Thursday, March 24, 2011

ನಮ್ಮ ಸಂತೋಷವನ್ನ ನಾವೇ ತಂದ್ಕೊಬೇಕು

ಸಾಮಾನ್ಯವಾಗಿ ಯಾರೇ ಬುಧ್ಧಿವಾದ ಹೇಳಿದರೂ
ಅದನ್ನು ಅಷ್ಟು ಸುಲಭವಾಗಿ ಒಪ್ಪುವ ಜಾಯಮಾನ ನನ್ನದಲ್ಲ.
ಆದರೇಕೋ ಆಕೆ ಹೇಳುತಿದ್ದರೆ ಸರಿ ಏನೂ ಅನ್ನಿಸುತ್ತಿತ್ತು.

ಆಕೆ  ಬದುಕಿನ ಬವಣೆಗಳನ್ನು ಕಂಡಿದ್ದಳು. ಬೇಜವಾಬ್ದಾರಿ ಗಂಡ,
ಸಿಡುಕುವುದೆ ಕಾಯಕವಾಗಿಸಿಕೊಂಡ ಮಾವ, ಎಲ್ಲಕ್ಕೂ ನಿರ್ಲಿಪ್ತಳಾದ  ಅತ್ತೆ,
ನೆಂಟರಿಷ್ಟರ ತಿರಸ್ಕಾರ, ಮಕ್ಕಳ ಚೂರಾದ ಕನಸುಗಳು ಇದೆಲ್ಲದರ ನಡುವೆ
ನಿಂತ ಆಕೆಯದೇ ಆದ ಬಯಕೆಗಳು. ಅದೆಷ್ಟು ಕಣ್ಣಿರು ಹರಿಸಿ ಆಕೆ ನಿರ್ಲಿಪ್ತಲಾದಳೋ
ಅಥವಾ ನಿರ್ಲಿಪ್ಥಥೆಯನ್ನು ನಟಿಸುತ್ತಿರುವಳೋ  ಗೊತ್ತಿಲ್ಲ.

ತನ್ನ ಗಂಡನ ಬಗ್ಗೆ ಆಕೆ ಮಾತಡಿದ್ದನ್ನೇ ನಾನು ಕೇಳಿಲ್ಲ. ಎಷ್ಟೋ ಭೇಟಿಗಳ ನಂತರ
ಆಕೆಯ ಈ ವರ್ತನೆಇಂದ ನಾನು ಆಕೆ ಒಂದೋ ವಿಚ್ಚೆದಿಥೆ ಅಥವಾ ವಿಧವೆ ಅಂತ ತೀರ್ಮಾನ
ಮಾಡಿಬಿಟ್ಟಿದ್ದೆ.  ಒಮ್ಮೆ ನನ್ನ ಮಕ್ಕಳು ರಜೆಗೆ ನನ್ನ  ಓರಗಿತ್ತಿ ಮತ್ತು ಅತ್ತಿಗೆ ಮನೆಗೆ ಹೋಗುತ್ತಾರೆ
ಅಂದಳು. ಗಂಡನ ಮನೆಯವರ ಜೊತೆ ಸಂಬಂಧ ಇದೆ ಅಂದ ಮೇಲೆ ಈಕೆ ವಿಚ್ಚ್ದಿಥೆ ಅಲ್ಲ  ಬಹುಶ
ಈಕೆಯ ಗಂಡ ಇನ್ನಿಲ್ಲ ಅನ್ನುವ ಹೊಸದೊಂದು ತೀರ್ಮಾನಕ್ಕೆ ನಾನು ಯಾವುದೇ ಅಳುಕಿಲ್ಲದೆ ಬಂದು ಬಿಟ್ಟಿದ್ದೆ.

ಆಕೆ ಕೂದಲು ಕತ್ತರಿಸಿ ಬಾಬ್ ಮಾಡಿಸಿಕೊಂಡು ಬಂದಾಗ, ಇದೇನು ಸಂಪ್ರದಾಸ್ಥ ಮನೆಯ ಹೆಣ್ಣು ಮಗಳು,
ಗಂಡನಿಲ್ಲದಾಗಲೂ ಈ ವೇಷವೇ ಅಂತ ಮನಸಿನಲ್ಲೇ ಅವಳನ್ನು ಹಳಿದದ್ದೂ ಆಯಿತು.

ಇದಾದ ನಂತರ ಒಮ್ಮೆ ಮಾತನಾಡುವಾಗ  "ನಿಮ್ಮ ಗಂಡ?" ಅಂತ ಅಂದೆ. ಯಾವುದೇ ಭಾವನೆಗಳಿಲ್ಲದೆ
ಆಕೆ "ಇದಾನೆ!" ಅಂದಳು.  ನಂತರ ತಾನೇ ಮುಂದುವರೆದು ಹೇಳಿದ್ದು "ಅವನು ನನ್ನ ಅತ್ತೆಯ ಮಗ, ಇಷ್ಟ ಪಟ್ಟು
ಮಾಡುವೆ ಆದೆವು. ತಂದೆ ತಾಯಿಗೆ ಒಬ್ಬಳೇ ಮಗಳನ್ನು ಆ ಮನೆಗೆ ಕೊಡುವುದು ಇಷ್ಟವಿರಲಿಲ್ಲ ಆದರೆ ನನ್ನಿಷ್ಟದ
ಸಲುವಾಗಿ ಈ ಮಾಡುವೆ ಮಾಡಿದರು. ಮೊದಲು ಎಲ್ಲ ಸರಿಯಾಗೆ ಇತ್ತು . ಮಾವ ಮಾತು ಮಾತಿಗೂ ರೆಗುತ್ತಿದರು,
ಎಲ್ಲ ಅವರೇ ನಿರ್ಧರಿಸುತ್ತಿದರು, ಮನೆಯಲ್ಲಿ ನಾನು ಮಾತನಾಡುವ ಹಾಗಿರಲಿಲ್ಲ, ಸೋದರತ್ತೆ ಎಂಬ ಸಲುಗೆಯೊಂದಿಗೆ
ಅತ್ತೆಯೊಂದಿಗೆ ಮಾತನಾಡಲು ಕುಳಿತರೆ ಮಾವ ಅತ್ತೆಯನ್ನೇ ಬೈದಿದ್ದರು. ಇದರಿಂದಾಗಿ ಅತ್ತೆ ನನ್ನೊಡನೆ ಮಾತನಾಡುವುದನ್ನೇ
ನಿಲ್ಲಿಸಿದರು.  ಆದರೆ ಗಂಡ ಸರಿಯಾಗೇ ಇದ್ದ. ನಂತರ ಅವನ ಚಟ, ಚಾಳಿ ಇದರಿಂದಾದ ಸಾಲ
ಅವನದೇ  ಸಮಸ್ಯೆಗಳು ಎಲ್ಲವೂ ನನ್ನ ಸಂತೋಷಕ್ಕೆ ಮಂಗಳ ಹಾಡಿದವು. ಇದ್ದ ಎರಡು ಮಕ್ಕಳಿಗಾಗಿ ನಾನು ಕೆಲಸ ಹುಡುಕಿ
ದುಡಿಯಲು ನಿಂತೆ. ನೆಂಟರಿಷ್ಟರು ಕೆಲವರು ದೂರ ಸರಿದರು ಕೆಲವರು ಸಹಾಯ ಮಾಡಿದರು. ಈಗಲೂ ನನ್ನ ಗಂಡ ಮತ್ತು ನಾನು ಜೊತೆಗೇ ಬದುಕುತ್ತಿದೇವೆ ಆದರೆ ನಮ್ಮ ನಡುವಿನ ಸಂಬಂಧ ಸತ್ತು ಬಹಳ ದಿನಗಳಾಗಿವೆ. ಮನೆ ಮಕ್ಕಳ ಯಾವ ನಿರ್ಧಾರಗಳನ್ನು ನಾನು ಅವನೊಂದಿಗೆ ಚರ್ಚಿಸುವುದಿಲ್ಲ. ಆತ ನನ್ನ ಮನೆಯ ಅತಿಥಿ ಮಾತ್ರ." ಉಕ್ಕುತ್ತಿದ್ದ ಕಣ್ಣಿರು ಒರಸಿ ಆಕೆ ಅಷ್ಟಕ್ಕೇ ನಿಲ್ಲಿಸಿದಳು. ಮತ್ತೆ ಕಣ್ಣೀರ್ ಒರಸಿ " ನನ್ನ ಕಥೆ ಮುಗಿಯಲ್ಲ ಬಿಡಿ. ನಾನು ಇದನ್ನ ಒಪ್ಪಿಕೊಂಡಾಗಿದೆ. ನನ್ನದೆಲ್ಲವನ್ನು ಆತನಿಗಾಗಿ ನಾನು ಕಳೆದು ಕೊಂಡಿದ್ದೇನೆ ಇನ್ನು ಕಳೆದು ಕೊಳ್ಳಲು ಇನ್ನೇನು ಉಳಿದಿಲ್ಲ. ಅದಕ್ಕೆ ಖುಷಿಯಾಗಿ ಇದ್ದು ಬಿಡೋಣ ಅಂತ ಹೀಗಿದಿನಿ" ಅಂತ ನಕ್ಕಳು. ಏನು ಹೇಳೋದು?

ಈ ದಿನ ನಾನು ಯಾವೊದೋ  ಸಮಸ್ಯೆ ಹೇಳಿದ್ದಕ್ಕೆ ಆಕೆ ಅಂದಳು " ನಮ್ಮ ಸಂತೋಷವನ್ನು  ನಾವೇ  ತಂದ್ಕೊಬೇಕು ಯಾರು ನಮಗಾಗಿ ಅದನ್ನ ತರಲಾರರು. ಆದ್ದರಿಂದ ಏನಿದಿಯೋ ಅದರಲ್ಲೇ ಖುಷಿಯಾಗಿದ್ದು ಬಿಡಿ. ಹೇಳಬೇಕಿನಿಸಿದ್ದನ್ನ ಹೇಳಿ, ಮಾಡಬೇಕಿನಿಸಿದ್ದನ್ನ ಮಾಡಿ ಆದ್ರೆ ಖುಷಿಯಾಗಿರಿ"
"ನಮ್ಮ ಸಂತೋಷವನ್ನ ನಾವೇ ತಂದ್ಕೊಬೇಕು"


1 comment:

  1. "ನಮ್ಮ ಸಂತೋಷವನ್ನ ನಾವೇ ತಂದ್ಕೊಬೇಕು" ಬದುಕಿನ ಕಷ್ಟಗಳು ತ೦ದಿತ್ತ ಅಮೂಲ್ಯವಾದ ಸತ್ಯ! ಚೆನ್ನಾಗಿ ನಿರೂಪಿಸಿದ್ದೀರಿ. ಅಭಿನ೦ದನೆಗಳು.

    ReplyDelete