Sunday, September 27, 2015

ಹೊಂದಾಣಿಕೆ ,ಶಿಲುಬೆ, ಸಂಬಂಧ


ಚಿತ್ರಕೃಪೆ : ಅಂತರ್ಜಾಲ




ಮನ್ನಣೆಯ ದಾಹವೆಂಬುದು ಆತ್ಮವನ್ನೇ ತಿನ್ನುವುದು ಎಂದು ತಿಮ್ಮಗುರು ಹೇಳಿದ್ದು ಕೇಳಿದಾಗ ಹೌದಾ ? ಅಷ್ಟು ತೀಕ್ಷ್ಣವಾ ? ಎಂಬ ಅನುಮಾನ ಕಾಡಿತ್ತು . ಬದುಕಿನ ಬಹುತೇಕ ಅನುಮಾನಗಳಿಗೆ ಬದುಕು ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತದೆ. ಪ್ರಶ್ನೆ ಮರೆತರೂ ಉತ್ತರವಿತ್ತೇ ಸೈ ಎನ್ನುವ ಹಠಮಾರಿ !

ಪರಿಚಯಸ್ಥರಲ್ಲಿ ಒಬ್ಬರಿದ್ದಾರೆ. ' ಏ  ಆಯಮ್ಮ ಬಿಡ್ರಿ ಎಂಥಾ ಹೆಂಗ್ಸು, ಕೈ ಮುಗೀಬೇಕು !' ಎಂಬ ಉದ್ಗಾರವಿಲ್ಲದೇ ಅವರ ಬಗ್ಗೆ ಮಾತಾಡೋರು ಕಡಿಮೆ. ಯಾರಿಗೆ ಏನೇ ಕಷ್ಟ ಎಂದರೂ ಸಹಾಯಕ್ಕೆ ಸದಾ ಸಿಧ್ಧ. ಅವರ ಬಳಿ ಹಣವಿಲ್ಲದಿದ್ದರೂ ಸಾಲ ತಂದಾದರೂ ಪರರ ಕಷ್ಟ ನೀಗುವ ಮನಸು. ಆಕೆಗೆ ತಕ್ಕ ಗಂಡ, ಮರು ಮಾತನಾಡದೇ ಹೆಂಡತಿ ಹೇಳಿದ ಎಲ್ಲವನ್ನೂ ಪಾಲಿಸುವವರು. ಹಾಗೆ ಪಾಲಿಸದಿದ್ದರೆ ಆತನ ಹುಳುಕುಗಳೂ ಹೊಸ್ತಿಲು ದಾಟಿಯಾವೆಂಬ ಭಯವೂ ಇರಬಹುದು. ಅವರ ಮನೆಯಲ್ಲಿ ತಿಂಡಿಗೆ ಪೂರಿ ಮಾಡಿದರೆ ಒಂದು ನೂರು  ಪೂರಿ ಮಾಡಿ ಟೇಬಲ್ ಮೇಲೆ ಇಡುತ್ತಾರೆ. ಮನೆಗೆ ಹೋದ ಎಲ್ಲರಿಗೂ ಪೂರಿ ತಿಂದು ತಟ್ಟೆಯನ್ನು ಅವರಿಗೇ  ತೊಳೆಯಲು ಇಟ್ಟು ಬರುವ ಸ್ವಾತಂತ್ರ್ಯ ಕೊಟ್ಟಿದ್ದಾರೆ . ಇದು ಕಥೆಯಲ್ಲ ಜೀವನವೇ ! 'ಆಕಿ ಬಿಡ್ರಿ ಅನ್ನಪೂರ್ಣೆಶ್ವರಿ ಇದ್ದಂಗೆ ' ಎಂಬ ಬಿರುದನ್ನು ಸುತ್ತಲಿನವರು ದಯಪಾಲಿಸಿದ್ದಾರೆ ಮತ್ತು ಆಗಾಗ ಅವರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಬಿರುದುಗಳನ್ನು ಸೇರಿಸುತ್ತಲೇ ಇರುತ್ತಾರೆ. 'ಅಯ್ಯೋ ನಮ್ಮನೇಲಿ ಎಷ್ಟು ಮಾಡಿದ್ರೂ ಖರ್ಚಾಗುತ್ತೆ ' ಎನ್ನುತ್ತಲೇ ಆಕೆ ಪೂರಿ ಕರಿಯುತ್ತಲೇ  ಇದ್ದರು .  ಒಂದು ದಿನ  ಮಗ ಬೆಳೆದು ನಿಂತ, ಅವನಿಗೊಂದು ಜೊತೆ ಬಂತು , ಮನೆಗೆ ಸೊಸೆ ಬಂದಳು.  ಇರುವ ಮೂರು ಮತ್ತೊಂದು ಜನಕ್ಕೆ ನೂರು ಪೂರಿ ಯಾಕೆ  ? ಇಷ್ಟೊಂದು ಸಾಲ ತೀರಿಸೋರು ಯಾರು ? ಎಂಬ ಪ್ರಶ್ನೆಗಳು ಆರಂಭವಾದವು.  ಈಗ ಸುತ್ತಲಿನವರು 'ಎಂಥಾ ಅತ್ತಿಗ್ ಎಂಥಾ ಸೊಸಿ. ಎಲ್ಲಾ ಕಲಿಗಾಲರಿ ' ಎನ್ನುತ್ತಿದ್ದಾರೆ.

ಒಂದೂರಲ್ಲೊಬ್ಬ ಯಜಮಾನ. ಊರಿನ ಎಲ್ಲರೂ ತನ್ನ ಮನೆಗೆ ಬರಬೇಕು , ಪರ ಊರಿನಿಂದ ಯಾರೇ ಬಂದರೂ ಅವರಿಗೆ ತನ್ನ ಮನೆಯಲ್ಲೇ ಆತಿಥ್ಯ ನಡೆಯಬೇಕು ಎಂಬ ಮನಸಿನವ.  ರಾತ್ರಿ ಊಟದ ಹೊತ್ತಿಗೆ ಬಂದ ಅತಿಥಿಗೂ 'ಸೊಲ್ಪ್  ಚಾ ಕುಡಿರಿ' ಎಂದು ಅದೇ ಉಸಿರಿನಲ್ಲಿ 'ಅರ್ಧ ಶುಗರ್ ಲೆಸ್ ಚಾ ತಾ ' ಎಂಬ ಆಜ್ಞೆ ಹೊರಡಿಸಿಬಿಡುತ್ತಾನೆ. ಅಡುಗೆ ಮನೆಯಲ್ಲಿ ಹಾಲಿದೆಯೇ  ? ಚಾಪುಡಿ ಮುಗಿದಿದೆಯಾ ? ಎಂಬ ಪ್ರಶ್ನೆಗಳು ಅವನಿಗೆ ಅಪರಿಚಿತ. ಮಕ್ಕಳಿಗೆ ಇಟ್ಟ ಹಾಲಿನಲ್ಲೋ , ಹೆಪ್ಪಿಗಿಟ್ಟ ಹಾಲಿನಲ್ಲೋ ಹಾಲು ತೆಗೆದು ಪಕ್ಕದ ಮನೆಯಿಂದ ಚಾಪುಡಿ ತಂದು ಆ ಸಾಧ್ವಿ ಶಿರೋಮಣಿ ಅರ್ಧ ಕಪ್ ಚಹಾದ ಆಜ್ಞೆಯನ್ನು ಪಾಲಿಸುತ್ತಾಳೆ. ಮೂರ್ನಾಲ್ಕು ದಶಕಗಳ ಕಾಲ ಅಜ್ಞಾ ಪರಿಪಾಲನೆ ಸುಸೂತ್ರ (?)ವಾಗಿ ನಡೆಯುತ್ತದೆ. ಆಜ್ಞೆಗಳನ್ನು ನಾನು ಪಾಲಿಸುವುದಿಲ್ಲ ಎಂದು ಹೇಳಲು ಹೆಂಡತಿಗೆ ಅವಳದ್ದೇ ಆದ ಕಾರಣಗಳಿವೆ . ಎಲ್ಲಕ್ಕಿಂತ ಒಂದು ತೂಕ ಹೆಚ್ಚಿರಬಹುದಾದ ಕಾರಣ 'ಅಯ್ಯಾ ಗಂಡ ಮಾಡಂದ್ರೂ  ಮಾಡ್ಲಿಲ್ ನೋಡ್ರಿ ಈಕಿ ಎಂಥಾ ಹೇಣ್ತಿ ' ಎಂದು ತನ್ನ ಪತ್ನಿತ್ವದ ಬಗ್ಗೆ ಅಪಸ್ವರಗಳು ಬಂದರೆ ?ಎಂಬುದಾಗಿರುತ್ತದೆ.  ಊರಿಗೆ ಬಂದ ಎಲ್ಲರೂ ಇವರ ಮನೆಯಲ್ಲೇ ತಿಂಗಳಾನುಗಟ್ಟಲೇ ಇದ್ದು  ' ಗಂಡ ಹೇಣ್ತಿ  ಅಂದ್ರ ಅವರ ನೋಡ್ರಿ , ಮನಿಗ್ ಹೋದ್ರೆ ಹೆಂಗ್ ನೋಡ್ಕೊತಾರ್ರಿ . ನಮ್ ತಂದಿ ತಾಯಿ ಇದ್ದಾಂಗೆ ಬಿಡ್ರಿ .'  ಎನ್ನುವ ಪತ್ರ ಇಲ್ಲದ ಸನ್ಮಾನ ಮಾಡಿ ಹೊರಡುತ್ತಾರೆ. ಒಂದು ದಿನ ಈ ಮನೆಗೂ ಸೊಸೆ ಬರುತ್ತಾಳೆ. 'ಅರ್ಧ ಕಪ್ ಶುಗರ್ ಲೆಸ್ ಚಾ ' ಎಂದರೆ 'ಇದೇನ್  ಹೊಟೇಲ್ ಏನ್ರೀ  ಈ ಹೊತ್ತಿನ್ಯಾಗ್ ಚಾ ಮಾಡಕ್ಕ ?' ಎಂಬ ಉತ್ತರ ಬರುತ್ತದೆ.  ಎಷ್ಟೋ ವರುಷ ಎಲ್ಲವನ್ನೂ ತೂಗಿಸಿದ 'ಸಾಧ್ವಿ ಶಿರೋಮಣಿ' ಗೂ ಮಾತು ಬರುತ್ತದೆ. 'ಸಾಕಾಯ್ತವ್ವ ಈ ಮನ್ಷಾನ್ ಕಟ್ಕೊಂಡು , ಒಂದಿನಾರಾ ಉಪ್ಪಿಗೈತಾ , ಉಣ್ಣಾಕೈತಾ  ನೋಡಲಿಲ್ಲ. ಹಿಂಗ ನೋಡು ನನ್ ಜೀವಾ ಹಣ್ಣಾತು ' ಎಂದು ಅಡುಗೆ ಮನೆಯಲ್ಲಿ ಪಿಸುಗುಡುತ್ತಾಳೆ. ಸುತ್ತಲಿನ ಜನ ಎಲ್ಲವನ್ನೂ ಮತ್ತೆ  ಕಲಿಯ ಮೇಲೆ ಹಾಕಿ 'ಪ್ಚ್ ಪ್ಚ್ ' ಎನ್ನುತಾರೆ . ಈ ಸಹಾನುಭೂತಿ  ಚಾ ತಪ್ಪಿದ್ದಕ್ಕೋ, ಆ ಯಜಮಾನನಿಗೋ , ಯಜಮಾನಿಗೋ , ಸೊಸೆಗೋ ? ಅವರವರ ಭಾವಕ್ಕೆ .

ಎಲ್ಲರನ್ನೂ ಒಪ್ಪಿಸಬೇಕೆಂಬ ಒಪ್ಪಣ್ಣಗಳು ಎಲ್ಲರ ಬದುಕಿನಲ್ಲೂ ಇರುತ್ತಾರೆ, ನಾವೇ ಅಂತಹ ವ್ಯಕ್ತಿತ್ವಗಳಾಗಿರಬಹುದು . ಮನೆಯವರ ಇಷ್ಟದಂತೆ ನಡೆದು ಒಳ್ಳೆಯವರಾಗುವ ಆಸೆಯಿಂದ ಶುರುವಾದ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ಸುತ್ತಲಿನ ಎಲ್ಲರೂ ಹೇಗೆ ಹೇಳಿದರೂ ಕೇಳುವ ಮಟ್ಟಕ್ಕೆ ಬಂದು ನಿಲ್ಲಬಹುದು . ಅಂತಹ ಎರಡು ವ್ಯಕ್ತಿತ್ವಗಳ ಬಗ್ಗೆ ಮೇಲೆ ಬರೆದಿದೆ .  ಬಹುತೇಕರು ತಾವೇ ಸೃಷ್ಟಿಸಿದ ಅಥವಾ ಯಾರೋ ಸೃಷ್ಟಿಸಿದ  ಪ್ರತಿಬಿಂಬದ ಬಂಧಿಯಾಗಿರುತ್ತಾರೆ. 'ಅವಾಂ ನನ್ ಮೇಲೆ ಎಷ್ಟ್ ಭರೋಸಾ ಇಟ್ಕೊಂಡಾನ' ಎಂದುಕೊಂಡು ಆ ಭರವಸೆಯನ್ನು ಸತ್ಯಮಾಡಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಈ ಸಾಹಸಗಳಲ್ಲಿ ಬೇಕಿದ್ದೋ ಬೇಡವಾಗೋ ಅವರ ಹತ್ತಿರದವರು ಜೊತೆಗೂಡಲೇ ಬೇಕು. ಜೂಜಾಡಿದ್ದು ಧರ್ಮರಾಯ ,ಲೋಕದ ಕಣ್ಣಲ್ಲಿ 'ಭಲಾ ಭಲಾ ' ಎನಿಸಿಕೊಂಡಿದ್ದೂ ಧರ್ಮರಾಯ ಆದರೂ ಉಳಿದ ನಾಲ್ವರು ಮತ್ತು ಕಟ್ಟಿಕೊಂಡವಳಿಗೆ ಕಷ್ಟ ತಪ್ಪಲಿಲ್ಲ.  ಅತೀ ಒಳ್ಳೆಯತನವೆಂಬುದು ಅದೆಷ್ಟು ಬಲಿಗಳನ್ನು ಬೇಡುತ್ತದೆ ?

 ಮಾನವ ಸಂಘ ಜೀವಿ ,ನಿಜ. ಸಂಘದ ಭಾಗವಾಗಿರಲು ಅವನು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು , ನಿಜ . ಆದರೆ ಎಲ್ಲಿಯವರೆಗೆ ? ಕನ್ನಡಿಯ ಮುಂದೊಂದು ಬಿಂಬ , ಒಳಗೊಂದು ಬಿಂಬ , ಸುತ್ತಲಿನವರ ಕಣ್ಣಲ್ಲಿ ಮತ್ತೊಂದು , ತನ್ನ ಅಂತರಂಗ ಮುಗದೊಂದು .ನಾಲ್ಕು ಬಿಂಬಗಳ ಗುದ್ದಾಟ ನಡೆಯುತ್ತಲೇ ಇರಬೇಕೇ ? ನಾಲ್ಕು ಜನರ ಜೊತೆ ಬದುಕಬೇಕೆಂದರೆ ಕೆಲವು ಹೊಂದಾಣಿಕೆಗಳು  ಬೇಕೇ ಬೇಕು. ತೇಪೆ ಇಲ್ಲದ ಹಾಗೆ ಹೊಂದಿಕೊಳ್ಳೋಕೆ ನಾವೇನು ಬೇರೆ ಮಾಡಿದ  ಒಂದೇ ವೃತ್ತದ , ಅರೆ ವೃತ್ತಗಳೇ ?  ಓರೆಕೋರೆಗಳನ್ನು ಹೊಂದಿಸಿಕೊಂಡು ಹಗ್ಗದ ಮೇಲೆ ನಡೆಯಲೇಬೇಕು . ಹಗ್ಗದ ಆಚೆ ಬದಿ ಬಿದ್ದರೆ 'ಜನ ಸೇರದ ಮನುಷ್ಯ' ನೆಂದು ಎಲ್ಲರೂ ದೂರ ಹೋದಾರು . ಹೋದರೂ ಚಿಂತೆ ಇಲ್ಲ ಒಂಟಿತನವನ್ನು ಎಕಾಂತವನ್ನಾಗಿಸಿಕೊಂಡು ಬದುಕುತ್ತೇನೆ ಎಂಬ ಶಕ್ತಿ ಇದ್ದರೆ ಸಲೀಸು. ಇಲ್ಲದಿದ್ದರೆ ಹಗ್ಗ, ನಡಿಗೆ ಇದ್ದಿದ್ದೆ. ಇನ್ನು ಈಚೆ ಬದಿ ಬಿದ್ದರೆ ನಮ್ಮತನವೇ ಕಾಣೆಯಾಗಿ ಒಂದೊಮ್ಮೆ ನಮ್ಮನ್ನೇ ಅರಸುವ ಸ್ಥಿತಿ ಬರಬಹುದು . ಆ ಸ್ಥಿತಿಯನ್ನೂ ಒಪ್ಪಿಕೊಂಡು  ಅಥವಾ ಕಡೆಗಣಿಸಿ ಬದುಕಬಲ್ಲೆ  ಎಂಬ ಛಾತಿ ಇದ್ದರೆ ಮತ್ತೆಲ್ಲವೂ ಸುಲಭ ಇಲ್ಲದಿದ್ದರೆ ಮತ್ತೆ ಇದ್ದೇ ಇದೆ ಹಗ್ಗದ ನಡಿಗೆ. ಮೇಲೆ ಹೇಳಿದ ವ್ಯಕ್ತಿಗಳು ಈಚೆ ಬದಿ ಬಿದ್ದವರು. ಸಂಘದ ಭಾಗವಾಗಲೇ ಬೇಕೆಂದು ಎಲ್ಲವನ್ನೂ ಒಪ್ಪಿಕೊಂಡವರು. ನಂತರ  ಪ್ರಶ್ನೆಗಳನ್ನು ಕಡೆಗಣಿಸಲಾಗದೇ ಒದ್ದಾಡುತ್ತಿರುವವರು.

ಅತೀ ಖಾಸಗಿಯಾದ ಗೆಳೆತನ , ದಾಂಪತ್ಯ ಎಲ್ಲದರಲ್ಲೂ ಹೊಂದಾಣಿಕೆ ಎಂಬ ಬೆಸೆವ ಗೋಂದು  ಇರುವುದು ಸಹಜ ಮತ್ತು ಸತ್ಯ . 'ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲಿ ' ಎಂಬ ಸಾಲು ಎಷ್ಟು ಸತ್ಯವೋ ಅಷ್ಟೇ ಸತ್ಯ ಹೊಂದಾಣಿಕೆಯ ಭಾರ ಹೆಚ್ಚಾದರೆ ಸಂಬಂಧಗಳು ಶಿಲುಬೆ ಎನಿಸತೊಡಗುತ್ತವೆ. ಏರಿರುವ ನನ್ನನ್ನೂ ಏಸುವಷ್ಟೇ ಗೌರವಿಸಲಿ ಎಂಬ ನಿರೀಕ್ಷೆ  ಆರಂಭವಾಗುತ್ತದೆ, ಪ್ರತೀ ಹೆಜ್ಜೆಯಲ್ಲೂ 'ನಾನು ಸರಿ ತಾನೇ ?' ಎಂಬ ಪ್ರಶ್ನೆ ಎದುರಾಗುತ್ತದೆ.  ಎಲ್ಲರನ್ನೂ ಎಲ್ಲ ಕಾಲಕ್ಕೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಸತ್ಯ ಮರೆತು ಹೋಗುತ್ತದೆ. ತನ್ನ ಮೇಲೆ ತನಗೇ ಇಲ್ಲ ಸಲ್ಲದ ಅನುಮಾನಗಳು ಆರಂಭವಾಗುತ್ತವೆ. ಶಿಲುಬೆಯನ್ನು ಹೆಗಲೆರಿಸುವ ಮುನ್ನ ಯೋಚಿಸುವುದು ಒಳಿತು ಏಕೆಂದರೆ ಅವರವರ ಶಿಲುಬೆಯನ್ನು ಅವರವರೇ ಹೊರಬೇಕು . ಮನ್ನಣೆಯ ಆಸೆ ದಾಹವಾಗದೇ ಹೊಂದಾಣಿಕೆ ಶಿಲುಬೆಯಾಗದಿದ್ದರೆ ಬದುಕು ಸಹ್ಯ.

 ಕನ್ನಡಿಯನ್ನು ಮತ್ತೆ ತಿಕ್ಕುತ್ತೇನೆ
ಆದರೂ ಹಣೆಯ ಮೇಲಿನ
ಮಸಿ ಮಾಯವಾಗುತ್ತಿಲ್ಲ
'ಏನೂ ಇಲ್ಲೊಮ್ಮೆ ನೋಡು '
ಹಣೆ ಮೇಲೇನೋ ಅಂಟಿದೆಯಾ ?
'ಏನಿಲ್ಲಾssss ಎಲ್ಲ ನಿನ್ನ ಭ್ರಾಂತು '
ಬೆನ್ನು ತೋರಿಸಿ, ಕೊಟ್ಟ
ಉತ್ತರವನ್ನೇಕೋ ನಂಬಲಾಗುತ್ತಿಲ್ಲ.
'ಪುಟ್ಟಾ ಹಣೆ ಮೇಲೇನೋ ಇದೆ ಅಲ್ವೇನೋ ?'
ಮುಗ್ಧತೆಗೊಂದು ಸವಾಲು
'ನನ್ನ ಗಾಳಿಪಟ ಹಾರಿ ಹೋಗ್ತಾ ಇದೆ.
ಹಿಡಿದು ತಾ . ಆಮೇಲೆ ನಿನ್ನ ಉತ್ತರ ' 
ಗಾಳಿಪಟ ಹಿಡಿದು ಕೊಟ್ಟ ಮೇಲೆ
ಉತ್ತರದ ನೆನಪು ಪುಟ್ಟನಿಗೆಲ್ಲಿ ? ಹಾರಿಯಾಯಿತು.
ಪ್ರಶ್ನೆ ಈಗ ಪ್ರಿಯಸಖಿ ಪ್ರಿಯಂವದೆಗೆ ವರ್ಗಾವಣೆ
'ಇದು ಈ ವಯಸ್ಸಿನ ಸಹಜ ಸಮಸ್ಯೆ
ನನಗೂ ಇತ್ತು, ನಾನು ಬೇಗ ವಾಸಿಮಾಡಿಕೊಂಡೆ.
ಕನ್ನಡಿ ನೋಡುವುದನ್ನು ಕಡಿಮೆ ಮಾಡು '
ಉತ್ತರ ಸಿಕ್ಕಿದೆ . ಸಮಾಧಾನವಿಲ್ಲ
ಕಂಡ ಕಂಡವರನ್ನು ಕೇಳುವುದು ತಪ್ಪಿಲ್ಲ
ಹಣೆ ಮೇಲೇನೋ ಇದೆ ಅಲ್ವಾ ?





                                           ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ

3 comments:

  1. ಅಹುದು, ಸ್ವರ್ಣಾ. ಒಳ್ಳೆಯ ಹೆಸರಿಗಾಗಿ ಜೇಡರಬಲೆಯಲ್ಲಿ ಸಿಲುಕಿದ ಮಾನವ ಹುಳುಗಳು ಎಂದು ಇವರನ್ನು ಕರೆಯೋಣವೆ?

    ReplyDelete
    Replies
    1. ತಾನು ನೇಯ್ದ ಬಲೆಯಲ್ಲಿ ಸಿಕ್ಕಿಕೊಂಡ ಜೇಡ ಹೌದು ಕಾಕಾ . ವಂದನೆಗಳು

      Delete