Thursday, December 05, 2013

‘ಸುಮ್ಮನೆ‘ಯವರ ವಿಚಿತ್ರವೀರ್ಯ


ಸತ್ಯಕಾಮ ಹೆಸರಿನ ಬಗ್ಗೆ ನಂಗೊಂಥರಾ ಸೆಳೆತ.  ಬದುಕಿನಲ್ಲಿ ಕಾಮನೆಗಳಿಗೆ ಬರವಿಲ್ಲ , ತಾಯ ಮಡಿಲಲ್ಲಿ ಕಣ್ಣು ಬಿಟ್ಟಾಗಿನಿಂದ  ಕಡೆಯ ಉಸಿರಿನ ತನಕ, ಉಸಿರಾಡುವ ಕಾಮನೆಯನ್ನೂ ಸೇರಿಸಿ ಆಸೆಗಳ ದೊಡ್ಡ ಪಟ್ಟಿಯೊಂದಿಗೆ ಮನುಷ್ಯ ಬದುಕುತ್ತಾನೆ. ಹಾಗಿರುವಾಗ ಸತ್ಯದ ಕಾಮನೆ ಯಾರಿಗಿದ್ದೀತು ? 


ಎಲ್ಲರಿಗೂ ತಿಳಿದಂತೆ ಜಾಬಾಲಿಯ ಮಗ ಸತ್ಯಕಾಮ ತಂದೆ ಯಾರೆಂದು ತಿಳಿಯದ ಹುಡುಗ .ಆದರೆ  ಗೌತಮರ ಶಿಷ್ಯನಾಗಿ ಜ್ಞಾನಿಯಾಗಿ ಸತ್ಯಕಾಮ ಜಾಬಾಲಿಯಾದವ. ಬಹುಶಃ ಇತಿಹಾಸದಲ್ಲಿ ತಾಯಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡ ಮೊದಲ ವ್ಯಕ್ತಿ.

ಸತ್ಯ ಎಂದರೇನು ?
ಮಗುವಿನ  ಪ್ರಶ್ನೆಗೆ ಅನಂತದತ್ತ  ದೃಷ್ಟಿ ನೆಟ್ಟಳು ತಾಯಿ

ಅದೋ ಮುಂದೆ ಕಾಣುವ ಭತ್ತ  ಸತ್ಯವೇನಮ್ಮ ?
ಇಲ್ಲ ಮಗು , ಮಳೆ ಇರುವಾಗ ಭತ್ತ ,
ಭತ್ತ ಕುಟ್ಟಿ ಅಕ್ಕಿ
ಅಕ್ಕಿಯಿಂದ ಅನ್ನ
ಅನ್ನದಿಂದ ಶಕ್ತಿ
ಮಳೆ ಇಲ್ಲವಾದರೆ
ಇವಾವೂ ಇಲ್ಲ ಮಗು

ಹಾಗಾದರೆ, ಮಳೆ ಸತ್ಯವೇನಮ್ಮ ?
ಇಲ್ಲ ಮಗು , ರವಿ ಇರೆ ಜಲವೆಲ್ಲ  ಆವಿ
ಆವಿಯಿಂದ  ಮೋಡ
ಮೋಡದ ಹಿಂದೆ ಗಾಳಿ
ಗಾಳಿ ಮೋಡ ಎಲ್ಲ ಸೇರಿ
ಇಳೆಗೆ ಮಳೆ
 ರವಿ ಇಲ್ಲವಾದರೆ
ಇವಾವೂ ಇಲ್ಲ ಮಗು

ಹಾಗಾದರೆ ರವಿ ಸತ್ಯವೇನಮ್ಮ ?
ಇಲ್ಲ ಮಗು,
ವಿಶ್ವದೊಡಲಲಿ
ಸಹಸ್ರಾರು ಗೋಳಗಳು
ಲಕ್ಷ ಲಕ್ಷ ರವಿಗಳು
ಎನ್ನುವರು
ವಿಶ್ವವಿಲ್ಲವಾದರೆ
ಇವಾವೂ ಇಲ್ಲ ಮಗು

ಹಾಗಾದರೆ ನೀನು ಸತ್ಯವೇನಮ್ಮ ?
ಇಲ್ಲ ಮಗು
ನಾನು ನಿನ್ನ ಪಾಲಿನ ಸತ್ಯ ಮಾತ್ರ
ಪರರಿಗೆ  ನಾನೊಂದು ಜೀವ
ಕೆಲವರಿಗೆ ಅದೂ ಅಲ್ಲ

ಹಾಗಾದರೆ ಸತ್ಯವೆಂಬುವುದು ಭ್ರಮೆ ಏನಮ್ಮ ?
ಇಲ್ಲ ಮಗು , ಎಲ್ಲವೂ ಸತ್ಯ ಯಾವುದೂ ಅಲ್ಲ !
ಆದರೆ
ವಿಶ್ವವನ್ನು ಮುನ್ನಡೆಸುತ್ತಿರುವ ಶಕ್ತಿ ಮಾತ್ರ  ಎಂದೆಂದಿಗೂ ಸತ್ಯ ಮಗು !

ರಿಲೇಟಿವ್ ಮತ್ತು ಅಬ್ಸಲ್ಯೂಟ್ ಟ್ರುತ್ಗಳನ್ನ ಕನ್ನಡದಲ್ಲಿ ಸಾಪೇಕ್ಷ ಸತ್ಯ ಮತ್ತು ಪರಮ ಸತ್ಯ ಎನ್ನಬಹುದೇನೋ ?ಎಲ್ಲವನ್ನೂ ಕಳೆದರೆ ಉಳಿವುದು ಶೂನ್ಯ ,ಶೂನ್ಯದಿಂದ ಮತ್ತೆ ಸೃಷ್ಟಿ .



ಇದು ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.ಇಲ್ಲಿ ಬರೆದದ್ದು ನನ್ನನ್ನು ಹೆಚ್ಚು ಓದಿಗೆ,ಇದೇ ಪುಸ್ತಕದ ಮರು ಓದಿಗೆ ಪ್ರೇರೇಪಿಸಲೆಂದು ಈ ಬರಹ. 

ಮತ್ತೆ ಸತ್ಯಕಾಮರ ಕಡೆಗೆ ಬಂದರೆ , ಪುಸ್ತಕ ಅಂಗಡಿಯೊಂದರಲ್ಲಿ ಸತ್ಯಕಾಮರ ವೀಚಿತ್ರ ವೀರ್ಯ ಕಣ್ಣಿಗೆ ಬಿತ್ತು. ವಿಚಿತ್ರ ವೀರ್ಯ , ಪಾಂಡು , ಧೃತರಾಷ್ಟ್ರರ ತಂದೆ ಎಂಬ ಒಂದೇ ಮಾಹಿತಿ ತಿಳಿದ ನನಗೆ ವಿಚಿತ್ರ ವೀರ್ಯನ ಬಗ್ಗೆ ಒಂದು ಪುಸ್ತಕ ಬರೆವಷ್ಟು ಏನಿದೆ ? ಎಂಬ  ಕುತೂಹಲದಿಂದ , ಸತ್ಯಕಾಮರ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ  ಪುಸ್ತಕ ತಂದೆ.  ನಂತರ ಸುನಾಥ್ ಕಾಕಾ ಮತ್ತು ಇತರ ಕೆಲವರಿಂದ ಅವರ ಬಗ್ಗೆ ಸ್ವಲ್ಪ ತಿಳಿದುಕೊಂಡೆ.  

ಸತ್ಯಕಾಮರೆಂದು ಪ್ರಸಿಧ್ಧರಾದ ಅನಂತ ಕೃಷ್ಣ ಶಾಹಪುರರ ಕಲ್ಲಹಳ್ಳಿಯ ಮನೆಯ ಹೆಸರು ಸುಮ್ಮನೆ . ಇತ್ತೀಚಿಗೆ ಅವರ ಕೆಲ ಪುಸ್ತಕಗಳು ಮತ್ತೆ ಬಿಡುಗಡೆಯಾದವು. . ನಾನು ವಿಚಿತ್ರವೀರ್ಯ ತಂದಾಗ ಅವರ ಯಾವುದೇ ಪುಸ್ತಕಗಳು ಇನ್ನೂ ಬಿಡುಗಡೆಯಾಗಿರಲಿಲ್ಲ. ನಾನು ಓದಿದ ಅವರ ಮೊದಲ ಪುಸ್ತಕ ವಿಚಿತ್ರವೀರ್ಯ


ಖಾಹಿಲೆಗೆ ತುತ್ತಾದ ವಿಚಿತ್ರವೀರ್ಯನಿಗೆ ಮಕ್ಕಳಾಗದೇ ಅವನು ಮರಣ ಹೊಂದಿದಾಗ  ವ್ಯಾಸರಿಂದ ನಿಯೋಗ ಪದ್ಧತಿಯಲ್ಲಿ ಪಾಂಡು ಮತ್ತು ಧೃತರಾಷ್ಟ್ರಅಂಬಿಕೆ ಮತ್ತು ಅಂಬಾಲಿಕೆಯರಿಗೆ ಜನಿಸುತ್ತಾರೆ, ಎಂಬ ಒಂದು ವಾಕ್ಯಕ್ಕೆ ವಿಚಿತ್ರವೀರ್ಯನ ಕಥೆ ಸಾಮಾನ್ಯವಾಗಿ ಕೊನೆಯಾಗುತ್ತದೆ. ಅಂತಹ ವಿಚಿತ್ರವೀರ್ಯನ ಬಗ್ಗೆ ಸತ್ಯಕಾಮರು ಏನು ಬರೆದಿರಬಹುದು ಎಂಬ ಕುತೂಹಲದೊಡನೆ ಪುಸ್ತಕವನ್ನು ತೆರೆದೆ.
 
ಮತ್ಸ್ಯಗಂಧಿ, ಯೋಜನಗಂಧಿ ಎಂಬ ಹೆಸರಿದ್ದರೂ  ಸತ್ಯವತಿ ಎಂದು ಪ್ರಸಿಧ್ಧಳಾದ ಬೆಸ್ತರ ಕನ್ಯೆ ಮುನಿ ಪರಾಶರರಲ್ಲಿ ಕೃಷ್ಣ ದ್ವೈಪಾಯನ ಎಂಬ ಮಗನನ್ನು ಪಡೆದವಳು . ದ್ವೈಪಾಯನ ತಂದೆ ಪರಾಶರರಲ್ಲಿ ಬೆಳೆಯುತ್ತಿರುತ್ತಾನೆ . ಇಂತಹ ಸತ್ಯವತಿ   ಚಕ್ರವರ್ತಿ ಶಂತನುವನ್ನು ಭೇಟಿಯಾಗುವಲ್ಲಿಂದ  ಆರಂಭವಾದ ಕಥೆ  ವಿಚಿತ್ರವೀರ್ಯನ ಅವಸಾನ ಮತ್ತು ವ್ಯಾಸರಿಂದ ಅವನ ಪತ್ನಿಯರಿಗೆ ನಿಯೋಗದಲ್ಲಿ ಕೊನೆಯಾಗುತ್ತದೆ. ಕಥೆಯ ಎಲ್ಲ ಪಾತ್ರಗಳನ್ನೂ ಸಾಮಾನ್ಯ ಮಾನವರಂತೆ ಚಿತ್ರಿಸಿರುವುದು ಕಥೆಗೆ ಒಂದು ಹೊಸ ಆಯಾಮ ಕೊಡುತ್ತದೆ.  ಬೆಸ್ತರ ಸತ್ಯವತಿ  ಕ್ಷತ್ರಿಯ ರಾಜನನ್ನು ಮದುವೆಯಾಗ ಬೇಕಾಗಿ ಬಂದಾಗ  ಅವಳ ಕುಟುಂಬದವರನ್ನು ಕಾಡುವ ಅಭದ್ರತೆ , ಅದರ ಪರಿಹಾರಾರ್ಥವಾಗಿ ಅವರು ರಾಜನಿಂದ ಕೇಳುವ ವರ , ಎಲ್ಲಕ್ಕೂ ಹೊಸ ಅರ್ಥವೊಂದನ್ನು ಸತ್ಯಕಾಮರು ತೋರಿಸುತ್ತಾರೆ. 

ಅರಮನೆಯಲ್ಲಿ  ತನ್ನ ಗರ್ಭಕ್ಕೆ , ತನಗೆ ಬರಬಹುದಾದ ತೊಂದರೆಗಳ ಬಗ್ಗೆ ಚಿಂತಿಸಿ ಭಯಪಡುವ ಸತ್ಯವತಿ , ತನ್ನ ಮಕ್ಕಳಾದ ಚಿತ್ರಾಂಗದ ಹಾಗೂ ವಿಚಿತ್ರವೀರ್ಯರ ಅಕ್ಷಮತೆ ಕಂಡು ಕೊರಗುವ ಸತ್ಯವತಿ , ದೇವವ್ರತನನ್ನು ಭೀಷ್ಮ ನನ್ನಾಗಿ ಮಾಡಿ ತನ್ನ ಕುಟುಂಬದವರು ತಪ್ಪು ಮಾಡಿದರೆ ? ಎಂದು ಹಲುಬುವ ಸತ್ಯವತಿ , ಹೇಗಾದರೂ ಸರಿ ವಿಚಿತ್ರವೀರ್ಯನಿಗೆ ಮದುವೆಯಾಗಲಿ ಎಂದು ಭೀಷ್ಮನಿಂದ ಅಂಬೆ, ಅಂಬಿಕೆ , ಅಂಬಾಲಿಕೆಯರ ಅಪಹರಣಕ್ಕೆ ಪ್ರೇರಣೆಯಾಗುವ ಸತ್ಯವತಿ , ಮಕ್ಕಳಾಗದೇ ಮಗ ಸತ್ತಾಗ ರಾಜ್ಯದ ಸಿಂಹಾಸನಕ್ಕಾಗಿ ಸೊಸೆಯರನ್ನು ನಿಯೋಗಕ್ಕೆ ಒಪ್ಪಿಸುವ ಸತ್ಯವತಿ  ಇಷ್ಟರ ಮಧ್ಯೆ ವ್ಯಾಸರಂಥ ವ್ಯಾಸರನ್ನು ಮಗನಾಗಿ ಪಡೆದು ಅವರಿಂದ ದೂರ ಇರಬೇಕಾಗಿ ಬಂದ ಭಾಗ್ಯ ನೆನೆದು ಕೊರಗುವ ತಾಯಿ ಸತ್ಯವತಿ . ಒಂದು ಹೆಣ್ಣಿಗೆ ಎಷ್ಟೆಲ್ಲ ಮುಖಗಳು !


ಸತ್ಯವತಿಯ ನಂತರದ ಕಾಡುವ ಸ್ತ್ರೀ ಪಾತ್ರ ಅಂಬೆ. ಪ್ರೇಮಿಗಾಗಿ ತಂದೆಯೊಡನೆ ವಾದಕ್ಕಿಳಿಯುವ ರಾಜಕುಮಾರಿಯಾಗಿ , ಸ್ವಯಂವರದಿಂದ  ಭೀಷ್ಮ ಹೊತ್ತೊಯ್ದಾಗ ಅವನೊಂದಿಗೂ  ಹೋರಾಡಿ ಮತ್ತೆ ಪ್ರೇಮಿಯನ್ನು ಸೇರಿ  ತಿರಸ್ಕಾರಕ್ಕೊಳಗಾಗಿ ಎಲ್ಲಿಯೂ ಸೇರದೆ ಹೋಗುವ ವಿಷಾದ ಭರಿತ ಆಕ್ರೋಶದ  ಪ್ರತಿರೂಪವಾಗುವ ಅಂಬೆ.


ವಿಚಿತ್ರವೀರ್ಯನನ್ನು ವರಿಸುವ ಅಂಬಿಕೆ , ಅಂಬಾಲಿಕೆಯರಿಗೆ ಹಸ್ತಿನಾವತಿಯ ರಾಣಿಯರು ಎಂಬ ಗೌರವದ ಹೊರತು ಮದುವೆಯಿಂದ  ಇನ್ನೇನೂ ದೊರೆಯುವುದಿಲ್ಲ. ಯಾವ ವಿಧದಲ್ಲೂ ಸುಖಕೊಡಲಾಗದ ಗಂಡನೊಂದಿಗೆ ಬದುಕುವ ಅಕ್ಕ ತಂಗಿಯರು  ಅವನ ಸಾವಿನಲ್ಲಿ ನಿಯೋಗವೆಂಬ ಹೊಸ ಸಮಸ್ಯೆಯನ್ನು ಎದುರಿಸುತ್ತಾರೆ.  ಹಸ್ತಿನಾವತಿಯ ಸಾಮ್ರಾಜ್ಞಿಯರಾಗಲು ಅಂಬಿಕೆ ಅಂಬಾಲಿಕೆಯರು ತಮ್ಮ ಕನಸುಗಳನ್ನೇ ಮರೆಯಬೇಕಾದ್ದು  ಸ್ತ್ರೀ ಬದುಕಿನ ವಿಷಾದ

ಹಿರಿಯ ರಾಣಿಯಾದ ಅಂಬಿಕೆಯನ್ನು  ನಿಯೋಗಕ್ಕೆ ಒಪ್ಪಿಸುವ ತಂಗಿ ಅಂಬಾಲಿಕೆ , ಅಕ್ಕ ವಾರಸುದಾರನನ್ನು ಹೆತ್ತರೆ ಹಸ್ತಿನಾವತಿಯಲ್ಲಿ ತನ್ನ  ಅಧಿಕಾರಗಳು ಮೊಟಕಾಗುತ್ತವೆ ಎಂದು ತಾನೂ ನಿಯೋಗಕ್ಕೆ ಒಪ್ಪುತ್ತಾಳೆ. ಆದರೆ ನಿಯೋಗಕ್ಕೆ ನಿಯುಕ್ತನಾದ ಸಣಕಲು ದೇಹದ ವ್ಯಾಸರನ್ನು ಕಂಡರೆ ಇಬ್ಬರಿಗೂ  ಇಷ್ಟವಿಲ್ಲ. ಕೂಡಲಾರದೇ ಕೂಡಿ  ರೋಗಗ್ರಸ್ತ ಪಾಂಡು , ಕುರುಡ ಧೃತರಾಷ್ಟ್ರರಂಥ ಮಕ್ಕಳನ್ನು ಹೆತ್ತು ಹಸ್ತಿನಾವತಿಯ ದಾಯಾದಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಇದ್ದುದರಲ್ಲಿ  ರಾಣಿಯ ಬದಲಿಗೆ ವ್ಯಾಸರ ಬಳಿ ಹೋದ ದಾಸಿ ಮಾತ್ರ ವಿಧುರರಂತ ಜ್ಞಾನಿ ಮಗನನ್ನು  ಪಡೆಯುತ್ತಾಳೆ. ನಿಯೋಗದಂತ ಕ್ರಿಯೆಗೆ ಅಗತ್ಯವಾದ ಎರಡು ಜೀವಗಳ ಸಮ್ಮತಿಯ ಪ್ರಾಮುಖ್ಯತೆಯನ್ನು ಸತ್ಯಕಾಮರು ಸಶಕ್ತವಾಗಿ ತೆರೆದಿಡುತ್ತಾರೆ.

ವಿಚಿತ್ರವೀರ್ಯದಲ್ಲಿನ ಕೆಲ ಸಂಭಾಷಣೆಗಳು ಅದೆಷ್ಟು ಸೊಗಸಾಗಿವೆ ಎಂದರೆ ಅವುಗಳನ್ನು ಆಸ್ವಾದಿಸುವುದಕ್ಕಾಗಿಯೇ ನಾನು ಓದು ನಿಲ್ಲಿಸಿ ಕೆಲ ಕಾಲ ಅದರಲ್ಲೇ ಮುಳುಗಿದ್ದೂ ಇದೆ. ಅಂತಹ ಸಂಭಾಷಣೆಗಳಲ್ಲಿ ಕೆಲವು :

ಅದುಮುತ್ತಿರುವ ನನ್ನ ಕೈಯನ್ನು ಮೆಲ್ಲಗೆ ಬಿಟ್ಟು ಮುಂದೆ ಸರಿದವಳು ಮತ್ತೆ ಬಂದು ತುಟಿಯಲ್ಲಿಯೆ....
ನಿಮ್ಮ ಹೆಸರು
ಹುಡುಗ ಆ ನೋವಿನಲ್ಲೂ ನಗೆ ತಂದು ಹೇಳಿದ
ನಿನ್ನ ಉಸಿರು ‘”....... ಹೆಸರು ಉಸಿರಾಗುವ ಪ್ರೇಮದ ಸೊಗಸು .

ವ್ಯಾಸರು ತುಂಬ ಹೇಳಿದರು  ನಿಯೋಗಕ್ಕೆ ಹೆಣ್ಣಿನ ಮನಸ್ಸು ಸಿಧ್ಧವಾಗಬೇಕು , ಗಂಡಿನ ಮನಸ್ಸೂ...............
....... ಸಾಮಾನ್ಯ ಜನರ ಮಕ್ಕಳು ಕುಟುಂಬ ,ಸಮಾಜದ ಮೇಲೆ ಮಾತ್ರ ಪರಿಣಾಮ ಬೀರಿದರೆ  ರಾಜರ ಮಕ್ಕಳು ರಾಜ್ಯದ ಮೇಲೆ ವಿಶ್ವದ ಮೇಲೆ ತಮ್ಮ ಪರಿಣಾಮ ಬೀರುತ್ತಾರೆ
 ಇಂದು ನಮ್ಮನ್ನು ಆಳುತ್ತಿರುವವರು ಇದನ್ನು ಅರ್ಥೈಸಿಕೊಂಡರೆ ಎಷ್ಟು ಚೆನ್ನ ?

ಒಟ್ಟಿನಲ್ಲಿ ಸತ್ಯಕಾಮರ ವಿಚಿತ್ರವೀರ್ಯ ಪುರಾಣವನ್ನು ಹೊಸ ಕಣ್ಣಿನಿಂದ ನೋಡುವುದನ್ನು ಕಲಿಸುತ್ತದೆ.
ಒಳ್ಳೆಯ ಓದು.

ವಿಚಿತ್ರವೀರ್ಯ ದ ನಂತರ ಎತ್ತಿಕೊಂಡದ್ದು ರಾಜಬಲಿ.

                                                                        ಮುಂದುವರೆಯುವುದು ........

8 comments:

  1. ಶ್ರೇಷ್ಟ ಲೇಖಕ ಸತ್ಯಕಾಮರ ಕೃತಿಗಳನ್ನು ಓದಲು ಪ್ರೇರೇಪಿಸುವ ಈ ನಿಮ್ಮ ಬರಹ ನನಗೆ ಈವತ್ತು ಓದಿಗೆ ಸಿಕ್ಕ 'The best blog post of the day'.

    ಹಿಂದೊಮ್ಮೆ ಯಾವುದೋ ಮುನ್ನುಡಿಯಲ್ಲಿ ಮಹಾಭಾರತದ ಪ್ರತಿಯೊಂದು ಪಾತ್ರವೂ ಬೃಹತ್ ಕಾದಂಬರಿಯಾಗಲು ಅರ್ಹ ಎಂದು ಓದಿದ ನೆನಪು.

    ReplyDelete
  2. ಸತ್ಯಕಾಮರ ದೃಷ್ಟಿಕೋನವನ್ನು ಸೊಗಸಾಗಿ ತಿಳಿಸುತ್ತಿದ್ದೀರಿ. ದಯವಿಟ್ಟು ಮುಂದುವರೆಸಿ.

    ReplyDelete
  3. ಧನ್ಯವಾದಗಳು ಕಾಕಾ ಮತ್ತು ಬದರಿ ಸರ್

    ReplyDelete
  4. kruti parichayakkagi dhanyavada medam :) :)...intaha parichayatmaka barahagala avashyakathe indu nammanthavarige tumba ide :) )..
    vandanegalu :)

    ReplyDelete
  5. ಸತ್ಯಕಾಮರು ಬರೆದ ಕೃತಿಯ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದೀರಿ. ನಿಮ್ಮ ಈ ಲೇಖನವನ್ನು ಓದಿದಾಗ, ಬದರಿ ಸರ್ ಅನಿಸಿಕೆಯಂತೆ ಮಹಾಭಾರತದ ಪ್ರತಿಯೊಂದು ಪಾತ್ರವೂ ಬೃಹತ್ ಕಾದಂಬರಿಯಾಗಲು ಸಾಧ್ಯ.

    ReplyDelete
  6. ಸೊಗಸಾದ ಭಾರತ ಮಹಾಭಾರತ ಪ್ರತಿ ಪಾತ್ರ ಪ್ರತಿ ಸನ್ನಿವೇಶ ಅನೇಕ ಆಯಾಮಗಳನ್ನು ಒಳಗೊಂಡ ಒಂದು ಅಪೂರ್ವ ಕಥಾನಕಗಳ ಸರಣಿ. ವಿಚಿತ್ರವೀರ್ಯನ ಪಾತ್ರ ನೀವು ಹೇಳಿದಂತೆ ಚುತುಕವಾಗೆ ನೆನಪಲ್ಲಿ ಉಳಿದಿರುವುದು ಸಹಜ.ನಿಮ್ಮ ಲೇಖನ ಓದಿದ ಮೇಲೆ ಆ ಪಾತ್ರವನ್ನು ಹಾಗೂ ಮಹಾಭಾರತ ಕಥೆಗೆ ಒಂದು ಅಸಾಧಾರಣ ತಿರುವು ಕೊಡುವ ಸತ್ಯವತಿ ಪಾತ್ರದ ತುಮುಲಗಳನ್ನು ಓದುವ ಆಸೆ ಉಕ್ಕಿಸುತ್ತಿದೆ. ಸುಂದರ ಲೇಖನ ಸಹೋದರಿ ಇಷ್ಟವಾಯಿತು

    ReplyDelete
  7. Good article

    http://navakarnataka.blogspot.com/

    ReplyDelete
  8. Swarna NP ಅವರೇ ನಿಮಗೆ 3K ಗುಂಪಿಗೆ ಸ್ವಾಗತ.
    ನಿಮ್ಮ ಬರಹದ ಶೈಲಿ ಮತ್ತು ಹೂರಣವೂ ನನಗೆ ಎಂದಿಗೂ inspirational ಎಂದೇ ಪರಿಗಣಿಸುತ್ತಾ ಬಂದಿದ್ದೇನೆ.
    ತಮ್ಮ ಬ್ಲಾಗನ್ನು ಇಲ್ಲಿ share ಮಾಡುವ ಸೌಭಾಗ್ಯ ನನ್ನದು.

    http://subbajji.blogspot.in/2013/12/blog-post.html

    ಶ್ರೇಷ್ಟ ಲೇಖಕ ಸತ್ಯಕಾಮರ ಕೃತಿಗಳನ್ನು ಓದಲು ಪ್ರೇರೇಪಿಸುವ ಈ ನಿಮ್ಮ ಬರಹ ನನಗೆ ಈವತ್ತು ಓದಿಗೆ ಸಿಕ್ಕ 'The best blog post of the day'.

    ಹಿಂದೊಮ್ಮೆ ಯಾವುದೋ ಮುನ್ನುಡಿಯಲ್ಲಿ ಮಹಾಭಾರತದ ಪ್ರತಿಯೊಂದು ಪಾತ್ರವೂ ಬೃಹತ್ ಕಾದಂಬರಿಯಾಗಲು ಅರ್ಹ ಎಂದು ಓದಿದ ನೆನಪು.

    ReplyDelete