
![]() |
| ಚಿಂತಾಮಣಿಯ ಮಂದಿರ |
![]() |
| ಬೆಂಗಳೂರಿನ ಮಂದಿರ |
ಚಿತ್ರ ಕೃಪೆ : ಅಂತರ್ಜಾಲ
ನಮ್ಮೂರಲ್ಲಿ ಒಂದು ಬೀದಿಯಲ್ಲಿ ಬರೀ ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ನಮ್ಮನೆ ಈ ಬೀದಿ ಎದುರಿತ್ತು.
ಸತ್ಯ ಸಾಯಿ ಮಂದಿರಕ್ಕಂಟಿಕೊಂಡಂತೆ ಒಂದು ಪುಟ್ಟ ಗಣಪನ ಗುಡಿ, ಅಲ್ಲಿ ವಾರಕ್ಕೆ ಒಮ್ಮೆ
ಭಜನೆ ನಡೆಯುತ್ತಿತ್ತು. ದಿನಾ ನಡೆಯುತ್ತಿತೇನೋ ನನಗೆ ಗೊತ್ತಿಲ್ಲ. ಕೆಲ ವರ್ಷಗಳ ನಂತರ ಅದೇ ಆವರಣದಲ್ಲಿ
ಒಂದು ಶಾಲೆ ಪ್ರಾರಂಭವಾಯಿತು. ಅಲ್ಲಿ ಶನಿವಾರ ಬಾಲವಿಕಾಸ ಅಂತ ಒಂದು ತರಗತಿ ನಡಿತಿತ್ತು. ಕೆಲ ವಾರ ನಾನೂ
ಅಲ್ಲಿಗೆ ಪಾದ ಬೆಳಿಸಿ, ಅಲ್ಲಿನ ಶೋಭೆ ಹೆಚ್ಚಿಸಿದ್ದೆ.
ಸಾಯಿ ಮಂದಿರದ ಪಕ್ಕದಲ್ಲಿದ್ದುದು ರಾಯರ ಮಠ. ಅಲ್ಲಿಗೆ ಅಮ್ಮ ಯಾವಾಗಲೂ ಹೋಗುತ್ತಿದರು.
ನಾವು ಹೋಗಿದ್ದು ಕಡಿಮೆ. ಮಠದ ಪಕ್ಕ ಒಂದು ರಾಮರ ದೇವಸ್ಥಾನ, ಅದರ ಸುತ್ತ ಆಡಲಿಕ್ಕೆ ಒಳ್ಳೆ ಜಾಗ ಇತ್ತು .
ಈ ದೇವಸ್ಥಾನದ ಹಿಂದೆ ಒಂದು ಸಣ್ಣ ಮಂದಿರವಿತ್ತು. ಮಂದಿರ ಎಂದರೆ, ವಿಗ್ರಹವಿಲ್ಲ, ಗರ್ಭಗುಡಿ ಇಲ್ಲ ಮತ್ತು ಎಲ್ಲ ಕ್ಕಿಂತ ಮುಖ್ಯ ಇಲ್ಲಿಗೆ ಅಮ್ಮ ಮತ್ತು ಇನ್ನು ಎಷ್ಟೋ ಜನ ಸ್ನಾನ ಮಾಡದೆ ಬರುತ್ತಿದ್ದರು, ಹಾಗೆ ಬಂದವರು ತಾವೇ ಅಲ್ಲಿಟ್ಟಿದ್ದ ನೆನ್ನೆಯ ತೀರ್ಥ ತೊಗೊಂಡು, ಅಲ್ಲೇ ಇಟ್ಟಿರುತ್ತಿದ್ದ ಜಪ ಮಾಲೆ ತೆಗೆದು ಕೊಂಡು ಒಂದಷ್ಟು ಜಪ ಮಾಡಿ ಹೊರಡುತ್ತಿದ್ದರು. ಅಲ್ಲಿ ದೊಡ್ಡ ದಾದ ಎರಡು ಫೋಟೋ ಮತ್ತು ಒಂದು ಜೊತೆ ಪಾದುಕೆ ಮಾತ್ರ ಇತ್ತು. ಪ್ರತೀ ಗುರುವಾರ, ರಾತ್ರಿ ಸುಮಾರು ೧೧ರವರೆಗೆ ಭಜನೆ ನಡೆಯುತ್ತಿತ್ತು. ಭಜನೆಯ ನಂತರ ಭೋಜನಕ್ಕೆ ಸಮ ಆದರೆ ಭೋಜನವಲ್ಲದ ಸಿಹಿ ಅವಲಕ್ಕಿ ಪ್ರಸಾದ. ಪ್ರಸಾದ ಹಂಚುವುದಕ್ಕೆ ನಿಲ್ಲುತ್ತಿದ್ದವರು, ಮಂದಿರದ ಸಿಬ್ಬಂದಿಗಳು ಒಂದೋ ಅಮ್ಮನ ಸಂಬಧಿಗಳು ಅಥವಾ ಒಳ್ಳೆ ಪರಿಚಯದವರಾದ್ದರಿಂದ ಪ್ರಸಾದ ಜಾಸ್ತಿ ಕೊಡುತ್ತಿದ್ದರು. ಆದ್ದರಿಂದ ಅಮ್ಮ ಶುಕ್ರವಾರ ಬೆಳಿಗಿನ ತಿಂಡಿಯನ್ನ ರದ್ದು ಪಡಿಸಿ ಬಿಡುತ್ತಿದ್ದಳು. ಸಿಹಿ ಅವಲಕ್ಕಿಗೆ ಒಂದಿಷ್ಟು ಹಾಲು ಹಾಕಿ ಇಂದಿನ ತಿಂಡಿ ಕಥೆ ಗೋವಿಂದಾ ಅನ್ನೋಳು. ನಮಗೆ ಅದರಲ್ಲೂ ನನಗೆ ಬೆಳ್ಳಂ ಬೆಳಿಗ್ಗೆ ಸಿಹಿ ಅವಲಕ್ಕಿ ತಿನ್ನೋದು ಅಂದರೆ ಕಾಲಾಪಾನಿ ಶಿಕ್ಷೆಗೆ ಸಮ. ಆದರೇನು ಮಾಡೋದು ? ಹೊರ ಹೋಗಿ ತಿನ್ನುವಷ್ಟು ಕಾಸು , ಧೈರ್ಯ ಎರಡೂ ಇಲ್ಲ, ಅಮ್ಮ ತಟ್ಟೆಗೆ ಹಾಕಿದ್ದನ್ನ ತಿನ್ನದೇ ಬೇರೆ ವಿಧಿ ಇಲ್ಲ. ಕೆಲವೊಮ್ಮೆ ಆ ಜಗನ್ನಿಯಾಮಕ ನಮ್ಮ ಮೇಲೆ ಕರುಣೆ ತೋರಿ, ಆವತ್ತಿನ ಸೇವಾಕರ್ತರು ಕಡ್ಲೆ ಕಾಳು ಉಸುಳಿ , ಖಾರ ಅವಲಕ್ಕಿ, ಉಪ್ಪಿಟ್ಟು ಕೊಟ್ಟರೆ ನಮ್ಮ ಶಿಕ್ಷೆ ರದ್ದಾಗುತ್ತಿತ್ತು. ವರ್ಷಕ್ಕೆ ಎರಡು ಮೂರು ಬಾರಿ ಗುರುಗಳ ಜಯಂತಿ, ಆರಾಧನೆ ಪ್ರಯುಕ್ತ ಎರಡು ಮೂರು ದಿನ ಒಳ್ಳೆ ಊಟ ಹಾಕೋರು, ಆಗ ನಮ್ಮನೇಲಿ ಅಮ್ಮ ಅಡಿಗೆ ಮನೆನೇ ಬಂದ್ ಅಂದು ಬಿಡೋಳು. ಆಗ ಇಷ್ಟು ಬಿಟ್ಟರೆ ಆ ಮಂದಿರದ ಬಗ್ಗೆ ನನಗೇನೂ ತಿಳಿದಿರಲಿಲ್ಲ.
ಮಂದಿರದಲ್ಲಿದ್ದ ಎರಡು ಫೋಟೋಗಳು ಸದ್ಗುರು ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೇಕರ ಮತ್ತು ಬ್ರಹ್ಮಾನಂದ ಮಹಾರಾಜರದು.ಮಹಾರಾಜರ ಚರಿತ್ರೆಯನ್ನ ಇಲ್ಲಿ ಬರೆಯುವಷ್ಟು ನನಗೆ ಅವರ ಬಗ್ಗೆ ಗೊತ್ತಿಲ್ಲ. ಗೊತ್ತಿದ್ದಷ್ಟನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.ಗೊಂದಾವಲೆಕರ್ ಮಹಾರಾಜರ ಬಾಲ್ಯದ ಹೆಸರು ಗಣಪತಿ. ಬ್ರಹ್ಮಚೈತನ್ಯ ಎಂಬುದು ಅವರ ಗುರುಗಳಾದ ತುಕಾಮಾಯಿಯವರು ಕೊಟ್ಟ ಹೆಸರು. ಅವರು ನಿಲುವಂಗಿ ತೊಟ್ಟು ಬರುತ್ತಿದ್ದರೆ ಯಾವುದೋ ರಾಜ ಮಹಾರಾಜ ಬಂದಂತಾಗುತಿತ್ತಂತೆ, ಅದಕ್ಕೆ ಭಕ್ತರು ಅವರನ್ನ ಪ್ರೀತಿಯಿಂದ ' ಮಹಾರಾಜ ' ಎನ್ನುತ್ತಾರೆ.
ಪ್ರೀತಿಯೇ ಮೂರ್ತಿವೆತ್ತಂತ್ತಿದ್ದ ಮಹಾರಾಜರು ಭಕ್ತರಿಗೆ ತೋರಿದ ಪ್ರೇಮಕ್ಕೆ ಎಣೆ ಇಲ್ಲ. ಗೊಂದಾವಲೆಗೆ ಹೋದ ಎಲ್ಲ ಹೆಣ್ಣುಮಕ್ಕಳಿಗೂ ಸ್ವತಃ ಮಹಾರಾಜರು ಕಣ , ಅಕ್ಕಿಗಳಿಂದ ಉಡಿ ತುಂಬುತ್ತಿದ್ದರಂತೆ. ಮಂದಿರದ ಅಡಿಗೆಗಿದ್ದ ಹೆಂಗಸು (ಕಾಶಿ ತಾಯಿ) ಒಂದು ದಿನ ರಾತ್ರಿ ಮಹಾರಾಜರ ಪಾದದ ಮೇಲೆ ತಲೆ ಇಟ್ಟಾಗ ಅವಳಿಗೆ ಜ್ವರ ಇತ್ತಂತೆ. "ತಾಯಿ ನಿಮಗೆ ಜ್ವರ ವಿರುವುದಲ್ಲ ?" ಅಂದರಂತೆ ಮಹಾರಾಜರು. ಅದಕವಳು "ಹೌದು ಮಹಾರಾಜ" ಅಂದಳಂತೆ. ಮಾರನೆ ದಿನ ಬೆಳಿಗ್ಗೆ ಕಾಶಿ ತಾಯಿ ಎದ್ದು ಕೆಲಸದಲ್ಲಿ ತೊಡಗಿದ್ದರೆ ಮಹಾರಾಜರು ಜ್ವರ ದಿಂದ ಮಲಗಿದ್ದರಂತೆ. ಮತ್ತೊಮ್ಮೆ ಬಸುರಿಯ ಆಸೆ ಅಗತ್ಯಗಳನ್ನರಿತು ಮಹಾರಾಜರು ಸ್ವತಃ ಅವಳಿಗೆ ಅಂಟಿನ ಉಂಡೆ ಮಾಡಿಸಿ ಕೊಟ್ಟಿದ್ದರು. ಇಂತಃ ಘಟನೆಗಳು ಸಾವಿರಾರು ಸಿಗಬಹುದು ಅವರ ಚರಿತ್ರೆಯಲ್ಲಿ.
ಅವರ ಅನನ್ಯ ಭಕ್ತರೊಬ್ಬರು (ಬಹುಶಃ ಅವರ ಹೆಸರು ಕೇತ್ಕರ್ ಇರಬಹುದು) ತಮ್ಮ ಮಗನ ಮದುವೆಯನ್ನ ಮಹಾರಾಜರ ಸಮಕ್ಷಮದಲ್ಲಿ ಮಾಡಬೇಕೆಂದು ಗೊಂದಾವಲೆಯಲ್ಲಿ ಮದುವೆ ಮಾಡುತ್ತಾರೆ. ಆದರೆ ಮುಹೂರ್ತದ ಹೊತ್ತಿಗೆ ತಮ್ಮ ಕೋಣೆಗೆ ಹೋಗಿ ಮಲಗಿದ ಮಹಾರಾಜರು ಏಳುವುದೇ ಇಲ್ಲ. ಮುಹೂರ್ತ ಮೀರುತ್ತದೆಂದು ಹೇಳಿದ ಜನರಿಗೆ ಭಕ್ತರು ಮಹಾರಾಜರು ಬರದೆ ಮದುವೆ ನಡೆವುದಿಲ್ಲವೆಂದು ಹೇಳಿ ಕಾಯುತ್ತಾರೆ. ಮಹಾರಾಜರು ಬೆಳಿಗ್ಗೆ ಸುಮಾರು ೪ ರ ಹೊತ್ತಿಗೆ ಎದ್ದ ನಂತರ ಮದುವೆ ನಡೆಯುತ್ತದೆ. ಜೋತಿಷಿಗಳು ನಂತರ ಮತ್ತೆ ಪಂಚಾಂಗ ನೋಡಿದರೆ ಮದುವೆ ನಡೆದ ಮುಹೂರ್ತ ಅಮೃತ ಘಳಿಗೆಯಾಗಿರುತ್ತದೆ. ಇಂತಹ ಘಟನೆಗಳು ಎಷ್ಟೋ ನಡೆದಿವೆ ಅವರು ದೇಹದಲ್ಲಿದ್ದಾಗ ಮತ್ತು ಇಲ್ಲವಾದ ಮೇಲೂ .
ಮಹಾರಾಜರು ಭಕ್ತರಲ್ಲಿ , ಅವರಲ್ಲಿಗೆ ಬಂದವರಲ್ಲಿ ಮಾಡಿದ ವಿನಂತಿ (ಸ್ವತಃ ಅವರೇ ಅದನ್ನ ವಿನಂತಿ ಎಂದು ಕರೆದು ಕೊಂಡಿದ್ದಾರೆ) ಎಂದರೆ ರಾಮ ನಾಮ ಜಪ ಮಾಡುವುದು. "ಶ್ರೀ ರಾಮ ಜಯರಾಮ ಜಯಜಯರಾಮ" ಎಂಬ ತ್ರಯೋದಶಾಕ್ಷರ (೧೩) ಮಂತ್ರವನ್ನಷ್ಟೇ(?) ಅವರು ಭಕ್ತರಿಗೆ ಹೇಳಿ ಕೊಟ್ಟದ್ದು.
ವರಕವಿ ದ.ರಾ. ಬೇಂದ್ರೆಯವರ ತಾಯಿ ಮತ್ತು ಅಜ್ಜಿ ಸ್ವತಃ ಮಹಾರಾಜರಿಂದ ಜಪೋಪದೇಶ ಪದೆವರಾಗಿದ್ದರು.
ಬೇಂದ್ರೆಯವರು ಬಾಲಕರಾಗಿದ್ದಾಗ ಮಹಾರಾಜರು ಅವರನ್ನ ಹರಸಿದ್ದರಂತೆ . ಬೇಂದ್ರೆಯವರು ಕೆಲವೆಡೆ ತಮಗೆ ಹೊಳೆಯುತ್ತಿದ್ದ ವೇದಾಂತ ಸಂಖ್ಯಾಜ್ಞಾನಕ್ಕೆ ಗೊಂದವಲೆಕರ್ ಮಹಾರಾಜರೇ ಕಾರಣ ಎಂದು ' ಗೋದಲೆಗೆ ಬಾ ಗೋದು ಹೇ' ಎಂಬ ಕವಿತೆಯ ಕೊನೆಗೆ ಬರೆದಿದ್ದಾರೆ ಎಂದು ಓದಿದ ನೆನಪು.
ಮಹಾರಾಜರ ಚರಿತ್ರೆ ಮತ್ತು ಉಪನ್ಯಾಸಗಳನ್ನು ಬೆಲಸರೆ ಬಾಬಾ (ಮುಂಬೈ ಐಐಟಿ ಪ್ರೊಫೆಸರ್ ಆಗಿದ್ದ ಕೆ.ವಿ. ಬೆಲಸರೆ)ಯವರು ಮರಾಟಿಯಲ್ಲಿ ಬರೆದಿದ್ದರೆ ಧಾರವಾಡದ ಬಳಿಯ, ಹೆಬ್ಬಳ್ಳಿಯ ದತ್ತಾವಧೂತರು ಕನ್ನಡಕ್ಕೆ ತಂದಿದ್ದಾರೆ. ಮಹಾರಾಜರ ಪ್ರವಚನ ಗಳನ್ನ ಸಂಪಾದಿಸಿ ದಿನಕ್ಕೊಂದರಂತೆ ಮುದ್ರಿಸಲಾಗಿದೆ.ಅದನ್ನು ಅಂತರ್ಜಾಲದಲ್ಲಿ ಇಲ್ಲಿ ಓದಬಹುದು.
" ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ " ಎಂಬುದು ಮಹಾರಾಜರ ಆರತಿಯಲ್ಲಿ ಬರುವ ಒಂದು ಸಾಲು. ಕಾಶಿ ಯಾತ್ರೆಯ ಸಮಯದಲ್ಲಿ , ಮಹಾರಾಜರು ಊರಿನ ಭಿಕ್ಷುಕರಿಗೆ ಊಟ ಹಾಕಿಸಬೇಕೆಂದಾಗ, ಅಡಿಗೆಯವರು ಇಂದಿರುವುದು ಸುಮಾರು ಒಂದು ಪಾವು ಅನ್ನ ಅಂದರಂತೆ. " ಇರಲಿ, ರಾಮನ ಇಚ್ಛೆಯಲ್ಲಿ ಎಷ್ಟು ಜನ ಉಣ್ಣಬೇಕೆಂದಿದೆಯೋ ಅಷ್ಟು ಜನ ಉಣ್ಣುತ್ತಾರೆ ಕರೆಯಿರಿ " ಅಂದರಂತೆ ಮಹಾರಾಜರು. ಸಾವಿರಕ್ಕೂ ಮಿಕ್ಕಿ ಜನ ಊಟ ಮಾಡಿದರೂ ಅನ್ನವಿನ್ನೂ ಇತ್ತು ಎಂಬುದು ಅವರ ಚರಿತ್ರೆಯಲ್ಲಿ ಬರುವ ಪ್ರಸಂಗ.ಇಂದಿಗೂ ಮಹಾರಾಜರ ಮಂದಿರಗಳಲ್ಲಿ ಅನ್ನದಾನಕ್ಕೆ ಪ್ರಾಮುಖ್ಯತೆ ಇದೆ. "ಮನುಷ್ಯ ಸಾಕು ಎನ್ನುವುದು ಅನ್ನವನ್ನು ಮಾತ್ರ, ಅದಕ್ಕೆ ಅನ್ನ ದಾನವೇ ಶ್ರೇಷ್ಠ " ಎನ್ನುತಿದ್ದರಂತೆ ಮಹಾರಾಜರು. ಅವರ ಭಕ್ತರ ಮನೆಗಳಲ್ಲಿ ಅನ್ನಕ್ಕೆಂದೂ ಕೊರತೆಯಾಗದು ಎಂಬುದು. ಆಸ್ತಿಕರ ನಂಬಿಕೆ.ಸಂತರ ಬಗ್ಗೆ ಹೇಳಲು ಪದಗಳು ಸಾಲವು.
ಶ್ರೀರಾಮ ಸಮರ್ಥ
ಶ್ರೀರಾಮ ಜಯರಾಮ ಜಯಜಯ ರಾಮ



ಸ್ವರ್ಣಾ,
ReplyDeleteನಮ್ಮೂರಿನಲ್ಲಿದ್ದ ದತ್ತಾತ್ರೇಯ ಗುಡಿಯಲ್ಲಿ ಪ್ರತಿದಿನ ಸಂಜೆ ಭಜನೆ ಮಾಡುವಾಗ, ಬ್ರಹ್ಮಚೈತನ್ಯ ಮಹಾರಾಜರ ಹಾಗು ಬ್ರಹ್ಮಾನಂದ ಸ್ವಾಮಿಗಳ ಭಜನೆಗಳು ಆಗುತ್ತಿದ್ದವು. ನಾನು ಚಿಕ್ಕವನಿದ್ದಾಗ ಈ ಭಜನೆಗಳನ್ನು ಕೇಳಿದ್ದೆ. ಬ್ರಹ್ಮಚೈತನ್ಯ ಮಹಾರಾಜರು ಮಹಿಮಾವಂತರು.
ಹೌದು ಕಾಕಾ ಧನ್ಯವಾದಗಳು.
Deleteಶ್ರೀ. ಗೋಂದಾವಲೇಕರ ಮತ್ತು ಬ್ರಹ್ಮಾನಂದ ಮಹಾರಾಜರರ ಬಗೆಗೆ ಒಳ್ಳೆಯ ಬರಹ. ಬೇಂದ್ರೆ ಅಜ್ಜನ ಕವನವನ್ನು ನೆನಪಿಸಿದ್ದು ಒಳ್ಳೆಯದಾಯಿತು.
ReplyDeleteಮುಖ್ಯವಾಗಿ ಮನಸ್ಸಿಗೆ ನಾಟಿದ್ದು "ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ".
ನನಗೂ ಈ ದೇವಸ್ಥಾನಗಳ ಪ್ರಸಾದಗಳ ಹುಚ್ಚು ಈಗಲೂ ಹೋಗಿಲ್ಲ.
:) ಧನ್ಯವಾದಗಳು ಸರ್.
Delete