Thursday, February 07, 2013

ಹಳ್ಳ ಸೇರದ ಹನಿಗಳು....ಭಾವಬನಿಗಳು - ೫

೧. ಪಡೆದಕ್ಕಿಂತ ಕೊಟ್ಟದ್ದರಲ್ಲೇ ಹೆಚ್ಚು ಸಮಾಧಾನ,
ಬಾಹುಬಲಿಗೆ ಸಿಕ್ಕ ಶಾಂತಿ ಭರತನಿಗೆ ಸಿಗಲಿಲ್ಲ
ಬುಧ್ಧನಿಗೆ ಸಿಕ್ಕ ಶಾಂತಿ ಸಿಕಂದರನಿಗೆ ಸಿಗಲಿಲ್ಲ

೨ .  ಬರೆದ ಕವಿಯ ಮನದಿಂದ, 
ಮನ  ಬರೆದ ಅಕ್ಷರದಿಂದ ,
ಅಕ್ಷರವ ಹಿಡಿದಿಟ್ಟ ಭಾವದಿಂದ,
ಭಾವವ ಭಾವಿಸಿದ ಮನಸಿನಿಂದ,
ಮನಸಿನ ಅಂದಿನ ಸ್ಥಿತಿಇಂದ
ಕವಿತೆಯ ಸಾರ್ಥಕ್ಯ ಯಾವುದರಿಂದ?
ಇದೆಲ್ಲದರಿಂದ .

೩. ಈ ಕವಿತೆಗಳೆಕೋ,
    ಕಪ್ಪು ಎಕ್ಸ್ರೇ ಥರ,
    ಲೆಕ್ಕ ಬರೆದಿಟ್ಟ ದಪ್ಪ ಲೆಡ್ಜರ್ ಥರ,
    ಚೂರಾದ ಹೂದಾನಿ ಥರ,
    ಕಾಣಿಸುತ್ತಿವೆ ನನಗೆ


೪. ಅಲೆಗಳೆಷ್ಟಿದ್ದರೇನು, ಒಂದೂ ಉಳಿಯಲಿಲ್ಲ ಕಡಲಿಗೆ
     ನೆನಪುಗಳೆಷ್ಟಿದ್ದರೇನು  ನೀನಿಲ್ಲ ನನ್ನ ಬಳಿಗೆ

೫. ಹನಿ ಹನಿಗೂ
   ಪುಟಿದೇಳುವ ತವಕವೇಕೆ ?
   ಪ್ರತಿ ಹನಿಗೂ ನಿನ್ನ
   ಸೇರುವ ಬಯಕೆಯದಕೆ

೬. ಚಿಟಿಕೆ ಕುಂಕುಮದಿಂದ
ನಿನ್ನಾಯುಷ್ಯ ಹೆಚ್ಚುವುದಾದರೆ
ಸೇರು ಕುಂಕುಮವನಿಟ್ಟೇನು
ನನ್ನುಸಿರು ನಿನ್ನ ಸೇರುವುದಾದರೆ
ಈ ಬದುಕ ಇಡಿಯಾಗಿ ಕೊಟ್ಟೇನು

೭. ಕ್ಷಣ ಕ್ಷಣಕ್ಕೂ ಬದಲಾಗುವುದು
ತೀರದ ವಿಳಾಸ
ನಿನ್ನೊಡನೆ ನನ್ನದು
ಬರಿ ಕಲ್ಪನಾ ವಿಲಾಸ

೮. ಅವನನ್ನೇ ಕುರಿತು ಏಕೆ
ಬರೆಯಬೇಕು ಪದ್ಯ ?
ಏಕೆಂದರೆ ಅವನಿಲ್ಲದ ಜಗತ್ತು
ನನಗೆ ವರ್ಜ್ಯ

೯. ನಿನ್ನ ಕಾಯುತ್ತಾ ಅಲೆಗಳನೆಣಿಸುತ್ತಿದ್ದೆ
ಲೆಕ್ಕ ಸಿಕ್ಕಲಿಲ್ಲ
ನಿನ್ನ ಕನಸೂ  ಮುಗಿಯಿತಲ್ಲ !

೧೦. ಚಿತ್ತದ ತುಂಬಾ ನಿನ್ನದೇ
ಭಿತ್ತಿ ಪತ್ರಗಳು
ಸಾಕಲ್ಲವೇ ಮನದ ಗೋಡೆಯ ಅಲಂಕರಿಸಲು ?


११. जुदाई का कोई घम  नहीं
आसूं बनके बसे हो तुम मुझ में कहीं
पर क्या करें, कमबख्त
आसूं भी आँखों में टिकते नहीं !



ಒಂದು ಜೀವಕೆರಡು  ವರ್ಷ  ತುಂಬಿದ ಸಂಭ್ರಮಕ್ಕೆ :
ಮಗಳೇ,
ಬದುಕಲ್ಲೆರಡರ ಪಾತ್ರ ಹಿರಿದು
ನೋಡುವ ಕಣ್ಣೆರಡು
ಕೇಳುವ ಕಿವಿಯೆರಡು
ಗಮ್ಯ ಸೇರಲು ನಡೆವ ಕಾಲೆರಡು
ಕಾಯಕವ ಕೈಗೊಳ್ವ ಕೈಗಳೆರಡು
ಸತ್ಯ ಸುಳ್ಳುಗಳೆರಡು
ಸರಿ ತಪ್ಪುಗಳೆರಡು
ಆಯ್ಕೆ ಮಾಡುವ ಮನಸು ಮಾತ್ರ ಒಂದೇ !

ಹಲ ಕಾಲ್ಗಳಲ್ಲಿ ನಡೆವ ಬಲವಿಲ್ಲ
ಹಲ ಕೈಗಳಲ್ಲಿ ದುಡಿವ ಕಸುವಿಲ್ಲ
ಎಷ್ಟೋ ಕಣ್ಗಳಲ್ಲಿ  ಕನಸೇ ಇಲ್ಲ !
ಅಂತಹ ಜೀವಗಳ ಬಗ್ಗೆ ಪ್ರೀತಿ ಇರಲಿ
ನಿನ್ನ ಕಣ್ಣಲ್ಲಿ  ಕನಸುಗಳ ಮೆರವಣಿಗೆ ನಿಲ್ಲದಿರಲಿ



ಒಂದು ವರ್ಷದ ಹಾರೈಕೆ
 

8 comments:

  1. ಚೆನಾಗಿದೆ ಮೇಡಮ್...
    "ಚಿತ್ತದ ತುಂಬಾ ನಿನ್ನದೇ ಭಿತ್ತಿ ಪತ್ರಗಳು"
    ಇಷ್ಟವಾದ ಸಾಲು....
    ಹಾಂ..ಎಲ್ಲವನ್ನೂ ಒಂದರ ಕೆಳಗೊಂದರಂತೆ ಕೊಟ್ಟರೆ ಓದಲು ಚೆನ್ನವೇನೋ...ನೋಡಿ...
    ನಮಸ್ತೆ :)

    ReplyDelete
    Replies
    1. ನಮಸ್ತೆ ಚಿನ್ಮಯ್,
      ಮೊದಲಿಗೆ ಮೇಡಂ ಅನ್ನೋದು ಬೇಡ :)
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
      ಮುಂದಿನ ಸರ್ತಿ ಪಬ್ಲಿಶ್ ಮಾಡೋವಾಗ ನಿಮ್ಮ ಸಲಹೆಯನ್ನ ಖಂಡಿತಾ ಗಮನದಲ್ಲಿರಿಸಿಕೊಳ್ಳುತ್ತೇನೆ

      Delete
  2. ಒಂದೊಂದು ಹನಿಯಲ್ಲೂ ಭಾವಸಮುದ್ರ ತುಂಬಿದೆ.ಕನ್ನಡ ಹಾಗು ಹಿಂದಿಯ ದ್ವಿಭಾಷಿ ಕವಯಿತ್ರಿಗೆ ‘ಬಧಾಯೀ ಹೋ,ಬಧಾಯೀ!’

    ReplyDelete
    Replies
    1. ನಿಮ್ಮ ಹಾರೈಕೆ ಹೀಗೆ ಇರಲಿ ಕಾಕಾ
      ಧನ್ಯವಾದಗಳು

      Delete
  3. ತ್ಯಾಗ
    ಸಾರ್ಥಕತೆ
    ಗೊಂದಲ
    ಅಗಲಿಕೆ
    ಆಶಯ
    ಭರವಸೆ
    ತೀರದ ಬಯಕೆ
    ಹಂಬಲ
    ಕಾಯ್ವಿಕೆಯ ಪರಮಾವಧಿ
    ನೂರಾರು ಭಾವಗಳು
    ಬಿಕ್ಕಳಿಸುತ್ತಿರುವ ಕಣ್ಣೀರಿನ ಒರತೆ
    ಕಡೆಯದಾಗಿ ಸದಾ ನೆರಳಿನಂತೆ ಹಿಂಬಾಲಿಸುವಂತಹ ಕನವರಿಕೆಗಳು...

    ಹೀಗೆ ಮೆಟ್ಟಿಲು ಮೆಟ್ಟಿಲಾಗಿ ರೂಪಿಸಿರುವ ನಿಮ್ಮ ಕವನಗಳ ಶೈಲಿ ಇಷ್ಟವಾಯಿತು...ಒಂದನ್ನು ಇಳಿದರೆ ಇನ್ನೊಂದು ಏರುವುದಕ್ಕೆ ಸಿದ್ಧ ಎನ್ನುವ ಧಾಟಿಯ ಶೈಲಿ ಸುಂದರವಾಗಿದೆ

    ReplyDelete
    Replies
    1. ಬರೆದದ್ದನ್ನ ಓದಿ ಒಳ್ಳೇ ಮಾತನ್ನಾಡುವ ಸಹೃದಯರಿಗೆ ವಂದನೆಗಳು

      Delete
  4. "ಹಳ್ಳ ಸೇರದ ಹನಿಗಳು" - ಎಂತಹ ಒಳ್ಳೆಯ ಶೀರ್ಷಿಕೆ ಸ್ವರ್ಣಾಜೀ, ನನ್ನ ಹಾಗೇ!

    ಎಲ್ಲ ಹನಿಗಳೂ ಅಮೋಘ.

    ಮಗಳ ಎರಡು ವರ್ಷದ ಸಂಭ್ರಮವು ನಿಮ್ಮಲ್ಲಿ ಮತ್ತಷ್ಟು ಒಲುಮೆ ತುಂಬಲಿ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್

      Delete