Thursday, September 22, 2016

ಗೋಳಕದ ಹಾಡು

 ಪಿಂಕ್ ಸಿನೆಮಾ : ಹೆಣ್ಣು : ಸೀತೆ, ಸಾವಿತ್ರಿ ,ರಾಧೇ , ಪಾಂಚಾಲಿ , ದೇವಕಿ , ಯಶೋಧೆ , ಶರ್ಮಿಷ್ಠೆ , ದೇವಯಾನಿ ; ಎಲ್ಲವೂ  ಆಗಬಲ್ಲಳು. ಆದರೆ ಆಯ್ಕೆಯ ಸ್ವಾತಂತ್ರ್ಯ ಅವಳದ್ದಾಗಿರಬೇಕು. ಪಾತ್ರಗಳನ್ನು ಹೇರುವ ಅಧಿಕಾರ ಯಾರಿಗೂ ಇಲ್ಲ , ಇರಬಾರದು. ಅಂತಹ ಸಮಾಜ ಉಳಿಯಲಾರದು , ಉಳಿಯಬಾರದು.
ಚಿತ್ರಕೃಪೆ : ಅಂತರ್ಜಾಲ


ನಾ ಪ್ರಶ್ನೆಗಳ ಗೂಡು ತೊರೆದಾಗಿದೆ
ಆದರೂ ಆಗಾಗ ಅವರು ಕೇಳುತ್ತಾರೆ,
ಎಲ್ಲಿದ್ದೆ ? ಎಲ್ಲಿಗೆ ಪಯಣ ?

ಮಡಿಲಿನಿಂದ ಮಣ್ಣಿನವರೆಗೆ
ತೀರದಿಂದ ಕಡಲಿನವರೆಗೆ
ಬಾನಿನಿಂದ ಬಯಲಿನವರೆಗೆ
ಎಣಿಕೆ ಬಾರದ ಹೆಡ್ಡನ
ಲೆಖ್ಕದಲ್ಲಿ ಗಳಿಕೆಯಾವುದು ?
ನೀವೇ ಹೇಳಿ,ಎಲ್ಲ ಬಲ್ಲವರು !   

ಒಲವಿಗೂ ವ್ಯಾಮೋಹಕ್ಕೂ
ನಂಬಿಕೆಗೂ ನೀರೀಕ್ಷೆಗೂ
ಆಸೆಗೂ ಕನಸಿಗೂ
ಕಡಲ ಉಪ್ಪಿಗೂ ನೀರಿಗೂ
ಇರುವಷ್ಟೇ ಅಂತರ
ತಿಳಿಯಲಿಲ್ಲ , ನಾನಳಿಯಲಿಲ್ಲ !

ಉತ್ತರಿಸದೇ , ಉಸಿರೆತ್ತದೇ
ಹೊತ್ತು ಮುನ್ನಡೆದೇ(?) ನಡೆದೇ
ಗೋಳದಲ್ಲಿ ಬಂಧಿಯಾದ
 ಮೂರು ಮುಳ್ಳುಗಳನ್ನ
ಮುಳ್ಳುಗಳಿಗ್ಯಾರ ಹಂಗು ?
ಚಲಿಸುತ್ತವೆ , ಚುಚ್ಚುತ್ತವೆ !

ಎಂದೋ , ಒಳಗಿಂದೊಂದು ಶಾಂತ
ದನಿ ಕೇಳಿತು, ಯಾವುದಾದರೇನು
ಹಾದಿ,ಹೊತ್ತು ನಡೆ ಗೋಳಕವ
ಸುತ್ತು ತಿರುಗುವ ಬಾಲನಂತೆ
ಮಾಯವಾಗಲಿ ಮುಳ್ಳು ಮುಂದಿನಿಂದ ,
ಬಂದೇ ಬರುವುದು  ನೆರಳು ಹಿಂದಿನಿಂದ !
ಗೋಳಕದ ಆದಿ ಅಂತ್ಯಗಳೆರಡು ಉಸಿರಿನಲ್ಲಿ
ಎಣಿಕೆ ಮಾಡಲಿ ಬೇಡ ಮುಳ್ಳಿನಲ್ಲಿ !

ಈ ಸಾಲುಗಳು ಮೂಡಿದ್ದು ಅವಧಿಯಲ್ಲಿನ ಚಿತ್ರಕ್ಕೊಂದು ಕವಿತೆ ಸ್ಪರ್ಧೆಗಾಗಿ ಆದರೆ ಕಳಿಸಲೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಮುನ್ನ ತೀರ್ಪುಗಾರರಾಗಿದ್ದ ಗೋಪಾಲ ವಾಜಪೇಯಿಯವರು ನಮ್ಮನಗಲಿದರು. ಹೌದು , ಇಲ್ಲ ಎಂಬ ಎರಡೇ ಆಯ್ಕೆಗಳನಿಟ್ಟಾಗ ಬದುಕು ತನ್ನದೇ ಆದ ಬೇರೆ ಆಯ್ಕೆ ಮಾಡಿಕೊಂಡಿತ್ತು.
ಅವರೊಡನೆ ನನಗಷ್ಟು ಒಡನಾಟವಿರಲಿಲ್ಲ, ಭೇಟಿಯಾಗಿದ್ದು ಎರಡೇ ಬಾರಿ ಆದರೂ ಅಂತಃಕರಣವೊಂದು ಮರೆಯಾದ ನೋವು ಕಾಡುತ್ತಿರುವುದು ಸತ್ಯ.


4 comments:

  1. ಸ್ವರ್ಣಾ, ನಿಮ್ಮ ಕವನ ಈ ಚಿತ್ರಕ್ಕೆ ತುಂಬ ಸಮರ್ಪಕವಾಗಿದೆ. ವಾಜಪೇಯಿಯವರು ತೀರ್ಪು ಕೊಡುವ ಮುನ್ನವೆ, ಅವರಿಗೆ ಮತ್ತೊಂದು ತೀರ್ಪು ಕಾಯ್ದಿತ್ತು. ಇದ್ದಿದ್ದರೆ, ನಿಮಗೇ ಬಹುಶಃ ಮೊದಲ ಬಹುಮಾನ ದೊರೆಯುತ್ತಿತ್ತು.

    ReplyDelete
    Replies
    1. ವಂದನೆಗಳು ಕಾಕಾ.ನಿಮ್ಮ ಪ್ರೀತಿಗೆ ಋಣಿ

      Delete
  2. ಹೊತ್ತು ನಡೆ ಗೋಳಕವ
    ಸುತ್ತು ತಿರುಗುವ ಬಾಲನಂತೆ
    ಮಾಯವಾಗಲಿ ಮುಳ್ಳು ಮುಂದಿನಿಂದ ,
    ಬಂದೇ ಬರುವುದು ನೆರಳು ಹಿಂದಿನಿಂದ !

    ಈ ಸಾಲುಗಳು ತುಂಬಾ ಕಾಡಿದವು

    ನಮ್ಮ ಗುರುಗಳು ಶಬ್ದಮಾಡದೆ ಅನೇಕರ ಸ್ಪೂರ್ತಿಗೆ ಸ್ಪೂರ್ತಿಯಾಗಿ ನಿಂತದ್ದು ಅವರ ಶಕ್ತಿ
    ಕಂಡು ಕಾಣದಂತೆ ಸಾಗಿರುವ ಈ ಕವಿತೆಯೊಳಗಿನ ಶಕ್ತಿ.. ಪೂರ್ಣ ಕವಿತೆ ಓದಿದ ಮೇಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ

    ಕವನ ಮತ್ತು ಅದರ ಹಿಂದಿನ ಭಾವ ಜೊತೆಯಲ್ಲಿ ಗುರುಗಳು ನೋಡಬೇಕಿತ್ತು ಈ ಕವನ ಎನ್ನುವ ಆ ಭಾವ...
    ಗುರುಗಳಿಗೆ ಒಂದು ನಮನ

    ReplyDelete
    Replies
    1. ಹೌದು ಶ್ರೀಕಾಂತ್ ಭಾಯ್ ...ವಂದನೆಗಳು

      Delete