ಬಹಳ ಜನರಿಗೆ ಸಂಜೆಯ ಸಮಯವೆಂದರೆ ಸಂತಸ ಅರಳುವ ಸಮಯ ನೆನಪ ಮಾಲೆ ಧರಿಸುವ ಸಮಯ. ನಮ್ ಕಡೆ "ಮುರಾ ಸಂಜಿ " ಅಂತಾರೆ. ಬಹುಶಃ ಮೂರು ಹೊತ್ತುಗಳ ಮಿಲನದ ಹೊತ್ತು ಅಂತ ಇರಬಹದು.
ಆದ್ರೆ ನನಗೆ ಮಾತ್ರ ಬೆಳಗಿನ ತಿಂಡಿ ಆದ್ಮೆಲಿನ್ ಹೊತ್ತು ತುಂಬಾ ಇಷ್ಟ. ಮುಂಜಾವು ಮತ್ತು ಮಧ್ಯಾಹ್ನದ ಮಧ್ಯದ ಸಮಯ ಒಂದ್ಹನ್ನೊಂದ ಘಂಟೆ ಸುಮಾರಿಗೆ ತಿಂಡಿ ಆಗಿ, ಒಂದ್ ರೌಂಡ್ ಛಾ ಆಗಿ ಸುಮ್ಮನೆ ಹಾಗೆ ಒಂದ್ ಕಡೆ ನಿಂತ್ರೆ, ಕುಂತ್ರೂ ಅಡ್ಡಿ ಇಲ್ಲ. ಭೂಮಿಯ ಮೇಲಿನ ಅಷ್ಟೂ ವ್ಹಿಚಿತ್ರ ಶಬ್ಧಗಳನ್ನೂ ಕೇಳಬಹುದು. ತಿಂಡಿ ತಿಂದ ತಟ್ಟೆ ತೊಳೆಯೋ ಶಬ್ಧ, ತೊಳೆಯುತ್ತಿರುವವಳು ಕೆಲಸದವಳಾದರೆ ಅವಳೊಂದಿಗೆ ಅತ್ತೆ ಮ್ಮನ ಕುಶಲೋಪರಿ.
"ಏನು ಇವತ್ತು ಲೇಟು?"
"ಆ ಅಕ್ಕ ಇದ್ದಾರಲ್ಲಮ್ಮ, ಪಾತ್ರೆ ಜಾಸ್ತಿ ಹಾಕ್ಬಿಟ್ಟಿದ್ರು"
"ಹಾಲಿನ್ ಪಾತ್ರೇನ ಚೆನ್ನಾಗ್ ತೊಳಿ"
"ತೊಳಿತಿನಲ್ಲಮ್ಮ, ನಾಳೆ ನಮ್ಮೂರಿನ ಕರಗ, ನಾನು ಬರಲ್ಲ "
ಹತ್ತಾರು ಹಳ್ಳಿ ಸೇರಿ ಒಂದು ಬೆಂಗಳೂರಾಗಿ , ಅವಳ ಹಳ್ಳಿ ಅಲ್ಲಿನ ಒಂದು ಕಾಲೋನಿಯಾದರೂ, ಅವಳಿಗೆ ಇನ್ನೂ ಅವಳ ಹಳ್ಳಿಯೇ ಊರು.
"ಹಿಂದಿನ ತಿಂಗಳು ಹೋಗಿದ್ದೆ ಅಲ್ಲ, ತಿಂಗ್ಳ ತಿಂಗ್ಳ ಕರಗ ಮಾಡ್ತಾರ ನಿಮ್ಮೂರಲ್ಲಿ?"
"ಅದು ನಮ್ ಗಂಡನ್ ಮನೆದು, ಇದು ತಾಯಿ ಮನೆಕಡೇದು"
ಅತ್ತೆಯ ಸಹನೆಯ ಕಟ್ಟೆ ಒಡೆದು, ಸಂಭಾಷಣೆ ಮಾವನೊಂದಿಗೆ ಅಥವಾ ನನ್ನೊಂದಿಗೆ ನಿಧಾನಕ್ಕೆ ಅವಳಿಗೆ ಕೇಳದ ಹಾಗೆ ಮುಂದುವರಿಯುತ್ತೆ , "ಎಷ್ಟು ಕೊಟ್ರೂ ತಪ್ಪಿಸೋದನ್ನ ಬಿಡಲ್ಲ ಇವಳು, ಮತ್ತೆ ಬರಲ್ಲಂತೆ ನಾಳೆ".
ಮಾನವ ಹಕ್ಕುಗಳ ಹೋರಾಟದ ವೇಷ ತೊಟ್ಟ ನಮ್ಮಿಂದ ಅತ್ತೆಗೆ ಯಾವ ಸಹಾನುಭೂತಿಯೂ ಸಿಗಲ್ಲ.
ಮುಂದಿನ ಶಬ್ದ ಕೆಲಸದವಳ ಬಳೆಗಳು ತಟ್ಟೆ ತೊಳೆಯುತ್ತಿರುವಾಗ ತಟ್ಟೆಗೆ ತಗುಲಿ ಮಾಡುವ ಶಬ್ದ .
ಈ ಶಬ್ಧ ನಂಗೆ ತುಂಬಾ ಕೋಪ ತರ್ಸತ್ತೆ .
ಸ್ವಲ್ಪ ಮರಗಿಡ ಇರೋ ಜಾಗದಲ್ಲಿ ಮನೆ ಇರೋವಷ್ಟು ಪುಣ್ಯ ಮಾಡಿದ್ದರೆ ಮರದ ಸಣ್ಣ ಸಣ್ಣ ಹಕ್ಕಿಗಳ ಕೂಗು.
ತಿಂಡಿ ಗಡದ್ದಾದ ದೋಸೆನೋ, ಪೂರಿನೋ , ಪಲಾವೋ ಆಗಿದ್ದರೆ ತಿಂದು ಹಾಗೇ ಸಣ್ಣ ಜೋಂಪಿಗೆಂದು ಮಲಗಿದ ಮಾವ / ಅಪ್ಪನ ಗೊರಕೆ. ಕೆಲಸದವಳು ಬಂದು, "ಏಳಿ ಅಪ್ಪಾವ್ರೆ ಕಸ ಗುಡಿಸಬೇಕು" ಅಂದರೆ
"ಏ, ಸುಮ್ನೆ ಹಾಗೆ ಕಣ್ಣು ಮುಚ್ಚಿದ್ದೆ, ನಿದ್ದೆ ಮಾಡಿಲ್ಲ. " ಅಂಥ ಬೆಪ್ಪು ಬೆಪ್ಪಾಗಿ ನಿದ್ದೆ ಕಣ್ಣಲ್ಲೇ ಕೊಡೊ ಉತ್ತರ. ಅದೇನೋ ಕೂತಲ್ಲೇ ತೂಕಡಿಸಿದರೂ ವಯಸ್ಸಾದವರು ತಮಗೆ ನಿದ್ದೆ ಬಂದಿದೆ ಅಂತ ಒಪ್ಕೊಳೋಲ್ಲ.
ಪಕ್ಕದಲ್ಲಿ ಮನೆ ಇದ್ದರೆ, ಅವರಿಗೂ ನಮಗೂ ಒಂದೇ ಭಾಷೆ ಬರುತ್ತಿದ್ದರೆ, ಅವರು ಮಾತಾ ಡಿಸಿದರೆ ನಮಗೂ ಮಾತಾಡಿಸುವ ಬುಧ್ಧಿ ಶಿವ ಕೊಟ್ಟರೆ, ಅತ್ತೆಯೊಂದಿಗೆ ಇಂದಿನ ತಿಂಡಿಯ ಬಗ್ಗೆ ಪಕ್ಕದ ಮನೆ ಆಂಟಿಯ 'ಥಟ್ ಅಂತ ಹೇಳಿ '!
ಬಾಲ್ಕನಿ ಇಂದಲೇ ರೆಸಿಪಿ ವಿನಿಮಯ.
"ಇವತ್ತು ನಾವು ಮೆದು ದೋಸೆ ಮಾಡಿದ್ವಿ, ತುಂಬಾ ಚೆನ್ನಾಗ್ ಬಂತು. ನಿಮ್ಗೆ ಮಾಡಿಕೊಡಲಾ ಒಂದು ?"
ಅವರು ಹ್ಞೂ ಅನ್ನಲ್ಲ, ಇವರು ಮಾಡಲ್ಲ. ಎದ್ದೊಗೋ ಮಾತು ಬಿದ್ದೊಗ್ಲಿ ಅನ್ನೋ ಗಾದೆಯ ಕಾರ್ಯ ರೂಪ.
"ಪರ್ವಾಗಿಲ್ಲಾರಿ, ನಂದು ಇವತ್ತು ಪೊಂಗಲ್, ಜಾಸ್ತಿ ಆಗಿದೆ, ಎಷ್ಟು ಅಕ್ಕಿ ಹಾಕಿದ್ರಿ? ಯಾವ ಅಕ್ಕಿ? ನಾನಂತೂ ಈಗ ನಾನ್ ಸ್ಟಿಕ್ ತವಾ ಯುಸೇ ಮಾಡಲ್ಲಪ್ಪ, ನಮ್ಮ ಕಾವ್ಲಿಲೇದೋಸೆ ಚೆನ್ನಾಗ್ ಬರತ್ರಿ"
"ಹೌದೌದು,ನಮ್ಮ ಹಂಚೇ ನಮಗೆ ಸರಿ , ಅಕ್ಕಿ ಅಳತೆ ಎಲ್ಲ ಗೊತ್ತಿಲ್ಲ ರಿ, ಸೊಸೆ ಇಂಟರ್ನೆಟ್ನಲ್ಲಿ ನೋಡಿ ಮಾಡಿದ್ಲು. ಕೇಳ್ತೀನಿ "
ಅತ್ತೆಯ ಪ್ರಾಮಾಣಿಕ ನುಡಿ.
ಯಾರದೋ ಮನೆಯಿಂದ ಅದೆಂಥದೋ ಹಿಂದಿ ಹಾಡು . ಕನ್ನಡಾಂಬೆ, ಕ್ಷಮೆ ಇರಲಿ ತಾಯೆ, ನಿನ್ನುಲಿಗಳ ನಾ ಕೇಳಿಲ್ಲ!
ಇನ್ನೊಂದು ಮನೆಇಂದ ಗಂಡ ಹೆಂಡಿರವಾದ. ಬಟ್ಟೆ ಇದೆಯೇನಮ್ಮ ಅಂತ ಬರೋ ಧೋಬಿಯವರು ಕ್ಷಮಿಸಿ ಐರನ್ ಅಂಕಲ್, ಸಡನ್ನಾಗಿ ಇವತ್ತೇ ನಮ್ಮ ನೆನಪಾಗಿ ಫೋನ್ ಮಾಡೋ ಫ್ರೆಂಡ್ಸ್ ಅಂಡ್ ರಿಲೇಟಿವ್ಸ್. ಈ ಲಿಸ್ಟ್ನ ಕೊನೆ ನನಗಿನ್ನೂ ಸಿಕ್ಕಿಲ್ಲ.
ಈ ಸಮಯ ಮುಗಿಯೋದು ಸರಿ ಸುಮಾರು ಅಪರಾಹ್ನ ಕಾಲಕ್ಕೆ. ಕುಕ್ಕರ್ ಇಡಬೇಕೆಂಬ ನೆನಪು ಈ ಆಲಿಕೆಗೆ ಬ್ರೇಕ್ ಹಾಕಿ ಮತ್ತೆ ದಿನದ ಝಂಜಾಟಕ್ಕೆ ನೂಕುತ್ತೆ.
'ಕಾಲಾಯ ತಸ್ಮೈ ನಮಃ


ಬರಹ ಓದಿಸಿಕೊಂಡು ಹೋದರೆ, ತಿಂಡಿಯ ಚಿತ್ರಗಳು ನೀರೂರಿಸಿದವು.
ReplyDeleteಸ್ವರ್ಣಾ,
ReplyDeleteಭಾವಲಹರಿ ತುಂಬ ಚೆನ್ನಾಗಿದೆ. ‘ಈ ಸಮಯ ಆನಂದಮಯ’ ಎಂದು ಭಾಸವಾಯಿತು.
ಗ್ರಾಮೀಣ ಸೊಗಡಿನ್ನೂ ಬೆಂಗಳೂರನ್ನು ಕಬಳಿಸಿಲ್ಲ ಅದೇ ನೆಮ್ಮದಿ!
ReplyDeleteಈ ಸದ್ದುಗಳ ವಿಶ್ಲೇಷಣೆ ಮತ್ತು ಅದರ ಬಳಕೆ ಇಲ್ಲಿ ಸಾದೃಶ್ಯವಾಗಿ ಮೂಡಿ ಬಂದಿದೆ.
ಅಂದ ಹಾಗೆ ಈ ಭಾನುವಾರ ನಿಮ್ಮ ಮನೆಯಲ್ಲಿ ಏನಾದ್ರೂ ವಿಶೇಷ ಅಡುಗೆ ಮಾಡುವ ಇರಾದೆ ಇದ್ರೆ, ತಾವು ನನ್ನನ್ನು ಧಾರಾಳವಾಗಿ ಆಮಂತ್ರಿಸಬಹುದು!!! ಹಹಹ
ಬದರಿ ಸರ್, ನಾಗರಾಜ್ ಸರ್ ಮತ್ತು ಕಾಕಾ ತಮಗೆ ವಂದನೆಗಳು.
ReplyDelete@ಬದರಿ ಸರ್, ಧಾರಾಳವಾಗಿ :-)
ಸ್ವರ್ಣಾ ಮೇಡಂ,
ReplyDeleteಮಸಾಲೆ ದೋಸೆ ಚಿತ್ರ ನೋಡಿ ಅದರ ಬಗ್ಗೆ ಬರೆದಿದ್ದಿರೆನೋ ಅನ್ಕೊಂಡಿದ್ದೆ....ಸುಂದರ ಬರಹ....
ಧನ್ಯವಾದಗಳು ಸರ್
ReplyDelete