Thursday, September 20, 2012

ನಗುವ ನಯನ

ಒಮ್ಮೆ,ಅವನ ನೋಟ್ಸ್ ನನ್ನ ಹತ್ತಿರ ಇದ್ದಾಗ ಭೇಟಿಯಾದ ಅವನ ಗೆಳೆಯ ಸಿಕ್ಕಿದ್ದ . ಆದರೆ ಅವನು ನಿಲ್ಲಲಿಲ್ಲ.  ಆಮೇಲೆ ಅಲ್ಲಿ ಇಲ್ಲಿ ಅವನು ಈಗ ಮೂರನೆ ವರ್ಷ ಅಂತ ಕೇಳಿದೆ. ಚೆನ್ನಾಗಿ ನಡೆದಿದೆ ಓದು ಅಂತ ಖಾತ್ರಿಯಾಗಿತ್ತು.ಆದರೂ ಅವನು  ಚೆನ್ನಾಗಿ ಓದಲಿ ಎನ್ನುವ ಆಶಯವಿತ್ತ? ಪ್ರಾರ್ಥನೆ ಇತ್ತ? ಗೊತ್ತಿಲ್ಲ. ನನ್ನ ಪದವಿ ಮುಗಿಯುವ ಹಂತ ಬಂದಾಗ ಬಹುಶಃ ಅವನು ಕೊನೆಯ ವರ್ಷದಲ್ಲಿದ್ದ.ಮಧ್ಯೆ ಒಂದೆರಡು ಬಾರಿ  ಅವ ಕಂಡಿದ್ದರೂ ನಿಲ್ಲುವ ಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ. ಆದ್ದರಿಂದ ೩ ವರ್ಷದ ಪದವಿಯಲ್ಲಿ ನಡೆದ ಭೇಟಿ ಒಂದೇ.

ಪದವಿ ಮುಗಿಸಿದ ನಂತರ ಏನು ಮಾಡುವುದೆಂದು ನಿರ್ಧಾರ ಮಾಡಿರಲಿಲ್ಲ.  ಬಿ.ಎ ಮಾಡಿದವರಿಗೆ ಸಿಗುವ ಕೆಲಸಗಳೂ ಕಡಿಮೆ. ನಾನು ಇಚ್ಛೆ ಪಟ್ಟು ಓದಿದ ಪದವಿಯಲ್ಲ ಅದು, ಯಾಕೋ ಪದವಿ ಪೂರ್ವ ತರಗತಿಗಳು ಮುಗಿದ ಮೇಲೆ ವಿಜ್ಞಾನದಲ್ಲಿದ್ದ ಆಸಕ್ತಿ ಕಡಿಮೆಯಾಯಿತು.  ಲೆಖ್ಖಕ್ಕೂ   ನನಗೂ ಎಂದೋ ಮುಗಿದ ನಂಟು ಆದ್ದರಿಂದ  ಕಾಮರ್ಸ್  ಬಿಟ್ಟು ಉಳಿದದ್ದು ಕಲೆ ಮಾತ್ರ, ಅದನ್ನೇ ಆರಿಸಿಕೊಂಡು ಪದವಿ ಮುಗಿಸಿದ್ದಾಯಿತು.

ಮಕ್ಕಳು ಸಾಮಾನ್ಯ  ಮಟ್ಟದವರಾಗಿದ್ದರೂ ತಾಯಿ ತಂದೆ ಪಾಲಿಗೆ ಅವರು ತುಂಬಾ ಜಾಣರು. "ಪರೀಕ್ಷೇಲಿ ಮರೆತು ಹೋಗ್ತಾನೆ ,ಲಕ್ಕಿಲ್ಲ " ಅನ್ನೋದು ಹೆಚ್ಚು ಮುಕ್ಕಾಲು ತಂದೆ ತಾಯಿಗಳ ಅಂಬೋಣ. ಅವರಿಗಿಂತ ಮಕ್ಕಳು ಹೆಚ್ಚು ಓದಲಿ, ಹೆಚ್ಚಿನ ಭೋಗ ಅನುಭವಿಸಲಿ ಅನ್ನೋದು ಅವರ ಆಸೆ.ನನ್ನ ತಂದೆ ತಾಯಿಗಳು ಇದಕ್ಕೆ ಹೊರತಾಗಿರಲಿಲ್ಲ. ಪದವಿ ಮುಗಿಸಿದ ನನ್ನನ್ನು ಸ್ನಾತಕೋತ್ತರ ಪದವಿಗೆ ಸೇರಿಸುವ ನಿರ್ಧಾರ ಮಾಡಿದರು.

ಓದುತ್ತಾ ಓದುತ್ತಾ ನಂಗೂ ಮನಃಶಾಸ್ತ್ರ ಇಷ್ಟವಾಗ ತೊಡಗಿತ್ತು. ಸ್ನಾತಕೋತ್ತರ ಓದುವ ಮನಸು ಮಾಡಿ  ಅರ್ಜಿ ತರಲು ಕಾಲೇಜಿಗೆ ಹೋಗಿದ್ದೆ. ನಮ್ಮ ಕಾಲೇಜಿನ ಮುಂದೆ ನಿಂತಿದ್ದ.  ನನ್ನೇ ಕಾಣಲು ಬಂದಿದ್ದಾನೆ  ಅದೂ ಇದೂ ಅಂತ ನಾನು ಮೋಡದ ಮೇಲೆ ಇನ್ನೇನು ತೇಲಿ ಹೋಗುತ್ತಿದ್ದೆ. ಅಷ್ಟರಲ್ಲಿ ಅವನ ಹತ್ತಿರ ಯಾರೋ ಹುಡುಗಿ ಬಂದಳು. ಅವಳನ್ನು ನಾನು ಈ ಮೊದಲು ಎಲ್ಲೂ ನೋಡಿರಲಿಲ್ಲ. ಇನ್ನೇನು, ನನ್ನ ಪಲಕರಿಸಲ್ಲ ಬಿಡು ಅಂತ ನಾ ತಲೆ ತಗ್ಗಿಸಿ ಮುನ್ನಡೆದರೆ ಅವನೇ ಬಂದ, "ಇವಳು ನನ್ನ ಫ್ರೆಂಡ್ , ನನ್ನ ಜೊತೆ ಎಂ.ಬಿ.ಬಿ.ಎಸ್ ಮಾಡಿದ್ದು , ಅವಳ ಕಸಿನ್ ಇಲ್ಲಿ ಓದುತ್ತಿದ್ದಾಳೆ " ಅಂತ ಆ ಹುಡುಗಿಯನ್ನ ಪರಿಚಯಿಸಿದ. ನಾ ಸುಮ್ಮನೆ ನಕ್ಕೆ. ನನ್ನ ಬಗ್ಗೆ ಆ ಹುಡುಗಿಗೆ ಏನೂ ಹೇಳಲಿಲ್ಲ.
" ಏನು ಆರ್ಟ್ಸ್ ನಲ್ಲೆ ಮಾಸ್ಟರ್ಸ್ ಮಾಡ್ತಿಯ? " ಅಂದವನ ದ್ವನಿಯಲ್ಲಿ ವ್ಯಂಗ್ಯವಿತ್ತಾ ? ಇತ್ತು ಅಂಥ ಒಪ್ಪಿಕೊಳ್ಳುವ ಮನಸು ಬರಲಿಲ್ಲ.ಇಲ್ಲವೆಂದು ಒಪ್ಪಿಕೊಳ್ಳಲು ಕೀಳರಿಮೆ ಬಿಡಲಿಲ್ಲ.
"ಬೈ" ಅಂತ ಅವನ ಪ್ರಶ್ನೆಯ  ಉತ್ತರಕ್ಕೂ  ಕಾಯದೇ ಹೊರಟು ಹೋದ. ಬದುಕಿನ ನಗ್ನ ಸತ್ಯಗಳನ್ನ ಒಪ್ಪಿಕೊಳ್ಳಲು ಮನಃಶಾಸ್ತ್ರದ ಪದವಿ ಮನವನ್ನ ಸಿಧ್ಧಗೊಳಿಸಿತ್ತೇನೋ? ವಿಷಯ ಅಲ್ಲಿಗೆ ಬಿಟ್ಟು  ಅರ್ಜಿ ತಂದು  ಎಂ.ಎ. ಗೆ ಸೇರಿದೆ. 


ಸ್ನಾತಕೋತ್ತರ ಪದವಿಗೆ ಸೇರಿದ ಮೇಲೆ ಅವನ ಭೇಟಿಯಾಗಲೇ ಇಲ್ಲ. ನಾನು ೨ನೆ ವರ್ಷದ  ತರಗತಿಗಳನ್ನೂ ಮುಗಿಸುವಾಗ ತಿಳಿಯಿತು, ಅವನಿಗೆ ಎಂಡಿ ಸೀಟ್ ಸಿಕ್ಕಿದೆ. ಅದೂ ಫ್ರೀ ಸೀಟ್ ಅಂತ. ಕುಣಿದಾಡುವ ಹರೆಯದ ಮನಸು ಮಾಯವಾಗಿ, ಮೌನವಾಗಿ ಖುಷಿಪಡುವ ವಯಸ್ಸು ಬಂದಿತ್ತು.ನಾನು ಅವನನ್ನು ಭೇಟಿಮಾಡುವ ಅಥವಾ ಮಾತಾಡಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ.ರಸ್ತೆಯಲ್ಲಿ ಸಿಕ್ಕಾನೆಂಬ  ಕನಸೂ ಕಾಣದ ಹಾಗೆ, ಅವನು ಎಂಡಿ ಮಾಡಲಿಕ್ಕೆ ಬೇರೆ ಯಾವುದೋ ಊರಿಗೆ ಹೋಗಿದ್ದ.

ಸ್ನಾತಕೋತ್ತರ   ಪದವಿಯನ್ನ ಶ್ರೇಣಿಯೊಂದಿಗೆ ಮುಗಿಸಿದಾಗ ಅವನ ನೆನಪಾಗಿದ್ದು ನಿಜ. ನಮ್ಮ ಗೆಲುವುಗಳು ಪ್ರೀತಿ ಪಾತ್ರರ ಮುಖದಲ್ಲಿ ನಗೆಯಾದರೆ ನಮ್ಮ ಪ್ರಯತ್ನ ಸಫಲ.ಆದರೆ ಅವ ಸಿಗಲಿಲ್ಲ. ಅದಾವ ದೇವರ ವರವೋ ನಾನು ಸ್ನಾತಕೋತ್ತರ ಮುಗಿಸುವುದಕ್ಕೂ ಉಪನ್ಯಾಸಕರ ಹುದ್ದೆಗಾಗಿ ಅರ್ಜಿ ಕರೆದೆದಿದ್ದರು. ಎಲ್ಲ ಪರೀಕ್ಷೆ , ಸಂದರ್ಶನ ಮುಗಿದು
ನಮ್ಮೂರಿನಲ್ಲೇ ಕೆಲಸ ಸಿಕ್ಕಾಗ ಬದುಕಿನ ಒಂದು ಮಜಲನ್ನ ಸಫಲವಾಗಿ ದಾಟಿದ ಅನುಭವ.

ಉಪನ್ಯಾಸಕಿಯಾದ ಅನುಭವಗಳ ಬಗ್ಗೆ ಮತ್ತೊಂದು ಕಥೆ ಬರೆಯಬಹುದು. ನಮ್ಮ ಹರೆಯದ ಕನಸುಗಳನ್ನ
ಮತ್ತೆ ಹೊತ್ತಿರುವ  ಕಣ್ಣುಗಳನ್ನ ದಿನವೂ ನೋಡುವುದು ಒಂದು ಹೊಸ ಲೋಕವನ್ನ ನಮ್ಮ ಮುಂದೆ ತೆಗೆದಿಡುತ್ತೆ.
೫ ವರ್ಷ ಮನಃಶಾಸ್ತ್ರ ಓದಿ ಓದಿ, ನನಗೀಗ  ಇದೇ ನನಗೆ ಸರಿಯಾದ ವಿಷಯ ಅನ್ನಿಸತೊಡಗಿತ್ತು. ಪಿ.ಎಚ್.ಡಿ ಮಾಡುವ ಯೋಚನೆ ಆಗೀಗ ಬಂದರೂ ಕಾರ್ಯಗತವಾಗಿರಲಿಲ್ಲ. ಈಗೀಗ ಸಣ್ಣ ಊರಿನಲ್ಲೂ ಮನಶಾಸ್ತ್ರಜ್ಞರು ಹೆಚ್ಚಾಗಿದ್ದರು. ನಮ್ಮ ಸಣ್ಣ ಊರಿನಲ್ಲೆ ಮೂರು ಜನ ಪ್ರಸಿಧ್ಧ ಮನೋವೈದ್ಯರಿದ್ದರು . ಅವರ ಬಳಿ ಸೈಕಾಲಿಜಿಸ್ಟ್ ಆಗಿ ಸೇರುವುದು ಮನಃಶಾಸ್ತ್ರದ ಪದವಿದರರಿಗಿದ್ದ ಒಂದು ಅವಕಾಶ. ಆದರೆ ನನಗೇಕೋ ಉಪನ್ಯಾಸವೇ ಒಗ್ಗಿತ್ತು. ಒಂದೆರಡು ಸಂಸ್ಥೆಗಳೊಡನೆ ಸೇರಿ  ಮಕ್ಕಳ ಜೊತೆ ಕೆಲಸ ಮಾಡುವುದು , ಉಪನ್ಯಾಸ ಇದರಲ್ಲಿ ಅವನ ವಿಷಯ ಕೆಲ ಕಾಲ ಮೂಲೆ ಸೇರಿದ್ದು ನಿಜ. 

ಒಮ್ಮೆ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಬಳಿ ಕಂಡ, ೨ ವರ್ಷದ ಮೇಲಾಗಿದ್ದರೂ ಮಾತಿನ ತಂತಿ ಮೀಟುವುದು ಕಷ್ಟವಾಗಲಿಲ್ಲ.
"ಏನು ರಜಾನ?"
"ಹಾಂ" ನನ್ನ  ಪ್ರಶ್ನೆಗೆ ಉತ್ತರ ಬಂದಿತ್ತು.
""ಪಾಠ ಮಾಡೋವಷ್ಟು ದೊಡ್ಡೋಳಾಗ್ ಬಿಟ್ಯಾ? ಕೆಲಸ ಸಿಕ್ಕ ಟ್ರೀಟ್ ಕೊಡ್ಸಲ್ವಾ?"
ಸಣ್ಣ ಊರಿನ ಪ್ರಭಾವವೋ ಅಥವಾ ನಮ್ಮ ಸ್ನೇಹದ ಬಲವೋ, ಸಿಕ್ಕಿದಾಕ್ಷಣ ಮಾತು ಲಯ ಕಂಡುಕೊಂಡಿತ್ತು. 
ಹದಿ ಹರೆಯ ಮುಗಿದರೂ ಅವನ ನಗುವಿನಲ್ಲಿದ್ದ ಆಕರ್ಷಣೆ ಕಡಿಮೆಯಾಗಿರಲಿಲ್ಲ.   ಅವನ ಪ್ರಶ್ನೆಗೆ ಉತ್ತರವಾಗಿ ಅಲ್ಲೇ ಇದ್ದ ಒಂದು ಹೋಟೆಲ್ ಹೊಕ್ಕೆವು. ಅವ ತನ್ನ ಕಾಲೇಜಿನ ಬಗ್ಗೆ, ಕೆಲವು ಸ್ನೇಹಿತರ ಬಗ್ಗೆ ಹೇಳಿದ. ನಾನು ನನ್ನ ಕೆಲಸದ ಬಗ್ಗೆ.
ಅದೇಕೋ ಅಂದು ಹೋಟೆಲ್ ಹೊಕ್ಕಾಗ , ಹೋಟೆಲ್ನಲ್ಲಿ ಕೂತಾಗ ಪರಿಚಯದವರು ನೋಡಿದರೆ ಎಂಬ ಭಾವ ಕಾಡಲಿಲ್ಲ.
 ಅವನ ಮನೆ ಮುಂದೆ ಒಂದು ಚಂದದ ಕೈ ತೋಟ ಇತ್ತು. ನಾನದನ್ನು ಒಳಗಿನಿಂದ ನೋಡಿಲ್ಲವಾದರೂ , ಸುಂದರವಾಗಿದೆ ಅಂಥ ಹೇಳೋವಷ್ಟು ಅದು ಹೊರಕ್ಕೆ ಕಾಣುತಿತ್ತು. ಗಂಟೆಗೂ ಮೀರಿದ ಭೇಟಿಯ ಕೊನೆಯಲ್ಲಿ ನನಗೇಕೋ ಪಾರಿಜಾತದ ನೆನಪಾಗಿತ್ತು.
"ನಿಮ್ಮ ತೋಟದಲ್ಲಿ, ಪಾರಿಜಾತ ಗಿಡ ಇದ್ಯಾ?"  ನಸುಕಲ್ಲೇ ಅರಳಿ, ಸೂರ್ಯನೊಂದಿಗೆ  ಕೊಂಚ ರಮಿಸಿ, ಪರಿಮಳ ಇದ್ದೂ ಇಲ್ಲದಂತಿರುವ, ಮುಡಿಯಲು ಬಾರದ, ಗಿಡದಿಂದ ಬಿಡಿಸಲೂ ಬಾರದ, ಬಿದ್ದ ಮಣ್ಣಿನ ಅಂದ ಹೆಚ್ಚಿಸುವ ಸುಕೋಮಲ ಪಾರಿಜಾತ ನಂಗೆ ಇಷ್ಟದ ಹೂವಾಗಿತ್ತು.
"ಇಲ್ಲ" ಅಂದ ಅವ ಚುಟುಕಾಗಿ.
ಅಂದಿಗೆ ನಮ್ಮ ಭೇಟಿ ಮುಗಿದಿತ್ತು. ಅವನ ಕಣ್ಣಲ್ಲಿ ಮತ್ತೆ ನಗೆ ಮರಳಿತ್ತು.

"तेरी आँखों के सिवा दुनिया में रखां क्या हैं"
 

8 comments:

  1. The transformation from teenage to the responsible
    adulthood is interesting. Swarna, you are writing very well.

    ReplyDelete
  2. ಎರಡು ವಿಭಿನ್ನ ತಂತುಗಳು ಆಗಾಗ ಸಂಧಿಸುವ ಭಾಗ್ಯ ದೊರೆತರೂ, ಅದೇಕೋ ಹಿಡಿದ ದಾರಿಗಳು ಬೇರೆಬೇರೆ.

    ಅರಗಳಿಗೆಯ ಪುಳಕವು ಯಾವ ಹರೆಯವನ್ನಾದರೂ ಮೀಟಬಲ್ಲದು. ಅವನು / ಅವಳು ಅಪರೂಪಕೆ ಸಂಧಿಸಿದರೆ ಎದೆಬಡಿತ ಹದ ತಪ್ಪುವುದು.

    ಕಥನ ಈಗ ಹದಕ್ಕೆ ಬರುತ್ತಿದೆ. ಮನಶಾಸ್ತ್ರದ ಉಪನ್ಯಾಸಕಿ ಎಂದರೆ ಅವನ ಮನಸ್ಸನ್ನು ಓದಿರಬಹುದು.

    ಅದರ ವಿವರ ಬೇಕು.

    "ನಿನ್ನ ಕಣ್ಣ ನೋಟದಲ್ಲಿ
    ನೂರು ಆಸೆ ಕಂಡೆನು"
    ಅಂತೇನೋ ಕನ್ನಡ ಹಾದೂ ಇದೆ.

    ReplyDelete
    Replies
    1. ಹೌದು ಬದರಿ ಸರ್, ಆ ಹಾಡು ಬಹುಶಃ ಅಣ್ಣಾವ್ರ ಸಿನೆಮಾದ್ದು.
      ಧನ್ಯವಾದಗಳು.

      Delete
  3. ವಯಸ್ಸಿಗೆ ತಕ್ಕ ಹಾಗೆ ಬದಲಾಗುವ ಭಾವನೆಗಳ ಬಗ್ಗೆ ಹೇಳಲು ನನಗಿನ್ನೂ ಅನುಭವ ಸಾಲದು,ಆದರೆ ಕಥೆ ನನ್ನನ್ನು ಓದಿಸಿಕೊಂಡು(ಓಡಿಸಿಕೊಂಡೂ) ಹೋಯ್ತು...ಕೊನೆಯಲ್ಲಿ ಆತನ ವ್ರತ್ತಿ ಬದುಕಿನಲ್ಲಿ ಆಗುವ ತಿರುವನ್ನೋ ಅಥವಾ ಪ್ರೇಮಾಂಕುರವನ್ನೋ ಅಥವಾ ಆತ ಯಾರಿಗೂ ಕಾಣದಂತೆ ಮಾಯವಾಗುವುದನ್ನೋ ನಿರೀಕ್ಷಿಸಿದ್ದೆ..ಆದರೆ ಅದಕ್ಕಿಂತ ಹೊಸದಾದ ಅಂತ್ಯವನ್ನು ನೀಡಿದ್ದೀರಿ,ಕೊನೆಯ ಭಾಗ ಇಷ್ಟವಾಯ್ತು...

    ಧನ್ಯವಾದ...
    ನಮಸ್ತೆ.

    ReplyDelete
    Replies
    1. ನಮಸ್ತೆ , ಧನ್ಯವಾದಗಳು ಚಿನ್ಮಯ್.
      ಕಥೆ ಇನ್ನೂ ಕೊನೆಯಾಗಿಲ್ಲ
      ನೀವಿದನ್ನ ಕೊನೆ ಎಂದರೂ ಪರವಾಗಿಲ್ಲ :)
      ಸ್ವರ್ಣಾ

      Delete
  4. ಅಯ್ಯೋ ಹೌದಾ...ಸರಿ ಸರಿ.. ಮುಂದಿನ ಭಾಗಕ್ಕಾಗಿ ಕಾಯುತ್ತಿರುತ್ತೇನೆ...ಅರ್ಧಕ್ಕೆ ಎಚ್ಚರವಾದ ಕನಸನ್ನು ಮತ್ತೆ ನೆನಪಿಸಿಕೊಂಡು ಮುಂದಿನ ಭಾಗಕ್ಕೆ ಕಾಯುವಂತೆ...

    ReplyDelete