೧. ಎಲ್ಲಿಂದಲೋ ಗಾಳಿ
ತಂದುದುರಿಸಿದ ಬೀಜ
ಸೀಳಿ ಮೊಳಕೆಯೊಡೆವಾಗ
ನೋವಿನಾನಂದ
ಬೇರು ಬಿಟ್ಟು
ಬುವಿಯ ಮೇಲೆ
ಹಸಿರಾದಾಗ
ತಳವೂರಿದ ಖುಷಿ
ಸತ್ವಹೀರಿ
ಕಾಂಡ ಬಲಿತು
ಕೊಂಬೆ ಚಿಗಿಯೆ
ಅಲ್ಲೊಂದು 'ಸುಂದರಕಾಂಡ'
ಹೆಮ್ಮರವಾಗಿ ಬುವಿಯಿಂದ
ದೂರಾಗಿ , ಬರಿದೇ
ಸತ್ವಕ್ಕಾಗಿ
ಬುವಿಯನರಸುವಾಗ
ಮಣ್ಣ ಕಣ ಕಣದಲ್ಲೂ
ಕಂಬನಿಯ ಪಸೆ !
೨. ಶಿಲೆಯಾಗಿ ಕಾದಿದ್ದೇನೆ
ರಾಮನಿಗಾಗಿ ಅಲ್ಲ !
ಅಘನಾಶಿನಿಯ ಹಾದಿಯಲ್ಲಿ
ಅವಳೊಡನೆ ಸಾಗಿ
ಆತ್ಮಸಾಂಗತ್ಯದಲ್ಲಿ ಮಾಗಿ
ಮತ್ತೆ ಆವಿಯಾಗಿ
ಮೊಳಕೆಯಾಗಿ
ಚಿಗುರಲು.
೩. ಕಡುವಿರಹ ಸುಡುವುದು
ಮತ್ತೆ ನಿನ್ನೆಡೆಗೆ ಸೆಳೆವುದು
ಸೆಳೆತಾಕರ್ಷಣೆಯ ವೃತ್ತವ ಮೀರೆ
ನಾನು ಮೋಹನನ ಹಂಗಿಲ್ಲದ ಮೀರೆ !
೪. ಜೀಕುತ್ತಿದ್ದ ಹರೆಯಕ್ಕೆ
ನೂರೊಂದು ಕನಸಿತ್ತು
ನಿನ್ನ ಹೊಂದುವ ಮನಸಿತ್ತು
ಅದೊಂದು ದುರ್ದಿನ
ಹರೆಯ ಮುಗಿಯಿತು
ಹಗ್ಗ ಹರಿಯಿತು
೫. ಸುಟ್ಟುಬಿಡುವ ನಿಶ್ಚಯದೊಂದಿಗೆ
ಒಲೆಯನೇನೋ
ಹೊತ್ತಿಸಿದೆ
ಅವನ ಹೆಸರ ಸುಡುವ ಮನಸಾಗಲಿಲ್ಲ
ಇಂದಿಗೂ ನನ್ನೊಳಗೆ ಬೆಂಕಿ ಧಗಧಗಿಸುತ್ತಿದೆ !
೬. ಅವ ಬರುವನೆಂಬ ಕನಸ ಬಿಡಲಾರೆ ನಾನು
ಎಲೆಗಳಲಿ ಮಲಗಿದ ಬೆಳದಿಂಗಳು ಇನ್ನೂ ಎಚ್ಚರಗೊಂಡಿಲ್ಲ !
೭. ನಿನ್ನೊಂದಿಗಿನ ಮಾತು ನನಗಿಷ್ಟ
ಏಕೆಂದರೆ
ಅದು ಮೌನದ ಚಿಪ್ಪನೊಡೆಯುವುದಿಲ್ಲ
ಅಲ್ಲಿ ಅನಾವಶ್ಯಕ ಸದ್ದುಗಳಿಲ್ಲ
ಒಳಗಿರುವ
ಮುತ್ತ ಮಲಗಲು ಬಿಟ್ಟು
ಕಣ್ಣ ಭಾಷೆಯಲ್ಲಿ ನಡೆಯುವ ಸಂಭಾಷಣೆ ಯಾರಿಗಿಷ್ಟವಾಗದು
?
೮. ಕಾಲಕಾಂತನಿಗೊಲೆಬರೆದು
ಬಯಲಲಿ
ಬಯಲಾದಳವಳು
ಓಡೋಡಿ ಬಂದನವ ವಸಂತ
ಹಸಿರುಟ್ಟ ಅವಳಿಗಿಂದು ಸೀಮಂತ
೯. ಒಂದಷ್ಟು ಕವಿತೆ ಬರೆದು ಮಣ್ಣಲಡಗಿಸಿಟ್ಟಿದ್ದೆ
ಮತ್ತೆ
ನೆನಪಾಗಿ ಅಗೆಯ ಹೋದರೆ
ಅಲ್ಲೊಂದಷ್ಟು ಬತ್ತ ಬೆಳೆದಿದೆ
ಅಗೆದು ಕವಿತೆ ತೆಗೆಯೋಣ ವೆನ್ನುವಷ್ಟರಲ್ಲಿ
ಎಲ್ಲಿಂದಲೋ ಹಸಿದ
ಮಗುವಿನ ಅಳು ಕೇಳಿಸಿತು
ಕವಿತೆಗೆ ಮಣ್ಣಿಗಿಂತ ಬೇರೆ ಜಾಗವಿಲ್ಲವೆನಿಸಿತು
೧೦. नुमाइश का चीज़ नहीं हैं हमारा रिश्ता
आईने की भी कोई नुमाइश करता हैं भला ?
ಮನದಾಳದೊಳಗಿನ ಭಾವನೆಗಳು ಇಬ್ಬನಿಯಾಗಿ ರೂಪ ತಳೆದಿವೆ! ಅಭಿನಂದನೆಗಳು, ಸ್ವರ್ಣಾ!
ReplyDelete೧. ಮಾತೃ ಹೃದಯದ ಸಂಭ್ರಮಗಳನ್ನೂ, ವ್ಯಥೆಯನ್ನೂ ಬಿಂಬಿಸಿದ ರೀತಿ ಮನ ಮುಟ್ಟುವಂತಿದೆ.
ReplyDelete೨. ಅಘನಾಶಿನಿಯ ಹಾದಿ ಕಾದಿರುವಿದು...
೩. ಶ್ಲೇಷಾಲಂಕಾರ ಬಳಕೆಯ ಉತ್ತಮ ಉದಾಹರಣೆ, ಮೀರೆ ಸರಿಯಾಗಿ toss ಮಾಡಿದ್ದೀರ.
೪. ಮೇ ಫಲ್ ದೋ ಫಲ್ ಕಾ ಶಾಯರ್ ಹೂ...
ಫಲ್ ದೋ ಫಲ್ ಮೆರೀ ಜವಾನೀ ಹೈ!
೫. ಅದು ಹಾಗೆಯೇ,
"ಅವಳ ನೆನಪುಗಳ ಸುಡಲು
ಒಲೆಯ ಹುಡುಕಿದೆ,
ಈಗದೇ ನನ್ನೊಳಗುರಿವ
ಜೀವಂತ ಚಿತಾಗಾರ!"
೬. ಪುಟ ಸಾಲುಗಳೊಳಗೆ ಭರ್ತೀ ಪುಳಕವೆಂದರೆ ಇದೇನೇನೋ?
೭. ಯಾವುದೋ ವಿ.ವಿ. ಪುರಂನ ಗತಕಾಲದ ಆ ಚಿಪ್ಪಿನೊಳಗಿನ ಮುತ್ತು ನೆನಪಿಸಿದಿರಿ! :-(
೮. ಸುದೀರ್ಘ ಪದ ಕಟ್ಟುವಿಕೆ ವಿಶಿಷ್ಟವಾಗಿದೆ.
೯. ನಿಮ್ಮ ಕವನಕ್ಕೆ ಭತ್ತವಾದರೂ ಹುಟ್ಟೀತು. ನನ್ನ ಕವನಗಳ ಪಾಡು ಅಲ್ಲಿ ಮಣ್ಣ ಹೆಂಟೇ!
೧೦. ಇಲ್ಲ... ಇಲ್ಲ...
ಕಾಕಾ ಮತ್ತು ಬದರಿ ಸರ್ , ಧನ್ಯವಾದಗಳು
ReplyDelete