Thursday, January 02, 2014

ಬಯಲಾಗದವನು, ಬೆಂಕಿಯಲ್ಲೇ ಬಾಳಿದವಳು




ಇದು ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.ಇಲ್ಲಿ ಬರೆದದ್ದು ನನ್ನನ್ನು ಹೆಚ್ಚು ಓದಿಗೆ,ಇದೇ ಪುಸ್ತಕದ ಮರು ಓದಿಗೆ ಪ್ರೇರೇಪಿಸಲೆಂದು ಈ ಬರಹ. 


ಸೀತೆ ಬಯಲಾದಳು , ಲಕ್ಷ್ಮಣ ಬಯಲಾದನು ರಾಮ ಮಾತ್ರ ಬಯಲಾಗಲಿಲ್ಲ ಎಂಬ ಬೆನ್ನುಡಿಯನ್ನು ಮೊದಲು ಓದಿ ಪುಸ್ತಕದ ಹೆಸರು ನೋಡಿದರೆ ರಾಜಬಲಿ ಎಂದಿತ್ತು.   ಸತ್ಯಕಾಮರ ಗುಂಗಿನಲ್ಲಿದ್ದುದರಿಂದ ರಾಜಬಲಿಯನ್ನು ತಂದೆವು .
 
ರಾಜಬಲಿ  ಗರ್ಭಿಣಿ ಸೀತೆಯನ್ನು ರಾಮ ಮತ್ತೆ ಕಾಡಿಗೆ ಕಳುಹಿಸುವ ಕಥೆಯನ್ನು ಹೊಂದಿದೆ. ವಿಚಿತ್ರವೀರ್ಯ ಓದಿದ ಮೇಲೆ ಸತ್ಯಕಾಮರು ಇಲ್ಲೂ ಹೊಸದೊಂದು ಆಯಾಮವನ್ನು ಕಥೆಗೆ ಕೊಡಬಹುದೆಂಬ ನಿರೀಕ್ಷೆ ಸಹಜವಾದರೂ ರಾಜಬಲಿ ಅದನ್ನು ಈಡೇರಿಸುವುದರಲ್ಲಿ ನನ್ನ ಮಟ್ಟಿಗೆ ಸೋಲುತ್ತದೆ.

ಸೀತೆಯ ನೋವಿನ ಬಗ್ಗೆ ಯುಗ ಯುಗಗಳಿಂದ ಕವಿಗಳು ಹಾಡುತ್ತಲೇ ಇದ್ದಾರೆ .ಅಲ್ಲಲ್ಲಿ  ಲಕ್ಷ್ಮಣನ ನೋವೂ ಬೆಳಕಿಗೆ ಬಂದಿದೆ. ಆದರೆ  ಹದಿನಾಲ್ಕು  ವರ್ಷ ಕಾಡಿನಲ್ಲೂ ಜೊತೆಗಿದ್ದ ಹೆಂಡತಿ ,ತಮ್ಮೀರ್ವರ  ಪ್ರೇಮದ ಫಲ ಹೊತ್ತ ಹೆಂಡತಿಯನ್ನು ಕಾಡು ಪಾಲು ಮಾಡಿದ ರಾಮನ ನೋವು ?  ಸತ್ಯಕಾಮರು ಇದರ ಬಗ್ಗೆ ಬರೆದಿದ್ದಾರಾದರೂ ಅದು ನನಗೆ ಪೂರ್ಣ ಸಮಾಧಾನ ಕೊಡಲಿಲ್ಲ.

ರಾಮ ಸೀತೆಯನ್ನು ಕಾಡಿಗೆ ಕಳುಹುವಾಗ ವಾಲ್ಮೀಕಿಗಳ ಆಶ್ರಮದ ಬಳಿಯೇ ಬಿಡು ಎಂದು ಲಕ್ಷ್ಮಣನಿಗೆ ಹೇಳುತ್ತಾನೆ ಎಂದು
ವಾಲ್ಮೀಕಿ ರಾಮಾಯಣದಲ್ಲಿ ದಾಖಲಾಗಿದೆಯಂತೆ.ಇಲ್ಲೂ ರಾಮ ಸೌಮಿತ್ರಿಯನ್ನು ಕುರಿತು ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟು ಬಾ  ಎಂದು ಹೇಳುತ್ತಾನೆ.  ರಾಜಬಲಿಯಲ್ಲಿ ಸತ್ಯಕಾಮರು ಸೀತೆ, ಲಕ್ಷ್ಮಣ ಮತ್ತು ರಾಮನ ನೋವನ್ನು  ಬಾರಿ ಬಾರಿಯಾಗಿ ಹೇಳಿದ್ದರೂ ಅದು  ನನಗೆ ಅಷ್ಟೇನೂ ಸಮಾಧಾನ ಕೊಡಲಿಲ್ಲ. 

ರಾಮ ಸರಯೂ ನದಿಯಲ್ಲಿ ಸಾಗುವುದರೊಂದಿಗೆ ರಾಜಬಲಿ ಕೊನೆಯಾಗುತ್ತದೆ.

ಒಟ್ಟಿನಲ್ಲಿ ರಾಜಬಲಿ ಒಮ್ಮೆ ಓದಬಹುದಾದ ಪುಸ್ತಕವಾದರೂ ರಾಮನನ್ನು ಬಯಲು ಮಾಡಿಲ್ಲ. ಬಹುಶಃ ಸೀತೆಯ ನೋವನ್ನು ಹೇಳಿದಷ್ಟು  ಸುಲಭವಲ್ಲ ರಾಮನ ನೋವನ್ನು ಹೇಳುವುದು . ರಾಮರಾಜ್ಯಕ್ಕೆ ಸೀತೆ ರಾಜಬಲಿ ಯಾದಳು ಎಂಬುದು ಒಂದು ಗ್ರಹಿಕೆಯಾದರೆ , ರಾಮನೇ ರಾಜಬಲಿಯಾದ ಎಂಬುದು ಇನ್ನೊಂದು.

ನದಿ ಜಲಪಾತವಾಗಿ ಧುಮ್ಮಿಕ್ಕಿ ತನ್ನ ನೋವನ್ನು ಸಾರಬಹುದು ಸಾಗರದೊಡಲ ಅಲೆಗಳ ಮೊರೆತ ಕೇಳುವರಾರು ?

ರಾಜಬಲಿಯ ನಂತರ ಓದಿದ್ದು ಬೆಂಕಿಯ ಮಗಳು.  

ಕೆಲ ದಿನಗಳ ಹಿಂದೆ ಕೇಳಿದ  ಒಂದು ಉಪನ್ಯಾಸದಲ್ಲಿ  ಉಪನ್ಯಾಸಕಾರರು  ಭಾಷಾ ಸೌಂದರ್ಯದ  ಬಗ್ಗೆ ಹೇಳುತ್ತಾ , ಅಗ್ನಿ ಸಾಕ್ಷಿಯಾಗಿ ಮದುವೆಯಾದರು ಎಂದರೆ ಹೇಗಿರುತ್ತೆ ? ಅದೇ ಬೆಂಕಿ ಮುಂದೆ ಮದುವೆಯಾದರು ಎಂದರೆ ಹೇಗಿರುತ್ತೆ ?ಅಂದರು.  ಭಾಷಾ ಪ್ರಯೋಗದ ದೃಷ್ಟಿಯಿಂದ ಯಾವುದು ಸರಿ ಎಂಬ ಚರ್ಚೆ  ಮಾಡುವಷ್ಟು ಸಾಹಿತ್ಯ , ಭಾಷೆ ಅಥವಾ ಪುರಾಣ ಯಾವುದೂ ನನಗೆ ಗೊತ್ತಿರದ ಕಾರಣ ಈ ಪ್ರಶ್ನೆಯನ್ನು ಇಲ್ಲಿಗೇ ಬಿಡುತ್ತೇನೆ.

ಸಾಮಾನ್ಯವಾಗಿ ಬೆಂಕಿ ಎಂದು ಬಳಸುವಲ್ಲಿ ಅಗ್ನಿ  ಎಂಬ ಪದಪ್ರಯೋಗವಿದೆ. ಆದರೆ ಬೆಂಕಿಯ ಮಗಳು  ಎಂಬ ಶೀರ್ಷಿಕೆ ಕಂಡು  ಸಹಜ ಕುತೂಹಲದೊಡನೆ ಓದಲು ಶುರುವಿಟ್ಟರೆ ಅದು ದ್ರೌಪದಿಯ ಕಥೆಯಾಗಿತ್ತು. ಆದರೆ ಸತ್ಯಕಾಮರ ದ್ರೌಪದಿ ಮತ್ತು ಆಕೆಯ ಸೋದರ ದುಷ್ಟದ್ಯುಮ್ನರು ಪುರಾಣದ ಕಥೆಯಂತೆ   ಹೊಮಕುಂಡದಲ್ಲಿ ಆವಿರ್ಭವಿಸಿದವರಲ್ಲ.  ದ್ರೋಣರ ಸೇಡಿಗಾಗಿ ಅರ್ಜುನನಿಂದ  ಹೆಡೆಮುರಿ ಕಟ್ಟಿಸಿಕೊಂಡು ಅಪಮಾನಿತನಾದ   ದ್ರುಪದ, ಅಪಮಾನದ ಬೆಂಕಿಯಲ್ಲಿ ಬೆಂದು, ಅಪಮಾನ ಮರೆಯಲು ಅವನ ಹೆಂಡತಿಯೊಡನೆ ದೂರದ ಕಾಡಿಗೆ ಹೋದಾಗ,  ದ್ರೋಣರನ್ನು ಕೊಲ್ಲುವ ಮಗ ಮತ್ತು ಅರ್ಜುನನ್ನು ವರಿಸುವ ಮಗಳು ಹುಟ್ಟುತ್ತಾರೆ .  ಅಪಮಾನವೆಂಬ ಬೆಂಕಿ ಎಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ. ಸತ್ಯಕಾಮರು  ದ್ರೌಪದಿಯನ್ನು  ಅಪಮಾನವೆಂಬ ಬೆಂಕಿಯಲ್ಲಿ ಹುಟ್ಟಿ ಬಂದವಳು ಎಂದು ಕರೆಯುತ್ತಾರೆ. ಬೆಂಕಿಯ ಮಗಳು ನಲ್ಲಿ ಇಷ್ಟವಾದ ಕೆಲವು ಅಂಶಗಳಲ್ಲಿ ಇದೂ ಒಂದು.

ಬೆಂಕಿಯ ಮಗಳು  ಮಹಾಭಾರತದ ಕಥೆಯನ್ನೇ ದ್ರೌಪದಿಯ ಬಾಯಲ್ಲಿ ಹೇಳುತ್ತದೆ ಅಷ್ಟೇ. 

ಅರ್ಜುನನಂತ ವೀರನನ್ನು ವರಿಸಿ ನಂತರ ಅವನ ಅಣ್ಣ ತಮ್ಮಂದಿರನ್ನೂ ವರಿಸುವ ಪಾಂಚಾಲಿ ,
ಧರ್ಮದ ಮೂರ್ತಿವೆತ್ತ ಸ್ವರೂಪ ಎಂದು ಹೆಸರಾದ ಗಂಡನಿಂದಲೇ ಜೂಜಿನ ಪಣವಾದ ಹೆಂಡತಿ ,
ದಾನಶೂರನೆಂಬ ಬಿರುದು ಹೊತ್ತರೂ ರಾಣಿಯನ್ನು ಸಂಗಕ್ಕೆ ಬಾ ಎಂದು ಕರೆವ ಕರ್ಣನಿಂದ  ಅವಮಾನಕ್ಕೊಳಗಾಗುವ ಕೃಷ್ಣೆ
ರಾಜ ಸಭೆಯಲ್ಲಿ , ರಾಣಿಯಾಗಿದ್ದೂ ಮೈದುನರಿಂದಲೇ ಘೋರ ಅಪಮಾನಕ್ಕೀಡಾದ ಇತಿಹಾಸದ ಮೊದಲ ಹೆಣ್ಣು . 
ವೇಷ ಮರೆಸಿಕೊಂಡು ದಾಸಿಯಾಗಿ ಮತ್ತೆ ಕಾಮುಕ ರಾಕ್ಷಸನ ಕಾಟಕ್ಕೆ ನಲುಗುವ ಹೆಂಗಸು
ಕೊನೆಗೆ ತನ್ನೆಲ್ಲ ಮಕ್ಕಳನ್ನೂ ಯುಧ್ಧದಲ್ಲಿ ಕಳೆದುಕೊಳ್ಳುವ  ತಾಯಿ .
ಇಷ್ಟರ ನಡುವೆ ಗಂಡಂದಿರ ಇತರ ಪತ್ನಿಯರು
ಬೆಂಕಿಯಿಂದ ಜನಿಸಿ ಬೆಂಕಿಯಲ್ಲೇ ಬದುಕಿದ ಹೆಣ್ಣು .
ಬಹುಶಃ ಕೃಷ್ಣನೊಬ್ಬ ಸಖನಾಗಿ ದೊರೆಯದೇ ಹೋಗಿದ್ದರೆ, ದ್ರೌಪದಿಯ ಪಾತ್ರ ಚಿತ್ರಣ ಬೇರೆಯದೇ ಆಗಿರುತ್ತಿತ್ತು .
 ಆದರೆ ಸತ್ಯಕಾಮರ ಬೆಂಕಿಯ ಮಗಳು ದ್ರೌಪದಿಯ ಯಾವ ನೋವನ್ನೂ ಸತ್ಯಕಾಮರ ರೀತಿಯಲ್ಲಿ ಹೇಳಿದೆ ಎಂದು ನನಗೆ ತೋರಲಿಲ್ಲ. ಆದ್ದರಿಂದ ಬೆಂಕಿಯ ಮಗಳು ಬಗ್ಗೆ ಹೆಚ್ಚೇನೂ ಬರೆಯಲಾರೆ.


ನಂತರ ಓದಿದ್ದು  ಅರ್ಧದಾರಿ. 


ಮುಂದುವರೆಯುವುದು ........

ಹಿಂದಿನ ನೋವಿನ ಅರಿವು ಮುಂದಿನ ಬೆಳಕಾಗಲಿ  ಬದಲಾದ ವರ್ಷ ಹರುಷ ತರಲಿ  


 

3 comments:

  1. ಸತ್ಯಕಾಮರ ಸೃಷ್ಟಿಯ ಬಗೆಗೆ ಕುತೂಹಲಕರ ವಿಶ್ಲೇಷಣೆ ಕೊಟ್ಟಿದ್ದೀರಿ. ನೀವು ಹೇಳುವಂತೆ ರಾಜಬಲಿಯು ರಾಜನದೇ ಬಲಿಯೂ ಆಗಿರಬಹುದು! ಈ ಸಂದರ್ಭದಲ್ಲಿ ಭವಭೂತಿಯ ‘ಉತ್ತರರಾಮಾಯಣ’ದಲ್ಲಿ ರಾಮಚಂದ್ರನು ಹೇಳುವ ಒಂದು ಮಾತು ನೆನಪಾಗುತ್ತದೆ: "ದುಃಖವನ್ನು ಸಹಿಸುವದಕ್ಕಾಗಿಯೇ ರಾಮನಲ್ಲಿ ಜೀವವು ತುಂಬಲ್ಪಟ್ಟಿತು!"

    ReplyDelete
  2. ಧನ್ಯವಾದಗಳು ಕಾಕಾ.
    ದೇವುಡು ಅವರ ಕಾದಂಬರಿಗಳಲ್ಲಿ ಮತ್ತು ರಾ.ಗಣೇಶರ ಇತ್ತೀಚಿನ ಉಪನ್ಯಾಸದಲ್ಲಿ
    ಪದೇ ಪದೇ ಬರುವ ಮಾತು , ಯುಗದ ನೋವು ಸಹಿಸುವುದಕ್ಕಾಗಿ ಯುಗಪುರುಷನೊಬ್ಬ ಅವತರಿಸುತ್ತಾನೆ
    ಏನೇನು ಓದಿದ್ದಿರಿ ನೀವು...ಬೆರಗಾಗತ್ತೆ ನಿಮ್ಮ ಓದಿನ ಹರವು ಕಂಡು :)

    ReplyDelete
  3. ರಾಜಬಲಿ ಮತ್ತು ಬೆಂಕಿಯ ಮಗಳು ಪುಸ್ತಕಗಳ ಕುರಿತಂತೆ ಸವಿಸ್ತಾರವಾದ ನಿಮ್ಮ ಈ ಬರಹ ಪುಸ್ತಕಗಳನ್ನು ಕೊಂಡು ಓಡುವಂತೆ ಪ್ರೇರೇಪಿಸುತ್ತಿವೆ.
    ಸತ್ಯಕಾಮರಿಗೆ ಉಘೇ ಉಘೇ...

    ReplyDelete