![]() |
| ಚಿತ್ರ ಕೃಪೆ : ಅಂತರ್ಜಾಲ |
ಜೀವಿಸಲು ಯೋಗ್ಯವಾದ ಒಂದು ಹೊಸ ಗ್ರಹ ಕಂಡು ಹಿಡಿದ ಮಾನವ. ಕಂಡು ಹಿಡಿದದ್ದೇ ತಡ , ಅಲ್ಲಿಗೆ ತಂಡೋಪ ತಂಡವಾಗಿ ಹೊಸ ಬದುಕನ್ನರಿಸಿ ಹೋಗಲೂ ಆರಂಭಿಸಿದ. ಹೇಗಿದ್ದರೂ ಒಂದು ಬುವಿಯನ್ನ ಕೊಳ್ಳೆ ಹೊಡೆದಾಗಿದೆ, ಈಗ ಹೊಸ ಬುವಿಯ ಸರದಿ. ಸರ್ಕಾರದವರು ಅದೇನೋ ನಿಯಮ ಮಾಡಿ ಮೊದಲು ಒಂದು ೩೦ ಸಾವಿರ ರಾಜಕೀಯ ವ್ಯಕ್ತಿಗಳ ಕುಟುಂಬ, ಒಂದೈದು ಸಾವಿರ ಅತೀ ಶ್ರೀಮಂತರದು, ಒಂದೈದು ಸಾವಿರ ರಾಜಕೀಯ ವ್ಯಕ್ತಿಗಳ ಹಿಂದೆ ತಿರುಗುವ ಫುಡಾರಿಗಳು , ಮಿಕ್ಕ ೧೦ ಸಾವಿರ ಬಡಜನರು ಅಂತ ಒಟ್ಟು ೫೦ ಸಾವಿರ ಜನರನ್ನ ನವ ನೌಕೆಯಲ್ಲಿ ಕರೆದೊಯ್ದು ಅಲ್ಲಿ ಬಿಟ್ಟು ಬಂದರು.ಈ ರೀತಿ ಹೊಸ ಬುವಿಯ ಮೇಲೆಇಳಿದ ಕುಟುಂಬಗಳಲ್ಲಿ ಆಸೇ ಗೌಡನ ಕುಟುಂಬವೂ ಒಂದು.
ಹೊಸ ಬುವಿಯಲ್ಲಿ ಎಲ್ಲವೂ ಹೊಚ್ಚ ಹೊಸದು, ಸ್ವಚ್ಚ ಸ್ಪಟಿಕ. ಎಲ್ಲಿ ನೋಡಿದರೂ ಮರ ಗಿಡಗಳು, ಗುಡ್ಡಗಳಿಂದ ಹರಿವ
ಬಿಸ್ಲೇರಿಗಿಂತಲೂ ಶುಧ್ಧವಾದ ನೀರು, ಥರಾವರಿ ಹಣ್ಣುಗಳು, ಹೂಗಳು, ಮೈ ಕೈ ತುಂಬಿ ಕೊಂಡ ಹಸುಗಳು, ದಷ್ಟ ಪುಷ್ಟ ಎತ್ತುಗಳು, ಎಲ್ಲೆಂದರಲ್ಲೇ ಹಾಲು ಕುಡಿಯುತ್ತಿರುವ ಪುಟಾಣಿ ಕರುಗಳು ಒಟ್ಟಿನಲ್ಲಿ ಜೀವಿಗಳ ಬದುಕಿಗೆ ಪ್ರಶಸ್ತ ಜಾಗ.
ಗೌಡ ಜಾಗ ನೋಡಿ ಉಬ್ಬಿ ಹೋದ. ಇದ್ದುದರಲ್ಲೇ ಒಳ್ಳೆಯ ಜಾಗ ನೋಡಿ ತನ್ನದೆಂದು ತಮ್ಮೊಂದಿಗೆ ಬಂದ ಸರ್ಕಾರಿ ಅಧಿಕಾರಿಗೆ ಸ್ವಲ್ಪ ಹೆಚ್ಚೇ ಉಡುಗೊರೆ ಕೊಟ್ಟು ನೊಂದಾಯಿಸಿದ. ಸುತ್ತ ಗಿಡ ಮರ, ಮಧ್ಯೆ ಸಮತಟ್ಟಾದ ಜಾಗ, ಹಿಂದೆ ಹರಿವ ಝರಿ ನೋಡಿ ಗೌಡತಿಯೂ ಖುಷಿಯಾದಳು. ಗೌಡ ಹುರುಪಿನಿಂದ ಅಲ್ಲಿ ಮನೆ ಕಟ್ಟಲು ಆರಂಭಿಸಿದ. ಮುಂಬಾಗಿಲಿಗೆ ಅಲ್ಲೇ ಸೊಂಪಾಗಿ ಬೆಳೆದ ತೇಗ , ದೇವ ಕೋಣೆಗೆ ಗಂಧ ಕಡಿದದ್ದಾಯಿತು . ಹಿಂದಿನ ಬಾಗಿಲ ಸರದಿ ಬಂದಾಗ ಗೌಡತಿ ಎಂದಳು, ಇಲ್ಲಿಂದ ಸ್ವಲ್ಪ ದೂರ ಒಂದು ಬೇವಿನ ಮರ ಗಾಳಿಗುರುಳಿದೆ ಅದನ್ನೇ ಉಪಯೋಗಿಸಿದರಾಯಿತು
ಅಂದಳು. ಗೌಡ ಒಪ್ಪಲಿಲ್ಲ. ಬೇಕಾದಷ್ಟು ತೇಗ ಇದೆ ಬಿಡು ಇನ್ನೊಂದು ಕಡಿದರಾಯಿತು ಅಂತ ಹೊರಟೇ ಬಿಟ್ಟ.
ಇನ್ನೇನು ಕೊಡಲಿ ಎತ್ತಿ ಏಟು ಹಾಕಬೇಕೆನ್ನುವಷ್ಟರಲ್ಲಿ, ಅವನ ಕೈಗೆ ಯಾರೋ ಕಚ್ಚಿದಂತಾಯ್ತು. ನೋಡಿದರೆ ತನ್ನ ಕಣ್ಣ ಮುಂದೆ ಬುವಿಯ ಮೇಲೆ ಇನ್ನಿಲ್ಲವಾದ ಗುಬ್ಬಿ. ಈಗ ಗುಬ್ಬಕ್ಕ ಮಾತು ಕಲಿತಿದ್ದಳು, " ಎಲ್ಲ ಮರ ಕಡಿದು ನಮ್ಮಂತವರ ಸೂರು ಕಿತ್ತು ಕೊಳ್ಳುತಿರಿ, ನಿಮ್ಮ ಮನೆಯ ಮಾಡಿನಲ್ಲಿ ಸ್ವಲ್ಪ ಸ್ಥಳ ಕೊಟ್ಟು ಅದನ್ನೇ ಹೆಚ್ಚುಗಾರಿಕೆ ಮಾಡಿ "ಗುಬ್ಬಮ್ಮ ನಮ್ಮನೇಲಿ ಗೂಡು ಕಟ್ಟಿದಳು" ಅಂತ ಕೊಚ್ಚುತ್ತಿರಿ, ಮುಂದೊಂದು ದಿನ ನಮ್ಮನ್ನೇ ಇಲ್ಲವಾಗಿಸುತ್ತಿರಿ. ಇಲ್ಲಿ ಹಾಗಾಗದು
ಕೆಲಸ ಮುಂದುವರೆದರೆ ನನ್ನ ಸಂಗಾತಿಗಳ ಕರೆಯುತ್ತೇನೆ ಎಚ್ಚರ. ಗೌಡ , ನಿನ್ನಾಸೆಗಿಲ್ಲಿ ಸ್ಥಳವಿದೆ ದುರಾಸೆಗಲ್ಲ. "
ಗೌಡ ತೆರೆದ ಬಾಯಿ ಮುಚ್ಚಿ ಮನೆಯ ದಾರಿ ಹಿಡಿದ.
ಇತ್ತ ಗೌಡತಿ ಹಾಲು ಕರೆಯಲು ಹೋದಳು. ಒಂದು ತಂಬಿಗೆ ತುಂಬಿತು, ಹೇಗೂ ಹಾಲಿದೆಯಲ್ಲ
ಸ್ವಲ್ಪ ಮಾರಿದರಾಯಿತು ಅಂತ ಮತ್ತೊಂದು ತಂಬಿಗೆ ಎತ್ತಿದರೆ, ಹಸು ಕಾಲೆತ್ತಿ ಜಾಡಿಸಿತು. ನಂತರ ಮುಂದು ವರೆದು "ನನ್ನ ಮಕ್ಕಳಿಗಾಗಿರುವ ಹಾಲಿನಲ್ಲಿ ನಿನ್ನ ಮಕ್ಕಳಿಗೂ ಪಾಲು ಕೊಟ್ಟೆ, ನನಗೆ ತೋರಿಸುವ ಕೃತಜ್ಞತೆ ಇದೇನಾ?" ಅಂತ ಮೃದುವಾಗಿ ಆದರೆ ಅಷ್ಟೇ ಧೃಡವಾಗಿ ಕೇಳಿದರೆ ಗೌಡತಿಗೆ ತಲೆ ಎತ್ತಲಾಗಲಿಲ್ಲ. ಹಸು ಮಾತಾಡಿದ್ದು ಆಶ್ಚರ್ಯವಾದರೂ ಕೇಳಿದ್ದ ಪ್ರಶ್ನೆ ಅವಳನ್ನು ಮೂಕಳನ್ನಾಗಿಸಿತು.
ಇತ್ತ ಕಡು ಬಡವರಿಗೆ ಆ ಬುವಿಯಲ್ಲಂತೂ ಏನೂ ಸಿಗಲಿಲ್ಲ ಇಲ್ಲಾದರೂ ಕೈಲಾದಷ್ಟು ಮಾಡಿ ಕೊಳ್ಳೋಣ ಅನ್ನೋ ಆಸೆಗೆ ಪ್ರಾಣಿಗಳ ವರ್ತನೆ ಆಶ್ಚರ್ಯ ಮತ್ತು ಭಯ ಹುಟ್ಟಿಸಿದ್ದವು.
ಅಂದೇ ರಾತ್ರಿಯ ನೌಕೆಯಲ್ಲಿ ಮನುಷ್ಯರೆಲ್ಲರೂ ವಾಪಾಸಾದರು. ಆ ಬುವಿಯಲ್ಲಿ ಇಂದಿಗೂ ಮನುಜರಿಲ್ಲ.

Swarna,
ReplyDeleteWonderful fable!
Thank you kaakaa.
Delete'ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡುವುದಿಲ್ಲ' ಎನ್ನುವುದು ಇದಕ್ಕೇ ಅಲ್ಲವೇ....ನಾವು ಮಾನವರು ಎಲ್ಲಿ ಹೋದರೂ ಹೀಗೆ. ನಮ್ಮ ಸ್ವಾರ್ಥಕ್ಕಾಗಿ ಏನೂ ಬೇಕಾದರೂ ಮಾಡುತ್ತೇವೆ........ಚಿಕ್ಕದಾಗಿ,ಚೊಕ್ಕದಾದ ಕಥೆ......ಇಷ್ಟವಾಯಿತು.....
ReplyDeleteಧನ್ಯವಾದಗಳು ಸರ್
Deleteaahaa...olleya kalpane..oLLe kathe...
ReplyDeleteಧನ್ಯವಾದಗಳು ಸರ್
Deleteಆಸೆ ಗೌಡ ಎಂಬ ಹೆಸರೇ ಮಜವಾಗಿದೆ ರೀ.
ReplyDeleteಗುಬ್ಬಕ್ಕ ಮತ್ತು ಹಸು ಆಡಿದ ಮಾತುಗಳಂತೂ ಮನುಜನ ಸ್ವಾರ್ಥತೆಯ ಪರಮಾವಢಿಯನ್ನು ಎತ್ತಿ ತೋರಿದವು.
ಹಂಸಲೇಖ ಅವರು ಹೇಳುವಂತೆ:
"ಹುಲು ಮನುಷ ಕಲಿಯಲ್ಲ
ಅವ ನಡೆಯೋ ದಾರೀಲಿ
ಗರಿಕೇನೂ ಬೆಳೆಯೋಲ್ಲ!!!!"
ಧನ್ಯವಾದಗಳು ಸರ್.
Deleteಆಹಾ! ಚಂದದ ಚಿಕ್ಕ-ಚೊಕ್ಕ ಕತೆ :-)
ReplyDelete