Wednesday, May 23, 2012

ಹಳ್ಳ ಸೇರದ ಹನಿಗಳು....ಭಾವಬನಿಗಳು - ೨

೧.  ನೆನಪೇ ಇಲ್ಲದ ಒಂದೂರಂಟಂತೆ
ಅಲ್ಲಿಯ ದಾರಿ ಎಲ್ಲರಿಗೂ ಮರೆತು ಹೋಗಿದೆಯಂತೆ !

೨. ಕನಸ ದಾರಿ  ಹಿಡಿದು ಅವನೂರಿಗೆ ಹೋಗಿದ್ದೆ ನಾನು
ಹಾಳಾದ್ದು, ಬೆಳಗು ಮೂಡಿ , ಉಳಿದದ್ದು ಬರಿ ಬಿಳಿ ಬಾನು

೩. ಮಾತಾಡೆಂದು  ಪೀಡಿಸುತ್ತಿದ್ದನವನು,
ಕಣ್ಣಲ್ಲಿ ಕಣ್ಣಿಟ್ಟಿದ್ದರೆ ಓದಬಹುದಿತ್ತು ನೀಳ್ಗಥೆಯನು !

೪. ಸಮುದ್ರ ಕೇಳಿದನಂತೆ ತೀರವನ್ನ ,
"ಇದ್ದಲ್ಲೇ ಇರುತ್ತೀಯಲ್ಲ , ಬೇಜಾರಿಲ್ವಾ? "
ತೀರ ನೀರೆ  ಅಂದಳಂತೆ,
"ಯಾವಾಗಲೂ ಮೊರೆಯುತ್ತಿರುತ್ತೀಯಲ್ಲ , ನಿಂಗೆ ಬೇಜಾರಿಲ್ವಾ?"

ಶರಧಿ ಅಂದನಂತೆ,
"ನಿನ್ನ ಸೇರುವ ತವಕ,  ಮರೆಸುವುದು  ಮೊರೆತವನ್ನ"
ದಡದ ಹುಡುಗಿ ಅಂದಳಂತೆ,
"ನಿನ್ನ ಹಾದಿ ಕಾಯುತ್ತಾ ಮರೆತೆ ಚಲನೆಯನ್ನು"

ಕಡಲಂದನಂತೆ ,
"ಇರಲಿ ಬಿಡು ನನ್ನ  ಚಲನೆ ನೀನು "
ಇಳೆಯಂದಳಂತೆ,
"ನನ್ನ  ಅಸ್ಥಿತ್ವದ   ಭಾಗ ನೀನು "

೫. ಅವ ಕಂಡಿದ್ದ ಅರೆ ಘಳಿಗೆ,
ಕಾದು ಬಾಯ್ಬಿಟ್ಟ ಇಳೆಗೆ,
ನಾಲ್ಕು ಹನಿ ಯಾವ ಮೂಲೆಗೆ?

೬. ಜಾನಕಿಯ ತೊರೆದು,
ಅರಮನೆಯ ಅಂತಃಪುರದಲ್ಲಿ ಬಂಧಿಯಾದ ರಾಮನ ಒಂಟಿತನ
ಹಾಡದೇ ಒದ್ದಾಡಿತ್ತು

ಅರಮನೆಯ ದಾಟಿ
ಬಟ್ಟ ಬಯಲಲ್ಲಿ, ಈರ್ವರು ತನಯರೊಡನೆ ನಿಂತ  ಸೀತೆಯ ನೋವು
ದನಿ  ಇಲ್ಲದೆ ಎಲ್ಲೆಡೆ ಕೇಳಿತ್ತು

೭. ಅವನ ನಗೆಯೊಂದು  ಚಕ್ರವ್ಯೂಹ,
ಭೇದಿಸಲು ಬಾರದ,
ಭೇದಿಸಲು ಮನಸಿಲ್ಲದ,
ಅಭಿಮನ್ಯು ನಾನು

೮ ನಿನಗಾಗಿ ಜೀವತಳೆದ
ಭಾವಕ್ಕದೆಷ್ಟು ಬೇಲಿ?
ಮೊದಲು ಭಾಷೆ,
ನಂತರ ಪದ,
ಎಲ್ಲ ಹೊಂಚಿದರೆ
ತೆರೆಯಲೊಲ್ಲದು ತುಟಿ  !


೯ . ತಂದದ್ದನೆಲ್ಲ ತೆರೆದು ,
'ಅರಿ' ವರ್ಗಗಳ ಅರೆದು,
ಆತ್ಮದಾನಂದವ ಪೊರೆದು
ಅರಳುವುದೇ ಬದುಕು 
ಅರಳಿ, ಮರಳಿ ಮಣ್ಣಿಗೆ ತೆರಳುವುದೇ ಬದುಕು .

೧೦. ಬಾಳ ಲೆಡ್ಜರ್ ತೆಗೆದರೆ,
ಲೆಖ್ಕಕ್ಕೆ ಸಿಕ್ಕಿದ್ದು ಎರಡೇ ಘಳಿಗೆಗಳು!
ಒಂದು ಹುಟ್ಟಿದ್ದು,
ಇನ್ನೊಂದು ಹಡೆದದ್ದು,
ಮಿಕ್ಕಿದ್ದೆಲ್ಲಿ? 

ಕಸ್ತೂರಿಯಲ್ಲಿ 'ಹೇ ಸ್ವರಧವಲ ಧಾರವಾಡ...' ಅನ್ನೋ ಪುಸ್ತಕ ಪರಿಚಯದಲ್ಲಿ
ಲೇಖಕರು ಬೇಂದ್ರೆ ಅಜ್ಜನನ್ನ ಒಮ್ಮೆ ಧಾರವಾಡ ಆಕಾಶವಾಣಿ ಕೇಂದ್ರದ ಹೊರಾಂಗಣದಲ್ಲಿ
ಅಡ್ಡಾಡುವಾಗ ಕೇಳಿದರಂತೆ,  "ಅಣ್ಣಾ ನಮ್ಮ ಈ ಬದುಕಿನ ಅರ್ಥ ಏನು?ಯಾತರ ಸಲುವಾಗಿ ಬದುಕತೀವಿ  "
ಅಜ್ಜ ಅಂದರಂತೆ,  " ಅರಳೂದು! ಯಾ ಪರಿಸ್ಥಿತಿ ಒಳಗಾ ಬದುಕು ಇರ್ತದೋ ಅದ ಪರಿಸ್ಥಿತಿ ಒಳಗಾ ಅರಳುದು ಬದುಕೂದರ ಅರ್ಥಾ ...ಈ ಸಣ್ಣ ಗಿಡಗಳ ಅಗಿಗಳನ್ನು  ನೋಡು. ಇದ್ದ ಪರಿಸ್ಥಿತಿ ಒಳಗಾ ಎಷ್ಟು ಆನಂದದಿಂದ ಬೆಳಿಲಿಕ್ಕೆ ಹತ್ಯಾವ! ಆ  ಗಟಾರದ  ದಂಡೀ ಅಗೀ ನೋಡು, ಹ್ಯಾಂಗ ಹಳದೀ ಹೂ ಹೊತ್ತು ಆನಂದದಿಂದ ಅರಳೆದ!
ನಾ ಗುಲಾಬಿ ಅಲ್ಲಾ ಅಂತ ಅದೆನರ ತಕರಾರು ಮಾಡತದೇನು? ಇದ್ದಲ್ಲೇ ಅದು ಆನಂದದಿಂದ ಬೆಳಕೊತ ಇರತದ . ಅದಕ್ಕ ಖರೇ ಜೀವನದ ಅರ್ಥ ತಿಳಿದದ. ಜೀವನಾ ಅಂದರ ಅರಳೀಕೋತ ಇರುದು  ತಿಳೀತ?"

ಈ ಸಾರಿಯ ಮಯೂರದಲ್ಲಿ ಒಂದು ಕಥೆಯ ಸಾರಾಂಶ
"ಬದುಕೆಂದರೆ ಪೋರೆಗಳನ್ನ ಕಳುಚುತ್ತಾ ಹೋಗುವುದು, ನೆನ್ನೆಗಳನ್ನು, ನೆನ್ನೆಯ ಅಹಂಕಾರವನ್ನು ಕಳಚುವುದು"




 

7 comments:

  1. ಮನ ಮುಟ್ಟಿತು ಸ್ವರ್ಣ ಚೆಂದ ಬರೆದ್ದೀರಾ...... ಮಾತಾಡೆಂದು ಪೀಡಿಸುತ್ತಿದ್ದನವನು,
    ಕಣ್ಣಲ್ಲಿ ಕಣ್ಣಿಟ್ಟಿದ್ದರೆ ಓದಬಹುದಿತ್ತು ನೀಳ್ಗಥೆಯನು ! ಇಷ್ಟ ಆಯ್ತು :)

    ReplyDelete
  2. ಇಲ್ಲಿಗೆ ಸ್ವಾಗತ ಸೌಮ್ಯ.
    ನಿಮ್ಮ ಬ್ಲಾಗ್ ಓದಿದ್ದೇನೆ.
    ಬರೆಯುತ್ತಿರಿ ಬರುತ್ತಿರಿ
    ಸ್ವರ್ಣಾ

    ReplyDelete
  3. ಸ್ವರ್ಣಾ,
    ನಿಮ್ಮ ಹತ್ತು ಭಾವಬನಿಗಳು ಭಾವಪೂರ್ಣವಾಗಿವೆ. ನಮ್ಮ ಭಾವನೆಯನ್ನು ಅರಳಿಸುತ್ತಿವೆ.
    ಬೇಂದ್ರೆಯವರ ಬಗೆಗೆ ಓದಿ ಖುಶಿಯಾಯಿತು. ‘ಜೀವನಾ ಅಂದರ ಅರಳಿಕೋತ ಇರೋದು!’ ಎಂಥಾ great ವ್ಯಾಖ್ಯಾನ ಇದು. ಬೇಂದ್ರೆಯವರು ಅರವಿಂದರ ಭಕ್ತರು. ಅರವಿಂದರ ಹೇಳಿಕೆಯ ಒಂದು ಸಾಲು ಬೇಂದ್ರೆಯವರ ಒಂದು ಕವನದ ಮೊದಲಿಗೆ ಉದ್ಧೃತವಾಗಿದೆ:‘To be or to become something is the whole endeavor of Nature'.

    ReplyDelete
  4. ಇಲ್ಲಿನ ಪ್ರತಿ ಬಿಡಿ ಸಾಲೂ ಅತ್ಯುತ್ತಮ ಕವನವೋ ಬರಹವೋ ಆಗುವ ಲಕ್ಷಣವಿರುವವು. ಓದಿಗೆ ನಮ್ಮನ್ನೂ ತೊಡಗಿಸುವ ನಿಮ್ಮ ರೀತಿ ಆಧರಣೀಯ.

    ReplyDelete
  5. ಬದರಿ ಸರ್, ಪ್ರತಿಕ್ರಿಯೆಗೆ ಧನ್ಯವಾದಗಳು.
    ನಿಮ್ಮನ್ನ ಓದಿಗೆ ಹಚ್ಚಲು ನಾನು ಬೇಡ ಸರ್ :)
    ಕಾಕಾ, ಎಂದಿನಂತೆ ಮತ್ತಷ್ಟು ಮಾಹಿತಿ ಸೇರಿಸಿದ್ದಕ್ಕಾಗಿ ಧನ್ಯವಾದಗಳು
    ಪ್ರೋತ್ಸಾಹಕ್ಕಾಗಿ ವಂದನೆಗಳು
    ಸ್ವರ್ಣಾ

    ReplyDelete
  6. ಧನ್ಯವಾದಗಳು ಸುಬ್ರಮಣ್ಯರಿಗೆ

    ReplyDelete