ಉತ್ತರಿಸಲೊಲ್ಲದ ಸೀತೆಗಿವೆ
ಪ್ರಶ್ನೆಗಳು ನೂರು
ಧನುವ ಮುರಿದವನಿಗೆ
ಮನವನಿತ್ತು ವರಿಸಿದೆ
ಸಾಕೇತವು ಸನಿಹವಾಗುವ ಮುನ್ನ
ಅವನೊಡನೆ ಅಡವಿಗೆ ನಡೆದೆ
ಅವನ ಸಂಗವಷ್ಟೊಂದು ಮುದವೇ ಸೀತೆ ?
ಖಗನವನು ನಿನ್ನ ನೋಯಿಸೆ
ಮುನಿದು ಮಹಾಸ್ತ್ರವನು ಬಿಸುಟ
ಹರುಷ ಉಳಿಯಲಿಲ್ಲ ಬಹುಕಾಲ
ಅವನ ತಪ್ಪಿ(?)ಗೆ ಸ್ವರ್ಣ ಲಂಕೆಯ
ಅಶೋಕವನದ ಬಂಧಿಯಾದೆ
ಅವನ ಮೇಲದೆಷ್ಟು ನಂಬಿಕೆಯೇ ಸೀತೆ ?
ವನವನವನೆಲ್ಲ ನಿನ್ನ ನೆನಹಿನಲಿ ಸುತ್ತಿದವ
ಸಾಗರವ ಹಾರಿ ಸೇತುವ ತೋರಿದವ
ವಿಜಯದುಂದುಭಿಯ ಮೊರೆತದಲಿ
ಹರಿದ ಕಂಬನಿಯ ಕುಯಿಲ ಮರೆತೆ
ಅವನ ಒಲವಷ್ಟು ಬಲವೇ ಸೀತೆ ?
ಧಗಿಸುವ ಜ್ವಾಲೆಯನಾಲಿಂಗಿಸಿದೆ
ಮುಗಿಯದ ನೋವಿಗೆ ಮೌನಿಯಾದೆ
ಮಡಿಲ ತುಂಬಿತು ಲೋಕದಪವಾದ
ಮರಳಿ ನಡೆದೆ ವನಾಂತರಂಗಕೆ
ಅವನೆಂದರದೆಷ್ಟು ಸಖ್ಯವೇ ಸೀತೆ ?
ಎಲ್ಲ ಕೇಳಿಯೂ ಮಾತನಾಡಲವಳು
ವಿದೇಹದ ಮುದ್ದು ವೈದೇಹಿಯವಳು
ಮುಗುಳು ನಗೆಯೇ ಅವಳುತ್ತರ
ಹೇಳುತ್ತಿರಬಹುದೇ ಹೀಗೆ :
"ಗದ್ದಲದ ಪ್ರಶ್ನೆಗಳಿಗೆ ಮೌನವೇ ಉತ್ತರ!"
ನಗುವೊಂದನುಳಿದು ಅವಳೇನೂ ಹೇಳಲಿಲ್ಲ
ಶಿಲೆಯಲ್ಲೂ ಅವನೆಡವ ಬಿಡಲಿಲ್ಲ!
Thursday, January 06, 2022
ಸೀತೆ - ಸಂವಾದ
Subscribe to:
Post Comments (Atom)
No comments:
Post a Comment