ಚಿತ್ರಕೃಪೆ : ಅಂತರ್ಜಾಲ
ಸತ್ಯ ಧರ್ಮಕ್ಕೊಂದು ಮಾನವ ರೂಪ ಕೊಟ್ಟರೆ ಅದು ರಾಮನ ರೂಪವಾಗಿರುತ್ತೆ ಅಂದರಂತೆ ವಾಲ್ಮಿಕಿಗಳು ರಾಮಾಯಣದಲ್ಲಿ.
ಒಲವಿಗೊಂದು ಮಾನವ ರೂಪ ಕೊಟ್ಟರೆ ರಾಧೆಯಾಗಬಹುದೇನೋ?
೧. ನನ್ನ ಹುಟ್ಟಿನ ಬಗ್ಗೆ ನನಗೇ ಸರಿಯಾಗಿ ಗೊತ್ತಿಲ್ಲ
ಇನ್ನು ಲೋಕಕ್ಕೆ ತಿಳಿಯದಿರುವುದು ಸೋಜಿಗವಲ್ಲ.
ನನ್ನ ಅಸ್ತಿತ್ವದ ಮೂಲ, ಕಾರ್ಯ, ಕಾರಣ ಎಲ್ಲ-
ವ ಬಲ್ಲ ಆ ವನಮಾಲಿ, ಅವನ ಮುರಳಿ ಎಂದೆಂದೂ ಕೇಳುತಿರಲಿ
ಗೋಪಿಯರ ಬೆಣ್ಣೆ ಕದ್ದವ, ನನ್ನದೆಲ್ಲವ ಕದ್ದಿದ್ದನಲ್ಲ
ನನ್ನ ರೋಗಕ್ಕೆ ಯಾವ ಲೋಕದಲ್ಲೂ ಮದ್ದಿಲ್ಲ .
ಮನಗಳೆರಡು ಮಾತಾಡುವಾಗ ಯಾವ ಸದ್ದಿಲ್ಲ .
ನಮ್ಮ ನೇಹ ನೋಡಿ ಆ ಯಮುನೆಗೂ ಕಿಚ್ಚು ಹತ್ತಿತ್ತಲ್ಲ .
ಕಿಚ್ಚಿನಿಂದ ಅವನ ಹೊಂದಲಾಗದೆಂದು ಹೆಂಗಳೆಯರಿಗೆ ತಿಳಿಯಲಿಲ್ಲ .
ಭಾವವೇ ಗೀತೆಯಾಗಲು, ಯಾವ ರಾಗ ಬೇಕಿಲ್ಲ .
ಲೋಕ ಕಾರ್ಯಕ್ಕಾಗಿ ಮುರಳಿಯ ಬಿಟ್ಟು, ಮಥುರೆಗೆ ಹೋದನಲ್ಲ
ಅವ ನುಡಿಸದೆಯೂ, ಮುರಳಿಯ ನಾದ ನನಗೆ ಕೆಳುವುದಲ್ಲ
ಉಸಿರೇ ಗಾನವಾಗಲು ಯಾವ ಬಿದಿರೂ ಬೇಕಿಲ್ಲ
ಲೋಕ ಇಂದು ನನ್ನಸ್ಥಿತ್ವವನ್ನೇ ನಂಬದಂತಲ್ಲ
ಒಲವಿಂದವನ ಪೂಜಿಸಿದ ಎಲ್ಲರೂ ರಾಧೆಯರಲ್ಲ
ಆತ್ಮದಾರತಿಗೆ ಯಾವ ಜ್ಯೋತಿಯೂ ಬೇಕಿಲ್ಲ
ಇಲ್ಲಿ ಬರೆದ ಎಷ್ಟೋ ಸಾಲುಗಳು,ಇಲ್ಲ ಇಲ್ಲ ಅಂತ ಕೊನೆಯಾಗುತ್ತಿವೆ.
ಅದೇಕೋ ಸ್ವಲ್ಪ ಇರಿಸು ಮುರಿಸಾಗಿ ಕೆಳಗಿನ ಪ್ರಯತ್ನ.
೨. ಎಷ್ಟು ಚಂದಗೆ ಅವನ ಭುಜಕ್ಕೊರಗಿ ಕೂರುತ್ತಾಳೆ ಆ ರಾಧೇ ಏಕಿಷ್ಟು ಎಲ್ಲರ ಕಾಡುತ್ತಾಳೆ ?
ಏನ ಬೇಡಿರಬಹುದು ಅವಳು ಶ್ಯಾಮನಲ್ಲಿ?
ಬೇಡುವ ಆಸೆಯಾದರೂ ಇತ್ತೇ ಅವಳಲ್ಲಿ?
ಅವ ಹೊರಟ ಮೇಲೆ ಅವಳೆನಾಗಿರಬಹುದು?
ಬಹುಶಃ ಅವಳೇ ಅವನಾಗಿರಬಹುದು.
ಲೋಕ ಇಂದು ಅವಳ ಬಿಟ್ಟು ಅವನ ಹೆಸರ ಹೇಳದು
ಅವಳ ಪ್ರೇಮಸುಮ ಯುಗಯುಗಗಳಾದರೂ ಬಾಡದು
ಪುರಾಣ ಅವಳ ಹೆಸರ ಹೇಳದಿದ್ದರೇನು,
ಒಲವಿಗೆ ರಾಧೆಗಿಂತ ಬೇರೆ ಹೆಸರು ಬೇಕೇನು?
೩ . ರಾಧೆಗಾಗಿ ಬರೆಯ ಹೊರಟೆ ನಾ ಪದಗಳನು
ತಟ್ಟಿ ಬಂದೆ ಅದೆಷ್ಟೋ ಅಸಂಖ್ಯಾತ ಕದಗಳನು
ಕೈ ಸೋಕದೆ ,
ಮೈ ಮುಟ್ಟದೇ,
ತುಟಿ ಅರಳದೆ,
ಒಂದಾಗದೇ
ಅವನೊಳೊಂದಾದ ಅವಳಿಗೆ ಸಲಾಮು
ಸ್ಥಿರ ಗಿರಿ ಶಿಖರಗಳಲಿ,
ಸದಾ ಹರಿವ ಯಮುನೆಯಲಿ ,
ಜೀವ ವಿರದ ಶಿಲೆಗಳಲಿ,
ಜೀವಂತ ತುರುಗಳಲಿ
ಅವನ ಕಂಡಿದ್ದ ಅವಳಿಗೆ ಸಲಾಮು
ಏನ ಬರೆಯಲಿ ನಾ ರಾಧೆಯ ಬಗೆಗೆ
ಹರಿಯುತ್ತಲೇ ಇರಲಿ ರಾಧೆ ಎಂಬ ಗಂಗೆ
ಬಲರಾಮ ಕೃಷ್ಣ ಅದೆಲ್ಲಿಗೋ ರಥದಲ್ಲಿ ಹೋಗುತ್ತಿರುತ್ತಾರೆ. ಬಲರಾಮ ಕೃಷ್ಣನಿಗೆ ಕೊಳಲ ನುಡಿಸುವಂತೆ ಕೇಳುತ್ತಾನೆ.
ಕೃಷ್ಣ ಹೇಳುತ್ತಾನೆ, " ಕೊಳಲ ತೊರೆದಾಯ್ತು ಗೋಕುಲದಲ್ಲೇ, ಇನ್ನೇನಿದ್ದರೂ, ಶಸ್ತ್ರ ಮಾತ್ರ. ಹಳ್ಳಿಯ ಮುಗ್ಧ ಗೊಲ್ಲರಿಗೆ ಕೊಳಲ ಭಾಷೆ ಅರ್ಥವಾಗುತ್ತಿತ್ತು, ನಾಡ ನಾಗರೀಕರಿಗೆ ಶಸ್ತ್ರಗಳ ಭಾಷೆ ಮಾತ್ರ ಗೊತ್ತು " ಈ ಪ್ರಸಂಗ ಓದಿದ್ದು
ಪ್ರೊ. ಕೆ. ಎಸ್. ನಾರಾಯಣಾಚಾರ್ಯರ "ರಾಜಸೂಯದ ರಾಜಕೀಯ" ಕಾದಂಬರಿಯಲ್ಲಿ.
ಕೃಷ್ಣನನ್ನೇ ಕೊಳಲ ತೊರೆಯುವಂತೆ ಮಾಡಿದ ನಮ್ಮ ಕ್ರೌರ್ಯಕ್ಕೆ ಧಿಕ್ಕಾರವಿರಲಿ.
"ಆ ಕ್ರೌರ್ಯವಿರದಿದ್ದರೆ ಗೀತೆ ಎಂಬ ಬೆಳಕಿರುತ್ತಿರಲಿಲ್ಲ" ಅಂತ ಎಲ್ಲಿಂದಲೋ ಉತ್ತರ ಬಂತು.
"ಕ್ರೌರ್ಯವಿರದಾಗ 'ಗೀತೆ' ಪ್ರೇಮ ಗೀತೆ ಯಾಗುತ್ತಿತ್ತು" ಅಂತು ಇನ್ನೊಂದು ಸ್ವರ
ವಾದಕ್ಕೆ ಕೊನೆ ಎಲ್ಲಿ ?
ಯಾವುದು ಸರಿ?
ನಿಯತಿ ಮಾಡಿದ್ದೆಲ್ಲ ಸರಿ ?
ರಾಧೆಯ ಬಗ್ಗೆ ಒಂದಿಷ್ಟು : http://mohitinhere.blogspot.in/2005/08/mysterious-radha-and-her-last-meeting.html


ರಾಧೆಯ ಬಗೆಗೆಗಿನ ಈ ರಚನೆ ನನಗೆ ಬಹಳ ಹಿಡಿಸಿತು. ಆಕೆಯ ಸರಳ ನಿಸ್ವಾರ್ಥ ಪ್ರೇಮದ ರೂಪ ರೇಖೆ ಇಲ್ಲಿ ಅಮೋಘವಾಗಿ ಬಿಂಬಿತವಾಗಿದೆ.
ReplyDeleteಕೊಳಲು ಮತ್ತು ಶಸ್ತ್ರಗಳ ನಡುವಿನ ಕೃಷ್ಣ ವೈರುಧ್ಯವನ್ನು ಕೆ.ಎಸ್.ನಾ "ರಾಜಸೂಯದ ರಾಜಕೀಯ"ದಲ್ಲಿ ಚೆನ್ನಾಗಿಯೇ ಒಡಮೂಡಿದಂತಿದೆ.
ಅಂದಹಾಗೆ ಸ್ವರ್ಣ ಅವರು ಬಹುಶಃ ೩೦ ರ ಆಸುಪಾಸಿನ ತಂತ್ರಜ್ಞಾನದಲ್ಲಿ ಗೆಲುವುಕೊಂಡ ಮಹಿಳೆ. ಆಕೆ ಇದ್ಯಾಕೆ ವೇದಾಂತ ಪೂರಿತ ಗ್ರಂಥಗಳನ್ನು ಓದುತ್ತಿದ್ದಾರೆ? ಯಾಕೆ ಇಷ್ಟು ಪುಟ್ಟ ವಯಸ್ಸಿನಲ್ಲಿ ಇಂತಹ ಗೂಢ ಆದ್ಯಾತ್ಮಿಕ ಪಠಣ?????
ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್
ReplyDeleteವೇದಾಂತ ಏನಿಲ್ಲ ಸರ್. ಬಿಡುವಿನ ಓದಷ್ಟೇ
ಸ್ವರ್ಣಾ
ರಾಧೆ ಮತ್ತು ಕೃಷ್ಣಪ್ರೇಮ ಬೇರೆ ಅಲ್ಲ ಎನ್ನುವ ಭಾವವನ್ನು ಚೆನ್ನಾಗಿ ಮೂಡಿಸಿದ್ದೀರಿ. ಕೃಷ್ಣನ ಸರಳ ಜೀವನ, ಕೊಳಲೂದುತ್ತ, ಸ್ನೇಹಪೂರ್ಣವಾಗಿರುವ ಜೀವನ, ಆತ ಮಥುರೆಗೆ ಹೋದಂದೇ ಕೊನೆಯಾಯಿತು ಎನ್ನುವ ಸತ್ಯವನ್ನು ಪು.ತಿ.ನ. ಅವರು ‘ಗೋಕುಲನಿರ್ಗಮನ’ ಗೀತನಾಟಕದಲ್ಲಿ ತೋರಿಸಿದ್ದಾರೆ. ಬಿ.ವಿ.ಕಾರಂತರಿಂದಾಗಿ ಈ ಗೀತನಾಟಕ ತುಂಬ ಪ್ರಸಿದ್ಧಿ ಪಡೆಯಿತು.
ReplyDeleteಹೌದು ಸರ್.
ReplyDeleteಗೋಕುಲ ನಿರ್ಗಮನ ನನಗೆ ತುಂಬಾ ಇಷ್ತಾವಾದ ನಾಟಕ.
ಕಾರಂತರ ಸಂಗೀತ ಅದ್ಭುತ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಸ್ವರ್ಣಾ