದು ಡಬ್ಬ ಹೆಚ್ಚು ತರೋಳು.
ರಾಧಾಳ ಬರವಣಿಗೆಯೂ ಅವಳಷ್ಟೇ ಮುದ್ದಾಗಿತ್ತು. ಎರಡು ಗೆರೆಗಳ ನಡುವೆ ದುಂಡಾಗಿ ಬರೆದ ಚಿಕ್ಕ ಚಿಕ್ಕ ಅಕ್ಷರಗಳು. ಇಂತಿಪ್ಪ ರಾಧಂಗೆ ನಾವು ೨ನೆ ಸೆಮಿಸ್ಟರ್ಗೆ ಬರುವ ಹೊತ್ತಿಗೆ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ ಅಂತ ಂತ ು ಗುಸು ಶುರುವಾಯಿತು. ಆಂಧ್ರದ ಒಳನಾಡಿನಿಂದ ಬಂದ ಅವನ ಹೆಸರು ಸೀನು ಬಾಬು. ಒಂದಾರಡಿ ಎತ್ತರಕ್ಕೆ ಕಡ್ಡಿಯ ಥರ ಇದ್ದ ಅಸಾಮಿ. ರಾಧಾ ಅವನ ಭುಜಕ್ಕೂ ಬರುತ್ತಿರಲಿಲ್ಲ. ಜಯಾ ಬಚ್ಚನ್ , ಅಮಿತಾಬ್ಹ್ ಬಚ್ಚನ್ ಉಪಮೆಯ ಹಳೆಯದು ಅಂತಲೋ ಏನೋ ಯಾರೂ ಅವರನ್ನ ಹಾಗೆ ಕರೆಯುತ್ತಿರಲಿಲ್ಲ.
ಏನೇನೋ ಕಥೆಗಳು ಹರಿದಾಡುತ್ತಿದ್ದವು ಅವರಬಗ್ಗೆ ಕಾಲೇಜಿನಲ್ಲಿ. ಅದೆಲ್ಲವನ್ನೂ ಮೀರಿ ಇಬ್ಬರೂ ಚೆನ್ನಾಗೇ ಓದುತ್ತಿದ್ದರು. ನಾವು ಬಹುಶಃ ಮೂರನೇ ಸೆಮಿಸ್ಟರ್ ಪ್ರಾಕ್ಟಿಕಲ್ ಪರೀಕ್ಷೆ ಮುಗಿಸಿ ಥಿಯರಿಗೆ ತಯಾರಿ ನಡೆಸಿದ್ದೆವು. ಆಗ ಬಂತು ಒಂದು ಸುಧ್ಧಿ. ರಾಧಾ ಬೆಂಕಿ ಹಚ್ಚಿ ತನ್ನ ತಾನೇ ಸುಟ್ಟುಕೊಂಡಳಂತೆ . ಈಗ ಸರ್ಕಾರಿ ಆಸ್ಪತ್ರೆಯಲ್ಲಿದಾಳಂತೆ ಅಂತ. ಎಲ್ಲ ಹುಡುಗಿಯರು ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಹೋದ್ವಿ. ದೂರದ ಯಾವುದೋ ಒಂದು ಕಟ್ಟಡ ತೋರಿಸಿ ಅಲ್ಲಿದ್ದಾಳೆ ಅಂತ ನಮಗಿಂತ ಮುಂಚೆ ಹೋದ ಹುಡುಗಿಯರು ಹೇಳಿದ್ರು. ಕೆಲ ಹುಡುಗಿಯರು ರಾಧಾಳನ್ನ ನೋಡಬೇಕು ಅಂತ ಹೋದರು. ನನಗೇಕೋ ಹೋಗುವ ಧೈರ್ಯ ಬರಲಿಲ್ಲ. ನಾವು ಹೋದ ಮಾರನೆ ದಿನ ರಾಧಾ ಇನ್ನಿಲ್ಲ ಅನ್ನೋ ಸುಧ್ಧಿ ಬಂತು.
ರಾಧಳದು ಮಹಡಿ ಮನೆಯಾಗಿತ್ತು. ಕುಟುಂಬದವರೆಲ್ಲಾ ಕೆಳಗಿದ್ದ ಸಮಯದಲ್ಲಿ ರಾಧಾ ಬೆಂಕಿ ಹಚ್ಚಿ ಕೊಂಡಳಂತೆ,
ಬೆಂಕಿಯಲ್ಲಿ ಕಿವಿಯಲ್ಲಿದ್ದ ಮುತ್ತಿನ ಓಲೆ ಕರಗಿದರೂ ಅವಳೊಂಚೂರು ಸದ್ದು ಮಾಡಲಿಲ್ಲವಂತೆ. ಇದವಳ ಮೂರನೇ ಪ್ರಯತ್ನವಂತೆ ಅಂತ ಏನೇನೋ ಸುಧ್ಧಿ ಬಂತು. ಸೀನು ಬಾಬುನೇ ಸಾವಿಗೆ ಕಾರಣ ಅಂತಲೂ ಕಥೆಗಳು ಹುಟ್ಟಿಕೊಂಡವು. ಅವನೂ ನಂತರ ಒಂದೆರಡು ತಿಂಗಳು ಕಾಲೇಜಿನಲ್ಲಿ ಕಾಣಲಿಲ್ಲ. ಒಟ್ಟಿನಲ್ಲಿ ರಾಧೆಗೆ ಸಂಗಾತಿ ಸಿಗಲಿಲ್ಲ. ನಮ್ಮ ಹಾಸ್ಟೆಲಿನ ಕೆಲ ಹುಡುಗಿಯರು ಅವಳನ್ನ ನೋಡಲು ಹೋದಾಗ 'ನೀರು ನೀರು' ಅನ್ನುತ್ತಿದ್ದಳಂತೆ. ದಿನವೂ ನಮಗೆ ಮನೆಯ ರುಚಿ ರುಚಿ ತಿಂಡಿ ತಿನ್ನಿಸಿದ ರಾಧ ನೀರಿಲ್ಲದೆ ಒದ್ದಾಡಿದ್ದನ್ನ ನೆನಸಿಕೊಳ್ಳಲೂ ಭಯವಾಗತ್ತೆ. ಸುಂದರ ನಗುವಿನ ರಾಧಾ ಸುಟ್ಟು ಕರಕಲಾಗಿ ಹೋದದ್ದನ್ನ ನಾನಿಂದೂ ನಂಬಿಲ್ಲ . ಯಾರಾದರೂ 'ಮಂಡಾಳ್ ಒಗ್ಗಣಿ' ಅಂದರೆ ನನಗೆ ಇಂದೂ ಮುಖದಲ್ಲಿ ಅರಿಶಿನದ ಹೊಳಪಿನೊಂದಿಗೆ ನಗುತ್ತಿರುವ ರಾಧೆ " ಈಗ ಭೇಷ್ ಆದಿ?" ಅಂದಂತಾಗತ್ತೆ.
ಸಾವು ಯಾವುದೇ ಸಮಸ್ಯೆಗೆ ಪರಿಹಾರವಾಗಲಾರದು ಎಂದು ಕೆಲ ಮನಸುಗಳಿಗೇಕೋ ನಂಬಿಕೆ ಬಾರದು.
ಮುಳ್ಳೂ ಬೆಳೆಯದ ನೆಲದಲ್ಲಿ ಮಲ್ಲಿಗೆ ಬೆಳೆಯಲು ರಾಧೆ ಮತ್ತೆ ಬರಬೇಕು
ಗೊಡ್ಡು ಪಾರಿಜಾತದ ಬೊಡ್ಡೆಯ ಚಿಗುರಿಸಿ ಹೂವರಳಿಸಲು ಅವಳೇ ಬೇಕು
ಹೂಳಾದ ಯಮುನೆಯ ಬೋಳು ಮರಗಳಲಿ ಹಸಿರುದುರಿಸಲು ಅವಳೇ ಬೇಕು
ಎಣ್ಣೆ ತೀರಿದ ಕಣ್ಣು ಕಾಣದ ಆತ್ಮಗಳಿಗೆ ಜೀವ ತುಂಬಲು ರಾಧೆ ಬರಬೇಕು
ಅವಧಿಯಲ್ಲಿ ಊರ್ಮಿಳೆಯ ಸ್ವಗತವನ್ನ ಇಲ್ಲಿ ಓದಬಹುದು.
ಇದು ಈ ಮುಂಚೆ ಬ್ಲಾಗ್ನಲ್ಲಿ ಪ್ರಕಟವಾಗಿತ್ತು.
ಗೊಡ್ಡು ಪಾರಿಜಾತದ ಬೊಡ್ಡೆಯ ಚಿಗುರಿಸಿ ಹೂವರಳಿಸಲು ಅವಳೇ ಬೇಕು
ಹೂಳಾದ ಯಮುನೆಯ ಬೋಳು ಮರಗಳಲಿ ಹಸಿರುದುರಿಸಲು ಅವಳೇ ಬೇಕು
ಎಣ್ಣೆ ತೀರಿದ ಕಣ್ಣು ಕಾಣದ ಆತ್ಮಗಳಿಗೆ ಜೀವ ತುಂಬಲು ರಾಧೆ ಬರಬೇಕು
ಅವಧಿಯಲ್ಲಿ ಊರ್ಮಿಳೆಯ ಸ್ವಗತವನ್ನ ಇಲ್ಲಿ ಓದಬಹುದು.
ಇದು ಈ ಮುಂಚೆ ಬ್ಲಾಗ್ನಲ್ಲಿ ಪ್ರಕಟವಾಗಿತ್ತು.

ಸ್ವರ್ಣಾ,
ReplyDeleteಕೊನೆಯ ಹಾಡು ಕಣ್ಣೀರು ತರಿಸುತ್ತದೆ. ಮಲ್ಲಿಗೆಯಂತಹ ರಾಧೆಯ ಕಣ್ಣಿಗೆ ಮುಳ್ಳುಪೊದೆಯೂ ಮಲ್ಲಿಗೆಯಂತೆಯೇ ಕಂಡಿತೆ?
ಏನು ಹೇಳಲಿ ಕಾಕಾ, ರಾಧೆಯ ಪಾತ್ರವೇ ಅಂತದಲ್ಲವೇ ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಮನಕ್ಕೆ ನೋವು ತರುವ ಸಂಗತಿ.... ಪಾಪ ಆಕೆ ಯಾವ್ಯಾವ ಬೆಂಕಿಯಲ್ಲಿ ಮಿಂದೆದ್ದಿಳೋ.... ಆಕೆ ಇನ್ನೊಮ್ಮೆ ಹುಟ್ಟಿ ಬರಲಿ....
ReplyDeleteಆಮೇನ್
Deleteಕವನವಷ್ಟೇ ಎಂದುಕೊಂಡು ಓದಿರಲಿಲ್ಲ ಮೇಡಮ್...ತುಂಬಾ ಇಷ್ಟವಾಯ್ತು :) ಬರೆಯುತ್ತಿರಿ...ಇನ್ನೊಮ್ಮೆ ಹುಟ್ಟಿ ಬರಲಿ ರಾಧೆ ...
ReplyDeleteಧನ್ಯವಾದಗಳು, ಮೇಡಂ ಅನ್ನೋದು ಬೇಡ :)
Deleteತುಸು ತಡವಾಗಿದೆ ಓದಿದೆ, ಅತ್ತ ಯಡ್ಡಿ ಇತ್ತ ಕಾವೇರಿ ಗಲಾಟೆ ಆದ್ದರಿಂದ ವಾರ್ತಾ ವಾಹಿನಿಗಳಿಗೆ ಭರಪೂರ ಸುದ್ದಿ ಪ್ರಸವ.
ReplyDeleteಮನ ಮಿಡಿಯುವ ಬರಹ ಇದು. ರಾಧೆಯ ಅಳಲು ಇಲ್ಲಿ ಸಮರ್ಥವಾಗಿ ವೇದ್ಯವಾಗಿದೆ. ಕಡೆಯ ಕವನಗಳ ಸಾಲು ಸುನಾತ್ ಸಾರ್ ಹೇಳುವಂತೆ most effective.
ಧನ್ಯವಾದಗಳು ಸರ್
Deleteರಾಧೆಯ ಗೀತೆಗಳನ್ನು .. ಉದ್ಯಾವರ ಮಾಧವ ಆಚಾರ್ಯರ ಪುಸ್ತ್ಕಕವೊಂದನ್ನ ಇತ್ತೀಚೆಗೆ ಓದಿದೆ. ನಿಮ್ಮ ಈ ಕವನ/ಪ್ರಬಂಧವೂ ಅದಕ್ಕೆ ಸಂವಾದಿಯಾಗಿ ಸುಂದರವಾಯಿತು ಓದು.
ReplyDeleteಸ್ವರ್ಣಕ್ಕಾ, ಚೆನ್ನಾಗಿದೆ.
ಧನ್ಯವಾದಗಳು ಭಟ್ಟರಿಗೆ
Deleteಸ್ವರ್ಣಕ್ಕ ನನಗೂ ಒಬ್ಬ ರಾಧಾಳ ಪರಿಚಯವಿದೆ..ನಿಮ್ಮ ಬರಹ ಓದಿ ಅವರ ನೆನಪಾಯ್ತು..ಯಾಕೋ ರಾಧಾಯೆಂಬ ಹೆಸರಿನವರ ಬಾಳು ದುರಂತದ ಹಾದಿ ಹಿಡಿಯುವುದೇ ಹೆಚ್ಚು ಎನಿಸುತ್ತಿದೆ.ಕೊನೆಯ ಸಾಲುಗಳು ಮತ್ತೆ "ಬೆಂಕಿಯಲ್ಲಿ ಕಿವಿಯಲ್ಲಿದ್ದ ಮುತ್ತಿನ ಓಲೆ ಕರಗಿದರೂ ಅವಳೊಂಚೂರು ಸದ್ದು ಮಾಡಲಿಲ್ಲವಂತೆ"" ಅವಳನ್ನ ನೋಡಲು ಹೋದಾಗ 'ನೀರು ನೀರು' ಅನ್ನುತ್ತಿದ್ದಳಂತೆ" ಓದಿ ಕಣ್ಣಂಚಿನಲ್ಲಿ ನೀರು ಜಿನುಗಿತು.
ReplyDeleteಹೌದು ವೈಶು ನಂಗೂ ಒಮ್ಮೊಮ್ಮೆ ಹಾಗೇ ಅನ್ನಿಸತ್ತೆ
Deleteಹೌದು...ಸಾವು ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ....ಓದಿ ಮನ ನೊಂದಿತು....ಈ ರಾಧೆ ಮತ್ತೊಮ್ಮೆ ಹುಟ್ಟಿಬರಲಿ......ಸೊಗಸಾದ ನಿರೂಪಣೆ.......
ReplyDeleteಹೌದು ಸರ್ ಮನನೋಯುವಂತ ಪಾತ್ರ 'ರಾಧೆ'ಯದು
DeleteThank you