Tuesday, November 12, 2013

ಕಥಾ ಸಮಯ -೩

೧.ಹೆಸರಿಲ್ಲದ ಹಕ್ಕಿಯೊಂದು ಸೊಂಪಾಗಿ ಬೆಳೆದ  ಗಿಡದಲ್ಲಿ ತನ್ನದೇ  ಲೋಕದಲ್ಲಿತ್ತು.  ಒಂದು ಹೆಸರಿಲ್ಲದ ಮರ , ಮಂದ್ರ, ಷಡ್ಜಗಳ ಹಂಗಿಲ್ಲದ ಒಂದಷ್ಟು  ಸ್ವರಗಳು ಇವಿಷ್ಟೇ  ಅದರ ಲೋಕ. ಒಂದು ದಿನ ಎಲ್ಲಿಂದಲೋ ಬಂದ ಕೋಗಿಲೆ ಹಾಡು ಕೇಳಿ ಭೇಷ್ ಅಂದಿತು. ಒಲವಿನ ಒಂದು ಹಸ್ತಕ್ಕಾಗಿ ಹಂಬಲಿಸುತ್ತಿದ್ದ ಹಕ್ಕಿಗೆ ಹಿಡಿಸಲಾರದಷ್ಟು ಸಂತೋಷ . ಅಂದಿನಿಂದ  ಹಕ್ಕಿಯ ಹಾಡು ಹಕ್ಕಿಯದಾಗಿ  ಉಳಿಯಲಿಲ್ಲ ,  ಕುಹೂ ಎಂಬ ಸ್ವರ ಎಲ್ಲೆಲ್ಲಿಯೂ ಕಾಡಲಾರಂಭಿಸಿತು. ಹಕ್ಕಿ ತನ್ನ ಸ್ವರಗಳು , ತನ್ನ ಲೋಕ ಎಲ್ಲವನ್ನೂ ಕಳೆದುಕೊಂಡಿತ್ತು . ಕೋಗಿಲೆಗೆ ಸಮನಾಗಿ ಹಾಡಬೇಕೆಂಬ ತುಡಿತದಲ್ಲಿ ಬೆಂದಿತು ಹಕ್ಕಿ , ಹಕ್ಕಿಯ ಹಾಡು ಕೋಗಿಲೆಯನ್ನು ಮೆಚ್ಚಿಸುವುದಕ್ಕೆ ಮಾತ್ರ ಮೀಸಲಾಗಿ ಹೋಯಿತು . ಕೊಗಿಲೆಯನ್ನೂ  ತನ್ನೊಂದಿಗೆ ಹಾಡುವಂತೆ ಪೀಡಿಸಿತು ಹಕ್ಕಿ.  ಕೋಗಿಲೆ ಹಾಡದಾದಾಗ ಕೋಗಿಲೆಯನ್ನ , ಕೋಗಿಲೆಯ ಸ್ನೇಹವನ್ನ, ಬದುಕನ್ನ ದೂಷಿಸಿದ್ದೂ ಆಯಿತು . ಮಾಮರ , ಮಾವಿನ ಚಿಗುರುಗಳನ್ನು ತಾನು ತರಲಾರೆನೆಂಬುದು ಹಕ್ಕಿಗೆ ಮರೆತೇ ಹೋಗಿತ್ತು
ತನ್ನ   ಲೋಕವೇ ಬೇರೆ , ಕೋಗಿಲೆಯ ಮಾಧುರ್ಯವೇ ಬೇರೆ. ತನಗಿರುವ ಒಲವ ಬಂಧನದ  ಅಗತ್ಯವೇ  ಬೇರೆ , ಕೋಗಿಲೆಗಿರುವ  ಮಾವಿನ ಚಿಗುರ ರುಚಿಯೊಂದಿಗಿನ ಸ್ವಾತಂತ್ರ್ಯದ ಆಸೆಯೇ  ಬೇರೆ ಎಂದು ಹಕ್ಕಿಗೆ ಒಂದು ದಿನ ಅರಿವಾಯಿತು. ತನ್ನದೇ  ಲೋಕದ ಹುಡುಕಾಟಕ್ಕೆ ಹಕ್ಕಿ ಹಾರಿ ಹೋಯಿತು ,ಮತ್ತೊಂದು ಅನಾಮಿಕ ಹಾಡಿಗೆ ದನಿಯಾಗುವುದಕ್ಕೆ . 

೨. ಒಂದೊಮ್ಮೆ ಭೂಮಿ 'ಭೂಮಿ' ಮಾತ್ರ ಆಗಿತ್ತು.  'ವಸುಧೈವ ಕುಟುಂಬಕಂ' - ಅದ್ಯಾವನಿಗೆ ಹುಚ್ಚು ಐಡಿಯಾ ಬಂತೋ ಅದನ್ನು ಖಂಡಗಳೆಂದ, ದೇಶಗಳೆಂದ ಒಂದಷ್ಟು ಮೇರೆಗಳನ್ನ ಎಳೆದ. ಇನ್ಯಾರೋ ಅದಕ್ಕೆ  ರಾಜ್ಯ, ಜಿಲ್ಲೆ, ತಾಲ್ಲೂಕು, ಊರು , ಹಳ್ಳಿ , ಬಡಾವಣೆ, ಬೀದಿ ಎಂದು ಮತ್ತೆ ಭಾಗ ಮಾಡಿದರು. ಬೀದಿಯಿಂದ ಮನೆಯಾಗಿ , ನಾನು ನನ್ನ ಸಂತತಿ , ನನ್ನ ಸಂಗಾತಿ ಯಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಈಗ ಮನುಷ್ಯನಿಗೆ ಕಾಣುವುದು 'ನಾನು' ಮಾತ್ರ !  ಈ ಮೇರೆಗಳನ್ನು ಎಳೆದವನಿಗೊಂದು ಧಿಕ್ಕಾರವಿರಲಿ  ಅದನೊಪ್ಪಿಕೊಂಡ ಮನಸುಗಳಿಗೂ !

೩. ಅಜ್ಜಿ ಆನಂದ ಎಂದರೇನು ?
ಹರೆಯದ ಮೊಮ್ಮಗಳ ಪ್ರಶ್ನೆಗೆ ಪಾರಿಜಾತವೊಂದನ್ನು ಜತನದಿಂದ ಎತ್ತಿ ಸೂಜಿಯಲ್ಲಿ ಸಿಕ್ಕಿಸಿ ಮೆಲ್ಲಗೆ ದಾರದೊಳಕಿಡುತ್ತಿದ್ದ ಅಜ್ಜಿ ಮೆಲುವಾಗಿ ನಕ್ಕು  ನುಡಿದಳು “ಆನಂದ ಎಂದರೇನು ? ಎಂದು ನನಗೆ ಗೊತ್ತಿಲ್ಲ ಮಗು, ಆದರೆ ಇಂದು ,ಇಲ್ಲಿ , ಈಗ ನೀನು  ಆನಂದವಾಗಿರಲಾರೆ  ಎಂದಾದರೆ ನೀನು ಎಲ್ಲೋ ಯಾವಾಗಲೋ ಏನೋ ಸಿಕ್ಕಿದಾಗ ಕೂಡ ಆನಂದವಾಗಿರುವ ಸಾಧ್ಯತೆ ಕಡಿಮೆ

೪. ಅಜ್ಜಿ ಬದುಕು ಬೇಸರ, ಗೊಂದಲದ ಗೂಡು. ನಿಟ್ಟುಸಿರಿಟ್ಟ ಮೊಮ್ಮಗಳ ಉಸಿರಿಗೆ ಅಜ್ಜಿಯ ಸೆರಗು ನಲುಗಿತು.
ಅಜ್ಜಿ  ಶಾಂತಳಾಗಿ ಹೇಳಿದಳು  ಹಾಗೆನಿಸಿದಾಗೆಲ್ಲಾ ಒಮ್ಮೆ ಮುಗಿಲನ್ನು ನೋಡು ಮಗಳೇ

  

3 comments:

  1. ನಿಮ್ಮ ಕಥಾ ಸಮಯ ಚೆನ್ನಾಗಿದೆ. ನಿಮ್ಮ ಕಥೆಯಲ್ಲಿನ ಆನಂದವೆಂದರೇನು ? ಎಂಬ ಪ್ರಶ್ನೆಯನ್ನು ಓದುತ್ತಾ ನಾವು ನಾಳೆಯ ಚಿಂತೆಯಲ್ಲಿ ಈ ದಿನದ ಆನಂದವನ್ನು ಅನುಭವಿಸಲು ಮರೆಯಬಾರದು ಎಂಬ ಮಾತನ್ನು ಅರ್ಥೈಸಿತು.

    ReplyDelete
  2. ಬದುಕಿನ ತಿಳಿವನ್ನು ಹಾಗು ಚೈತನ್ಯವನ್ನು ತುಂಬಿಕೊಂಡ ಕತೆಗಳಿವು. ಈ ಕತೆಗಳು Oscar Wildeನ ಕತೆಗಳನ್ನು ಹಾಗು parableಗಳನ್ನು ನೆನಪಿಸುತ್ತವೆ.

    ReplyDelete
  3. ಧನ್ಯವಾದಗಳು ಕಾಕಾ ಮತ್ತು ನಾಯಕರಿಗೆ

    ReplyDelete