ಚಿತ್ರ ಕೃಪೆ : ಅಂತರ್ಜಾಲ
ಈ ಬರಹ ಬರೆದು ಸುಮಾರು ೨-೩ ತಿಂಗಳಾಯಿತು . ಮಧ್ಯೆ ಭೂರಮೆಯ ಸುಮಾ ಮೇಡಂ ಕೂಡ ಗುಬ್ಬಿಗಳ ಬಗ್ಗೆ
ಚಂದಗೆ ಬರೆದರು. ಎಷ್ಟೋ ಸಲ ಬರೆದದ್ದು ಹಾಗೆ ಬಿಟ್ಟು, ಕೆಲ ದಿನಗಳ ನಂತರ ಅದು ಸರಿಯಿಲ್ಲ ಅಂತ ಪಬ್ಲಿಶ್ ಮಾಡದೆ ಅಳಿಸಿದ್ದು ಇದೆ. ಯಾಕೋ, ಇದನ್ನ ಅಳಿಸುವ ಮೊದಲು ಪಬ್ಲಿಶ್ ಮಾಡುವ ಅಂತ ಮಾಡಿದ್ದೇನೆ.
ಬಿರು ಬೇಸಿಗೆಯಲ್ಲಿ, ಗುಬ್ಬಕ್ಕ ಕಂಗಾಲಾಗಿದಾಳೆ. ಮನೆಯ ಮೂರು ಬಾಲ್ಕನಿಗಳಲ್ಲಿ
ನೀರು, ತರಕಾರಿ, ಕಾಳುಗಳನಿತ್ತರೂ ಅವಳು ಬರುತ್ತಿದ್ದದ್ದು ಮಾತ್ರ ಬಚ್ಚಲ ಕಿಟಕಿಗೆ, ಅದೂ ನಾವಾರೂ ಇಲ್ಲದ ಹೊತ್ತಲ್ಲಿ. ನೆನ್ನೆ ಗೊಬ್ಬರ ಮಾಡಲು ಒಂದಷ್ಟು , ಮರದ ಚೂರು ತಂದಿದ್ವಿ (Saw dust ಥರದ್ದು), ಅದನ್ನ ಬಾಲಕನಿಯಲ್ಲಿಟ್ಟಿದ್ವಿ . ಬೆಳ್ಳಿಗ್ಗೆ ಗುಬ್ಬಕ್ಕ ಅದನ್ನೆಲ್ಲಾ ಚೆಲ್ಲಾಡ್ತಿದ್ಲು. ಬಹುಶ ಗೂಡುಕಟ್ಟೋಕೆ ಅನ್ಸತ್ತೆ. ಈಗ ಆ ಮರದ ಚೂರಿನ ಜೊತೆ, ಒಂದಷ್ಟು ಪೊರಕೆ ಕಡ್ಡಿ, ತೆಂಗಿನ ನಾರು ಇಟ್ಟಿದ್ದೇವೆ. ಅವಳ ಮನೆಯ ಕನಸು ನನಸಾಗಲಿ, ನಮಗವಳ ಚಿಲಿಪಿಲಿ ಕೇಳುತ್ತಿರಲಿ ಅಂತ. ಮನೆಯ ಸುತ್ತ ಇದ್ದ ಜಾಲಿ ಗಿಡ ಕಡಿಯುತ್ತಿದ್ದಾರೆ. ಅವಳು ಏನ್ಮಾಡ್ತಾಳೋ?
ನೆನ್ನೆ ಧರಿತ್ರಿ ಒಮ್ಮೆ ಸಣ್ಣಗೆ ಮೈ ಮುರಿದಳು. ನಿಮ್ಮ ಸೊಕ್ಕಡಗಿಸುವುದು ನನಗೆ ನಿಮಿಷ ಮಾತ್ರದ ಕೆಲಸ ಅಂದಂತ್ತಿತ್ತು.
ಅಕ್ಕಿ ಆರಿಸುವಾಗ ಅಜ್ಜಿ ಗುಬ್ಬಿಗೆಂದು ಅಂಗಳದಲ್ಲಿ ಒಂದಷ್ಟು ಭತ್ತ ಚೆಲ್ಲುತ್ತಿದ್ದಳು .
ಅಕ್ಕಿ ಕಟ್ಟುವಾಗ ಭತ್ತವನ್ನೂ ಸೇರಿಸಿ ಕಟ್ಟಿರುತ್ತಿದ್ದ ಅಂಗಡಿಯ ಶೆಟ್ಟಿ.
ಇಂದು ಸೂಪರ್ ಮಾರ್ಕೆಟ್ಟಿನ ಅಕ್ಕಿಯಲ್ಲಿ ಭತ್ತ ವಿಲ್ಲ.
ನಾನು ಗುಬ್ಬಿಗೆಂದೇ ಅದೇ ಮಾರ್ಕೆಟ್ಟಿನಲ್ಲಿ ರಾಗಿ ತಂದು,
ಅಪಾರ್ಟ್ಮೆಂಟಿನ ಬಚ್ಚಲ ಕಿಟಕಿಯಲ್ಲಿ ಹಾಕುತ್ತೇನೆ.
ಅಜ್ಜಿ ಭತ್ತ ಚೆಲ್ಲಿ ಮುಂದಿನ ಕೆಲಸಕ್ಕೆ ಹೋಗುತ್ತಿದ್ದಳು.
ಗುಬ್ಬಿ ಬಂತಾ? ತಿಂತಾ? ಅಂತ ನೋಡುವ ಪುರುಸುತ್ತೆಲ್ಲಿ?
ಬರುತ್ತೆ ತಿನ್ನುತ್ತೆ ಅನ್ನುವ ವಿಶ್ವಾಸವೂ ಇರಬಹುದು.
ಇಂದು ನಾನು ಆಗಾಗ ಕಿಟಕಿ ತೆಗೆದು ನೋಡುತ್ತೇನೆ,
ತಿಂತಾ ಇಲ್ಲವ? ಗುಬ್ಬಿ ಇಲ್ಲಿಂದಲೂ ಹೋಗಿ ಬಿಟ್ಟರೆ?
ಭತ್ತ ಏಕೆ ಹಾಕುತ್ತಿದೇನೆ ಎಂಬ ಯೋಚನೆ, ಅಜ್ಜಿಯ ಬಳಿಗೂ ಸುಳಿದಿರಲಾರದು.
"ಅಕ್ಕಿಯಲ್ಲಿ ಭತ್ತವಿದೆ, ಆರಿಸಬೇಕು, ಅಂಗಳದಲ್ಲಿ ಚೆಲ್ಲಿದರೆ ಗುಬ್ಬಿ ಬಂದು ತಿನ್ನುತ್ತೆ,
ತಿನ್ನಲಿ ಬಿಡು, ಮೊಮ್ಮಕ್ಕಳು ಗುಬ್ಬಿ ನೋಡಿ ಖುಷಿ ಪಡುತ್ವೆ.
ಹೊನ್ನು ತಾ ಗುಬ್ಬಿ, ಹೊನ್ನು ತಾ ಅಂತ ಹಾಡ ಬಹುದು"
ಈ ತರಹ ಇದ್ದಿರಬಹುದೇ ಅಜ್ಜಿಯ ಯೋಚನಾ ಸರಣಿ ?
ಈಗ , ನಾನಂದುಕೊಳ್ಳುತ್ತೇನೆ, ರಾಗಿ ಹಾಕಿ
ಗುಬ್ಬಿಯ ಸೋಮಾರಿ ಮಾಡುತ್ತಿದ್ದೇನೆಯೇ? ಆಹಾರ ಹುಡುಕುವ ರೀತಿ ಅದಕ್ಕೆ ಮರೆತು ಹೋದರೆ?
ಇಲ್ಲಿದ್ದ ಮರಗಳ ಕಡಿದು ಅದೆಷ್ಟೋ ಗುಬ್ಬಿ ಸಂಸಾರಗಳ ಬೀದಿ ಪಾಲು ಮಾಡಿದ್ದಕ್ಕೆ,
ಈ ರಾಗಿ ಪ್ರಾಯಶ್ಚಿತ್ತವೇ? ಗುಬ್ಬಿಗೆ ನಾ ಬದುಕಲು ಸಹಾಯ ಮಾಡುತ್ತಿದ್ದೇನೆಯೇ ?
ನಾ ರಾಗಿ ಹಾಕದಿದ್ದರೆ ಗುಬ್ಬಿ ಬದುಕುತ್ಯೇ?
ಅಜ್ಜಿಯ ಬದುಕು ಸುಲಭವಿತ್ತು !
ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇಂಥ ಸಾಲುಗಳ ಬಗ್ಗೆ ಎಷ್ಟೋ ಪಂಡಿತರಿಗೆ ಆಕ್ರೋಶವಿದೆ. ಎಷ್ಟು ಪ್ರಯತ್ನ ಪಟ್ಟರೂ
ಇದನ್ನ ಚೌಕಟ್ಟಿನಲ್ಲಿಡಲು ಸಾಧ್ಯವಾಗಲಿಲ್ಲ.
P.S. : ಒಂದೆರಡು ದಿನ ಗುಬ್ಬಕ್ಕ ರಾಗಿ ತಿನ್ನಲು ಬರಲೇ ಇಲ್ಲ. ಗಳಿಗ್ಗೊಮ್ಮೆ ಬಚ್ಚಲ ಕಿಟಕಿ ತೆಗೆಯೋದು,
ಜಾಲಿ ಕಡಿದೊರನ್ನ ಶಪಿಸೋದು ಮಾಡ್ತಾ ಇದ್ದೆ. ಮಾರನೆ ದಿನ ನಾನು ಮಗನಿಗೆ ಸ್ನಾನ ಮಾಡಿಸುವಾಗ ಬಂದೆ ಬಿಟ್ಟರು
ನಮ್ಮ ಅತಿಥಿಗಳು. ಆಮೇಲೇ ಕಿಟಕಿ ತೆಗೆದು ನೋಡಿದರೆ ಅಲ್ಲಿ ಅಕ್ಕಿ ಇತ್ತು , ಪ್ರಾಣಿ ಪಕ್ಷಿಗಳ ಮನವನ್ನ ತಿಳಿದ ಪತಿ ಅಲ್ಲಿ ಅಕ್ಕಿ ಹಾಕಿದ್ದರು. ನಾನು ಕೇಳಿದಾಗ ಅವಕ್ಕೆ ಈಗ ರಾಗಿ ರುಚಿಸ್ತಿಲ್ಲ ಅನ್ನಿಸ್ತು ಅದ್ಕೆ ಅಕ್ಕಿ ಹಾಕ್ದೆ ಅಂದ್ರು. ಅಬ್ಬ ಗುಬ್ಬಿ !


ಸ್ವರ್ಣಾ ಮೇಡಮ್,
ReplyDeleteಓದೋಕೆ ತುಂಬಾ ಖುಶಿಯಾಯ್ತು. ಖುಶಿ ಆಗೋ ಹಾಗೇ ಬರೆದಿದ್ದೀರಿ. ಇದನ್ನು ಗದ್ಯವೂ ಅಲ್ಲ, ಪದ್ಯವೂ ಅಲ್ಲ ಅಂತ ಹೇಳ್ತಿದ್ದೀರಿ. ಹಾಗಾದರೆ ಇದಕ್ಕೆ ‘ಚಂಪೂ ಕಾವ್ಯ’ ಅಂತ ಕರೆಯಬಹುದಲ್ಲವೆ!
ಧನ್ಯವಾದಗಳು.
ReplyDeleteಒಂದು ಒಪ್ಪಂದಕ್ಕೆ ಬರೋಣ ಗುರುಗಳೇ,
ನಾನು ಸರ್ ಅನ್ನಲ್ಲ ನೀವು ಮೇಡಂ ಅನ್ಬೇಡಿ :)
ನಿಮ್ ಹತ್ರ ಮೇಡಂ ಅನ್ಸ್ಕೊಳೋದು ತುಂಬಾ ಮುಜುಗರ :(
ಸ್ವರ್ಣಾ
ಗುಬ್ಬಚ್ಚಿ ಮತ್ತು ನನ್ನ ಗತ ಬದುಕಿಗೂ ಬಹಲ ಸಂಬಂಧಗಳಿವೆ. ನಾನು ಆಗ ಸಣ್ಣಗಿದ್ದೆ, ಚಿಕ್ಕವನಾಗಿದ್ದೆ ಮತ್ತು ನನ್ನ ಬ್ಯಾಚುಲರ್ ರೂಂ ಸಹ ಪುಟ್ಟದಿತ್ತು. ಅದಕ್ಕೆ ಅದನ್ನು "ಗುಬ್ಬಚ್ಚಿ ಗೂಡು" ಅಂತ ಹೆಸರಿಟ್ಟಿದ್ದೆ.
ReplyDeleteನಿಮ್ಮ ಕವನದಲ್ಲಿ ಹಳ್ಳಿ ಮತ್ತು ನಗರವನ್ನು ಸಮಾನವಾಗಿ ಚಿತ್ರಿಸಿಕೊಟ್ಟಿದ್ದೀರ.
ಭತ್ತ ಮತ್ತು ರಾಗಿಗಳ ನಡುವೆ ಅಜ್ಜಿ ಮತ್ತು ನಿಮ್ಮ ಯೋಚನಾ ಲಹರಿ ತಂದದ್ದು ಚೆನ್ನಾಗಿದೆ.
ನಿಮ್ಮ ಪತಿ ರಾಯರೂ ಬಹುಶಃ ಹಳ್ಳೀಯವರೇ ಅದಕ್ಕೆಏ ಹಕ್ಕಿಗಳ ಗುಣ ಬಲ್ಲವರು.
ಯಾರ್ರೀ ಇದನ್ನು ಪದ್ಯ ಅಲ್ಲ ಅಂದದ್ದು?
ಧನ್ಯವಾದಗಳು ಸರ್.
ReplyDeleteಹೌದು ಸಣ್ಣ ಮನೆಗಳನ್ನ ಗುಬ್ಬಿ ಗೂಡು ಅನ್ನುತ್ತಿದ್ದರು.
:) ಪದ್ಯ ಅಲ್ಲ ಅಂತ ಯಾರೂ ಹೇಳಿಲ್ಲ ಸರ್, ನಂಗೆ ಅನ್ನಿಸ್ತು.
ನಂಗೆ ಪದ್ಯ, ಛಂದಸ್ಸು ಇವು ಗೊತ್ತಿಲ್ಲ ಸರ್. ಕಲಿಬೇಕು
ಸ್ವರ್ಣಾ