Thursday, July 09, 2015

ಕಾಲಕಾಂತನಿಗೊಂದು ಓಲೆ




ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವನ್ನು ಸರಳ ರೇಖೆಯಲ್ಲಿ ಬರೆಯಬಹುದೇ ? ಸೂಪರ್ ಮಾರ್ಕೆಟ್ ನಲ್ಲಿ ಕೊಳ್ಳೋದು ಕಡಿಮೆ, ತಿರುಗಾಡೋಕೆ ಹೋಗೋದು ಜಾಸ್ತಿ . ಅಂಥಾ ತಿರುಗಾಟದಲ್ಲಿ ಮಿಂಚಿ ಮಾಯವಾಗಿದ್ದು ಮೇಲಿನ ಪ್ರಶ್ನೆ . ಸಾಮಾನ್ಯವಾಗಿ ಗೋಡೆಗೆ ತೂಗು ಹಾಕುವ ಗಡಿಯಾರಗಳು ವೃತ್ತಾಕಾರದಲ್ಲಿ ಮಾತ್ರ ಬರುತ್ತಿದ್ದ ಕಾಲವೊಂದಿತ್ತು . ಈಗಲೂ ಬರುತ್ತವೆ.  ೧೨ ಗಂಟೆಗಳನ್ನ ಸರಳ ರೇಖೆಯಲ್ಲಿ ಬರೆಯಬಹುದೇ ? ಹೇಗೆ ಎಂಬ ಪ್ರಶ್ನೆ ಕಾಡಿತ್ತು. ಕಾಲಚಕ್ರ ಎನ್ನುವ ಮಾತಿನಿಂದ ಈ ಗೋಲ ಗಡಿಯಾರ ಹುಟ್ಟಿರಬಹುದೇ ? ಮೇಲೇರಿದ್ದು ಕೆಳಗಿಳಿಯಲೇ ಬೇಕು ಎಂಬ ನಿಯಮಕ್ಕೆ ಸಾಕ್ಷಿಯೇ ? ಒಂದಷ್ಟು ಪ್ರಶ್ನೆಗಳ ಸುತ್ತ ಗಿರಕಿಹೊಡೆದು ನಾ ಮತ್ತೆ ಸೂಪರ್ ಮಾರ್ಕೆಟ್ಗೆ  ಮರಳಿದೆ .

'ಕಾಲ' ಚಕ್ರವೆಂಬುದಕ್ಕೆ ಸಾಕ್ಷಿ ಸೂಪರ್ ಮಾರ್ಕೆಟ್ನಲ್ಲೇ ಸಿಕ್ಕಿತ್ತು . ಎಂಬತ್ತರ ದಶಕದ ಆದಿ ಭಾಗದ ಕೆಲವು ಜಾಹಿರಾತುಗಳನ್ನು ನೆನಪಿಸಿಕೊಳ್ಳಿ . 'ರಾಜು , ನಿನ್ನ ಹಲ್ಲು ಹೇಗೆ ಇಷ್ಟೊಂದು ಹೊಳೆಯುತ್ತಿದೆ ' ('राजू तुम्हारे दांत मोतियों जैसे चमक रहे हैं ') ಹಲ್ಲು ಕಪ್ಪಾದ ಮಾಸ್ತರ್ ರಾಜುನ ಕೇಳೋದು ಅವನು ಹಲ್ಲುಪುಡಿಯ ಹೆಸರು ಹೇಳೋದು , ಮಾರನೇ ದಿನ ಮಾಸ್ತರು  ಇದ್ದಿಲು ಬಿಟ್ಟು ಆ ಹಲ್ಲುಪುಡಿ ಬಳಸೋದು .  ಈಗ ಚಕ್ರ ತಿರುಗಿದೆ, ಈಗಿನ ಕಥೆ ಏನೂ೦ದ್ರೆ; ಹಲ್ಲುಜ್ಜಲು ಇದ್ದಿಲು ಚಿಮುಕಿಸಿದ ಬ್ರಶ್ಶು ಬಂದಿದೆ! ರಾಜು ಈಗ ದೊಡ್ದೊನಾಗಿದಾನೆ. ಈ ಲಿಸ್ಟು  ಕಲ್ಪನಾ ಹಾಕುತ್ತಿದ್ದ ಗುಬ್ಬಿ ತೋಳಿನ ಬ್ಲೌಸು , ಉದ್ದ ತೋಳಿನ ಬ್ಲೌಸಿನಿಂದ ಹಿಡಿದು ಅಜ್ಜಿ ಹೇಳುತ್ತಿದ್ದ ಹಾಗೆ "ರಾತ್ರಿ ಹೊತ್ತು ಕಡಿಮೆ ಊಟ ಮಾಡಬೇಕು, ಬೆಳಿಗ್ಗೆ ತಿಂಡಿಯಲ್ಲ  ಊಟ ಮಾಡ್ಬೇಕು "  ಎಂಬ ಡಯಟ್ ಪಾಠದವರೆಗೂ ಬೆಳೆದಿದೆ. 'ಕಾಲ' 'ಚಕ್ರವೇ ' ಅಲ್ವಾ ?

ಗಣಿತಕ್ಕೆ ಸಿಕ್ಕದೇ ಓಡುವ ಕ್ಷಣವೂ ಕಾಲವೇ , ಬುವಿಯ ಪಯಣ ಮುಗಿದಾಗ ಕರೆದೊಯ್ಯುವ ಸಾವೂ ಕಾಲವೇ. ಇಷ್ಟರ ನಡುವೆ 'ಕಾಲ ' ಕಾಂತನಾಗಿದ್ದು ಗಣೇಶರ ಕನ್ನಡ ಶತಾವಧಾನದಲ್ಲಿ . ಸಮಸ್ಯೆಯೊಂದಕ್ಕೆ ಉತ್ತರಿಸುತ್ತಾ ಅವಧಾನಿಗಳು ಕಾಲನನ್ನು ಕಾಂತನನ್ನಾಗಿಸಿದ್ದರು  . ಸರಿಯಲ್ಲವೇ ?  ಅವನಿದ್ದಾಗ ಸರಿದ ಕ್ಷಣಗಳಿಗೆ ಲೆಖ್ಕಉಂಟೇ?ಅವನಿಲ್ಲದಿರುವಿಕೆಯೇ ಸಾವು ಎನಿಸುದಿಲ್ಲವೇ ? 
ಕಾಲಕಾಂತನಿಗೊಲೆ ಬರೆದು
ಬಯಲಲ್ಲಿ ಬಯಲಾದಳವಳು
ಓಡೋಡಿ ಬಂದವನವ ವಸಂತ
ಹಸಿರುಟ್ಟವಳಿಗಿಂದು ಸೀಮಂತ

'ಕಾಲ' ಎಂದರೆ ಏನೆಲ್ಲಾ ಎಷ್ಟೆಲ್ಲಾ ! ಹೀಗನಿಸಿದ್ದು  ಕೆ.ಎಸ್. ನರಸಿಂಹ ಸ್ವಾಮಿಯವರ ಸುಪ್ರಸಿಧ್ಧ ಕವಿತೆ ' ಗಡಿಯಾರದಂಗಡಿಯ ಮುಂದೆ ' ಓದಲು ಕೈಗೆತ್ತಿಕೊಂಡಾಗ . 'ಶಿಲಾಲತೆ' ಸಂಕಲನದ ಭಾಗವಾದ ಈ ಕವಿತೆಯ ಬಗ್ಗೆ ಹಲವಾರು ಕಡೆ ಕೇಳಿದ್ದರೂ ಪೂರ್ತಿಯಾಗಿ ಓದಿದ್ದು ಇತ್ತೀಚಿಗೆ. ಅದರಲ್ಲಿ ದಕ್ಕಿದ್ದು ಮತ್ತೆ ಪ್ರಶ್ನಾರ್ಹವೇ. ಇದು ದಕ್ಕಿದಷ್ಟನ್ನೇ ದಾಖಲಿಸುವ ಪ್ರಯತ್ನ.
 ಪಯಣದಲ್ಲಿ ಒಂದಷ್ಟು ದೂರ ಸಾಗಿದ ಪಥಿಕನೊಬ್ಬ ಸಾಗಿದ ಹಾದಿಯ ಬಗ್ಗೆ ಹೇಳಿದಂತೆ ಕವಿತೆ ಕಾಲದಲೆಗಳ ಬಗ್ಗೆ , ಸುಳಿಗಳ ಬಗ್ಗೆ ಹೇಳುತ್ತಾ ಸಾಗುತ್ತದೆ . ಕಾಲ ಪ್ರವಾಹಕ್ಕೆ ಸಿಕ್ಕ ಜೀವ ಬೆದರಿದ ಕುದುರೆಯಾಗಿದೆ ಎಂಬ ಮೊದಲ ಸಾಲು ಓದುಗನನ್ನು ಕವಿತೆಯೊಳಕ್ಕೆಳೆಯುತ್ತದೆ.  'ಸೌಖ್ಯವೇ ' ಎಂಬ ಸಾಮಾನ್ಯ ಪ್ರಶ್ನೆಗೂ ಅಸಂಖ್ಯಾತ ಉತ್ತರಗಳು ದೊರಕಬಹುದು . ಬದುಕೆಂಬ ಕೌದಿಯಲ್ಲಿ ಎಷ್ಟು ಚಿಂದಿ , ಎಷ್ಟು ಹೊಲಿಗೆ , ಅದೆಷ್ಟು ಚಿತ್ತಾರಗಳು . ಯಾವುದರ ಸೌಖ್ಯವನ್ನು ಕುರಿತು ಹೇಳುವುದು ?

"ಬಾನ ಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
ಹತ್ತಿಬಿಲ್ಲಿನ ಕಸದ ಕತ್ತಲೆಯಲಿ "
ಈಗ ಅಪರೂಪವಾಗಿರುವ ಹತ್ತಿ ಬಿಲ್ಲು ಯಾವುದೋ ಕಾಲಕ್ಕೆ ಕರೆದೊಯ್ಯುತ್ತದೆ. ಹತ್ತಿ  ಬಿಲ್ಲನ್ನು ಮೃದುವಾಗಿ ಎಳೆದು  ಕಸದಿಂದ ಬೆಳ್ಳಗಿನ ,ಹಗುರವಾದ ಹತ್ತಿಯನ್ನು ತೆಗೆದರೆ ಮೆತ್ತನೆಯ ಹಾಸಿಗೆ , ಬಿಲ್ಲು ಸಣ್ಣದಾದರೆ ದೈವದ ಮುಂದುರಿಯಲು ಬತ್ತಿ ತಯಾರಾಗುತ್ತದೆ . ಬದುಕೂ ಹಾಗೇ ಅಲ್ಲವೇ ? ಕಸ ತೆಗೆದಷ್ಟೂ ಹಗುರ , ಮೃದು.

"ಜೇನು ತಲೆಹೊಕ್ಕಿರುವ ತನಿಗುದುರೆಯೋಟದಲಿ
ಸಂಜೆ  ತೀರದ ಸಾಲ, ಹಡುಗು ಮುಳುಗು "
ಬದುಕೆಂಬ ಹಾದಿಯಲಿ ಪ್ರತೀ ಜೀವವೂ ತನಿಗುದುರೆಯೇ. ಸಾಂಗತ್ಯವೆಂಬುದು ಕೆಲ ಬಾರಿ ನಂಬಿಕೆ ಹಲ ಬಾರಿ ಭ್ರಮೆ. ಎರಡರ ನಡುವಿನ ಸತ್ಯ ಕಂಡವರಾರು ? ಪಯಣದ ಹಡಗು ಮುಳುಗುವ ಸಂಜೆಯಲ್ಲಿ ಋಣವೆಂಬ ಸಾಲ ಕುದುರೆಯಪಾಲಿಗೆ .
 
"ಬಿರುಗಾಳಿ ಬೀಳಿಸಿದ ಮೂರನೆಯ ದಾರಿ-ಮನೆ ;
ಅಲ್ಲೊಂದು ಅಳುವ ಮಗು ಒಂದೇ ಸಮನೆ "
ಆ ಮೂರನೆಯ ಮನೆ ಯಾವುದು ? ತ್ರಿಗುಣಗಳನ್ನು ಮೀರಿ ನಡೆಯುವುದು ? ಜನನ, ಬದುಕು , ಸಾವಿನ ಮೂರು ಹಂತಗಳನ್ನು ದಾಟುವುದು ? ಅಥವಾ ಇನ್ನೇನಾದರೂ ?  ಗೊತ್ತಿಲ್ಲ . ಆದರೆ ಖಂಡಿತಾ ಬಹುತೇಕ ಜೀವಗಳು ಮಾತ್ರ ಒಂದೇ ಸಮನೆ ಅಳುವ ಮಗು .

ಎಲ್ಲವನ್ನೂ ಬದಲಿಸುವ ವಯಸ್ಸು , ಆಸೆಗಳು ಮುಗಿದ ನಂತರ ಮನುಷ್ಯ ನಿಶ್ಚಲನಾಗಿ ನಿಲ್ಲಬೇಕೆಂಬ ಪಾಠ ಕಲಿಯುತ್ತಾನೆ.  ಅಂತರಂಗದ ಹುತ್ತಗಳ ಆಳಕ್ಕಿಳಿಯುತ್ತಾನೆ. ಇನ್ನೂ ಹೆಚ್ಚಿನದನ್ನು ಆ ಸಾಲುಗಳೇ ಧ್ವನಿಸುತ್ತವೆ
"ನನಗಿತ್ತು ಮೊದಲಿಗಿವನೆಲ್ಲ ಬದಲಿಸುವಾಸೆ ;
ಮೂಲೆ ಬಿಲ್ಲನು ಹಿಡಿದು ಮುಂದೆ ನಡೆದೆ .
ನನಗಿಂತ ಮೊದಲೆ ಬದಲಾದ ಬಂಡೆಯ ಕಂಡೆ ;
ಒಳ ಹೊರಗ ಹುತ್ತಗಳ ಹತ್ತಿ ಇಳಿದೆ "
ಮೃದುವಾದ ಹತ್ತಿಯ ಕಸ ತೆಗೆವ ಬಿಲ್ಲು  , ಬದುಕಿನ ಗುರಿ ಮುಟ್ಟಲು ಬಿಲ್ಲು , ಕಡೆಗಾಲಕ್ಕೆ ಕೊಂಚ ಬಾಗುವ ಬಿಲ್ಲು . ಏನೂ ಆಗಬಹುದಾದ ಏನೇನೋ ಆಗಬಹುದಾದ ಬಿಲ್ಲನ್ನು ನರಸಿಂಹ ಸ್ವಾಮಿಗಳು ಬಳಸಿರುವ ರೀತಿ ಆಹಾ !
ದೂರ ತೀರದವಳನ್ನು ಬಳಿಗೆ ಕರೆದು ಹಾಡಿದ ಕಂಪಿನ ಲಾಲಿ , ಒಂದು ಗಂಡಿಗೊಂದು ಹೆಣ್ಣು ಕೂಡಿಕೊಂಡು ಹಾಡಿದ  'ಮೈಸೂರ ಮಲ್ಲಿಗೆ' ಯ ದಾಂಪತ್ಯ ಗೀತೆ. ಬಿಳಿಗಲ್ಲದ ಹುಡುಗಿಯೊಂದಿಗಿನ  ದಾಂಪತ್ಯದ ಸವಿಯುಣಲು ಕವಿಯ ಸಾಲುಗಳನ್ನೇ ಓದುವುದು ಹೆಚ್ಚು ಸುಖ .

ಮೂಟೆ , ಗಿಂಡಿಗಳ ಹಿಡಿದ 'ಹೆಜ್ಜೆ ಸಾಲಿನ ಪಯಣ' ವೇಗ ಕಾಲದ ಲೆಖ್ಕ ದಾಟಿದೆ . 'ಹೆಜ್ಜೆ  ಸಾಲಿನ ಪಯಣ ' ಎಂಬ ಅದ್ಭುತ ಸಾಲು ಅದೆಷ್ಟು ಕವಿತೆಗಳಿಗೆ , ಕಥೆಗಳಿಗೆ ಜನ್ಮವಿತ್ತಿದೆಯೋ ?  ಹೆಜ್ಜೆ ಹೆಜ್ಜೆಗಳಲ್ಲಿ ಸಾಗಿದ ಪಯಣಕ್ಕೆ , ಕ್ಷಣ ಕ್ಷಣಗಳಲ್ಲಿ ಸಾಗಿದ ಬದುಕಿನ ಗಂಟೆ ಎಷ್ಟೆಂದು ಯಾರನ್ನು ಕೇಳುವುದು ?
ಉಸಿರಿರುವ ತನಕವೂ 'ಚಿತಾಗ್ನಿ' ಯೊಂದು ಒಳಗೆ ಉರಿಯುತ್ತಿದ್ದರೂ 'ನೆಲದ ಕಣ್ಣು' ಚಂದ್ರಿಕೆಯ ಕಡೆಗೇ ಇರಬೇಕು . ಆಗಲೇ ಬದುಕು ಸುಂದರ. 'ಐದಾಗಿ ಬಿರಿದ ದಾಳಿಂಬೆ ' ಕವಿಯ ವಂಶವೋ ?  ಪಂಚ ಭೂತಗಳೋ ? ಪಂಚೇಂದ್ರಿಯಗಳೋ ? ಅಥವಾ  ಇವೆಲ್ಲದರ ಅತೀತವೋ ?

ಬದುಕೆಂದರೇನು ಎಂಬ  ಕಟ್ಟ ಕಡೆಯ ಪ್ರಶ್ನೆಯ ಉತ್ತರ ಬಲ್ಲವರಾರು ? ಗಂಟೆ ಎಷ್ಟೆಂದು ಕೇಳಿದರೆ ಏನು ಹೇಳುವುದು ? ಗಡಿಯಾರ ನಡೆದಷ್ಟೇ ಎಂಬ ಉತ್ತರವನ್ನು ಬಿಟ್ಟು ?

ಪ್ರಖ್ಯಾತ ಬರಹಗಾರನೊಬ್ಬನ ಮಾತಿನಿಂದ ಕೊನೆಯಾಗುವ ಕವಿತೆ ನಮ್ಮೊಳಗನ್ನು ಮುಟ್ಟುತ್ತದೆ .
"It is not explanation of things
It is something better"
ಈಗಾಗಲೇ ಹೇಳಿದಂತೆ ಇದು ನನಗೆ ದಕ್ಕಿದ ಕವಿತೆ.

ಗಡಿಯಾರ ಇನ್ನೂ ನಡೆದರೆ ಮತ್ತಷ್ಟು ದಕ್ಕೀತು .

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ .

2 comments:

  1. ಸ್ವರ್ಣಾ,
    ನರಸಿಂಹಸ್ವಾಮಿಯವರ ಕವನಕ್ಕೆ ನೀವು ಬರೆದ ವ್ಯಾಖ್ಯಾನವು ಸ್ವಾರಸ್ಯಪೂರ್ಣವಾಗಿದೆ. ಕವನ ಹಾಗು ವ್ಯಾಖ್ಯಾನ ನನಗೆ ಸಾಹಿತ್ಯದ ಸುಖವನ್ನು ನೀಡಿದವು. ಧನ್ಯವಾದಗಳು.

    ReplyDelete
    Replies
    1. ಓದಿ ಪ್ರತಿಕ್ರಿಯಿಸುವ ನಿಮ್ಮ ಪ್ರೀತಿಗೆ ಶರಣು ಕಾಕಾ

      Delete