Thursday, November 01, 2012

ಪುಟ್ಟ ಪಾರಿಜಾತದ ಕಟ್ಟ ಕಡೆಯ ಪತ್ರ ?





ಚಿತ್ರ ಕೃಪೆ : ಅಂತರ್ಜಾಲ



ಕನ್ನಡದ ಕೆಲಪದಗಳು ನನ್ನಲ್ಲಿ ಅನುಮಾನ ಹುಟ್ಟಿಸುತ್ತವೆ. ಆತ್ಮ ಕಥೆ ಎನ್ನುವ ಪದ ಅಂತಹ ಪದಗಳಲ್ಲಿ ಮೊದಲನೇದು. ಬದುಕಿದ್ದಾಗಲೇ ಆತ್ಮವನ್ನ ಕಂಡ ಜನರೆಷ್ಟು ? ಹಾಗಾದರೆ  ಎಲ್ಲರ ಬದುಕಿನ ಕಥೆಗಳನ್ನೂ ಆತ್ಮಕಥೆ ಎಂದು ಕರೆಯುವುದು ಹೇಗೆ ? ಮನುಷ್ಯ ದೇಹದಲ್ಲಿದ್ದಾಗ ಒಂದು ಸಣ್ಣ ಚಮಚೆ ಇಂದ ಮತ ಧರ್ಮ ದಂತಹ ಎಲ್ಲ ಕ್ಷುಲ್ಲಕ ಕಾರಣಗಳಿಗಾಗಿ ಹಲುಬುತ್ತಾನೆ. ಆದರೆ ನಂತರ ಅವನ ನೆನಹಲ್ಲುಳಿವುದು ಪ್ರೀತಿಸಿದ ಜೀವಗಳು ಮಾತ್ರ.

 ನನ್ನ ಥೀಸಿಸ್ ಮುಗಿದ ಕೂಡಲೇ ದೂರದ ರಾಜ್ಯದ  ರಾಜಧಾನಿಇಂದ ಒಂದು ಕರೆ ಬಂತು.
ನನ್ನ ಥೀಸಿಸ್ ಮತ್ತು ಉಪನ್ಯಾಸಕಿಯಾದ ಅನುಭವಗಳ ಮೇಲೆ ಹದಿ ಹರೆಯದ ಹೆಣ್ಣುಮಕ್ಕಳ  ಮಾನಸಿಕ ಸಮಸ್ಯೆ ಕುರಿತ ಅಧ್ಯಯನಕ್ಕೆ ಕೆಲ ವರ್ಷದ ಪ್ರಾಯೋಜಕತ್ವ ನೀಡಲು ಸಿಧ್ಧ ಅಂತ ಆ ರಾಜ್ಯ ಸರ್ಕಾರ ತಿಳಿಸಿತ್ತು.  ವಿಷಯ ಇಷ್ಟವಾದ್ದರಿಂದ ಒಪ್ಪಿಕೊಂಡೆ.  ರಾಜ್ಯ ಬಿಡುವ ಮುಂಚೆ ಮತ್ತೆ ನನ್ನೂರಿಗೆ ಹೋದೆ. 
ಅಂದಿನ ಡೈರಿ ಹೀಗೆ ಹೇಳುತ್ತೆ : ಇಂದವ ಭೇಟಿಯಾದ ಎಲ್ಲ ಸ್ಥಳಗಳಿಗೆ ಹೋದೆ. ಎಲ್ಲೂ ಅವನೀಗ ಇಲ್ಲಿ ಬರಲಿ ಎಂಬ
ಆಸೆ ಕಾಡಲಿಲ್ಲ.  ಸ್ಕೂಲು , ಕಾಲೇಜಿನ ಆವರಣ ಗಳು , ಗುಡಿಯ ಬೀದಿ , ಅವನ ಮನೆಯ ಬೀದಿ ಎಲ್ಲೆಲ್ಲೂ ಇರುವ  ಸುಂದರ
ನೆನಪುಗಳೊಂದಿಗೆ ನಾ ಹಿಂತಿರುಗಿದೆ. ಅವನ ನಂಬರ್ ಎಂದೋ ಅಳಿಸಿಯಾಗಿತ್ತು. ಇದ್ದರೆ ಫೋನ್ ಮಾಡುತ್ತಿದ್ದೆನಾ ?
ಗೊತ್ತಿಲ್ಲ. ಗೆಳತಿಯನ್ನು ಕೇಳಿ ಅವನ ನಂಬರ್ ಪಡೆಯ ಬಹುದಿತ್ತೇನೋ , ಪಡೆಯಲಿಲ್ಲ. ಅವ ಸಿಗಲಿಲ್ಲ.

ಮನುಷ್ಯ ' ಪ್ರೀತಿಸುತ್ತೇನೆ ' ಎನ್ನುವಾಗ ವ್ಯಕ್ತಿಯನ್ನ ಪ್ರೀತಿಸುತ್ತಾನ , ವ್ಯಕ್ತಿತ್ವವನ್ನ ಪ್ರೀತಿಸುತ್ತಾನ 
ಅಥವಾ ಪ್ರೀತಿಸುತ್ತೆನೆಂಬ  ಭಾವವನ್ನು ಪ್ರೀತಿಸುತ್ತಾನ ? ಎನ್ನುವುದು ಬಹು ಹಿಂದಿನ ಪ್ರಶ್ನೆ. ಈ ಘಟ್ಟದಲ್ಲಿ ನನಗನ್ನಿಸುವುದು, ಒಂದು ಹಂತದಲ್ಲಿ ವ್ಯಕ್ತಿ, ವ್ಯಕ್ತಿತ್ವ ಮತ್ತು ಭಾವ ಲೋಕ ಎಲ್ಲವನ್ನೂ ಒಟ್ಟಾಗಿ  ಪ್ರೀತಿಸುತ್ತಾನೆ. ಪಕ್ವವಾದಂತೆ  'ಪ್ರೀತಿ ' ಯನ್ನ ಮಾತ್ರ ಪ್ರೀತಿಸುತ್ತಾನೆ.


 ಇಷ್ಟಾಗ್ಯೂ, ಸುಂದರ ಭಾವ ಲೋಕದ  ಸೃಷ್ಟಿಗವ ಕಾರಣ , ಅದಕ್ಕೊಂದು ಸ್ವಂತಂತ್ರ  ರೂಪ ಕೊಡಲೂ ಒಂದರ್ಥದಲ್ಲಿ ಅವನೇ ಕಾರಣ , ಹಲ ಭಾವಕೊಶಗಳ ಸಮೂಹ ಬದುಕು ಎಂಬುದನ್ನು ಅರಿತು, ಅವನ ಮೇಲಿನ ಒಲವು ಕಡಿಮೆಯಾಗದೇ, ಅವನಿಲ್ಲದೆಯೆ ಸಂತಸವನ್ನ ಹುಡುಕುವುದನ್ನ ಅವ ಕಲಿಸಿದ್ದನೆ ? ಬದುಕು ಕಲಿಸಲು ಅದೆಷ್ಟು ಗುರುಗಳು.   
  " नित खैर मंगदा सोणेया मैं तेरी
दुवा ना कोई और मंगदी " - सूफी 

ಅವನೊಂದಿಗಿನ ಕೆಲ ಭೇಟಿ ಬಿಟ್ಟರೆ  ಈ ಕಥೆಯಲ್ಲಿ ಇನ್ನೇನಿಲ್ಲ ! ಬದುಕು ಹಾಗೆ ಅಲ್ಲವೆ ? ಹಲ ಭೇಟಿಗಳ ಸರಣಿ ಕೊನೆಯಲ್ಲಿ ಸಾವಿನೊಂದಿಗಿನ ಮುಖಾ ಮುಖಿ.

 ಪಾರಿಜಾತದ ಗಿಡ ಅವನ ತೋಟದಲ್ಲೇಕೆ ಬಂತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕ ಬಹುದಿತ್ತೇನೋ ? ಯಾಕೋ ಅದು ಮುಖ್ಯವೆನಿಸಲಿಲ್ಲ. ಗೋಪಿಕೆಯರ ಪ್ರೀತಿ ಇಂದಿಗೂ ಜೀವಂತವಾಗಿರಲು ಒಂದು ಕಾರಣ ,  ಅವರ್ಯಾರು ಕೃಷ್ಣನನ್ನ  ನಮ್ಮ ನಿನ್ನ ಬಂಧದ ಸ್ವರೂಪವೇನು ಎಂಬ ಪ್ರಶ್ನೆ  ಕೇಳಲೇ  ಇಲ್ಲ.  ಮಗುವಾಗಿ ಹುಟ್ಟಿದವಳು ಹುಡುಗಿಯಾಗಿ ,  ಹೆಣ್ಣಾಗಿ, ಹೆಂಗಸಾಗಿ ಅವನೊಂದಿಗೆ ಬೆಳೆದಿದ್ದೆ. ನನ್ನಲ್ಲಿನ ಸ್ವತಂತ್ರಗೀತೆಗೊಂದು ರೂಪ ಕೊಟ್ಟವರಲ್ಲಿ ಅವನೂ ಒಬ್ಬ. ನನ್ನ ಬದುಕನ್ನ ಸುಂದರವಾಗಿಸಿದವನ ಬದುಕು ಸುಂದರವಾಗಿರಲಿ. ಅವನ ಮೊಗದಲ್ಲೊಂದು ನಗೆಯ ಮಿಂಚು ಹೊಳೆಯುತಿರಲಿ.

ಅಜ್ಜಿ ಹೇಳುತ್ತಿದ್ದಳು , ಪಾರಿಜಾತದ ಗಿಡ ಹತ್ತುವುದು ಕಷ್ಟ, ಹತ್ತಿದ ಮೇಲೆ ಹೂ ಬಿಡಲು ತೆಗೆದುಕೊಳ್ಳುವ ಅವಧಿಯೂ ಇತರ ಗಿಡಗಳಿಗೆ ಹೋಲಿಸಿದರೆ ಹೆಚ್ಚು, ಆದರೆ ಒಮ್ಮೆ ಹತ್ತಿದ ಮೇಲೆ ಮರವಾಗತ್ತೆ, ಬೊಗಸೆ ತುಂಬಾ ಸುಕೋಮಲ ಸುಂದರ ಹೂ ಕೊಡತ್ತೆ , ಪ್ರತೀ ಶ್ರಾವಣದ ಮಳೆಯಲ್ಲೂ ತನ್ನದೇ ತದ್ರೂಪಿನ ಒಂದು ಸಸಿಯನ್ನ ಸೃಷ್ಟಿಸುತ್ತೆ. ಅವನ ಮನೆ ಮುಂದೇಕೆ ಪಾರಿಜಾತವಿತ್ತು ಎಂಬ ಪ್ರಶ್ನೆಗೆ ಉತ್ತರವನ್ನ ನಾ ಹುಡುಕಲಿಲ್ಲ , ಅದು ಹೆಮ್ಮರವಾಗಬಹುದು, ಮಳೆ ಗಾಳಿಗೆ ಉರುಳಬಹುದು , ಬಿಸಿಲಿಗೆ ಬಾಡಬಹದು. ಹಾಗೊಂದು ವೇಳೆ  ಪಾರಿಜಾತ ಬಾಡಿದರೆ, ಉರುಳಿದರೆ  ಅವನದೇ ತೋಟದ ಇತರ ಗಿಡಗಳ ಗೊಬ್ಬರವಾಗತ್ತೆ. ಹೆಮ್ಮರವಾದರೆ  ದಿನವೂ  ಹೂ ಚೆಲ್ಲುತ್ತದೆ.

ಗಮನವಿತ್ತಲ್ಲದೆ ಪಾರಿಜಾತದ ಕಂಪನ್ನೂ  ಆಘ್ರಾಣಿಸಲಾಗದು. ಅದಕೆ ಅದೆಷ್ಟೋ ಪಾರಿಜಾತಗಳು ರಸ್ತೆಯ ಮೇಲೆ ಹೊಸಕಲ್ಪಡುತ್ತವೆ, ಅದೇನೇ ಇರಲಿ , ಭಾವವಿರುವವರೆಗೆ ಪಾರಿಜಾತ  ಜೀವಂತ.
 ಈ ಬಂಧದ ಹೆಸರು ? ಮುಟ್ಟಿ ಮೈಲಿಗೆಯಾಗದ ಪುಟ್ಟ ಪಾರಿಜಾತ .



ಚಿತ್ರ ಕೃಪೆ : ಅಂತರ್ಜಾಲ 

Embark on the Journey of Love
It takes you from yourself to your'self.'

~ Rumi

ಸಧ್ಯಕ್ಕೆ ಮುಗಿಯಿತು

4 comments:

  1. ಸ್ವರ್ಣಾ,
    ಇಷ್ಟೆಲ್ಲ ದಿನ ನವಿರು ಕಂಪನ್ನು ನಮಗೆ ನೀಡಿದ ಪುಟ್ಟ ಪಾರಿಜಾತಕ್ಕೆ ನನ್ನ ಅನೇಕ ಧನ್ಯವಾದಗಳು. ಈ ಕಂಪು ಮನದಲ್ಲಿ ಉಳಿಯುವಂತಹದು.

    ReplyDelete
    Replies
    1. ನಿಮ್ಮ ಕೈಯಲ್ಲಿ ಪಾರಿಜಾತ ಧನ್ಯ ಕಾಕಾ
      ಧನ್ಯವಾದಗಳು

      Delete
  2. ಗೆಳತಿ, ಎರಡೂ ಕೈ ತಾಕಿದಾಗಲೇ ಚಪ್ಪಾಳೆಯ ಸದ್ದೂ ಕೇಳುವುದು. ಅಂತೆಯೇ ಪ್ರೀತಿಯಲ್ಲೂ ಅವನು ಹತ್ತಿರ ಬಂದಾಗಲೆಲ್ಲ ಆಕೆ ಸ್ಪಂದಿಸಲೇ ಇಲ್ಲ!

    ಅವನು ಹತ್ತಿರವಾದಾಗಲೆಲ್ಲ ಮುಗಮ್ಮಾಗುವ ನಾಯಕಿ, ಅವನ ಅನುಪಸ್ತಿತಿಯಲ್ಲಿ "ಅವನಿಲ್ಲದೆಯೆ ಸಂತಸವನ್ನ ಹುಡುಕುವುದನ್ನ ಅವ ಕಲಿಸಿದ್ದನೆ ?" ಎಂದು ಉದ್ಗರಿದರೆ ಅರ್ಥಕ್ಕೆ ಸಿಗುವುದೇ ಇಲ್ಲ.

    ಪಾರಿಜಾತವೆಂಬ ಪ್ರತಿಮೆಯು ಹೆಣ್ಣಿಗೆಷ್ಟು ಒಪ್ಪುತ್ತದೆಯೋ ಅಷ್ಟೇ ಗಂಡಿಗೂ ಅವ್ನಯಿಸುತ್ತದೆ!

    ಒಟ್ಟಾರೆ ಮನಸ್ಸಿಗೆ ತಾಕಿದ ಪೋಸ್ಟ್ ಇದು.

    ReplyDelete
    Replies
    1. ಕಥೆಯಲ್ಲಿ ಏಕೆ ಎಂಬ ಪ್ರಶ್ನೆಗಲಿರಬಾರದಲ್ಲವೇ ಬದರಿ ಸರ್ ?
      ಪ್ರತಿಕ್ರಿಯೆಗಾಗಿ ಧನ್ಯವಾದಗಳು

      Delete