Thursday, April 19, 2012

ಮುಸ್ಸಂಜೆ ಮಾತು

ಗಾಣಕ್ಕೆ  ಕಟ್ಟಿದ ಎತ್ತಿಗೆ ಸುತ್ತುವುದಷ್ಟೇ ಗೊತ್ತು
ಆ ದಿನಗಳಲ್ಲಿ ಪ್ರೇಮಾಲಾಪ ಮಾಡುವಷ್ಟು ಪುರುಸೊತ್ತು ಯಾರಿಗಿತ್ತು?

ಅಂಚು ತೀಡಿ , ಪಂಚೆ ಉಟ್ಟು, ಪೇಟ ಕಟ್ಟಿದಾಗ ನೋಡಬೇಕು ನಿನ್ನ ಗತ್ತು
ನಿನ್ನ ಕೈಯ್ಯ ರೊಟ್ಟಿ, ಬಜ್ಜಿಯಲ್ಲಿದೆ ಇಂದಿಗೂ ಅದೇ ಗಮ್ಮತ್ತು

ಮಗ ಹುಟ್ಟಿದನೆಂದು ಅದೆಷ್ಟು ಬೀಗಿದ್ದೆ ನೀನು?
ಮಗಳಾದಾಗಲೂ ನಾ ಕುಣಿದಿದ್ದಿಲ್ಲವೇನು?

ಅವರ ಬಾಲ್ಯ, ಕನಸುಗಳಲಿ ಕಳೆದು ಹೋದೆ ನಾನು
ಇರಲಿ ಬಿಡು ನೀ 'ತಾಯಿ'ಯಲ್ಲವೇನು ?

ಮಗಳ ಮನೆ ತುಂಬಿಸಿ ಕೊಟ್ಟಾಗ ಅದೆಷ್ಟು ಅತ್ತಿದ್ದೆ ನೀನು
ನಿನ್ನ ಕಂಬನಿ ನಂಗೆ ಕಾಣಲಿಲ್ಲ ಅಂದುಕೊಂಡೆ ಏನು ?

ಮಗನಿಗೊಂದು ಜೊತೆ ಮಾಡಿದಾಗ ಅದೆಷ್ಟು ಸಂತಸ?
ಮೊಮ್ಮಗನಲ್ಲಿ ನನ್ನಪ್ಪನ ಕಂಡದ್ದು  ಕನಸ ?

ಎಷ್ಟು ನೆನಪು, ಎಷ್ಟು ನಗು, ಅದೆಷ್ಟು ಅಳು ನಮ್ಮ ಬಾಳ ಪಥದಲಿ
ಎಷ್ಟು ದಾಟಿ , ಎಷ್ಟು ದೂರ ಬಂದೆವು ನಾವು ಒಂದೇ ರಥದಲಿ

ಬೇಡುವುದ ಬಿಟ್ಟು ಬಹುಕಾಲವಾಯ್ತು ಶಿವನಲಿ
ನಮ್ಮ ಎಲ್ಲ ಆಸೆಗಳ ದಿವ್ಯ ಹೋಮವಾಗಲಿ

ಸಾಗೋಣ ಇನ್ನು ಆ ಪಶುಪತಿ ಎಡೆಗೆ
ಶರಣ ಸತಿ ಲಿಂಗಪತಿಯ ನಿಜ ಮಾಡುವೆಡೆಗೆ

ಇತ್ತೀಚಿಗೆ ಸುನಾಥ್ ಸರ್ ಬರೆದ ‘ಫಜಾರಗಟ್ಟಿ ಮುಟ್ಟೋಣು ಬಾ’ ದಿಂದ  ಮೂಡಿದ್ದೇ ಇದು ? ಗೊತ್ತಿಲ್ಲ.
ಪ್ರಾಸದ ಹಂಗಿಗೆ ಬಿದ್ದು ಭಾವ ಕಡಿಮೆಯಾಯ್ತಾ? ಗೊತ್ತಿಲ್ಲ.

5 comments:

  1. ಒಳ್ಳೆಯ ಕವನ ಎನ್ನುವುದಕ್ಕಿಂತಲೂ ಇದು ಜೀವ ಗಾಥೆ! ಅದೆಷ್ಟು ಭಾವನೆಗಳ ಪೂಸಿ ಅಕ್ಷರ ಕೊಡುತ್ತೀರಿ ಮೇಡಂ. ತಲೆಮಾರುಗಳ ಜೀವ ಸಂಕ್ರಮಣ, ಕನಸುಗಳು, ಮನೋಭಿಲಾಷೆಗಳು ಉತ್ತಮವಾಗಿ ಪಡಿಮೂಡಿವೆ.

    ಫಜಾರಗಟ್ಟಿ ಮುಟ್ಟೋಣು ಬಾ - ಬೇಂದ್ರೆ ಅಜ್ಜನ ಅತ್ಯುತ್ತಮ ಕಾವ್ಯ ಸೃಷ್ಟಿ. ಸುನಾಥ ಸಾರ್ ಅವರು ಅಮೋಘವಾಗಿ ಅವರ ಬ್ಲಾಗಿನಲ್ಲೂ ವಿವರಿಸಿದ್ದಾರೆ.

    ReplyDelete
  2. ಸ್ವರ್ಣಾ,
    ದಾಂಪತ್ಯದರ್ಶನ ಮಾಡಿಸಿದ್ದೀರಿ. ತುಂಬ ಒಳ್ಳೆಯ ಕವನ. ಬೇಂದ್ರೆಯವರ ಕವನದಿಂದ ನಿಮ್ಮ ಕವನಕ್ಕೆ ಪ್ರೇರೇಪಣೆ ಸಿಕ್ಕಿದ್ದರೆ ಒಳ್ಳೆಯದೇ ಆಯಿತು. In fact ಬೇಂದ್ರೆಯವರ ಅನೇಕ ಕವನಗಳಲ್ಲಿ ವಿವಿಧ ಕವಿಗಳ ಪ್ರಭಾವವನ್ನು ಗುರುತಿಸಬಹುದು. ಇದು ಸಹಜ ಕ್ರಿಯೆ.

    ReplyDelete
  3. ಧನ್ಯವಾದಗಳು ಗುರುಗಳೇ.

    ReplyDelete
  4. ಪ್ರಾಸದಷ್ಟೇ ಭಾವವೂ ಗಟ್ಟಿಯಾಗಿದೆ - ಸ್ಪುಟವಾಗಿದೆ
    ಸಕತ್ ಕವಿತೆ... :)

    ReplyDelete
  5. ಧನ್ಯವಾದಗಳು ಹೆಗಡೆಯವರಿಗೆ

    ReplyDelete