Thursday, October 31, 2013

ಎಲ್ಲ ಮರೆತಿರುವಾಗ




 

ಚಿತ್ರ ಕೃಪೆ : ಅಂತರ್ಜಾಲ



ಕಾಳುಗಳನ್ನ ಬಿಡಿಸುವ ಕೆಲಸವಿದೆಯಲ್ಲ  ಅದಕ್ಕೆ ಯಾವುದೇ ಏಕಾಗ್ರತೆಯೂ ಬೇಡ. ಬೇಕಾದ ಕಡೆಗೆ ಮನಸನ್ನು ಏಕಾಗ್ರ ಗೊಳಿಸುವುದೇ ಕಷ್ಟವಾಗಿರುವ ನಮ್ಮಂಥ ಪಾಮರರಿಗೆ  ಇಂತಹ ನಿತ್ಯದ ಕೆಲಸಗಳಲ್ಲಿ ಮನಸ್ಸನ್ನು ನೆಡುವುದು ಕಷ್ಟ ಸಾಧ್ಯ. 
 

ಹರೆಯಕ್ಕೆ ಕಾಲಿಟ್ಟ ಮಗಳನ್ನು ನೋಡುವುದೇ ಆನಂದ. ಕನ್ನಡಿ ಮುಂದೆ ನಿಂತಾಗ ಅದೇನು ತಾದಾತ್ಮ್ಯತೆ, ಅದೆಷ್ಟು ರಂಗುಗಳು ಕಣ್ಣಲ್ಲಿ, ಅದೇನು ಹುರುಪು ನಡೆಯಲ್ಲಿ . ಯಾರದ್ದೋ ನೆಪದಲ್ಲಿ ಇನ್ಯಾರದೋ ಗುಣಗಳ ವರ್ಣನೆ ಮಾಡುತ್ತಾಳೆ ಇತ್ತೀಚಿಗೆ. ಸೆರಗ ಅಡಿಯಲ್ಲಿ ನಗುತ್ತೇನೆ ನಾನು. ಆಡುವ ಪ್ರತೀ ಮಾತೂ   ನನ್ನ ನಿನ್ನದೇ ಹಾಡು (दोस्तोंसे झूटी मूटी नाम लेके तेरी मेरी बातें करना गुलज़ार ) ಅವನು ಸಿಕ್ಕ ದಿನ ಊಟ ತಿಂಡಿ , ಕಡೆಗೆ ಅವಳಿಷ್ಟದ ಹಿಂದಿ ಧಾರಾವಾಹಿ ಕೂಡ ಬೇಡ.  ಕೋಣೆ ಸೇರಿ ನೆಪ ಮಾತ್ರಕ್ಕೆ ಕೈಯಲ್ಲಿ ಹಿಡಿದ ಪುಸ್ತಕ, ಮೊಗದಲ್ಲೊಂದು ಸುಂದರ ಮುಗುಳುನಗೆ. ಅಪ್ರತಿಮ ಸುಂದರಿಯಲ್ಲದಿದ್ದರೂ ಲಕ್ಷಣವಾಗಿದ್ದ ಮಗಳನ್ನು ಕಂಡಾಗ ಮನದ ಯಾವುದೋ ಮೂಲೆಯಲ್ಲಿ  ಅವ್ಯಕ್ತ ಭಯ. ಇಂಗ್ಲೀಷಿನಲ್ಲಿ ಮೊದಲ ಪ್ರೀತಿಯನ್ನು ಕ್ರಶ್ಶು ಅಂತ ಸುಲಭವಾಗಿ ತೇಲಿಸಿ ಬಿಡ್ತಾರೇನೋ, ನಮ್ಮಲ್ಲಿ ಹಾಗಲ್ಲ ಎಲ್ಲವೂ ಪ್ರೀತಿಯೇ. ಮೊದಲ ಪ್ರೀತಿಯ ಹುಚ್ಚಿದೆಯಲ್ಲ ಅದು ಯಾವ ಹೆಣ್ಣನ್ನೂ ಅಷ್ಟೇಕೆ ಗಂಡನ್ನೂ ಬಿಟ್ಟಿಲ್ಲ. ಈಗ ಹೊಸ್ತಿಲು ದಾಟಲು ಸಿಧ್ಧವಾದ ಮಗಳಿಗೆ ಏನು ಹೇಳಲಿ ? ನನ್ನ ಮೊದಲ ಪ್ರೀತಿಯ ಕಥೆ ಹೇಳಿದರೆ ಮಗಳಿಗೆ ಅರ್ಥವಾದೀತೆ ?  ಹೆಣ್ಣು ಮಕ್ಕಳ ಸ್ಕೂಲು , ಕಾಲೇಜುಗಳಲ್ಲಿ ಓದಿ , ಪರೀಕ್ಷೆಯ ಫಲಿತಾಂಶ ಬರುವ  ಮುನ್ನವೇ ಹಸೆಮಣೆ ಏರಿದ ನನ್ನ ಪೀಳಿಗೆಯವರ ಮೊದಲ ಪ್ರೀತಿಯ ಕಥೆ: ಒಬ್ಬ ಹುಡುಗನಿದ್ದ ಅವನನ್ನು ದಿನಾ ನಾನು ನೋಡುತ್ತಿದ್ದೆ ಅಥವಾ ಅವನು ನನ್ನ ನೋಡುತ್ತಿದ್ದ. ಒಂದು ದಿನ ಮಾಯವಾದ ಅಥವಾ ನಾನೇ ಆ ಊರಿಂದ ಮಾಯವಾದೆ ಎಂಬ  ಒಂದೋ ಎರಡೋ ವಾಕ್ಯಗಳಲ್ಲಿ ಮುಗಿದು ಹೋಗತ್ತೆ . ಕೇಳಿದರೆ ಮಗಳು ನಕ್ಕುಬಿಟ್ಟಾಳು.  ಹಾಗಾದರೆ ಅವಳಿಗೇನು ಹೇಳಲಿ ? ಎಚ್ಚರಿಕೆ ಮಗಳೇ, ಅಳೆದು ತೂಗಿ ಆರಿಸಿಕೋ , ಅಂತಲೇ, ಅದೇನು ತರಕಾರಿ ವ್ಯಾಪಾರವೇ? ಅಥವಾ ಕನಸುಗಳು ಒಡೆದುಹೋಗಬಹುದು , ತಯಾರಿರು ಅನ್ನಲೇ , ನಾನೇ ಕಾಡಿಗೆ ಇಟ್ಟು ತೀಡಿದ ಕಂಗಳಲ್ಲಿ ಕಂಬನಿಯನ್ನು ಹೇಗೆ ನೋಡಲಿ ?  ಅಥವಾ  ಏನಾದರೂ ನಾನಿದ್ದೇನೆ ಬಿಡು ಅನ್ನಲೇ , ಕೇಳಿ  ಸ್ವಾತಂತ್ರ್ಯ ಸ್ವೆಚ್ಚೆಯಾದರೆ?   ಕಾಳು ಬಿಡಿಸಿದಷ್ಟು ಸುಲಭವಲ್ಲ ಬದುಕ ಬಿಡಿಸುವುದು.


ಅಜ್ಜಿ ಅಜ್ಜನನ್ನು ಕಂಡದ್ದು ಅಂತರಪಟ ಸರಿದಾಗಲೇ  ಅಂತೆ. ಹದಿನಾಲ್ಕರ ಪೋರಿ ಮದುವೆಯಾಗಿ ಶ್ರಿಮತಿಯಾಗಿ ಬಿಟ್ಟಿದ್ದಳು . ಇನ್ನು ಅಮ್ಮ , ಉಪ್ಪಿಟ್ಟು ಕಾಫಿ ಸಮಾರಾಧನೆಗಳ ನಡುವೆ , ಬಂದ ಹಿರಿಯರ್ಯಾರೋ ಹುಡುಗಿಯನ್ನ ಸರಿಯಾಗಿ ನೋಡ್ಕೊಳ್ಳೋ, ಆಮೇಲೆ ನೋಡಿಲ್ಲ ಅನ್ನಬೇಡ ಎಂಬ ಹಳಸಲು ಉಕ್ತಿಯೊಂದನ್ನ ಹೇಳಿದಾಗ ಅರ್ಧ ತಲೆಎತ್ತಿ ಅಪ್ಪನನ್ನು ಕಂಡಿದ್ದಳಂತೆ. ವರ ಒಪ್ಪಿದ ಮೇಲೆ ಇನ್ನು ವಧುವಿನ ಮಾತು ಲೆಕ್ಕಕ್ಕೂ ಇಲ್ಲದ ಕಾಲ. ನಮ್ಮ  ಪೀಳಿಗೆಯಲ್ಲಿ ವಧುಪರೀಕ್ಷೆಯ ನಂತರ ಒಂದೆರಡು ಪತ್ರಗಳು, ಊರ ಹಬ್ಬ , ಮಾರಿ ಹಬ್ಬದ ನೆಪದಲ್ಲಿ ಒಂದೆರಡು  ಭೇಟಿಗಳು ನಡೆದವು . ಹುಡುಗಿಯ ಮಾತಿಗೆ ಅಷ್ಟೇನೂ ಮನ್ನಣೆ ಇರದಿದ್ದರೂ ನಿಂಗೂ ಸರಿಯೇನೆ ? ಅಂತ ಎದ್ದ್ಹೊಗೋ ಮಾತು ಬಿದ್ದು ಹೋಗಲಿ ಅನ್ನೋಥರ ಅಮ್ಮ ಕೇಳಿ ತಾನೇ ತನ್ನ ಹಾಗೂ ತನ್ನ ಪತಿಯ ಇಷ್ಟವನ್ನು  ಮಗಳ  ಉತ್ತರದಂತೆ ಎಲ್ಲರಿಗೂ ಹೇಳಿಬಿಡುತ್ತಿದ್ದಳು. ಇತ್ತೀಚಿಗೆ ಅಕ್ಕನ ಮಗಳು ಮದುವೆಗೆ ಬಂದಾಗ ಹುಡುಗ , ಹುಡುಗಿ ಇಬ್ಬರೇ  ಮೊದಲು ಹೋಟೆಲೊಂದರಲ್ಲಿ ಭೇಟಿಯಾಗಿ , ಮೇಲ್ ಗಳಲ್ಲಿ, ಮೊಬೈಲ್ ನಲ್ಲಿ  ಮಾತಾಡಿ ಅವರ ತೀರ್ಮಾನದ ನಂತರವೇ ತಂದೆ ತಾಯಿಗಳು ಭೇಟಿಯಾಗಿದ್ದು .  ಕಾಲವೇ ಹೆಣ್ಣಿನ ದನಿಯನ್ನು ಗುರುತಿಸಿತೋ ಅಥವಾ ಅವಳೇ ಹೋರಾಡಿ ಗುರುತಿಸುವಂತೆ  ಮಾಡಿದಳೋ ಅಂತೂ ಹುಡುಗಿಯರೂ ತಮ್ಮ ಆಸೆಗಳನ್ನು ಹೇಳಿಕೊಳ್ಳುತ್ತಿದ್ದಾರೆ , ಗಂಡನ್ನು ನಿರಾಕರಿಸುತ್ತಿದ್ದಾರೆ.

ಮೊನ್ನೆ  ಯಾವುದೋ ಚಾನೆಲ್ ನಲ್ಲಿ ಶರಪಂಜರ ಸಿನೆಮಾ ಬರುತ್ತಾ ಇತ್ತು , ಮಗಳು ಹೇಳುತ್ತಿದ್ದಳು  “ಕಲ್ಪನಾದು ಒಂಥರಾ ಓವರ್ ಆಕ್ಟಿಂಗ್ ಅನ್ನಿಸುತ್ತೆ. ನನಗನ್ನಿಸಿತು  ಹೆಣ್ಣಿಗೂ ಒಂದು ದನಿ ಇದೆ ಅವಳೆದೆಯಲ್ಲೂ ಹಾಡುಗಳಿವೆ ಎಂದು ಗುರುತಿಸದ ಕಾಲಘಟ್ಟ ಅದು , ಆಗ ಸಮಾಜಕ್ಕೆ ತನ್ನ ಮಾತನ್ನು ಕೇಳಿಸಲಿಕ್ಕಾಗಿ ಸ್ತ್ರೀ ಅರಚುವುದನ್ನು ಅನಿವಾರ್ಯವಾಗಿ ಕಲಿತಳೇನೋ ? ಆ ಅರಚಾಟ  ಈ ಪೀಳಿಗೆಗೆ ಅತೀ ಅನ್ನಿಸುತ್ತಿರಬಹುದು. ನಳ ನಳಿಸುತ್ತಿರುವ ಚಿಗುರೆಲೆಗೆ  ಉದುರಿ ಗೊಬ್ಬರವಾಗುತ್ತಿರುವ ಹಣ್ಣೆಲೆಯ ಸಂಕಟ ಅರ್ಥವಾಗಿದ್ದು ಕಡಿಮೆ .ಗೊಬ್ಬರವಾಗುತ್ತಿರುವ ನೋವು ಸಾಲದೆಂಬಂತೆ ಚಿಗುರು ತನಗೆ ಕೃತಜ್ಞತೆಯನ್ನೂ ತೋರಿಸುತ್ತಿಲ್ಲ ಎಂಬ ಸಂಕಟದಲ್ಲಿರುವ ಹಣ್ಣೆಲೆಗೆ,  ಚಿಗುರಿನ ಬದಲಾದ ಅವಶ್ಯಕತೆಗಳು ಅರ್ಥವಾಗಿಲ್ಲವಿರಬಹುದು. ಒಂದು ಮನಸ್ಥಿತಿಯಲ್ಲಿ ಊರ್ಮಿಳೆಯ ದುಃಖ ಹಿರಿದು ಅನ್ನಿಸಿದರೆ  ಮತ್ತಷ್ಟು ಮಾಗಿದರೆ , ಗಂಡ ಹೆಂಡಿರು ಉಂಡು ಮಲಗೇಳುತ್ತಿದ್ದುದ ಕಂಡ ಲಕ್ಷ್ಮಣ ಇನ್ನೆಷ್ಟು ಎಕಾಂಗಿಯಾಗಿದ್ದಿರ ಬೇಡ ಅನ್ನಿಸುವುದು.  ಗರ್ಭಿಣಿ ಸೀತೆಯನ್ನ ಕಾಡಿಗಟ್ಟಿದ ರಾಮ ನಿರ್ದಯಿ ಎಂದು ತೀರ್ಮಾನ ಮಾಡಿ ಹಲ ವರ್ಷಗಳ ನಂತರ , ವನದಲ್ಲೂ ಸಹಚಾರಿಯಾಗಿದ್ದ ಪತ್ನಿಯನ್ನು ಅದಾವುದೋ ರಾಜ ಧರ್ಮಕ್ಕಾಗಿ  ಕಳೆದುಕೊಂಡ ರಾಮನ ಕಂಬನಿ ಸರಯೂವಿನ ಹರಿವಲ್ಲಿ ಕಾಣಿಸುವುದು.  ಬದುಕಲ್ಲಿ ಯಾವುದೂ ಶಾಶ್ವತವೂ ಅಲ್ಲ , ಬಹುಶಃ ಸತ್ಯವೂ ಅಲ್ಲ. ಕಾಲಾತೀತವಾದದ್ದು ಕಾಲವೊಂದೆ !

ಮಗಳಿಗೆ ಏನೂ ಹೇಳುವುದು ಬೇಡ . ಬದುಕು ಪ್ರಾಕ್ಸಿ ಹಾಜರಾತಿಯನ್ನು ಒಪ್ಪುವುದಿಲ್ಲ. ಅವರವರ ಶಿಲುಬೆಯನ್ನು ಅವರವರೇ ಹೊರಬೇಕು . ಕನಸುಗಳನ್ನು ಹೆಣೆವ ಸ್ವಾತಂತ್ರ್ಯ ಮಗಳದ್ದೆ ಎಂದು ನಿರ್ಧರಿಸಿ  ಇಹಕ್ಕೆ ಬಂದರೆ ಕಾಳುಗಳೆಲ್ಲಾ ಸಿಪ್ಪೆಯಿಂದ  ಈಚೆ ಬಂದು ನಗುತ್ತಿದ್ದವು.  ಒಂದು ಕ್ಷಣ ಅವುಗಳನ್ನು ನೋಡಿ ಸಿಪ್ಪೆಯ ಕಡೆ ಗಮನ ಕೊಟ್ಟೆ. ಕಾಳು ಬಿಡಿಸಿದ ನಂತರ  ಸಿಪ್ಪೆ ಎಸೆಯುವ ಕಾರ್ಯಕ್ಕೆ ಒಂಚೂರು ಗಮನ ಬೇಕು ಇಲ್ಲವಾದಲ್ಲಿ ಕಾಳೂ ಸಿಪ್ಪೆಯ ಜೊತೆ ತಿಪ್ಪೆ ಸೇರೀತು.
 


 ಕರುಣಾಳು ಬಾ ಬೆಳಕೇ ..ದೀಪಾವಳಿಯ ಶುಭಾಶಯಗಳು.



ಮರೆಯುವ ಮುನ್ನ : ನಮ್ಮ ಮನೆ ಹಿಂದಿನ  ಗುಬ್ಬಕ್ಕನ ಬಗ್ಗೆ ಇಲ್ಲಿ ಬರೆದಿದ್ದೆ. ಇತ್ತೀಚಿಗೆ ನಮ್ಮಲ್ಲಿ ಪಾರಿವಾಳಗಳ ಮತ್ತು ಮೈನಾ ಸಂಖ್ಯೆ ಜಾಸ್ತಿಯಾಗಿಬಿಟ್ಟಿದೆ. ಎಲ್ಲರಿಗೂ ತಿಳಿದಂತೆ ಪಾರಿವಾಳಗಳ ದನಿ  ಮತ್ತು ದೇಹ ಗುಬ್ಬಿಗಿಂತ ದೊಡ್ಡದು . ಇನ್ನು ಗುಬ್ಬಿ ಸಂಸಾರದ ಗತಿ ಏನು ? ಎಂದು ನಾ ಯೋಚಿಸುತ್ತಿದ್ದರೆ  ಗುಬ್ಬಕ್ಕನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಗೊತ್ತು ಅಂತ  ರಾಯರು ಅಂದಿದ್ದರು. ಅವರ ಮಾತು ನಿಜವಾಗಿ ಗುಬ್ಬಕ್ಕ ಪಾರಿವಾಳ , ಮೈನಾಗಳೊಂದಿಗೆ  ಸೆಣಸಿ ತನ್ನ ಗೂಡನ್ನು ಕಾಯ್ದುಕೊಂಡಿದ್ದಾಳೆ. ಒಂದಷ್ಟು ಹೊಸ ಗುಬ್ಬಿ ಸಂಸಾರಗಳು ಬಂದಹಾಗಿದೆ.

7 comments:

  1. ಕಾಳು-ಸಿಪ್ಪೆ ಉಪಮೆ ಲೇಖನದ ಆಶಯಕ್ಕೆ ಪೂರಕವಾಗಿದೆ. ಹಿತವಾದ ನಿರೂಪಣೆ. ಶುಭವಾಗಲಿ.

    ReplyDelete
  2. ಹಿಂದಿನ ದಿನಗಳಲ್ಲಿ ಪ್ರೀತಿಯನ್ನು ತೋರ್ಪಡಿಸುವ ರೀತಿ, ಆಗಿನ ಕಾಲದಲ್ಲಿನ ವಧು ಪರೀಕ್ಶೆಯಲ್ಲಿ ಹೆಣ್ಣಿಗಿರದ ಸ್ವಾತಂತ್ರ್ಯ...ನಿಮ್ಮ ಈ ಲೇಖನದಲ್ಲಿ ಚೆನ್ನಾಗಿ ಮೂಡಿ ಬಂದಿದೆ.
    ಸ್ವರ್ಣರವರೆ.. ದೀಪಾವಳಿಯ ಶುಭಾಶಯ

    ReplyDelete
  3. Swarna avare,
    I came here following a comment you left on my blog and have only read the first 2 posts on yours so far. I am so glad you dropped by mine and made me discover this beautiful blog of yours.

    Nimma sheershike maretuhogidda haadondannu nenapige tanditu. you write in a very honest way. If I didn't make it clear, you just got yourself a fan :-), Will be back for sure for more.

    ReplyDelete
  4. ಕಾಳುಗಳನ್ನು ಬಿಡಿಸುತ್ತಲೇ ಕಾಲಧರ್ಮದ ಬಗೆಗೆ ಹೇಳಿದ್ದೀರಿ.
    ನಿಮ್ಮ ಲೇಖನಗಳು ಯಾವಾಗಲೂ ಮನಸ್ಸನ್ನು ಮುಟ್ಟುವ ಲೇಖನಗಳು.
    ದೀಪಾವಳಿಯ ಶುಭಾಶಯಗಳು.

    ReplyDelete
  5. ನಿಮಗೆಲ್ಲರಿಗೂ ವಂದನೆಗಳು ಮತ್ತು ಧನ್ಯವಾದಗಳು
    @Nagashree, ನಿಮ್ಮ ಸತ್ವ ನೋಡಿ ನಾನು ಎಷ್ಟೋ ಅಡಿಗೆಯನ್ನ ಪ್ರಯೋಗ ಮಾಡಿದ್ದೇನೆ .
    ನಿಮ್ಮ ಬ್ಲಾಗು ಮತ್ತು ನೀವು ಹಾಕುವ ಅಡಿಗೆಗಳು , ನೀವು ಪೂರಕವಾಗಿ ಬರೆವ
    ಬರಹ ಎಲ್ಲವೂ ಸುಂದರವಾಗಿರುತ್ತವೆ.

    ReplyDelete
  6. ತುಂಬಾ ಭಾವನಾತ್ಮಕವಾಗಿವೆ ನಿಮ್ಮ ಸಾಲುಗಳು! "ಅವರವರ ಶಿಲುಬೆಯನ್ನು ಅವರವರೇ ಹೊರಬೇಕು " - ತುಂಬಾ ಇಷ್ಟವಾದವು!

    ReplyDelete
  7. ಈ ಥರದ ಲೇಖನಗಳನ್ನಾ ಓದಿ ನನ್ನ ಬಹುತೇಕ ಖಾಲಿಯಿರುವ ಅನುಭವದ ಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೇನೆ....ವಂದನೆಗಳು ಮೇಡಮ್...
    ಸಾಲುಗಳ ಬಗ್ಗೆ ಹೇಳೋದಾದ್ರೆ "ನಾನೇ ಕಾಡಿಗೆ ಇಟ್ಟು ತೀಡಿದ ಕಂಗಳಲ್ಲಿ ಕಂಬನಿಯನ್ನು ಹೇಗೆ ನೋಡಲಿ ? " ಇಷ್ಟವಾಯ್ತು...

    ReplyDelete