Thursday, July 02, 2015

ಅಟ್ಟುವಾಗಿನ ಕವಿತೆಗಳು





ಬದುಕ ಮೂಸೆಯೊಳಗೆ ಆನಂದದ ರಸವನ್ನು ತುಂಬಲು , ಬದುಕನ್ನು ಕ್ಷಣಗಳಲ್ಲಿ ಬದುಕಿ . ಈ ಕ್ಷಣವಿದ್ದದ್ದು  ಮರುಕ್ಷಣವಿದ್ದೀತೆಂಬ ಯಾವ ಭರವಸೆಯೂ ಇಲ್ಲ .  ಕ್ಷಣಗಳ ಬೃಹತ್ ಮೊತ್ತವೇ ಬದುಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಿಂದ ಹಿಡಿದು ಆಧ್ಯಾತ್ಮ ಗುರುಗಳ ವರೆಗೆ ಎಲ್ಲರೂ ಹೇಳುವುದನ್ನ ನಾವು ಕೇಳಿದ್ದೇವೆ ಒಪ್ಪುತ್ತೇವೆ .
ಕವಿತೆಗಳು ಅಕ್ಷರಗಳಲ್ಲಿ ಮಾತ್ರ ಅಡಗಿಲ್ಲವೆಂಬ ಮಾತನ್ನು ಕವಿತಾಸಕ್ತರೆಲ್ಲರೂ ಒಪ್ಪುತ್ತಾರೆ . ಅಕ್ಷರಗಳನ್ನು ದಾಟಿದ , ಅಕ್ಷರಗಳಲ್ಲಿ ಹಿಡಿದಿಡಲಾಗದ ಅಸಂಖ್ಯ  ಕವಿತೆಗಳು ನಮ್ಮ ದೈನಂದಿನ ಬದುಕಿನ ಭಾಗಗಳು.ಕವಿತೆಯೊಂದನ್ನು ಬರೆಯುವಾಗ ಕವಿಯ ಮನಸ್ಸನ್ನು ಹಿಡಿದಿಡುವುದು ಅಷ್ಟು ಸುಲಭವಲ್ಲ. ಓದಿದ ಪ್ರತಿಯೊಬ್ಬರಿಗೂ ಅವರದ್ದೆನಿಸುವ ವಿವಿಧ ರೀತಿಯಲ್ಲಿ , ವಿವಿಧ ಮಜಲುಗಳಲ್ಲಿ ಅವರದ್ದಾಗುವುದು ಕವಿತೆಯ ವೈಶಿಷ್ಟ್ಯತೆ.  ಕೇಳುವ ಕಿವಿ ಇರಲು ಎಲ್ಲೆಲ್ಲೂ ಸಂಗೀತವೇ ಅನ್ನುವ ಹಾಗೆ ಭಾವಿಸುವ ಮನಕ್ಕೆ ಎಲ್ಲೆಲ್ಲೂ ಕವಿತೆಗಳೇ .

ಕ್ಷಣ ಕ್ಷಣದ ಬದಲಾವಣೆ ಮತ್ತು ಕವಿತೆಯಂತಾ  ಭಾವ ಎರಡೂ ಸೇರಿ ಬದುಕು . ಇವೆರಡೂ ಸೇರಿದರೆ ಅಡುಗೆ ಕೂಡ !ಹೌದು ನನಗಂತೂ ಹಾಗೆ ಅನ್ನಿಸುತ್ತೆ . ಪಚನವಾಗುವ  ಕವಿತೆಗಳು ಸೃಷ್ಟಿಯಾಗುವ , ಕೆಲ ಕವಿತೆಗಳು ಅರ್ಥವಾಗುವ ಬಹು ಮುಖ್ಯ ತಾಣ ಅಡುಗೆ ಮನೆಎಂಬುದು ನನ್ನ ಬಲವಾದ ನಂಬಿಕೆ . ಅಡುಗೆ ಮಾಡುವ  ಇಡೀ ವಿಧಾನ ಸೊಗಸಾದ ಕಾವ್ಯಲೋಕ. ಇಲ್ಲಿ ತಯಾರಾಗುವ ಕವಿತೆಗಳನ್ನು  ಮೀಮಾಂಸೆ , ಛಂದಸ್ಸುಗಳ ತಕ್ಕಡಿಯಲ್ಲಿಡಲಾರೆವು. ಓದಿದ ಎಲ್ಲರಿಗೂ ಕವಿತೆ ಒಂದೇ ತೆರನಾಗಿ ದಕ್ಕದು . ಅಂತೆಯೇ ತಿನಿಸು ನಾಲಿಗೆಗೆ ದಕ್ಕುವ ರೀತಿಯೂ ಬೇರೆ ಬೇರೆ . ಅವರವರ ಭಾವಕ್ಕೆ ಪದದ ಕವಿತೆಗಳಾದರೆ ಅವರವರ ನಾಲಿಗೆಗೆ ತಕ್ಕಂತೆ ಭಿನ್ನ ಭಿನ್ನ ರುಚಿಗಳು .  ಅಂತೆಯೇ ಅಲ್ಲಿ ಕ್ಷಣ ಕ್ಷಣವೂ ಸಾಮಾಗ್ರಿಗಳ ರೂಪ , ಗುಣ ಬದಲಾಗುತ್ತಿರುತ್ತದೆ .  ಯಾರಾದರೂ ಅಡುಗೆ ಮಾಡುವುದನ್ನು ಹಾಗೇ ಸುಮ್ಮನೇ ಗಮನಿಸಿ ನೋಡಿ .  ಒಲೆಯ ಮೇಲೆ ಬಾಣಲೆ ಇಟ್ಟು ,ಕಾವನ್ನು ಗರಿಷ್ಟ ಮಟ್ಟದಲ್ಲಿರಿಸಿ ಒಗ್ಗರಿಸಿ ಅಡುಗೆ ಮುಗಿಸುವವರು  ಕೆಲವರಾದರೆ, ಕೆಲವರಿಗೆ ಅದೊಂದು ತಪಸ್ಸು . ಹಾಗೆಂದ ಕೂಡಲೇ ನನಗೆ ನೆನಪಾಗುವುದು ನನ್ನಜ್ಜಿ.


ಒಲೆಯ ಮೇಲೆ ಬಾಣಲೆ ಇಟ್ಟು  ಎರಡು ನಿಮಿಷ ಕಾದು, ಬೇಕಿದ್ದಷ್ಟು  ಎಣ್ಣೆಯನ್ನು ನಿಧಾನವಾಗಿ ಬಗ್ಗಿಸಿ ಮತ್ತೆ ಕಾಯಿಸುವ ಕೆಲಸ. ಅಜ್ಜಿ ಈರುಳ್ಳಿ ಹೆಚ್ಚುತ್ತಲೋ , ಹಾಡುತ್ತಲೋ ಎಣ್ಣೆ ಕಾಯಿಸುತ್ತಿದ್ದಳು. ಎಣ್ಣೆ ಕಾದಮೆಲೇನೆ ಸಾಸಿವೆ ಬೀಳಬೇಕು. ಎಣ್ಣೆ ಕಾಯದೇ ಬಿದ್ದ ಸಾಸಿವೆ ನೋವು ತಂದೀತು ! ನಂತರದ ಸರದಿ  ಕ್ರಮವಾಗಿ:  ಜೀರಿಗೆ , ಕಡ್ಲೆ ಬೇಳೆ , ಉದ್ದಿನ ಬೇಳೆ , ಶೇಂಗಾ ಬೀಜ , ಮೆಣಸಿನ ಕಾಯಿ , ಕರಿಬೇವು. ಕೆಲವರ ಒಗ್ಗರಣೆಯಲ್ಲಿ ಕರಿಬೇವು ಹದವಾಗಿ ಎಣ್ಣೆಯಲ್ಲಿ ಕರಿಯಲ್ಪಟ್ಟು  ಚೂರು ಬಣ್ಣ ಬದಲಾಯಿಸಿಕೊಂಡು ತಾನು ಸೇರಿದ ಅಡುಗೆಯ ಅಂದವನ್ನು ಹೆಚ್ಚಿಸುತ್ತಿರುತ್ತದೆ . ಹೆಣ್ಣಿನ ಹಾಗೆ ! ಯಾವ ಸಾಮಾಗ್ರಿಯ ಬಣ್ಣವೂ ಕೆಡಬಾರದು. ಈರುಳ್ಳಿ, ತರಕಾರಿಗಳು ಹದವಾಗಿ ಬೇಯ ಬೇಕು . ಈರುಳ್ಳಿಗೆ ಅರಿಶಿನ ಹಾಕುವುದಿದ್ದರೆ ಎಣ್ಣೆ ಸ್ನಾನ ಮಾಡಿದ ಮುತ್ತೈದೆಯ ಕೆನ್ನೆಯ ಬಣ್ಣ ಬರಬೇಕು . ಕೊನೆಗೆ ಮುಖ್ಯ ಪದಾರ್ಥ ಕೂಡಿಸಿ ಕೊತ್ತುಂಬರಿ , ಕಾಯಿತುರಿ, ನಿಂಬೆಹುಳಿ ಹಾಕಿ ಬಾಣಲೆಯನ್ನು ಮುಚ್ಚಿದರೆ ಅಲ್ಲಿ ಅಡುಗೆ ಮಾಡಿದ್ದಾರೆಂಬ ಕುರುಹೂ ಉಳಿಯುತ್ತಿರಲಿಲ್ಲ. ಅಷ್ಟು ಒಪ್ಪವಾಗಿ ಯಾವ ಪದಾರ್ಥವನ್ನು ಚೆಲ್ಲದೇ,ಎಲ್ಲೂ ಎಣ್ಣೆ , ಮಸಿಯ ಕುರುಹು ಬಿಡದೇ ಅಜ್ಜಿಯ ಅಡುಗೆ ತಯಾರಾಗುತ್ತಿತ್ತು .  ಇಷ್ಟೆಲ್ಲವನ್ನೂ ಅಜ್ಜಿ ಬೆಳಿಗ್ಗೆ ೭ಕ್ಕೆಲ್ಲಾ ಮಾಡಿ ಮುಗಿಸಿರುತ್ತಿದ್ದಳು.  ಪ್ರತೀ ಹಂತದಲ್ಲೂ ಸಾಮಾಗ್ರಿಗಳು ಮಾಗುವವರೆಗೆ ಕಾದು ಕ್ರಮಬಧ್ಧವಾಗಿ ತಯಾರಾಗುತ್ತಿತ್ತು ಅವಳ ಕವಿತೆ .  ಆಕೆಯ ಕೈ ಅಡುಗೆಯನ್ನು ಹಲವಾರು ವರ್ಷ ಉಂಡ ಒಬ್ಬರು ಅಂದಿದ್ದರು : "ಎಲ್ಲ ಬೇಳೆಗಳೂ ಒಂದೇ ಬಣ್ಣ , ನೋಡಲೆಷ್ಟು ಸೊಗಸೋ ನಾಲಿಗೆಗೆ ಅಷ್ಟೇ ರುಚಿ. ಹೀಗೆ ಒಗ್ಗರಣೆ ಹಾಕಲು ಕಲಿತ ದಿನ ನಾನು ಅರ್ಧ  ಅಡುಗೆ ಕಲಿತ ಹಾಗೆ". ಆ ಕ್ಷಣಕ್ಕೆ ಅದು ಉತ್ಪ್ರೇಕ್ಷೆ  ಅನಿಸಿದ್ದರೂ ಇಂದು ನಾನು ಒಲೆಯ ಮುಂದೆ ನಿಂತಾಗಲೆಲ್ಲಾ  ಆ ಮಾತು ನೆನಪಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಈ ಒಗ್ಗರಣೆಯ ಬಗೆಗಿನ ನನ್ನ ಮೋಹದ ಮೂಲ ನನ್ನಜ್ಜಿ ಎನ್ನಲು ಅಡ್ಡಿ ಇಲ್ಲ. ಈ ಒಗ್ಗರಣೆ ಹಾಕುವ ಕ್ರಿಯೆಯ ಹಿಂದೆ ಒಂದು ಕವಿತೆ ಅಡಗಿದೆ , ಒಂದಷ್ಟು ಕ್ಷಣಗಳ ತಾಳ್ಮೆ ತಪಸ್ಸು ಅಡಗಿದೆ ಎಂದು ನನಗೆ ಕಲಿಸಿದ್ದು ನನ್ನಜ್ಜಿ .

ಇದೇ ತೆರನಾದ ಇನ್ನೊಂದು ಮೋಹ ಹತ್ತಿಯಷ್ಟು ಮೃದು ತಟ್ಟೆಯಷ್ಟು ಗುಂಡಗಿರುವ ಚಪಾತಿ , ರೊಟ್ಟಿಗಳದ್ದು.  ಕೆಲವರು ಮಾಡಿದ ಚಪಾತಿ ಮೂರು ದಿನಗಳಾದ ಮೇಲೂ ಅದೇ ಮೃದುತ್ವ, ಬಣ್ಣವನ್ನು ಉಳಿಸಿಕೊಂಡಿರುವುದನ್ನು ನಾನು ಕಂಡಿದ್ದೇನೆ ಉಂಡಿದ್ದೇನೆ .  ಆಕೆ ಊರಿಗೆ ಹೋಗುವಾಗ ರಾಶಿ ಚಪಾತಿ ಮಾಡಿಟ್ಟರೆ ಮೊದಲ ಚಪಾತಿ ಮತ್ತು ಕೊನೆಯ ಚಪಾತಿಯ ನಡುವಿನ ಅಂತರ ಬಹಳ ಕಡಿಮೆಯಾಗಿರುತ್ತಿತ್ತು . ಚಪಾತಿಯನ್ನು ಮೂರು ದಿನಗಳವರೆಗೆ ಇಡುವುದ್ಯಾಕೆ ಅಂತ ನಾನು ನನ್ನ ಚಪಾತಿಗಳನ್ನು ಈ ಪರೀಕ್ಷೆಗೆ ಇಟ್ಟಿಲ್ಲ .   ಇನ್ನು ರೊಟ್ಟಿ ವಿಧ ವಿಧವಾದ ರೊಟ್ಟಿ ಮಾಡಲು ವಿವಿಧ ವಿಧಾನಗಳು . ಉತ್ತರದವರ ಥಾಲಿಪೀಟ್ , ರಾಜಧಾನಿ ಕಡೆ ಅಕ್ಕಿ ರೊಟ್ಟಿ. ಥಾಲಿಪೀಟ್ ರುಚಿಯೇ ಬೇರೆ ಅಕ್ಕಿ ರೊಟ್ಟಿಯದೇ ಬೇರೆ. ತಟ್ಟುವುದಕ್ಕೂ ರೀತಿ ನೀತಿಗಳಿಗೆ ಎಂದು ತಿಳಿಸಿದ ವ್ಯಂಜನ ಇದು . ಬಾಳೆ ಎಲೆ , ಸಿಗರೇಟ್ ಪೇಪರ್ ಕೇಳಿದ್ದೆ . ಇತ್ತೀಚಿಗೆ ಗೆಳತಿ ಶ್ರೀದೇವಿ ಬಟ್ಟೆ ಮೇಲೂ ಮಾಡಬಹುದು ಅಂತ ತಿಳಿಸಿಕೊಟ್ಟಿದ್ದರು. ಈ ತಿಂಡಿಗೂ ಅಜ್ಜಿಯ ನೆನಪಿದೆ. ರೊಟ್ಟಿ ಹೋಳಿಗೆ ತಟ್ಟುವಾಗಲೆಲ್ಲಾ "ಆದಷ್ಟು ಅಂಗೈಲೇ ತಟ್ಟೇ , ಇಲ್ಲಾಂದ್ರೆ ಬೆರಳ ಗುರುತು ಮೂಡುತ್ತೆ ರೊಟ್ಟಿ ಮೇಲೆ ನೋಡೋಕೆ ಚೆನ್ನಾಗಿರೋಲ್ಲ . ಹದವಾಗಿ ಬೇಯದು , ರುಚಿಯೂ ಸರಿಯಾಗದು" ಅನ್ನೋಳು ಅಜ್ಜಿ . ಎಲ್ಲದರಲ್ಲೂ ಹದವರಿತ ಹಿಂದಿನ ತಲೆಮಾರು . ಇತ್ತೀಚಿಗೆ ಚೈನಾದ ಯಾವುದೋ ಚಿಕಿತ್ಸಾ ರೀತಿಯ ಬಗ್ಗೆ ಕೇಳ್ಪಟ್ಟ ಮಾತು , 'ನಿಮ್ಮ ತಟ್ಟೆಯಲ್ಲಿನ ಆಹಾರವನ್ನು ಒಮ್ಮೆ ಸುಮ್ಮನೇ ನೋಡಿ . ಅವುಗಳ ಬಣ್ಣ , ಸ್ಪರ್ಶವನ್ನು ಅನುಭವಿಸಿ.'  ಈ ಮಾತು ಅಜ್ಜಿಯಂದಿರಿಗೆ ಮೊದಲೇ ಗೊತ್ತಿತ್ತೇನೋ ?
ವ್ಯಾಮೋಹಗಳ ಬಗ್ಗೆ ಹೇಳುತ್ತಾ ಕೂತರೆ ಸರಿದ ಕ್ಷಣಗಳು ಗಣಿತಕ್ಕೆ  ಸಿಕ್ಕವು . ಒಮ್ಮೆ ಹಾಗೆ ಸುತ್ತಲೂ ಕಣ್ಣು ಹಾಯಿಸಿ ಎಷ್ಟೋ ಅಜ್ಜಿಯರು ಬದುಕಿನ ಹದ ಕಲಿಸಲು ಕಾಯುತ್ತಿರಬಹುದು . ಒಗ್ಗರಣೆಯ ಘಮ ಹರಡಿ , ಕೆಂಪಾಗಿ ಸುಟ್ಟ ರೊಟ್ಟಿ ನಗುತ್ತಿರಬಹುದು.

ಬಹುಪಾಲು ಜನರಿಗೆ ಬದುಕಲ್ಲಿ ಸದಾ ಒಂದು ಗೊಣಗಾಟ
ತಂಗಳನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡುವುದು ಪರಿಪಾಟ

ಅಜ್ಜಿ ಹೇಳಿದ ಚಿತ್ರಾನ್ನ:
ಮೊದಲು ಪಾತ್ರೆಯಲ್ಲಿ ಎಣ್ಣೆ ಇಡು
ಜೋಪಾನ,
ಕೊಬ್ಬು ಜಾಸ್ತಿಯಾಗಬಾರದು, ಹೃದಯಕ್ಕೆ ಒಳಿತಲ್ಲವಂತೆ
ಕಡಿಮೆಯಾದರೆ ದೇಹಕ್ಕೆ ಸತ್ವವೇ ದೊರಕದು !


ಎಣ್ಣೆ ಕಾಯಲು ಬಿಡು
ಕಾಯದ ಎಣ್ಣೆಗೆ ಒಗ್ಗರಣೆ ಕೊಟ್ಟರೆ,
ಹೊಟ್ಟೆಗೆ ತ್ರಾಸು
ನಂತರ,
ಸಾಸಿವೆ ಜೀರಿಗೆ ಹಾಕು
ಸ್ವಲ್ಪ ಚಟ ಪಟ ಸಿಡಿಯಲಿ
ಹುಷಾರು,
ಸಿಡಿಯುವಾಗ ದೂರ ನಿಲ್ಲು
ಆದರೆ ಸಿಡಿಯಲು ಬಿಡು,ಸಿಡಿದರೆ ಒಳಿತು !


ಈಗ, ಕಡಲೆಬೀಜ , ಕಡ್ಲೆ ಬೇಳೆ, ಉದ್ದಿನ  ಬೇಳೆಯ ಸರದಿ
ಅನ್ನದ ಅಳತೆ ನೋಡಿ, ತಿನ್ನುವವರ ಹಲ್ಲು ನೋಡಿ
ಎಲ್ಲ ಅಳತೆಯಲ್ಲಿ ಹಾಕು
ಆಮೇಲೆ,
ಬೀಜ ಬೇಳೆ ಹದವಾಗಿ,
 ಕೆಂಪಾದ ಮೇಲೆ
 ಮೆಣಸಿನಕಾಯಿ, ಕರಿಬೇವು,ನೀರುಳ್ಳಿ ಹಾಕು
ಎರಡು ನಿಮಿಷ ಬಾಡಿಸು
ಹಸಿವಾಸನೆ ಅಷ್ಟು ಸಹ್ಯವಲ್ಲ
ಈಗ, ರಂಗೇರುವ ಸರದಿ
ಪ್ರಮಾಣದಲ್ಲಿ ಅರಿಶಿನ ಹಾಕು
ಬಣ್ಣ ಹೆಚ್ಚಾದರೆ ಎಲ್ಲ ಮಸಿ, ಕಡಿಮೆಯಾದರೆ  ಅದು ಚಿತ್ರಾನ್ನವಲ್ಲ !
ನಂತರ,
ಎಲ್ಲ ಪದಾರ್ಥಗಳು ಬೆರೆಯುವವರೆಗೆ, ಬೇಯುವವರೆಗೆ ಬಿಡು.
ಎಚ್ಚರ, ಒಲೆಯ ಕಡೆ ಗಮನ ವಿರಲಿ
ಉರಿ ಹೆಚ್ಚಾದರೆ ಸೀದು ಎಲ್ಲ ಕರುಕಲು ,
ಕಡಿಮೆಯಾದರೆ ಬೇಯದಿರಬಹುದು.
ಕರುಕಲು, ಅರ್ಧ ಬೆಂದದ್ದು ಎರಡೂ ದೇಹಕ್ಕೆ ಸುಖವಲ್ಲ
ಇನ್ನು ಅನ್ನ, ಮುದ್ದೆಯಾದರೆ,
ಅದು ಚಿತ್ರಾನ್ನಕ್ಕೆ ನಿರುಪಯೋಗಿ
ಹಾಗಂತ, ಪೂರ್ತ ಉದುರು ತಿನ್ನುವವರ್ಯಾರು?
ಅನ್ನವು ಹದವಾಗಿ ಬೆಂದು,ಮುದ್ದೆಯಾಗದಿದ್ದರೆ ,
ಅದು  ಚಿತ್ರಾನ್ನವಾಗಲು   ಯೋಗ್ಯ
ಕೊಬ್ಬು, ಖಾರ, ರಂಗು, ರುಚಿ, ಅನ್ನದ ಹದ ಎಲ್ಲ ಒಪ್ಪವಾಗಿದ್ದರೆನೇ ಚಿತ್ರಾನ್ನ ಚೆನ್ನ ,ಬದುಕೂ ಸಹ !

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ.






2 comments:

  1. ವಾಹ್, ಸ್ವರ್ಣಾ! ನಿಮ್ಮ ಅಜ್ಜಿ ಮಾಡಿದ ಅಡುಗೆಯನ್ನು ನಾನೂ ಸವಿಯಬೇಕಾಗಿತ್ತಲ್ಲ ಎಂದು ನಾಲಗೆ ಹಾತೊರೆಯುತ್ತಿದೆ! ನಿಮ್ಮ ಕವನವೂ ಸಹ ಅಷ್ಟೇ ರುಚಿಕಟ್ಟಾಗಿದೆ. ಇಬ್ಬರಿಗೂ ಅಭಿನಂದನೆಗಳು!

    ReplyDelete
    Replies
    1. ಹಾಗದ್ರೆ ಮನೆಗೆ ಬನ್ನಿ ಕಾಕಾ . ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್

      Delete