![]() |
| ಚಿತ್ರಕೃಪೆ : ಅಂತರ್ಜಾಲ |
ಒಬ್ಬ ರಾಜಗೊಬ್ಬ ಮಗಳು, ವಯಸಿಗೆ ಬಂದಳು.
ಸೂರ್ಯನನ್ನೇ ಪ್ರೇಮಿಸಿದಳು !
ಅವನೂ ಇವಳನ್ನ ಮೋಹಿಸಿದ
ಆದರೆ, ತಂದೆಗೆ ಉರಿವ ಸೂರ್ಯ ಬೇಡವಾದ.
ನಾ ಬೇಕೆಂದಾದರೆ ತಂದೆಯ ಬಿಡೆಂದ ತಮ ವೈರಿ
ಹುಡುಗಿಯ ಮುಂದೆ ಇದ್ದುದೊಂದೇ ದಾರಿ
ಸೂರ್ಯನೊಡನೆ ಹೊರಟಳು ಕನ್ಯೆ
ಮೂರು ಲೋಕ ಮಾನ್ಯೆ.
ತಂದೆ ತಾಯ ಮರೆಯದಾದಳು.
ಬಂಧು ಬಂಧವ ತೊರೆಯದಾದಳು.
ಸೂರ್ಯ ಕೆಂಪಾಗಿ ಉರಿದ.
ಹುಡುಗಿಯ ಮತ್ತೆ ತವರಿಗಟ್ಟಿದ.
ಬಾಲೆ ಬೆಂದಳು ಅರುಣನುರಿಯಲ್ಲಿ.
ಕಂಬನಿಯು ಆವಿಯಾಗಿತ್ತಲ್ಲಿ ,
ಕೆನ್ನೆಗೆ ಜಾರುವ ಮುಂಚೆ
ಇದು ವಿಧಿಯ ಕ್ರೂರ ಸಂಚೇ ?
ಹುಡುಗಿ ಒಣಗಿ ಪ್ರಾಣ ಬಿಟ್ಟಳು
ಉರಿವ ಸೂರ್ಯನಿಗಾಗಿ ಉರಿದು ಹೋದಳು.
ತಂದೆ ನೆಟ್ಟನೊಂದು ಗಿಡ ಅವಳ ಗೋರಿಯ ಮೇಲೆ
ಅಲ್ಲೊಂದು ಗಿಡ ಚಿಗುರಿತ್ತು, ಇದಾವ ಶಿವ ಲೀಲೆ ?
ನಸುಕಲ್ಲಿ ಹೂವೊಂದು ಅರಳಿತ್ತು
ಸೂರ್ಯನ ಕಂಡೊಡನೆ ಬಾಡಿತ್ತು .
ಲೋಕ ಅದಕಿತ್ತ ಹೆಸರು ಪಾರಿಜಾತ
ಅದು 'ಅವಳ' ಸುನೀತ ಪ್ರೇಮ ಗೀತ .
(ಮೈಸೂರಿನ ವಸ್ತು ಪ್ರದರ್ಶನದಲ್ಲಿ ಓದಿದ ' ಪಾರಿಜಾತ' ಜನಪದ ಕಥೆಯನ್ನಾಧಾರಿಸಿ ಬರೆದದ್ದು.
ಅವಧಿಯಲ್ಲಿ ಪ್ರಕಟಗೊಂಡಿತ್ತು ( http://avadhimag.com/?p=69170) )
(ಕೆಳಗಿನ ಕಥೆಗೆ ಕಲ್ಪನೆಯೊಂದೇ ಆಧಾರ )
![]() |
| ಚಿತ್ರಕೃಪೆ : ಅಂತರ್ಜಾಲ |
ಕೃಷ್ಣ ಹೆಜ್ಜೆಯನಿಟ್ಟಲ್ಲೆಲ್ಲ ಒಂದು ಹೂವನಿಡುವುದು ಅವಳ ನಿತ್ಯ ಕಾಯಕ. ನಿತ್ಯ ಕಾಯಕವೇನು ಅವಳು ಮಾಡುತ್ತಿದ್ದ ಕೆಲಸ ಅದೊಂದೆ ! ಅವಳ ಹೆಸರು ಅವಳಿಗೇ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಬೆಳಕು ಹರಿಯುತ್ತಿದ್ದಂತೆ ನಂದನ ಮನೆಯ ಮುಂದೆ ಅವಳು ಪ್ರತ್ಯಕ್ಷಳಾದರೆ ಮರಳುತ್ತಿದ್ದುದು ಗೋಧೂಳಿ ಸಮಯದಲ್ಲಿ ಕೃಷ್ಣ ಮನೆ ಒಳ ಹೊಕ್ಕ ಮೇಲೇ. ಅವನಿಟ್ಟ ಪ್ರತಿ ಹೆಜ್ಜೆಯ ಮೇಲೂ ಒಂದು ಹೂವಿಡುತ್ತಾ ಅವನ ಹಿಂದೆ ಹೆಜ್ಜೆ ಹಾಕುತ್ತಾ ತನ್ನ ದಿನವನ್ನ ಕೂಡುತ್ತಿದ್ದಳು. ಎಷ್ಟೋ ಬಾರಿ ಕೃಷ್ಣ ಅವಳನ್ನು ಸತಾಯಿಸಲೋ ಎಂಬಂತೆ, ಅತಿ ಸಣ್ಣ ಹೆಜ್ಜೆಗಳನಿಡುತ್ತಿದ್ದ. ಆಗೆಲ್ಲ ಮಂದಸ್ಮಿತೆಯಾಗಿ ಅವಳಿಟ್ಟ ಹೂಗಳು ರಂಗೋಲಿ ಬಿಡಿಸಿದಂತೆ ಕಾಣುತ್ತಿದ್ದವು.
"ರಂಗಾ ಒಲಿದು ಬಾರೋ ರಂಗವಲ್ಲಿಯನಿಡುವೆ "
ಅದೆಷ್ಟು ಯುಗಗಳಿಂದ ಹಾಗೆ ಹೂವಿಟ್ಟಳೋ ಲೆಖ್ಕ ಇಟ್ಟವರ್ಯಾರು ? ಅಂತೂ ಬೃಂದಾವನವ ತೊರೆವ ಮುನ್ನ ಕೃಷ್ಣ ಅವಳೆಡೆ ತಿರುಗಿದ.
" ದಿನವೂ ನಾ ಹೆಜ್ಜೆಯನ್ನಿಟ್ಟ ಕಡೆ ಹೂವನೇಕಿಡುವೆ ? "
"ನೀ ಹೆಜ್ಜೆಯನಿಟ್ಟಲ್ಲಿ ಇಟ್ಟ ಹೂವು ಮತ್ತೂ ಅರಳುವುದನ್ನು ನೋಡುವ ಆಸೆಇಂದ
ನಿನ್ನ ಪಾದ ಮಣ್ಣ ಮೇಲೆ ಬಿಡಿಸಿದ ಚಿತ್ರವನ್ನು ಅಲಂಕರಿಸುವ ಆಸೆಇಂದ,
ನಿನ್ನ ಪಾದದ ಘಮದ ಜೊತೆ ಹೂವ ಪರಿಮಳ ಸೇರಲೆಂಬ ಆಸೆಇಂದ,
ನಿನ್ನ ಹೆಜ್ಜೆಯ ಸದ್ದಿನೊಡನೆ ಸುಮ ಮಾತಾಡಲೆಂಬ ಆಸೆಇಂದ,
ನೀ ನಡೆವ ಹಾದಿಯಲ್ಲಿ ನಿನ್ನೊಡನೆ ನಾ ನಡೆವಾಸೆಇಂದ "
ಇನಿತಳುಕದೆ ನುಡಿದ ಹೆಣ್ಣ ಕಂಡು ಕೃಷ್ಣ ನಕ್ಕ.
"ಇದು ಭಕ್ತಿಯೋ, ಪ್ರೇಮವೋ, ಮೋಹವೋ, ವ್ಯಾಮೋಹವೋ, ದಾಸ್ಯವೋ, ಸಖ್ಯವೋ ಅಥವಾ ... ? "
"ಅಂದರೆ? ನನಗೊಂದೂ ತಿಳಿಯದಲ್ಲೋ ಕೃಷ್ಣ "
"ಹೋಗಲಿ ಬಿಡು, ತಿಳಿಯುವುದೂ ಬೇಡ "
"ನಿನಗೇನು ಬೇಕು "
"ನಿನ್ನ ಪಾದದಡಿಯ ಹೂವಾಗಬೇಕು "
ಹಾಗೆ ಕೃಷ್ಣನ ದಾರಿಯಲ್ಲಿ ಹೂವಾದವಳ ಹೆಸರು ಪಾರಿಜಾತ .


ಪಾರಿಜಾತದ ಕತೆಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ReplyDeleteಓದಿ ಪ್ರತಿಕ್ರಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು ಕಾಕಾ
Deleteಬಹಳ ಚೆನ್ನಾಗಿದೆ ಸ್ವರ್ಣಾ ಅವರೇ
ReplyDeleteತುಂಬಾ ಧನ್ಯವಾದಗಳು ಬದರಿ ಸರ್ :)
Deleteತುಂಬ ಚೆನ್ನಾಗಿದೆ ಸ್ವರ್ಣ ಅವರೆ.
ReplyDelete- ಚರಿತಾ