Wednesday, August 22, 2012

ಪ್ರಶ್ನೆಗಳ ಗೂಡು

ಆಕಾಶ ಮತ್ತು ಸಮುದ್ರ, ನದಿ, ಕೆರೆಗಳಿಗೆ  ಸಂತೋಷ ಮತ್ತು ದುಃಖ ಎರಡಕ್ಕೂ
ಸಲ್ಲುವ ಗುಣಗಳಿವೆ. ಅವನ ನಗೆಯನ್ನ ನೆನಪಿಸುತಿದ್ದ ಕೆರೆ , ಅದರ ಸುತ್ತಲಿನ ಹಸಿರು, ಅಲ್ಲಿ ಬರುವ ಗೋಪಾಲರು ,
ಬೆಳೆದಿದ್ದ ಥರಾವರಿ ಬೇಲಿಯ ಹೂಗಳು,  ಈಗ ಅವನ ಕಣ್ಣಲಿದ್ದ ನೋವೆಲ್ಲವನ್ನ ಬಚ್ಚಿಟ್ಟುಕೊಂಡಂತೆ ಕಾಣುತ್ತಿದ್ದವು.

ನಂತರದ ಅವನ ರಿಸಲ್ಟ್ಸ್  ನಂಗೆ ತಿಳಿಯಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ.
ಅವನ ಮನೆಯ  ಫೋನ್ ನಂಬರ್ ಹುಡುಕುವುದು ಕಷ್ಟವಲ್ಲ, ಆದರೆ ಯಾವ ಸಂಬಧದ ಎಳೆ ಹಿಡಿಯುವುದು ?
ವರ್ಷಕ್ಕೊ , ಆರು ತಿಂಗಳಿಗೋ ನಡೆವ ಮೂರ್ನಾಲ್ಕು ನಿಮಿಷಗಳ ಭೇಟಿಗೆ ಯಾವ ಹೆಸರನಿಡುವುದು?
ತನ್ನ ಸೋಲನ್ನ ಅವ ನನ್ನೊಂದಿಗೆ ಹಂಚಿಕೊಂಡಿದ್ದಾನೆ ಅಂದರೆ  ಕನಿಷ್ಠ ಫ್ರೆಂಡ್ ಅಂತನಾದ್ರೂ ಅಂದ್ಕೊಂಡಿರ್ಬೇಕು
ಅಂತ  ಒಮ್ಮೆ ಅನಿಸಿದರೆ ಮತ್ತೊಮ್ಮೆ ಇಲ್ಲೆಲ್ಲೋ ಹೋಗುತ್ತಿದವ ಬಂದ, ತಿಳಿದದ್ದು ಮಾತಾಡಿದ ಹೋದ , ಸೋತೆ ಅಂತ  ಹೇಳಿ ಹೊರಟೆ ಹೋದನಲ್ಲ ಸಂಬಧವಿದ್ದಿದ್ದರೆ  ಹಾಗೆ ಹೋಗುತ್ತಿದ್ದನೇ ? ಅಂತ ಪೂರ್ತಿ ವಿರುಧ್ಧ ದಿಕ್ಕಿನಲ್ಲಿ ಮನಸು ಓಡುತ್ತಿತ್ತು.
ಕನಸೊಂದು  ಈಡೇರದೆಂಬ ಸತ್ಯ ಬುಧ್ಧಿಗಿಂತಲೂ ಮೊದಲು  ಮನಸ್ಸಿಗೆ ತಿಳಿಯುತ್ತದೆ.
ಜೊತೆಗೇ ಬೆಳೆದ ಅವನು ಕನಸೇ?

ಕೆಲವೊಮ್ಮೆ  ಮನಸು  ಅತ್ತ ಸ್ನೇಹವಲ್ಲದ   ಇತ್ತ  ಪ್ರೇಮವಲ್ಲದ  ಒಂದು ನಡುವಿನ ಸಂಬಂಧವನ್ನ ಹುಡುಕುತಿರುತ್ತೆ .
ಹುಡುಗರಿಗೆ  ತಾಯಿ, ಅಕ್ಕ -ತಂಗಿ , ಗೆಳತಿ  ಎಲ್ಲವೂ ಆಗಬಲ್ಲ ಒಂದು ಬಂಧ ಆಪ್ತವಾಗತ್ತೆ.
ಅಂಥ ಒಂದು ಬಂಧವನ್ನ ಅವ ಅರಸಿದ್ದನೆ ?

ಪದವಿಗೆ ಬರುವ ಹೊತ್ತಿಗೆ  ಒಬ್ಬ ಸಂಗಾತಿ ಇರುವುದು ಅಪರೂಪವಲ್ಲದಿದ್ದರೂ ಸಾಮಾನ್ಯವೂ ಆಗಿರದ ಕಾಲವದು.  ಗೆಳತಿಯರು ಅವರ ಬಾಯ್ ಫ್ರೆಂಡ್ಗಳ ಬಗ್ಗೆ ಹೇಳಿದ್ದು ಕೇಳಿದಾಗ ನನಗೆ ಇವನ ನೆನಪಾಗುತ್ತಿರಲಿಲ್ಲ.
ಹಾಗಾದರೆ,  ಹೆಣ್ಣಾದ ನಾನು ಹುಡುಕಿದ್ದು ಏನನ್ನು ? ಯಾವ ಹೆಸರಲ್ಲವನ ಕೂಗಲಿ?
ದಂಡಿಸಿ ಯಶೋಧೆಯಾಗಲಾರೆ , ಸಾಧಿಸಿ ಭಾಮೆಯಾಗಲಾರೆ .
ಮೀರಾ, ರಾಧೆಯರು ಕಥೆಯಲ್ಲಿ ಮಾತ್ರ ಚೆನ್ನ.

"ಯಶೋದನು ಕಾನುರ ನಿನ್ನು  ದಂಡಿಂಚ
ಸತ್ಯನು  ಕಾನುರ  ನಿನ್ನು ಸಾದಿಂಚ
ಎವರು ನುವ್ವನಿ ನನ್ನು ಅಡಗಕು "



3 comments:

  1. ಎವರು ಕಾನನಿ ವಿಡಚಿ ವೆಳ್ಳಕು....


    ಯಾಕೋ ಈವತ್ತು ಏನೇನೋ ನೆನಪುಗಳತ್ತು ಮನಸ್ಸು ಜಾರಿತು!!!

    ReplyDelete
  2. ತರಳೆಯ ಮನದಲ್ಲಿ ನಿಧಾನವಾಗಿ ಹರಿದುಬರುತ್ತಿರುವ ಪ್ರಣಯವಿಷಯವನ್ನು ನವಿರಾಗಿ ಚಿತ್ರಿಸುತ್ತಿದ್ದೀರಿ. ನಿಮ್ಮ ವರ್ಣನೆಗೆ ಕಾವ್ಯದ ಗುಣ ಬಂದಿದೆ.

    ReplyDelete
  3. ಧನ್ಯವಾದಗಳು ಕಾಕಾ ಮತ್ತು ಬದರಿ ಸರ್ ರವರಿಗೆ

    ReplyDelete