Friday, June 26, 2015

ಅವಳು

ಕನಸುಗಳು ಮೊಳಕೆಯೊಡೆಯುವ ಮುನ್ನ
ರೆಪ್ಪೆ ಮುಚ್ಚದ ರಾತ್ರಿಗಳು 
ರೂಪಿರದ ಅವನ ಜೊತೆಗಿನ
ಸರಸ ಸಂಭಾಷಣೆಗಳು 
ಕಂಡು ನನ್ನದೆನಿಸಿದ ಜೀವಕ್ಕೆ
ತಾಗಿಸಿದ ಅವನ ಚಿತ್ರ
ಸುತ್ತ ನಾನೇ ಹೆಣೆದ
ಕಲ್ಪನೆಯಲ್ಲದ ಪಾತ್ರ !
ವರುಷಗಳಲೆಯಲಿ ಸಿಕ್ಕು
ಮಾಸಿದ ರಂಗು
ಅರಿಯದೇ ಬಿಟ್ಟ
ಅವನೆಂಬ ಗುಂಗು

ತೊಳೆದ ಹಾಳೆ ಮತ್ತೆ ಬಿಳಿ
ಶೂನ್ಯ ನನ್ನರಮನೆಯಲ್ಲ !
ಮತ್ತೊಂದಿಷ್ಟು ಬಣ್ಣ 
ಮತ್ತೊಂದು ಪಾತ್ರ
ಮತ್ತೆ ಚಿಗುರಿದ ಮೊಳಕೆ 
ಕೈಗೆ ಸಿಕ್ಕು , ಆತುಕೊಂಡು
ನಡೆದ ದಾರಿ ನೂರು
ಕಟ್ಟಿದ ಕನುಸುಗಳು
ಮೀರಿದವು ಸಾವಿರಾರು
ಮಣ್ಣ ದಾಟಿದ ಎಲ್ಲ ಮೊಳಕೆಗಳಿಗೆ
ಗಿಡವಾಗುವ ಭಾಗ್ಯವಿಲ್ಲ
ಕನಸುಗಳ ಅಂತ್ಯಕ್ಕೆ
ಕಾರಣ ಬೇಕಿಲ್ಲ 

ಹರಿದು ಎಸೆದ ಹಾಳೆ
ಕುಂಚ ಒಲ್ಲೆನೆಂಬ ಮನಸು
ಸತ್ತರೂ ಬಿಡದ ಮಣ್ಣಿನ ಗುಣ 
ಮತ್ತೆ ಮತ್ತೆ ಚಿಗುರೊಡೆಯಲು
ತಪಿಸುವ  ಮೊಳಕೆ
ಚಿವುಟುವ ಧೈರ್ಯವಿರದ ನಾನು
ಈಗೆಲ್ಲದರಲ್ಲೂ ಎಚ್ಚರ , ಕಟ್ಟೆಚ್ಚರ !
ಅಷ್ಟಾಗಿಯೂ,
ತಾಕದೆಯೂ ತಾಕಿದ ಅವನು
ಮತ್ತೆ ಮಣ್ಣಾದ ನಾನು !
ಮತ್ತದೇ  ಬಣ್ಣದಾಟ
ಒಳಗಿಳಿದ ಕಣ್ಣನೋಟ
ಬಾನ ಮುಟ್ಟುವಷ್ಟರಲ್ಲಿ  ಸುರಿದ ಮಳೆ
ತೋಯದೆಯೂ ನೊಂದ ಇಳೆ
ಏರಿಹೋದವನ ಹಾದಿ ಕಾಯುವ ಬಣ್ಣ
ಚಿಗುರಲು ಚಡಪಡಿಸುವ ಮೊಳಕೆ 
ಸುತ್ತ ಹುತ್ತಗಟ್ಟಿದ  ಮಣ್ಣು
ಮಣ್ಣಿಗೆ ಮಣ್ಣು ಮಾತ್ರ ಜೀವ !

1 comment:

  1. ಅವನಿಸುತೆಯು ಅವನಿಗೇ ಮರಳುವಂತಹ ಪರಿಸ್ಥಿತಿ! ಅವಳ ಜೀವನಕ್ರಮವನ್ನು ನಿಟ್ಟುಸಿರು ಬಿಡುವಂತೆ ಚಿತ್ರಿಸಿದ್ದೀರಿ.

    ReplyDelete