Tuesday, August 11, 2015

ಕಾಡುವ ಮುಖಗಳು

ಚೂರು ಪಾರು ಬದಲಾವಣೆಯೊಂದಿಗೆ ಒಂದು ಹಳೆಯ ಬರಹ .

ಅಮೇರಿಕಾ ಅಮೇರಿಕಾ ಸಿನೆಮಾದಲ್ಲಿ  ಒಂದು ಸಂಭಾಷಣೆ  ಇತ್ತು . ಅಮೆರಿಕಾಗೆ ಹೋದ ಸೂರ್ಯ ಅರ್ಥಾತ್ ರಮೇಶ್ , ಶಶಾಂಕ್ ನನ್ನು ಅರ್ಥಾತ್ ಅಕ್ಷಯ್ ಆನಂದನನ್ನು  ನಿನಗೆ  ಊರು  ನೆನಪಾಗುವುದಿಲ್ಲವೇನೋ ? ಎಂದು ಕೇಳುತ್ತಾನೆ. ಅದಕ್ಕೆ ಶಶಾಂಕ್ ‘ನಮ್ಮೂರಿನಲ್ಲಿ  ಹಳೇ ಪೇಪರ್  ಕಬ್ಬಿಣಾss... ಅಂತ ಬರ್ತಿದ್ನಲ್ಲ ಸಾಬಿ, ಅವನು ನನ್ನ ಕನಸಿನಲ್ಲಿ ದಿನಾ ಬರುತ್ತಾನೆ’ ಅಂತಾನೆ . ಕೆಲ ವ್ಯಕ್ತಿಗಳೇ ಹಾಗೆ ಅವರೊಂದಿಗಿನ ನಮ್ಮ ಒಡನಾಟ ಅಷ್ಟಾಗಿ ಇಲ್ಲದಿದ್ದರೂ ಮನಃಪಟಲದಲ್ಲಿ ಉಳಿದುಬಿಡುತ್ತಾರೆ. ಅಂತಹ  ವ್ಯಕ್ತಿಗಳ  ಬಗ್ಗೆ ಈ ಪೋಸ್ಟು . ಇವರ ಬಗ್ಗೆ ನನಗೆ ಹೆಚ್ಚು ತಿಳಿಯದು. ಕಂಡದಷ್ಟನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ. 

ದಾವಣಗೆರೆ   ಮಂಡಕ್ಕಿ ತುಂಬಾ ಪ್ರಸಿಧ್ಧ. ಸಂಜೆ  ಚಹಾ ಜೊತೆ ಒಂದಷ್ಟು ಮಂಡಕ್ಕಿ ಜೊತೆಗೆ ಖಾರ , ಮೆಣಸಿನಕಾಯಿ ಬಜ್ಜಿ ಇದ್ದರೆ ಒಂದು ಕಪ್ಪು ಚಹಾ ಯಾವ ಮೂಲೆಗೆ ? ಬೆಳಗಿನ ತಿಂಡಿಗೆ ಕೆಲ ಕಡೆ ಸೂಸಲ, ಕೆಲಕಡೆ ಮಂಡಕ್ಕಿ ಉಸುಳಿ ಎಂದು ಕರೆಯಲ್ಪಡುವ ಮಂಡಕ್ಕಿಯನ್ನು ತೋಯಿಸಿ ಮಾಡಿದ ಒಗ್ಗರಣೆ ತಿಂಡಿ ಫೇಮಸ್ಸು. ಇನ್ನು ದೋಸೆ ,ಪಡ್ದು ಮೆತ್ತಗಾಗೋಕೆ ಮಂಡಕ್ಕಿ ಬೇಕು. ದಾವಣಗೆರೆಯ ಕೆಲ ಅಂಗಡಿಗಳಲ್ಲಿ ಸಿಗುವ ಇನ್ನೊಂದು ತಿನಿಸು ‘ನರ್ಗಿಸ್ ‘. ನರ್ಗಿಸ್ ಅಭಿಮಾನಿ ಈ ತಿಂಡಿಯನ್ನು ಕಂಡು ಹಿಡಿದು ಆಕೆಯ ಹೆಸರನ್ನು ಇಟ್ಟ ಎಂದು ಕೇಳಿದ್ದೇನೆ. ಇನ್ನು ದಾವಣಗೆರೆ ದಾಟಿ ಮುಂದೆ ರಾಣಿಬೆನ್ನೂರು ತಲುಪಿದರೆ  ಗಿರಮಿಟ್ಟು ಕರೆಯುತ್ತದೆ. ಬೆಳಗಾವಿಯ ವರೆಗೂ ಸರಿಸುಮಾರು ಮಂಡಕ್ಕಿಯ ಎಲ್ಲ ತಿಂಡಿಗಳೂ ಸಿಗುತ್ತವೆ . ನಾನು ಸಣ್ಣವಳಿದ್ದಾಗ ನಮ್ಮನೇಲಿ ಮಂಡಕ್ಕಿಗೆ ಅಂತಲೇ ಒಂದು ದೊಡ್ಡ ಅಲ್ಯುಮಿನಿಯಂ ಡಬ್ಬ ಇತ್ತು . ಅದರಲ್ಲಿ ಯಾವಾಗಲೂ ಮಂಡಕ್ಕಿ ಸ್ಟಾಕ್ ಇರುತಿತ್ತು . ಅಮ್ಮ ಮನೇಲಿ ಇಲ್ಲದಾಗ ಹಸಿ ಎಣ್ಣೆ , ಖಾರ ಪುಡಿ, ಟೊಮ್ಯಾಟೋ, ನೀರುಳ್ಳಿ  ಹಾಕಿ ಮಸಾಲೆ ಮಂಡಕ್ಕಿ ಮಾಡಿ ತಿಂದದ್ದೂ ಇದೆ. ಮೈಸೂರು ಪುರಿಯಷ್ಟು ಗಟ್ಟಿಯಲ್ಲದ ರುಚಿಯೂ ಬೇರೆಯಾದ ದಾವಣಗೆರೆ ಮಂಡಕ್ಕಿ ಈಗ ಬೆಂಗಳೂರಲ್ಲೂ ತನ್ನ ಸ್ಥಾನ ಗಟ್ಟಿಮಾಡಿಕೊಂಡಿದೆ. ೨ ದಶಕಗಳ ಹಿಂದೆ ೭೫ ಪೈಸೆ ಲೀಟರ್ ಇದ್ದ ಮಂಡಕ್ಕಿ ಈಗ ೪ ರಿಂದ ೫ ರೂಪಾಯಿ ಆಗಿದೆ. ದಾವಣಗೆರೆಯ   ಕೆಲ ಪರಿವಾರಗಳಿಗೆ  ಮಂಡಕ್ಕಿ ತಯಾರಿಸುವ ಭಟ್ಟಿಯೇ ಜೀವನಾಧಾರ.

ಇಂತಿಪ್ಪ  ಮಂಡಕ್ಕಿಯನ್ನ ಸೈಕಲ್ಲಿನ ಮೇಲೆ ಒಂದು ಚೀಲದಲ್ಲಿ ಹೊತ್ತು ಮಾರಾಟ ಮಾಡೋದನ್ನ ಇಂದಿಗೂ ನೋಡಬಹುದು. ಆದರೆ  ೨ ದಶಕಗಳ ಹಿಂದೆ, ಮಧ್ಯಾಹ್ನ ಊಟ ಮುಗಿಸಿ, ಹೆಂಗಸರು ಒಂದು ಸಣ್ಣ ನಿದ್ದೆ ತೆಗೆದು, ಕಟ್ಟೆ ಮೀಟಿಂಗ್  ಶುರುಮಾಡೋ  ಹೊತ್ತಿಗೆ  ತನ್ನ ತಲೆಯ ಮೇಲೆ ಒಂದು ಚೀಲ ಮಂಡಕ್ಕಿ ಹೊತ್ತು ಒಬ್ಬ ಅಜ್ಜ ‘ಮಂಡಕ್ಕಿಯವ್ವಾss‘ ಅಂತ ಕೂಗುತ್ತಾ ಬರುತ್ತಿದ್ದ .  ಕೂಗು ಕೇಳಿ ಯಾರಾದರೂ ಹೆಂಗಸರು ಮನೆ ಬಾಗಿಲಿಗೆ ಬರದೇ ಹೋದರೆ , ಅವರ ಮನೆ ಮುಂದೆ ನಿಂತು  ಮತ್ತೆ ದೊಡ್ಡ ದನಿಯಲ್ಲಿ ಕೂಗುತ್ತಿದ್ದ. ಹೆಂಗಸರು ಹೊರ ಬಂದು  ‘ಯಾಕಜ ಕೂಗಿ ಕೂಗಿ ನಿದ್ದಿ ಕೆಡಿಸಾಕತ್ತಿ’ ಅಂತ ಬೈಯ್ಯೋದು ಸಾಮಾನ್ಯವಾಗಿತ್ತು. ಮಂಡಿಯವರೆಗೆಗಿನ ­ಕಚ್ಚೆ ಉಟ್ಟು , ತಲೆಗೆ  ಒಂದು ಮುಂಡಾಸು ಬಿಗಿದ ಅಜ್ಜ ಯಾವಾಗಲೂ ಬಿಳಿ ಜುಬ್ಬಾ ಧರಿಸಿರುತ್ತಿದ್ದ. ಅಜ್ಜನ ಹಲ್ಲೂ ಒಂಥರಾ ಬಿಳಿ ಮಂಡಕ್ಕಿಯಂತೇ ಕಾಣುತಿತ್ತು . ಅಜ್ಜ ವ್ಯವಹಾರದಲ್ಲಿ ಪಕ್ಕಾ. ಉದ್ರಿ ಗಿದ್ರಿ ಮಾತೇ ಇಲ್ಲ. ಮಂಡಕ್ಕಿ ಗರಿ ಗರಿಯಾಗಿದೆಯಾ ಇಲ್ಲವಾ ಅಂತ ನೋಡೋಕೆ ನಾಲ್ಕು ಕಾಳಿಗಿಂತ ಹೆಚ್ಚಿಗೆ ತೊಗೊಂಡು ತಿಂದರೆ ಅಜ್ಜ ಅರ್ಧ ಲೀಟರ್ ದುಡ್ಡು ಕೊಡು ಅಂದು ಬಿಡುತ್ತಿದ್ದ.  ‘ಮಂಡಕ್ಕಿ ಮೆತ್ತಗಾಗ್ಯಾವೆ ‘ ಅಂದರೆ ‘ಚಳಿಗೆ ನೀನೇ ಮುದುರಿಕೊಂಡಿ ಇನ್ನು ಮಂಡಕ್ಕಿ ಏನ್ ಬಿಡು’ ಅಂದು ಬಿಡುತ್ತಿದ್ದ.   ಎಲ್ಲರ ಮನೆಯ ದೋಸೆಯ ತೂತುಗಳೂ ಅಜ್ಜನಿಗೆ  ಗೊತ್ತಿರುತ್ತಿತ್ತು ಆದರೆ ಆತ ಯಾವತ್ತೂ ಯಾರ ಮನೆಯವರ ಬಗ್ಗೆಯೂ ಹಗುರವಾಗಿ ಮಾತಾಡಿದ್ದು ನನಗೆ ನೆನಪಿಲ್ಲ.  ಎಲ್ಲ ಹೆಣ್ಣು ಮಕ್ಕಳನ್ನೂ ‘ಗೌರವ್ವಾss..’ ಎಂಬ ಒಂದೇ ಹೆಸರಿಂದ ಕರೆಯುತ್ತಿದ್ದ.  ಆದರೆ ಹೆಸರಿನ ಹಿಂದೆ ಒಂದು ವಿಶೇಷಣ ಸೇರಿಸುತ್ತಿದ್ದ.  ಭಟ್ಟರ ಹೆಂಡತಿ ‘ಭಟ್ರು ಗೌರವ್ವಾ ‘, ಶ್ರೇಷ್ಟಿಗಳ ಹೆಂಡತಿ  ‘ಶೆಟ್ರು  ಗೌರವ್ವಾ ‘, ಮೇಷ್ಟ್ರ ಹೆಂಡತಿ  ‘ಮೇಷ್ಟ್ರು ಗೌರವ್ವಾ’. ಅಜ್ಜನ ನವ ನಾಮಕರಣಕ್ಕೆ ಯಾವ ಹೆಂಗಸೂ ಸಿಟ್ಟಾಗಿದ್ದು ನಾನು ಕಂಡಿಲ್ಲ

ಅಜ್ಜ ಬೆಳಿಗ್ಗೆ ಐದಕ್ಕೆ ಭಟ್ಟಿಗೆ ಹೋಗಿ ಒಂದೆರಡು ಚೀಲ ಮಂಡಕ್ಕಿ ತಂದು , ಅದರಲ್ಲಿ ಒಂದನ್ನು  ಯಾವುದೋ ಮನೆಯ ಆವರಣದಲ್ಲಿರಿಸಿ, ತಲೆಯ ಮೇಲಿನ ಚೀಲ ಖಾಲಿಯಾದ ಮೇಲೆ ಆ ಮನೆಗೆ ಹೋಗಿ ಮತ್ತೊಂದು ಚೀಲ ತರುತ್ತಿದ್ದ. ಅದೆಷ್ಟು ವರ್ಷ ಆ ಮನೆಯವರು  ಅಜ್ಜನ ಮಂಡಕ್ಕಿಗೆ ಜಾಗ ಕೊಟ್ಟರೋ ತಿಳಿಯದು . ಬೆಳಿಗ್ಗೆ ಐದಕ್ಕೆ  ಕೆಲಸಕ್ಕೆ ಹೊರಡುತ್ತಿದ್ದವರಿಗೆ ದಿನವೂ ಅಜ್ಜ ಸಿಗುತ್ತಿದ್ದನಂತೆ. ‘ಒಂದು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ ....ಓಂ ನಮ ಶಿವಾಯ...’ ಅಂತ  ಜೋರು ದನಿಯಲ್ಲಿ ಭಜನೆ ಮಾಡುತ್ತಾ ವ್ಯಾಪಾರಕ್ಕೆ ಅಣಿಯಾಗುತ್ತಿದ್ದನಂತೆ

ಕೆಲ  ವರ್ಷಗಳ ನಂತರ ತಿಳಿದದ್ದು ಅಜ್ಜನ ಎಲ್ಲ ಮಕ್ಕಳು ಕೆಲಸ ಮಾಡುವಷ್ಟು ದೊಡ್ಡವರಾಗಿದ್ದರು ಮತ್ತು ಕೆಲಸ ಮಾಡುತ್ತಿದ್ದರು. ಆದರೂ ಅಜ್ಜ ಮಾತ್ರ ಮಂಡಕ್ಕಿ ಮಾರೋದನ್ನ ಬಿಡಲಿಲ್ಲ. ಒಂದೆರಡು ಬಾರಿ ಅಜ್ಜನನ್ನು  ‘ಇನ್ನೂ ಯಾಕೆ ದುಡಿತಿಯಜ್ಜಾ , ಮನೇಲಿ ಇರಬಾರ್ದೇನು ‘ ಅಂದಿದ್ದಕ್ಕೆ ಅಜ್ಜ ‘ ಏ  ಇರ್ಲಿ ಬಿಡವ ಕಾಯಕನೇ ಕೈಲಾಸ  ಅಲ್ಲೇನು ? ‘ ಅನುತ್ತಿದ್ದ.  ಕಾಯಕವೇ  ಕೈಲಾಸ ಅನ್ನೋದನ್ನ ಕೇಳಿದಾಗಲೆಲ್ಲಾ ನನಗೆ ಅಜ್ಜನ ನೆನಪಾಗತ್ತೆ. ಮಧ್ಯಾಹ್ನದ ನಿದ್ದೆಯ ಮಂಪರಿನಲ್ಲಿ ‘ಗೌರವ್ವಾss’ ಎಂದು ಅವ ಕರೆದಂತಾಗತ್ತೆ. ಏಕವಚನ ಬಾಲ್ಯಕ್ಕೆ ಸಲೀಸು ಮತ್ತು ಆಪ್ತ. ಅಜ್ಜ ಯಾರನ್ನಾದರೂ ಅಥವಾ ಯಾರಾದರೂ ಅಜ್ಜನನ್ನು  ಬಹುವಚನದಲ್ಲಿ ಕರೆದ ಉದಾಹರಣೆ ಇಲ್ಲ. ಹಾಗಾಗಿ ನಾನೂ ಕೂಡ ಎಕದಲ್ಲೇ ಉಳಿದಿದ್ದೇನೆ. ಇದು ಮುಂದಿನ ವ್ಯಕ್ತಿಗೆ ಕೂಡ ಅನ್ವಯ.

ಇನ್ನೊಬ್ಬ ವ್ಯಕ್ತಿಯ ಹೆಸರು  ಶಿವಾಜಿ.  ಅದು ಅವನ ನಿಜವಾದ ಹೆಸರೇ ಗೊತ್ತಿಲ್ಲ . ಚೂರು ಮಡಚಿದ ಪ್ಯಾಂಟು , ಮಾಸಲು ಶರ್ಟು ಮೇಲೊಂದು ಕರಿ ಕೋಟು. ಹೆಗಲಿಗೊಂದು ಜೋಳಿಗೆಯಂತಾ ಚೀಲ. ಕಾಲಿಗೆ ಕರೀ ಬೂಟು. ಇದು ಶಿವಾಜಿ ಸದಾ ಪಾಲಿಸುತ್ತಿದ್ದ ವಸ್ತ್ರ ಸಂಹಿತೆ. ಬಡಾವಣೆಯ ಎಲ್ಲ ಜನರಿಗೂ ಅವನು ಶಿವಾಜಿ ಎಂದೇ ಪರಿಚಿತ. ಖಾಲಿ ಕಂಡ ಗೋಡೆಯ ಮೇಲೆ,  ಇದ್ದಿಲಿನಿಂದ  ಇಂಗ್ಲೀಷಿನಲ್ಲಿ ಅದೇನೋ ಬರೆದು ಕೆಳಗೆ ಒಂದಷ್ಟು ಇಸವಿಗಳನ್ನು ಬರೆದಿಡುತ್ತಿದ್ದ. ಇದು ಅವನಿಗಿದ್ದ ಒಂದು ವಿಚಿತ್ರ ಹವ್ಯಾಸ. ಸದಾ ಇಸವಿಗಳನ್ನು ಬಡಬಡಿಸುತ್ತಿದ್ದ. ಯಾರೊಂದಿಗೂ ಅವನು ನಿಂತು ಮಾತಾಡಿದ್ದನ್ನು ನಾನು ಕಂಡಿಲ್ಲ. ಶಿವಾಜಿಯ ಬಗ್ಗೆ ಒಂದಷ್ಟು ಕಥೆಗಳಿದ್ದವು : ಅವನು ತುಂಬಾ ಓದಿ ಕೊಂಡವನಂತೆ, ಓದಿ ಓದಿಯೇ ಹೀಗಾಗಿದ್ದಂತೆ ಎಂದು ಮರಳು ಕೂಚು ಭಟ್ಟನಿಗೆ ಶಿವಾಜಿಯನ್ನು ಸಮೀಕರಿಸುತ್ತಿದ್ದರು. ಅವನ ಇಂಗ್ಲಿಷ್ ಅಕ್ಷರ ಶಾಲೆಯಲ್ಲಿನ ನಮ್ಮ ಶಿಕ್ಷಕರು ಬರೆವ ಚಂದವನ್ನು ಜ್ಞಾಪಿಸುತ್ತಿತ್ತು  ಹಾಗಾಗಿ ಇದು ನಿಜವೂ ಇದ್ದಿರಬಹುದು. ಎಂದೂ ನಾನವನ ದನಿಯನ್ನು ಕೇಳಿಲ್ಲ ಅಥವಾ ಅವನು ಯಾರೊಂದಿಗೂ ಮಾತನಾಡುವುದನ್ನೂ ಕಂಡಿಲ್ಲ.

ಮಂಡಕ್ಕಿ ಅಜ್ಜ , ಶಿವಾಜಿಯಂಥವರು ಬಾಲ್ಯ ಮುಗಿವ ಮುಂಚೆ ನಮಗೆಲ್ಲರಿಗೂ ಕಂಡಿರುತ್ತಾರೆ, ಆಪ್ತರಾಗಿರುತ್ತಾರೆ . ಶ್ರಧ್ಧೆ , ಜೀವನ ಪ್ರೀತಿಗೆ ಅಜ್ಜ ದ್ಯೋತಕವಾಗಿ ನಿಲ್ಲಬಹುದು. ಎಂದೂ ಮಾತನಾಡದ ಶಿವಾಜಿ ಏಕೆ ನೆನಪಿನಲ್ಲುಳಿದಿದ್ದಾನೆ ? ಮೌನ ಕಾಡಿದಷ್ಟು ಮಾತು ಕಾಡಲಾರದೇನೋ ?

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ.

2 comments:

  1. ಸ್ವರ್ಣಾ,
    ನಿಮ್ಮ ಲೇಖನ ನನ್ನ ಬಾಲ್ಯದ, ನನ್ನ ಊರಿನ ಆಪ್ತವ್ಯಕ್ತಿಗಳನ್ನು ನೆನಪಿಸಿತು. ಅವರ ನೆನಪು ನಮ್ಮಲ್ಲಿ ಹಸಿರಾಗಿ ಉಳಿದು, ಜೀವನದಲ್ಲಿ ಶ್ರದ್ಧೆಯನ್ನು, ಪ್ರೀತಿಯನ್ನು ತುಂಬುತ್ತದೆ, ಅಲ್ಲವೆ? Thank you.

    ReplyDelete
    Replies
    1. ಹೌದು ಕಾಕಾ . ನಿಮ್ಮ ನುಡಿಗಳಿಗಾಗಿ ಧನ್ಯವಾದಗಳು

      Delete