Thursday, December 19, 2013

ಮಟ್ಟಸದ ಮಿತಿ


ಮಟ್ಟಸ ಪದವನ್ನು ಮೊದಲ ಬಾರಿ ಓದಿದ್ದು ರವಿ ಬೆಳಗೆರೆಯವರ ಬರಹಗಳಲ್ಲಿ. ಮಟ್ಟಸ ಎನ್ನುವ ಕುರಿತೇ ಕೆಲ ವರ್ಷಗಳ ಹಿಂದೆ ಅವರು  ತಮ್ಮ ಪತ್ರಿಕೆಯಲ್ಲಿ ಬಾಟಮ್ ಐಟಂ  ಬರೆದಿದ್ದರು. ಮಟ್ಟಸ ಎಂಬ ಪದದ ಒಂದು ಅರ್ಥ ಅಚ್ಚುಕಟ್ಟು ಎಂದು ಇರಬಹುದು.
ಹೆಂಗಸರು ಕೂಡುವ , ತಮ್ಮನ್ನು ಸಾರ್ವಜನಿಕವಾಗಿ ನಡೆಸಿಕೊಳ್ಳುವ  ರೀತಿಯ ಬಗ್ಗೆ ವಿವರವಾಗಿ ಬರೆದಿದ್ದರು ಬೆಳಗೆರೆ.
ಹೆಣ್ಣಿಗಿರಬೇಕಾದ ಅಚ್ಚುಕಟ್ಟಿನ ಕುರಿತು ಬರೆಯುತ್ತಾ ಬೆಳಗೆರೆ , ನೈಟಿಯಲ್ಲೇ ರೋಡಿಗೊಡಿ ಬಿಡುವ, ನಾಲ್ಕು ಜನರೆದುರು  ಹೆಂಗೆಂದರೆ ಹಾಗೆ ಕುಳಿತು, ನಿಂತು ಮಾಡುವ ಹೆಂಗಸರ ಬಗ್ಗೆ ವಿವರವಾಗಿ ಬರೆದು , ಇದನೆಲ್ಲಾ ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿ ಕಲಿಸಬೇಕು ಎಂದು ಬರೆದಿದ್ದರು. ಬರಹವನ್ನು ಓದಿದಾಗಿನಿಂದ ಈ ಪದ ನನ್ನ ನೆನಪಿನಲ್ಲಿ ಉಳಿದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಕೋಶದ ಪ್ರಕಾರ  ಮಟ್ಟಸ ಎಂಬುದಕ್ಕೆ  ಸಪಾಟು , ಏರುತಗ್ಗಿಲ್ಲದಿರುವುದು ಎಂಬ ಅರ್ಥವಿದೆ. ಆದರೆ ಬೆಳಗೆರೆಯವರು  ಮಟ್ಟಸ ಎಂಬುದನ್ನು ಅಚ್ಚುಕಟ್ಟು ,ನಯ ನಾಜೂಕು  ಎಂಬರ್ಥದಲ್ಲಿ ಬಳಸಿದ್ದರು ಎಂದು ನನ್ನ ತಿಳುವಳಿಕೆ.
 
ಕೆಲ ಹೆಂಗಸರು ಮನೆ ಕೆಲಸಗಳನ್ನು ಅದೆಷ್ಟು ಚೆನ್ನಾಗಿ ಮಾಡುತ್ತಾರೆಂದರೆ ನನಗೆ ಅವರು ಕೆಲಸ ಮಾಡೋದನ್ನ ನೋಡುತ್ತಲೇ ಇರಬೇಕೆಂದೆನಿಸುತ್ತದೆ.  ಬಟ್ಟೆ ಒಗೆದರೆ ನಿರ್ಮಾ ,ರಿನ್ ಗಳನ್ನೂ ಮೀರಿದ ಶುಭ್ರತೆ , ಅದನ್ನು ಹಗ್ಗದ ಮೇಲೆ ಆರಲು ಹಾಕುವಾಗಲೂ ಒಂದು ಚಂದ. ಚೆನ್ನಾಗಿ ಕೊಡವಿ,  ಹಿಂಡಿದ ಸುಕ್ಕನ್ನು ಆದಷ್ಟು ತೆಗೆದು  ಹಗ್ಗದ ಎರಡೂ ಬದಿಯೂ ಸಮಾನವಾಗಿ ಬಟ್ಟೆ ಹರವಿದರೆ, ಮೋಡದಿಂದ ಬುವಿಗೆ ಪರದೆಗಳು ಇಳಿ ಬಿಟ್ಟಂತೆ. ಪಾತ್ರೆ ತೊಳೆದರೆ ಮಸಿ ಇರದ , ನೀಟಾಗಿ ತೊಳೆದ ಪಾತ್ರೆಗಳನ್ನ ಬೋರಲಾಗಿ ಅವಚು ಹಾಕಿರುವುದನ್ನ ನೋಡೋದೇ ಖುಷಿ . ನನ್ನ ಇಬ್ಬರು ದೊಡ್ದಮ್ಮಂದಿರು ಈ ತರಹದ ಹೆಂಗಸರು. ಆದರೆ ಅವರಿಗೆ  ನೀರು ಮಾತ್ರ ದಂಡಿಯಾಗಿ  ಬೇಕು. ಅವರ ನೀರಿನ ಬಳಕೆ ನೋಡಿ ಬಾಡಿಗೆ ಮನೆಯ ಮಾಲೀಕ ಅವರನ್ನು ಮನೆ ಬಿಡುವಂತೆ ಹೇಳಿದ್ದೂ ಇದೆ. ಹತ್ತಿರದ ಸಂಬಧಿಗಳು ಅವರ ಮನೆಗಳಲ್ಲಿ ಉಳಿಯ ಬೇಕಾಗಿ ಬಂದಾಗ ಸಹಾಯ ಮಾಡೋಣವೆಂದು ಅವರ ಮನೆ  ಒರೆಸುವುದೋ , ಗುಡಿಸುವುದೋ ಮಾಡಿದರೆ ಅವರು ಅಯ್ಯೋ ಇದು ಸರಿಯಾಗಿಲ್ಲ ಅಂತ ಅವರ ಮುಂದೆಯೇ ಹೇಳಿ ಮತ್ತೆ ಆ ಕೆಲಸ  ಮಾಡಿ ಸಂಬಂಧ  ಹಳಸಿದ್ದೂ ಇದೆ.

ಒಂದುಕಾಲದಲ್ಲಿ ನಾನು ಅಮ್ಮನಿಗೆ ಮನೆಯ ಸಾಮಾನುಗಳನ್ನು ಹೀಗೀಡು ಹಾಗಿಡು ಅಂತ ಸಲಹೆ ಕೊಡುತ್ತಿದ್ದೆ. ಆಕೆ ಇಡದಿದ್ದಾಗ
ನಮ್ಮಿಬ್ಬರ ನಡುವೆ ವಾದ ನಡೆಯುತ್ತಿದುದು ಉಂಟು. ನಮ್ಮಮ್ಮ ಗಟ್ಟಿಗಿತ್ತಿ , ಕೇಳೋತನಕ ಕೇಳಿ ಆಮೇಲೆ ಹೋಗೆ , ಇದು ನನ್ನ ಮನೆ ನಾನು ಹೀಗೇ ಇಡೋದು , ನಾಳೆ ನಿನ್ನ ಮನೆ ಆಗತ್ತಲ್ಲ ಆಗ ನಿಂಗೆ ಹೇಗೆ ಬೇಕೋ ಹಾಗೇ ಇಟ್ಕೋ ಅಂದು ಬಿಡೋಳು. ಇಲ್ಲವೇ ಅಣ್ಣಾವ್ರ ಪರಮ ಭಕ್ತಳಾದ  ಅಮ್ಮ ದೇಹದ ಮೇಲೆ ಚರ್ಮ ಇದೆ , ಒಳಗೆಷ್ಟಿದೆಯೋ  ಕೊಳಕು ಅಂತ ಮಾನವ ಮೂಳೆ ಮಾಂಸದ ತಡಿಕೆ..ಯ ಗದ್ಯ ರೂಪ ಆರಂಭಿಸಿಬಿಡೋಳು.ನನಗೆ ಅಮ್ಮ ಕೆಟ್ಟೋಳು ಅನಿಸೋಳು.  ಬಹುಶಃ ಇದು ತಾಯಿ ಮಗಳ ಸಂಬಂಧದ ಸಾಮಾನ್ಯವಾದ ರೂಪ.  ಇತ್ತೀಚಿಗೆ ಅವಧಿಯ ಅಂಕಣಕಾರ್ತಿ ಸಂಧ್ಯಾರಾಣಿ  ಮನೆಯ ಬಗ್ಗೆ ಬರೆಯುತ್ತಾ,  ಇದೇ ವಾದದ ಕುರಿತಾಗಿ ಬರೆದು , ತಾರುಣ್ಯದಲ್ಲಿ  ಮನೆ ಜೋಡಿಸುವುದು ಹೀಗೆ ಎಂದು ಅಮ್ಮನಿಗೆ ಸದಾ ಹೇಳುವ ಮೂಲಕ,  ಅಂದು ನಾನೇ ಅಮ್ಮನ ಪರಿಧಿಯನ್ನ ಅತಿಕ್ರಮಿಸಿದ್ದೆ ಎನಿಸಿದೆ ಎಂದು ಬರೆದಿದ್ದರು . ನಿಜ ಅಲ್ವಾ ?  ನನ್ನ ತಾಯಿ ಹೇಳುತ್ತಿದ್ದಳು ನಾನು ಈ ಮನೆಗೆ ಮದುವೆಯಾಗಿ ಬಂದಾಗ ಒಂದು ಇಳಿಗೆ ಮಣೆ ಇರಲಿಲ್ಲ, ಮನೆ ಅಂತ ಮಾಡೋ ಹೊತ್ತಿಗೆ ಇಷ್ಟಾಯ್ತು .  ಜತನದಿಂದ ಹಕ್ಕಿ ಕಟ್ಟಿದ ಗೂಡಿಗೆ ನುಗ್ಗಿ ಕಡ್ಡಿಯನ್ನು ಹೀಗೇ ಇಡಬೇಕಿತ್ತು ಅಂದರೆ ?

 
ಈ ಮಟ್ಟಸ ಪುರಾಣ ನೆನಪಾಗಿದ್ದು ಇತ್ತೀಚಿಗೆ ಅನಾಮಿಕ ಹೆಂಗಸೊಬ್ಬಳನ್ನು ಕಂಡಾಗ . ನಮ್ಮ ಅಪಾರ್ಟ್ಮೆಂಟ್ ಮುಂದಿರುವ ದೊಡ್ಡ ಸೈಟ್ ಗಳನ್ನ ಯಾರೂ ಅತಿಕ್ರಮಿಸದಿರಲಿ  ಅಂತ  ಪ್ರತೀ ಸೈಟ್ ನಲ್ಲೂ ಒಂದು ಸಣ್ಣ ರೂಂ ಮಾಡಿ ಅಲ್ಲಿ ಚಿಂದಿ ಆಯುವ ಕುಟುಂಬ ಗಳಿಗೆ ಕೊಟ್ಟಿದ್ದಾರೆ. ಹಾಗೆ ಬಂದ ಒಂದು ಕುಟುಂಬದಲ್ಲಿ ಒಬ್ಬ ಧಡೂತಿ ಹೆಂಗಸಿದ್ದರು . ಒಂದು ದಿನ ಆಕೆ ಬಟ್ಟೆ ಒಗೆಯುವಾಗ ನಾನು ಮೇಲಿನಿಂದ ನೋಡಿದೆ . ಆಕೆ ಬಟ್ಟೆ ಒಗೆದು ಹಾಕಿದ ರೀತಿ ನಾನು ಮೇಲೆ ಹೇಳಿದಂತಿದ್ದುದರಿಂದ ನಾನಾಕೆಯ ಎಲ್ಲ ಕೆಲಸಗಳನ್ನು ಗಮನಿಸಲು ಶುರುವಿಟ್ಟೆ. ಬಚ್ಚಲು ಇಲ್ಲದ  ಕೋಣೆಯಲ್ಲಿರುವ ಹೆಂಗಸು ಮನೆ ಮುಂದಿನ ಕಸ ಕಡ್ಡಿ ತೆಗೆದು ಗುಡಿಸಿ , ಎಲ್ಲಿಂದಲೋ  ನಾಲ್ಕು ಕೊಡ ನೀರು ತಂದು ಬಟ್ಟೆ ಒಗೆದು , ಪಾತ್ರೆ ತೊಳೆದು  ಆ ಕೋಣೆಗೆಯನ್ನ ಮನೆ ಎಂಬ ಆಕಾರಕ್ಕೆ ತಂದಿದ್ದಾರೆ .  ಬಟ್ಟೆ ಒಗೆದ ಮೇಲೆ ಆಕೆ ಬಟ್ಟೆ ನೆನೆಸಿಟ್ಟ ಬಕೇಟನ್ನು ತೊಳೆಯುವುದು , ಪಕ್ಕದಲ್ಲಿದ್ದ ಕಲ್ಲನ್ನು ಸ್ವಚ್ಚಗೊಳಿಸಿ , ಪಾತ್ರೆ ತೊಳೆದು ಆ ಕಲ್ಲಿನ ಮೇಲೆ ಮಗುಚಿಟ್ಟು ಆಕೆ ತನ್ನ ಕೈ ಕಾಲನ್ನು ಕಲ್ಲಿಗೆ ಹಾಕಿ ತಿಕ್ಕುತ್ತಿದ್ದರೆ ನನಗೆ ಮತ್ತೆ ನನ್ನ ದೊಡ್ದಮ್ಮಗಳು , ಅಂತವರೇ ಇನ್ನೂ ಕೆಲವರು ನೆನಪಾಗುತ್ತಾರೆ.
 
ಇದು ನಾನು ನಮ್ಮ ಬಾಲ್ಕಾನಿಯಿಂದ ತೆಗೆದ ಫೋಟೋ.



ಎಲ್ಲದರಲ್ಲೂ ಅಚ್ಚುಕಟ್ಟು ಒಳ್ಳೆಯದೇ ಆದರೂ ಅದು ಅತೀಯಾಗಬಾರದು ಎಂಬುದು ಈ ವಯಸ್ಸಿನ ತಿಳುವಳಿಕೆ
ಕೆಲವರ ಮನೆ ಐಶಾರಾಮಿ ಟೆಲಿನಂತೆಎಲ್ಲವೂ ಶುಭ್ರಾತಿಶುಭ್ರ ಮತ್ತು ಅವರಿಗೆ ತಮ್ಮ ಮನೆಯ ಅಂದದ ಬಗ್ಗೆ ಅತೀವ ಕಾಳಜಿ, ಕೂತರೆ ಸೋಫಾ ಎಲ್ಲಿ ಮುದುಡುತ್ತದೋ, ತಟ್ಟೆಯಲ್ಲಿಟ್ಟ  ತಿಂಡಿಯನ್ನು ತಿನ್ನುವ ಸರಿಯಾದ ರೀತಿ ಹೇಗೋ ಎಂದು ತಲೆಕೆಡಿಸಿಕೊಳ್ಳುವುದರಲ್ಲೇ  ಕಾಲ ಮುಗಿದು ಅವರೊಂದಿಗೆ ನಾಲ್ಕು ಮಾತಾಡಲೂ ಆಗಿರುವುದಿಲ್ಲ.

ಒಬ್ಬರಿಗೆ ಅಚ್ಚುಕಟ್ಟು ಎನಿಸಿದ್ದು  ಇನ್ನೊಬ್ಬರಿಗೆ ಕಿರಿ ಕಿರಿ ಎನಿಸಬಹುದು . ಅವರವರ ಮನೆ ಮನಗಳನ್ನು ಮಟ್ಟಸವಾಗಿಟ್ಟು ಕೊಳ್ಳುವ ಸ್ವಾತಂತ್ರ್ಯ ಅವರದ್ದೇ ಆಗಿರಬೇಕು ಅಲ್ಲವೇ ?

 ನಾನು ಈ ಬರಹವನ್ನು ಬರೆದು ತಿದ್ದಿ ಪೋಸ್ಟಿಸುವ ಹೊತ್ತಿಗೆ ಆ ಹೆಂಗಸು ಮನೆ ಬಿಟ್ಟು ಹೋಗಿಯಾಗಿದೆ. ಜಂಗಮಕ್ಕಳಿವುಂಟೆ ?
        

4 comments:

  1. ಒಂದು ಒಳ್ಳೆಯ ಶೀರ್ಷಿಕೆಯಿಂದ ಬರಹದ ಶ್ರೇಷ್ಟತೆ ಹೆಚ್ಚುತ್ತದೆ. ಎಷ್ಟೋ ಪದಗಳು ನಿಘಂಟಿಗೆ ಮೀರಿದ ಅರ್ಥ ವ್ಯಾಪ್ತಿಗೆ ಸಲ್ಲುತ್ತವೆ.

    ತಾಯಿ ಮಗಳ ನಿರೂಪಣೆ ಮತ್ತು ಆ ಜಂಗಮಳ ಅಚ್ಚುಕಟ್ಟುತನ ಚೆನ್ನಾಗಿ ಮೂಡಿ ಬಂದಿದೆ.

    ಒಟ್ಟಾರೆಯಾಗಿ ಒಂದು ಮಟ್ಟಸವಾದ ಬರಹ.

    ReplyDelete
  2. ಮಟ್ಟಸವಾದ ಬರಹ. ಆತ್ಮೀಯ ಪ್ರಬಂಧಗಳ ಉತ್ತಮ ಉದಾಹರಣೆ.
    ಎರಡನೆಯದಾಗಿ, ಈ ಜಂಗಮಜೀವಿಗಳಿಗೆ ನಿಲ್ಲಲು ನೆಲೆ ಇರುವುದಿಲ್ಲ. ಆದುದರಿಂದ ‘ಜಂಗಮಕ್ಕುಳಿವುಂಟೆ?’ ಎನ್ನುವ ಸಂದರ್ಭ ಉದ್ಭವಿಸಿದೆ!

    ReplyDelete
  3. ಎಂದಿನಂತೆ ಪ್ರೋತ್ಸಾಹದ ಮಾತುಗಳನಾಡಿದ ಕಾಕಾ ಮತ್ತು ಬದರಿ ಸರ್ ರವರಿಗೆ ವಂದನೆಗಳು

    ReplyDelete
  4. tumbaa chanda barediddeeri .. Swarna..:) naavoo koodaa ee cleanu .. chokka.. antha nammammanannu sumaaru golu hoydukondiddeve,..:) thet nimmammananteye avalu neeve mane maadondaaga gottaagatte naanoo nodteeni .. antha baiyyuttiddalu..:) kashta eega gottaagtaa ide..makkalaada mele..:)

    ReplyDelete