Thursday, October 30, 2014

ಬಲಿ

ಹಿಂದಿನ ಪೋಸ್ಟನ್ನು ತಿದ್ದಿದ ಮೊದಲ ಪ್ರಯತ್ನ ಕೆಳಗಿದೆ ....
(ತಿದ್ದದ  ಪ್ರಯತ್ನವನ್ನೂ ಓದುವಿರಾದರೆ  'ನಾವು ಮನುಜರು' ನೋಡಿ )


ಚಿತ್ರ ಕೃಪೆ : ಅಂತರ್ಜಾಲ 

ಕಾಮದ ಕತ್ತಲಾಟಕ್ಕೆ 
ಚಿಗುರಿದ ಮೊಳಕೆ 
ಮಡಿಲಿಲ್ಲ  ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ 
ಹೇಗೂ 'ನವರಾತ್ರಿ'ಯ ಹೊತ್ತು 
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು  ಕೇಳಲು ಅವಳಿಗಿಲ್ಲ ಬಾಯಿ 
ಹತ್ತುಪಾಲು  ವಾಸಿ ಹರಿದು ತಿನ್ನುವ ಕಸಾಯಿ 
ಅವಳ ಮಗುವಿನ ಹಾಲು 
ಇವಳ ಕಂದನ ಪಾಲು 
ಇದು ಜನನದ  ಬಲಿ !


ಜೀವ ಬೆಳೆಯಲು ಬೇಕೊಂದು ಮಡಿಲು 
ತಾಯಿ ಬೇರ ತಂದರಾಯ್ತು  ಮಹಾನಗರಿಗೆ  
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು  ಜೀವ 
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ 
ಇದು ಜತನದ  ಬಲಿ !


ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು 'ಮೈನಾ' ಗೂಡು 
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು 
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ 
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ 
ಇದು ನೆಲೆಯ ಬಲಿ !


 ಜೀವಜಾಲವ  ಕಾಣಬೇಕು ಬೆಳೆದ ಜೀವ
ಘರ್ಜಿಸುವುದ  ಮರೆತ ರಾಜ 
ಪಂಜರದಲಿಟ್ಟ ಮೂಕ ಗಿಳಿ 
ಆಡುವುದ ಮರೆತ ಮೊಲ 
ನೋಡುತ್ತಾ ನಿಂತ ಕಾಲ 
ಇದು ಬುಧ್ಧಿಯ  ಬಲಿ !


ಬಲಿಗಳಲ್ಲೇ ಬೆಳೆದ ಜೀವ 
ಚಕ್ರವರ್ತಿಯದಲ್ಲ ಮನೋಭಾವ 
ಹೇಗಾದಿತು ?
ಹೆಜ್ಜೆ ನಮಸ್ಕಾರದಲುದಯಿಸಿದ 
ತಂಗದಿರ, ತಾರೆಯರ  
ಬಲಿಗಳ ಪಯಣಕ್ಕಿಲ್ಲ ಕೊನೆ 
ಬದುಕು (?) ನಡೆಯುವುದೇ ಬಲಿಗಳಲ್ಲಿ 
ಅವರು ಕಲಿತ ಸತ್ಯ 
ನಾವೇ ಕಲಿಸಿದ ತಥ್ಯ 
ಜಗದಗಲ ಕಾಳಿಯ ನಾಲಿಗೆ 
ಬಲಿಯಾಗಲಿ  'ನಾನು' ನಾಳೆಗೆ . 

5 comments:

  1. ಇದಕ್ಕೂ ಮೊದಲಿನ ಕವನವೂ ಚೆನ್ನಾಗಿಯೇ ಇದೆ. ಆದರೆ ಈ ಕವನದಲ್ಲಿ ಹೆಚ್ಚು ಸಂಕೀರ್ಣತೆ, ಹೆಚ್ಚು ಸುಸಂಬದ್ಧತೆ ಹಾಗು ಹೆಚ್ಚಿನ ಸ್ಪಷ್ಟತೆ ಇದೆ. ನಿಮ್ಮ ಈಗಿನ ಕವನಗಳು ಈ ಮೊದಲಿನ ಕವನಗಳಿಗಿಂತ ವಿಭಿನ್ನವಾಗಿರುವುದು ನಿಮ್ಮ ಎಲ್ಲ ದಿಕ್ಕುಗಳಲ್ಲಿಯ ಸಾಧನೆಯ ಯಶಸ್ಸನ್ನು ತೋರಿಸುತ್ತದೆ. ಅಭಿನಂದನೆಗಳು.

    ReplyDelete
    Replies
    1. ನಿಮ್ಮ ಪ್ರೀತಿಗೆ ಶರಣು ಕಾಕಾ

      Delete
  2. ತಿದ್ದುಪಡಿ ಎನ್ನುವುದಕ್ಕಿಂತಲೂ ನನಗಿದು ಸಂಪೂರ್ಣ ಹೊಸ ಕವಿತೆ ಎನಿಸಿತು. ಕವನವು ಸಂಕೀರ್ಣತೆಯಿಂದಲೂ ಪಕ್ವತೆಯಿಂದಲೂ ಕೂಡಿದೆ.

    ಮೂಲ ಬೇರು ಕಳಚಿಕೊಂಡ ನನ್ನಂತಹ ಅಜ್ಞಾತ ಪಂಜರದ ಹಕ್ಕಿಗಳ ಮನೋಗಾನವಿದು.

    ಮೊದಲ ಕವನವು ಮಿಂಚು, ಇದೀಗ ಅದರ ಗುಡುಗಿದು...

    ReplyDelete
    Replies
    1. ಮಿಂಚು ಹುಳವೊಂದನ್ನು ಮಿಂಚಿಗೆ ಹೋಲಿಸಿದ ನಿಮ್ಮ ಪ್ರೀತಿ ದೊಡ್ಡದು ಸರ್. ಥ್ಯಾಂಕ್ಸ್

      Delete
  3. ಈ ಸಾಲುಗಳು ತುಂಬಾನೇ ಹಿಡಿಸಿದವು,, "ಜೀವಜಾಲವ ಕಾಣಬೇಕು ಬೆಳೆದ ಜೀವ
    ಘರ್ಜಿಸುವುದ ಮರೆತ ರಾಜ
    ಪಂಜರದಲಿಟ್ಟ ಮೂಕ ಗಿಳಿ
    ಆಡುವುದ ಮರೆತ ಮೊಲ
    ನೋಡುತ್ತಾ ನಿಂತ ಕಾಲ
    ಇದು ಬುಧ್ಧಿಯ ಬಲಿ !" ಮನಸ್ಸು ಬುಧ್ಧಿಗಳನ್ನು ಹರಿದಾಡಲು ಬಿಡಬೇಕು.. ಕೂದಿಕತ್ತಿಹಾಕಿ ಬಂಧಿಸಿ ಭಾವನೆಗಳ ಗರ್ಭಪಾತ ಮಾಡುತ್ತಾರೆ ಕೆಲವರು.. ಕೆಲವೊಮ್ಮೆ ಹುಟ್ಟುವ ಭಾವಗಳು ಬ್ರಹ್ಮರಾಕ್ಷಸರಾಗುತ್ತಾರೆಂದು.

    ReplyDelete