೧. ಅವ ಹೊರಟರೆ ಹಿನ್ನಡೆಯಿತು ಬೆಳದಿಂಗಳು
ನನ್ನ ಜೊತೆ ಬರಲೊಲ್ಲದು ನನ್ನ ನೆರಳು !
ನನ್ನ ಜೊತೆ ಬರಲೊಲ್ಲದು ನನ್ನ ನೆರಳು !
೨. ನಿನ್ನ
ಕಂಡು
ಲಜ್ಜೆಯಲ್ಲಿ
ಕಾಲ್ಬೆರಳು
ಬಿಡಿಸಿದ
ರಂಗೋಲಿ
ಅಳಿಯುವ ಮುಂಚೆಯೇ
ನನ್ನ ನಿನ್ನ ದಾರಿ ಬೇರೆಯಾಗಿತ್ತು .
೩. ಕದವಿಲ್ಲದ ಏಕಾಂತ ನಿನ್ನದಾದಾಗ
ಸಂತೆಯಲ್ಲಿನ ಒಂಟಿತನ ನನ್ನದು.
೪. ಅವತಾರಿ ರಾಮನನ್ನು
ಜಗಕ್ಕೆ ನೀಡಲು
ಸೀತೆ ಪತಿಯನ್ನ
ತೊರೆದಳು
ರಾಮನೊಂದಿಗೆ
ಲಕ್ಷ್ಮಣನ
ನಿಲಿಸಲು
ಊರ್ಮಿಳೆ ತನ್ನನ್ನೇ
ತೊರೆದಳು !
೫. ನಿನ್ನ ಜೊತೆ ಇಲ್ಲವೆಂಬ
ಒಂದೇ ಸತ್ಯ
ಬದುಕಿನ
ಎಲ್ಲ ಸತ್ಯಗಳೊಡನೆ
ಮುಖಾಮುಖಿಯಾಗಿಸಿತು !
೬. ಯಾರದೋ ಪಲ್ಲವಿಗೆ
ಇನ್ಯಾರದೋ ಚರಣ
ಮಧ್ಯೆ ಬರೆಯಬೇಕಿದೆ ನಾ ಕೆಲವು ಸಾಲುಗಳನ !
೭. ಸರ್ವಜ್ಞನ ಕೌಪೀನದಲ್ಲಿ
ಅಕ್ಕನ ಕೇಶರಾಶಿಯಲ್ಲಿ
ಮುಚ್ಚಿಟ್ಟೆವು ಏನನ್ನು?
ನಮ್ಮದೇ ವಿಕಾರಗಳನ್ನು !
(" ಬೇಸರಿಸಬೇಡಕ್ಕಾ ಕೂದಲ ರಾಶಿಯಲ್ಲಿ ಮುಚ್ಚಿ ನಿನ್ನ ಮಾನ ಕಾಯ್ದಿದ್ದೇವೆ " ಎಂದು ಕನ್ನಡದ ಖ್ಯಾತ ಲೇಖಕಿ ವಿಜಯಾ ದಬ್ಬೆ ಬರೆದಿದ್ದಾರೆ )
೮. ಜಗಕೆ ಕಾಣದಿರಲೆಂದು
ಹರಿಯಗೊಡದ ಕಂಬನಿ
ಆವಿಯಾಗಿ, ಉಪ್ಪಷ್ಟೇ
ಉಳಿದು ಹರಳು
ಚುಚ್ಚುತ್ತಿದೆ ಕಂಗಳನು.
೯. ಮನಸುಗಳ ಗೊಂಚಲಲ್ಲಿ
ನಿನ್ನನ್ನೆ ಏಕೆ ಆರಿಸಿಕೊಂಡೆ ?
ಸಾವಿರ ಹಣತೆಗಳಿದ್ದರೂ
ದೇವರ ಮುಂದುರಿಯುವುದು
ಒಂದೇ ನಂದಾದೀಪ !
೧೦. ನನಗೀಗ ಮಳೆ ಹನಿಯ ಸದ್ದೇ ಕೇಳುವುದಿಲ್ಲ
ಅದಕ್ಕೆ ನಾನು ಕವಿತೆ ಬರೆದಿಲ್ಲ !
ಸ್ವಾತಿ ಮಳೆಯ ಹನಿಯು ಸಿಂಪಿನಲ್ಲಿ ಬಿದ್ದಾಗ ಮುತ್ತಾಗುವದೆಂದು ಹೇಳುತ್ತಾರೆ.
ReplyDeleteಸ್ವರ್ಣಾ, ನಿಮ್ಮ ಮನದ ಭಾವನೆಯ ಪ್ರತಿಯೊಂದು ಹನಿಯು ಪ್ರತಿಭೆಯಂಬ ಸಿಂಪಿನಲ್ಲಿ ಸೇರಿ ಕವನವೆನ್ನುವ ಮುತ್ತಾಗಿದೆ.
ಒಂದೊಂದು ಬನಿಯೂ ಒಂದೊಂದು ಅನರ್ಘ್ಯ ಮುತ್ತು!
ಸಣ್ಣವರ ಸಣ್ಣ ಹೆಜ್ಜೆಗಳನ್ನು ಮರೆಯದೆ ಪ್ರೋತ್ಸಾಹಿಸುವ ನಿಮಗೆ ಧನ್ಯವಾದಗಳು
ReplyDeleteಕಾಕಾ
ಸ್ವರ್ಣಾಜೀ..
ReplyDelete1. ಸ್ವತಃ ನೆರಳಿಗೇ ಬೇಡ - ಅವನೇ ಸೂರ್ಯ?
2. ತುಂಬಾ ನೋವು ಕೊಡುವ ಸಂಗತಿ ಎಂದರೆ, ಎಲ್ಲಿಯೋ ಬಂಧ ಬೆಸುಯುವ ಮುನ್ನವೇ ಆಗುವ ಬೇರ್ಪಡುವಿಕೆ.
3. ಹಲವು ಕೂಡು ಕುಟುಂಬದ ಮನೆಗಳ ಅಂತರಂಗ!
4. ಸೀತೆ ಮತ್ತು ಊರ್ಮಿಳೆ ನನ್ನ ಮಟ್ಟಿಗೆ ನೆರಳು ಮತ್ತು ಕಾಯುವಿಕೆಯ ಸಂಕೇತ.
5. ನಿಜವಾದ ಮಾತು, ತೊರೆದ ಮೇಲೆ ತೊರೆಯ ಗುಣ. ಜಗವೂ ಬರಡು.
6. ಎಲ್ಲ ನಿರ್ಧಾರಗಳು ನಮ್ಮದಲ್ಲದ ಈ ಬಾಳಿನಲ್ಲಿ, ಯಾರದೋ ಹಾಡಿಗೆ ನಮ್ಮ ತುಟಿ ಚಲನೆ. :)
7. ವಿಕಾರಗಳನ್ನು ತಾವು ನಮಗಾಗಿ ಮುಚ್ಚಿಟ್ಟು ಆಕಾರವನ್ನು ದಯಪಾಲಿಸಿದವರು ಅವರು. ವಿಜಯಾ ದಬ್ಬೆ ಅವರ ಇತರ ಕೃತಿಗಳನ್ನೂ ನಾನು ಓದುತ್ತೇನೆ.
8. ಹೊರಗೆ ಹೇಳಿಕೊಳ್ಳಲಾಗದ ಹಲವು ನೋವುಗಳು ಸಾಂದ್ರ ಎದೆಯೊಳಗೆ. ಮನವೂ ಕಣ್ಣೀರ ಬೆರೆತಕ್ಕೆ ಉಪ್ಪುಪ್ಪು ಕಡಲು. ಬಚ್ಚಿಟ್ಟು ನಗಬೇಕಾದ ಅನಿವಾರ್ಯತೆ ಇಲ್ಲಿ ಚೆನ್ನಾಗಿ ಬಂದಿದೆ.
9. ಆಯ್ಕೆ ಸರಿಯಾಗಿದೆ ಎನಿಸುವುದು ಇಂತಹ ಸಾಲುಗಳಿಂದ.
10. ಪ್ರತಿಮೆ ಅತ್ಯುತ್ತಮವಾಗಿ ಅನಾವರಣಗೊಂಡಿದೆ.
10ಕ್ಕೂ ಸೇರಿಸಿ 1000 ಅಂಕಗಳು / 100 ಕ್ಕೆ! :)
ಬದರಿ ಸರ್, ಇಷ್ಟು ಸಣ್ಣ ಪ್ರಯತ್ನಗಳಿಗೆ ಇಷ್ಟು ದೊಡ್ಡ ಫಲ ಕೊಟ್ಟ ತಮ್ಮ ವಿಶ್ವಾಸ ದೊಡ್ಡದು .
Deleteಧನ್ಯವಾದಗಳು
ನಾನು ಓದಿದ ಅತ್ಯಂತ ಒಳ್ಳೆಯ ಕವನಗಳಲ್ಲಿ ಇದೂ ಒಂದು. ನನಗೆ ಎಷ್ಟು ಹಿಡಿಸಿತು ಎಂದರೆ ನನ್ನ ಗೆಳೆಯನನ್ನು ಕರೆದು ತೋರಿಸಿ ಓದಿಸುವಷ್ಟು. ನೀವು ಬರೆದ ಕೆಳಗಿನ ಸಾಲುಗಲು ನನಗೆ ತುಂಬಾ ಇಷ್ಟವಾದವು.
ReplyDeleteಲಜ್ಜೆಯಲ್ಲಿ ಕಾಲ್ಬೆರಳು ಬಿಡಿಸಿದ ರಂಗೋಲಿ ಅಳಿಯುವ ಮುಂಚೆಯೇ
ನನ್ನ ನಿನ್ನ ದಾರಿ ಬೇರೆಯಾಗಿತ್ತು.
ಮನಸುಗಳ ಗೊಂಚಲಲ್ಲಿ ನಿನ್ನನ್ನೆ ಏಕೆ ಆರಿಸಿಕೊಂಡೆ ?ಸಾವಿರ ಹಣತೆಗಳಿದ್ದರೂ ದೇವರ ಮುಂದುರಿಯುವುದು
ಒಂದೇ ನಂದಾದೀಪ !
Thank you
Deleteಅದ್ಭುತ ಸಾಲುಗಳು.. ಎಲ್ಲವೂ ಇಷ್ಟವಾದವು.. ಬದ್ರಿ ಸರ್ ಹೇಳಿದಂತೆ ನೂರಕ್ಕೆ ಸಾವಿರ.. :)
ReplyDeleteಎಲ್ಲವೂ ಚೆಂದ.ಎಲ್ಲವೂ ಇಷ್ಟವಾದವು.
ReplyDeleteInteresting!
-Rj