Thursday, June 07, 2012

ನಾನಾರು - ಅಂಟಿದ ನಂಟಿನ ಕೊನೆ

"ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ?"
ಇದು ಬೇಂದ್ರೆಯವರ ಕವಿತೆಯ ಒಂದು ಸಾಲು. ಯಾವ ಕವಿತೆ , ಯಾವ ಸಂಕಲನ
ನನಗೆ ಗೊತ್ತಿಲ್ಲ.ಆದರೆ ಈ ಸಾಲು ಅದೇಕೋ ನನಗೆ ಯಾವಾಗಲೂ ನೆನಪಿರುತಿತ್ತು.
ಇತ್ತೀಚಿಗೆ ಬಹುವಾಗಿ ಕಾಡಿದ ಸಾಲು ಇದು.
ಮುಕ್ತನಾಗ ಬಯುಸುವವಗೆ ನಂಟು ಅಂಟೇ.  ತಾವರೆ ಎಲೆಯ ಮೇಲಿನ ಬಿಂದು ತರಹ
ಇದ್ದು ಅಂಟಿಕೊಳ್ಳ ಬಾರದೆಂಬುದು ಅಧ್ಯಾತ್ಮ ಲೋಕದ ಬಹು ಪ್ರಚಲಿತ ಉಪಮೆಯ.
ಇಂಥ  ಅಂಟಿದ ನಂಟಿನ ಕೊನೆ ಕೆಲವೊಮ್ಮೆ ಸಾವೂ ಆಗಲಾರದು (ಪುನರ್ಜನ್ಮ ಇಲ್ಲವೆಂದು ಅಂದುಕೊಂಡರೂ,
ಎಷ್ಟೋ ಬಾರಿ ವ್ಯಕ್ತಿ ಮರಣಿಸಿದಾಗಲೂ ಅವನ ನೆನಪು ಸದಾ ಜೀವಂತ. ಆದ್ದರಿಂದ ನಂಟಿನ  ಕೊನೆ ಸಾವಾಗಲಾರದು )
ಹಾಗಾದರೆ ಆ ಕೊನೆ ಯಾವುದು ?

ಮಹಾಭಾರತದಲ್ಲಿ ಒಮ್ಮೆ  ಚರ್ಚೆ ನಡೆಯುತ್ತಿತ್ತಂತೆ, ಧರ್ಮ, ಅರ್ಥ ಮತ್ತು ಕಾಮದಲ್ಲಿ ಯಾವುದು ಪ್ರಮುಖ ಅಂತ.
ಧರ್ಮಜನ ಅಭಿಪ್ರಾಯದಲ್ಲಿ ಧರ್ಮ ದೊಡ್ಡದು. ಧರ್ಮವಿದ್ದರೆ ಅರ್ಥ ಮತ್ತು ಕಾಮ . ಅರ್ಜುನನೆನ್ನುತ್ತಾನೆ ಅರ್ಥ(ಹಣ ) ದೊಡ್ಡದು,ಅರ್ಥ ವಿರದಿದ್ದರೆ ಧರ್ಮಾಚರಣೆಯೂ ಆಗದು ಎಂದು.  ಭೀಮ ಹೇಳುತ್ತಾನೆ ಈ ವಿಶ್ವದಲ್ಲಿ ಎಲ್ಲದಕ್ಕೂ ಮೂಲ  ಕಾಮ.ಕಾಮವೆಂದರೆ  ಯಾವುದೇ ವಸ್ತುವಿನ ಮೇಲಿನ ಆಸೆಯೂ ಆಗ ಬಹುದು. ವಿರಕ್ತನಾಗಿ ಹೊರಟವನಿಗೂ ಮುಕ್ತಿಯ ಆಸೆಯಾದರೂ ಇರುತ್ತದೆ.ಕಾಮ ಕೊನೆಯಾದಂದೆ ಜೀವದ ಕೊನೆ.ಅದಕೆ ಕೃಷ್ಣನೆಂದನಂತೆ ಭೀಮನೇ ಸರಿ.
ಇದನ್ನ ನಾನು ಕೇಳಿದ್ದು ಬನ್ನಂಜೆಯವರ ಒಂದು ಪ್ರವಚನದಲ್ಲಿ.

ಮೇಲಿನ ಸಾಲಲ್ಲಿ, ಕವಿ ಮೀನಾಕ್ಷಿ ಅನ್ನ ಬಹುದಿತ್ತು ಅಥವಾ ಇನ್ನಾವುದೇ ಹೆಣ್ಣಿನ ಹೆಸರು ಬಳಸಬಹುದಿತ್ತು .
ಕಾಮದ ಕಣ್ಣಿನ ಕೊನೆಯೇ ನಮ್ಮಿಬ್ಬರ ಅಂಟಿದ ನಂಟಿನ ಕೊನೆ, ಅದರಿಂದಾಚಾಗಿನ ನಂಟು ಅಂಟಲ್ಲ , ಅಂತ ಕಾಮಾಕ್ಷಿ
ಅಂದಿರಬಹುದೇ ?
ಒಂದು ಸಾಲಲ್ಲ್ಲಿ ಎಷ್ಟೆಲ್ಲಾ ಹೇಳಿದ ಅಜ್ಜನಿಗೆ ಶರಣು

ಇದು ಈ ಸಾಲಿಗೆ ನಾನು ತಿಳಿದುಕೊಂಡ ಅರ್ಥ ಮಾತ್ರ. ತಪ್ಪಿದ್ದಲ್ಲಿ ಕ್ಷಮಿಸಿ.

ನನ್ನ ಅಕ್ಷರಗಳು ನಾನಲ್ಲ
ಅವು ಭಾವವನ್ನ ಪದಗಳಲ್ಲಿಡಲು, ಭಾಷೆಯ ಸೂತ್ರಗಳು ಮಾತ್ರ

ನನ್ನ ಸಿಟ್ಟು ನಾನಲ್ಲ
ಅದು ಆಕ್ಷಣದ ಅಸಹಾಯಕತೆಯ ಮುಚ್ಚಿಡಲು, ನಾ ಮಾಡಿದ ಪ್ರಯತ್ನ ಮಾತ್ರ

ನನ್ನ ಕಣ್ಣೀರು ನಾನಲ್ಲ,
ಅದು ದೇಹ ನೋವ ಮರೆಯಲು ಮಾಡಿದ ಪ್ರಯತ್ನ ಮಾತ್ರ

ನನ್ನ ಸಂಬಧಗಳು ನಾನಲ್ಲ,
ಅವು ಅದಾವುದೋ ಜನ್ಮದ ಋಣ ಶೇಷಗಳು ಮಾತ್ರ 

ನನ್ನ ದೇಹ ನಾನಲ್ಲ
ಅದು ಆತ್ಮವೊಂದು ಈ ಭುವಿಯ ಮೇಲಿರಲು, ಆಯ್ದುಕೊಂಡ ಧಿರಿಸು ಮಾತ್ರ.

ಹಾಗಾದರೆ ನಾನಾರು?
ಒಂದು ಚೈತನ್ಯ,
ಪ್ರಶ್ನೆ ಕೇಳಲ್ಲ,
ಉತ್ತರ ಕೊಡಲ್ಲ,
ಭಾವದ ಹಂಗಿಲ್ಲ,
ನೇಹದ ನೆನಹಿಲ್ಲ,
ಸ್ಥಾವರದಲ್ಲಿರುವ ಜಂಗಮ,
ಜಂಗಮದಲ್ಲಿನ ಸ್ಥಾವರ.


9 comments:

  1. Beautiful!
    ಸ್ವರ್ಣಾ, ಬೇಂದ್ರೆಯವರ ‘ಸಖೀಗೀತ’ ಖಂಡಕಾವ್ಯದಲ್ಲಿ ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು, ಕಾಮಾಕ್ಷಿಯೆ?’ ಎನ್ನುವ ಸಾಲು repeated ಆಗಿ ಬರುತ್ತದೆ. ಗಂಡು ಹೆಣ್ಣಿನ ದಾಂಪತ್ಯದಲ್ಲಿ ಧರ್ಮ,ಅರ್ಥ ಹಾಗು ಕಾಮಗಳು ಮುಖ್ಯವಾದ ಸಾಧನೆಗಳು. ನೀವು ಅರ್ಥವಿಸಿದಂತೆ, ‘ಕಾಮಾಕ್ಷಿ’ ಸಂಬೋಧನೆಯನ್ನು ಆ ಕಾರಣಕ್ಕಾಗಿಯೇ ಬಳಸಲಾಗಿದೆ. ಕೊನೆಯಲ್ಲಿ ನೀವು ಬರೆದ, ‘ನಾನು...ಅಲ್ಲ!’ ತುಂಬ ಚೆನ್ನಾಗಿದೆ.

    ReplyDelete
  2. ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ಕಾಕಾ

    ReplyDelete
  3. ತುಂಬಾ ಚಂದದ ಬರಹ ಸ್ವರ್ಣಾ. ಇಷ್ಟವಾಯ್ತು.

    ReplyDelete
  4. ಧನ್ಯವಾದಗಳು ಉಮಾ ಮೇಡಂ.

    ReplyDelete
  5. ಬೇಂದ್ರೆ ಅಜ್ಜನಿಂದ ಮಹಾಭಾರತಕ್ಕೆ ಬಂದು ಕಡೆಯಲ್ಲಿ ನಿಮ್ಮದೇ ಕವನದ ಉಪಸಂಹಾರ ಅಮೋಘ.

    ನಾನು ನಾನಲ್ಲ ಎನ್ನುವುದು ನನಗೇಕೋ ಒಪ್ಪಲಿಲ್ಲ!!!!

    ಇದು ಸಂಗ್ರಹ ಯೋಗ್ಯ ಬರಹ.

    ReplyDelete
  6. ಸು೦ದರವಾಗಿ ಬರೆದಿದ್ದೀರಿ ಸ್ವರ್ಣಾ ಅವರೆ..

    ವ೦ದನೆಗಳು.

    ReplyDelete
  7. ಧನ್ಯವಾದಗಳು ವಿಜಯಶ್ರೀ ಮೇಡಂ. ಇಲ್ಲಿಗೆ ಸ್ವಾಗತ.
    ಬದರಿ ಸರ್ ಧನ್ಯವಾದಗಳು. ಲೋಕೋ ಭಿನ್ನ ವಿಚಾರಃ :)
    ಅನ್ನಬಹುದೇನೋ?
    ಸ್ವರ್ಣಾ

    ReplyDelete
  8. ಚೆಂದ ಬರೆದ್ದಿದ್ದೀರಾ ಸ್ವರ್ಣ ಅವರೆ...... ಇಷ್ಟ ಆಯ್ತು

    ReplyDelete
  9. ಧನ್ಯವಾದಗಳು ಸೌಮ್ಯ ಅವರೆ
    ಇಲ್ಲಿಗೆ ಸ್ವಾಗತ

    ReplyDelete