|
|
|
![]() |
| ಚಿತ್ರ ಕೃಪೆ : ಅಂತರ್ಜಾಲ |
ನಾ ಸಣ್ಣವಳಿದ್ದಾಗ ನಾವು ಒಂದು ವಟಾರದಲ್ಲಿದ್ವಿ. ಪ್ರತಿ ಮಂಗಳವಾರ, ಶುಕ್ರವಾರ ಬೆಳಿಗ್ಗೆ ಸುಮಾರು ೮ ಘಂಟೆ ಹೊತ್ತಿಗೆ
'ಉಧೋ ಉಧೋ' ಅನ್ನೋ ಹಾಡು, ಬಾಚದ ತಲೆಯ ಕಟ್ಟಿದ ಜಡೆಯ ಜೋಗವ್ವ ಬಂದಳೆಂದು ಸಾರುತ್ತಿತ್ತು. ಹಾಗೆ ಬರುವ ಜೋಗತಿಯರ ಸಂಖ್ಯೆ ಕೆಲವೊಮ್ಮೆ ೩-೪ ಕ್ಕಿಂತ ಹೆಚ್ಚಾದದ್ದು ಇದೆ. ಆದರೆ ಅಮ್ಮ ಮಾತ್ರ ವಯಸ್ಸಾದ ಅಥವಾ ಕೈಲಾಗದ ಒಂದಿಬ್ಬರಿಗೆ ಏನಾದರು ಕೊಟ್ಟು ,ಅವರಿತ್ತ ಬಂಡಾರ ಇಸ್ಕೊಂಡು ,ಉಳಿದವರಿಗೆ 'ಮುಂದೆ ಹೋಗಮ್ಮ' ಅನ್ನೋ ಉತ್ತರ ಕೊಡುತ್ತಿದ್ದಳು.
ಈಮೇಲ್ ಗಳಲ್ಲಿ ಹಲವಾರು ವಿಧಗಳಿವೆ. ಅದರಲ್ಲೊಂದು ನೀವು ಈ ಈಮೇಲ್ ನ ಇಂತಿಷ್ಟು ಜನಕ್ಕೆ ಕಳಿಸಿದರೆ, ಇಂತಿಷ್ಟು ದಿನದಲ್ಲಿ ನಿಮ್ಮ ಬದುಕಲ್ಲಿ ಒಂದು ಪವಾಡ ಜರುಗತ್ತೆ ಅನ್ನೋ ವಕ್ಕಣೆ ಉಳ್ಳವು. ಇಷ್ಟೇ ಆದ್ರೆ ಓಕೆ, ಮತ್ತೆ ನೀವು ಕಳಿಸದಿದ್ದಲ್ಲಿ ಹಾಗಾಗತ್ತೆ ಹೀಗಾಗತ್ತೆ ಅನ್ನೋ ಬ್ಲಾಕ್ಕ್ಮೆಲ್ ಯಾಕೆ ?ಇದೇ ತಂತ್ರ ಜೋಗಮ್ಮಗಳೂ ಅನುಸರಿಸುತ್ತಿದ್ದರು. ಕೆಲವರಿಗೆ ಅಕ್ಕಿಯೇ ಬೇಕು ಇನ್ನು ಕೆಲವರು ನಾಲ್ಕಾಣೆ ಕೊಡು ಅನ್ನೋರು. ಕೊಡದಿದ್ದರೆ ನೀನು ಉಧ್ಧಾರ ಆಗಲ್ಲ ಅಂಥ ಶುರು ಮಾಡಿ, ಒಂದೆರಡು ನಿಮಿಷದ ಶಾಪ ಹಾಕುತ್ತಿದ್ದರು. ಆದ್ರೆ ಗಟ್ಟಿಗಿತ್ತಿ ನಮ್ಮಮ್ಮ ನಂಬಬೇಕಲ್ಲ? 'ನೀನ್ ಹೇಳಿ ನಾನ್ ಉಧ್ಧಾರ ಆಗ್ ಬೇಕಾಗಿಲ್ಲ ಹೋಗು' ಅಂದು ಬಿಡೋಳು. ನಮ್ಗೆ ಅಮ್ಮ ಜುಗ್ಗಿ ಅನ್ಸೋಳು.
ಯುಗಾದಿಯ ದಿನದಿಂದ ರಾಮ ಪಟ್ಟಾಭಿಷೇಕದ (ದಶಮಿ) ತನಕ ಹರಿಕಥೆ ಮಾಡಲು ನಮ್ಮೂರಿಗೆ ಶಿವಮೊಗ್ಗದ ಶಂಕರ ದಾಸರು ಅಂತ ಒಬ್ಬ ಹರಿ ಕಥೆ ದಾಸರು ಬರುತ್ತಿದ್ದರು. ೧೦ ದಿನ ದಿನವೂ ಒಂದೊಂದು ಕಥೆ. ಒಮ್ಮೆ ಈ ಸರಣಿಯಲ್ಲಿ 'ರೇಣುಕಾ ಮಹಾತ್ಮೆ'ಕೇಳಿದ ನೆನಪು. 'ಉಧೋ ಉಧೋ' ಅಂದರೆ 'ಉಧ್ಧಂಡ ನಮಸ್ಕಾರ' ಅಂತ, ೧೫-೨೦ ವರ್ಷಗಳ ಹಿಂದೆ ಕೇಳಿದ ಕಥೆ ನನಗಿನ್ನೂ ನೆನಪಿದೆ ಅಂತ ನಂಬುವವರು, ನಂಬ ಬಹುದು.
ಬೆಂಗಳೂರಿನ ಪಾರ್ಕುಗಳಲ್ಲಿ 'ಉಧ್ಯಾನವನದಲ್ಲಿ ಉದಯರಾಗ' ಅನ್ನೋ ಒಂದು ಕಾರ್ಯ ಕ್ರಮ ಮಾಡ್ತಾರೆ. ಒಂದು ಕಾರ್ಯ ಕ್ರಮದಲ್ಲಿ ಶ್ರೀಮತಿ ಸಂಗೀತ ಕಟ್ಟಿ ಕುಲಕರ್ಣಿಯವರು 'ಉಧೋ ಉಧೋ ತಾಯಿ ಎಲ್ಲಮ್ಮ, ನೀ ದೊಡ್ದಾಕ್ಯವ್ವ'
ಅನ್ನೋ ಜನಪದ (?) ಗೀತೆ ಹಾಡಿದ ನೆನಪು.
ಮಾನವ ಅಥವಾ ಇನ್ನಾವುದೇ ಜೀವಿ ಮೊತ್ತ ಮೊದಲಿಗೆ ಅರಸುವುದು ತಾಯಿಯನ್ನ, ತಾಯಿ ಭಾವವನ್ನ. ಬೇವಿನ ಮರದ ಕೆಳಗಿಟ್ಟ ಕಲ್ಲಿನಿಂದ ಹಿಡಿದು ಹೆತ್ತ ತಾಯ ಸೆರಗ ತನಕ 'ಅಮ್ಮ' ಅನ್ನೋದು ಅತೀ ಆಪ್ತ ಭಾವ. ಲಕ್ಷ್ಮೀಷ ತೋಳ್ಪಾಡಿಯವರು ಅದಕ್ಕೆ 'ಮಗುವಿನ ಆಳುವಲ್ಲಿ ತಾಯಿ ತನ್ನ ಹಾಜರಿ ಹಾಕಿದಳು' ಎಂದು ಬರೆಯುತ್ತಾರೆ.
ಎಲ್ಲಮ್ಮನ ಗುಡ್ಡದ ಬಗ್ಗೆ, ಎಲ್ಲಮ್ಮನ ಬಗ್ಗೆ, ಅಲ್ಲಿನ ಆಚರಣೆಗಳ ಬಗ್ಗೆ
ನನಗೆ ತಿಳಿದಿರುವುದು ಅಲ್ಪ. ಆದರೆ ಮಾನವ ಸಹಜವಾದ ದೌರ್ಬಲ್ಯಗಳನ್ನ (?)
ಮೀರಿ ಅವಳು ಸಾಮಾನ್ಯರಲ್ಲಿ ಸಾಮಾನ್ಯರ ತಾಯಾಗಿ ಬೆಳೆದ ರೀತಿ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ.
ಇತ್ತೀಚಿಗೆ ನಾ ಸವದತ್ತಿಗೆ ಹೋದಾಗ ಇವಿಷ್ಟು ಬಿಡಿ ಬಿಡಿ ನೆನಪುಗಳು ಒಟ್ಟಾದವು.
ಅರಸನ ಮಗಳಾಗಿ ಹುಟ್ಟಿ, ಅದೆನ ಅರಸಿ ನೀ ಋಷಿಯ ಕೈ ಹಿಡಿದೆ?
ಮಲ್ಲೆ ಮಲ್ಲಿಗೆಗಳಲಿ ಮಿಂದವಳು, ವನ ಸುಮವನೆಂತು ಮುಡಿದೆ ?
ಜಮದಗ್ನಿಯ ಕ್ರೋಧಾಗ್ನಿಯನೆಂತು ನಂದಿಸಿದೆ?
ಆಸರೆಗೆ ಎಸರ ತರಲು ದಿನವೂ ಹೊಸ ಬಿಂದಿಗೆಯನೆಂತು ಮಾಡಿದೆ?
ಜೀವ ಮಿಲನ ಕಂಡದ್ದಕ್ಕೇ, ಬಿಂದಿಗೆ ಒಂದಾಗದಾದಾಗ ಎಷ್ಟು ಕಂಗಾಲಾದೆ?
"ನಿಗ್ರಹ ಕಳೆದುಕೊಂಡೆ" ಎಂದು ಅಪರಿಗ್ರಹ ಪತಿ ಶಿಕ್ಷಿಸಿದಾಗ ಎಷ್ಟು ನೊಂದೆ?
ನಿನ್ನಲೇ ಜೀವ ತಳೆದ ಜೀವ ನಿನ್ನಂತ್ಯದ ಆಯುಧವಾದಾಗ ಎಷ್ಟು ಬೆಂದೆ?
ಕೊಡಲಿ ಹಿಡಿದು ಕೊಲ್ಲ ಬಂದ ಭಾರ್ಗವ ರಾಮಗೇನೆಂದೆ ?
ಕ್ರೂರ ಪಧ್ಧತಿಗಳನ್ನು ನಿನ್ನದೇ ಮಕ್ಕಳು ಸೇವೆ ಎಂದಾಗ, ಹೇಗೆ ಮೌನವಾದೆ?
ಅಲ್ಲೇಕೆ ಮಾನವನ ಅಧಃಪತನವ ನೀ ಕಾಣದಾದೆ?
ಇಷ್ಟು ಪ್ರಶ್ನೆಗಳ ಉತ್ತರಿಸಲು ಯಾವಾಗ ಬರುವಿ ?
ನೀ ಬಾರದಿದ್ದರೆ, ಹೊಳೆದದ್ದ ನಾನೇ ಬರೆವೆ
ಅರಸನ ಮಗಳಾಗಿದ್ದರೂ ಅರಸಿದ್ದು ಸುಖೀ ದಾಂಪತ್ಯ,
ಲೋಕಕ್ಕೇ ಪ್ರಿಯನಾದ ಸಖನ ಸಖ್ಯ.
ತಾಯಂದಿರೆಲ್ಲ ಬೇಡುವುದು ಲೋಕೊಧ್ಧಾರಕ ಸುತನ,
ನಾನೂ ಅದನೇ ಬೇಡಿದ್ದೆ ಕಂತು ಪಿತನ.
ಜೀವ ಮಿಲನವ ಕಂಡರೆಕ್ಷಣ ಮೈ ಮರೆತೆ.
ಅದು ಬತ್ತಿಸಿತೆನ್ನ ಬಾಳ ಒರತೆ.
ವಿಧಿ ಇತ್ತ ಶಿಕ್ಷೆ ಒಪ್ಪಿ ಕೊಟ್ಟೆ ಕುತ್ತಿಗೆ,
ತುತ್ತನಿತ್ತವ ಕತ್ತ ಕಡಿಯ ಬರೆ ಬದುಕು ಇನ್ನಾವ ಸೊತ್ತಿಗೆ?
ಮತ್ತೆ ಬದುಕ ನೀಡುವೆನೆಂದ ಪತಿಯ ತೊರೆದೆ
ಎಲ್ಲಮ್ಮನಾಗಿ ಮಕ್ಕಳೆಲ್ಲರ ಪೊರೆದೆ
ಉಳಿದಿರುವ ಇನ್ನೊಂದು ಪ್ರಶ್ನೆಗೆ ಉತ್ತರ ನೀನೇ ಕೊಡಬೇಕು
ಮಕ್ಕಳಿಗೆ ಅರಿವು ಕೊಟ್ಟು ಕಾಪಾಡಬೇಕು .
ಎಲ್ಲರ ಅಮ್ಮ ಎಲ್ಲಮ್ಮ ಅಂತೆ .
ಇದು ಹೆಣ್ಣೊಬ್ಬಳು ಜಗದ ತಾಯಾದ ಕಥೆ.
ಯಾಕೋ ಇದನ್ನ ಬರೆವಾಗ ಈ ಸಾಲುಗಳು ನೆನಪಾದವು.
"कुछ रीत जगत की ऐसी हैं
"हर एक सुबह की शाम हुयी हैं
तू कौन हैं तेरा नाम हैं क्या
सीता भी यहाँ बदनाम हुयी "
ಇತ್ತೀಚಿಗೆ ನಡೆದ ಪಡೀಲ್ ಘಟನೆ ನೋಡಿದಾಗ ಅನಿಸಿದ್ದು :
"ಜೀವಿಯ ಮೇಲೆ ನಡೆಯುವ ಎಲ್ಲ ರೀತಿಯ ದೌರ್ಜನ್ಯವೂ ಅಸಹ್ಯ ಮತ್ತು ಖಂಡನೀಯ "
"ಲೋಕದ ಡೊಂಕ ನೀವೇಕೆ ತಿದ್ದುವಿರಿ ?"

ಚೆನಾಗಿದೆ..ಜೋಗತಿಯರು ,ಬಟ್ಟೆ ನರಸಣ್ಣಗಳು,ಹಾವಾಡಿಗರು ಇವೆರೆಲ್ಲಾ ಒಂದುಕಾಲದಲ್ಲಿ ಸಮಾಜದ ವೈಶಿಷ್ಟಪೂರ್ಣ ಭಾಗವಾಗಿದ್ದರು,ಹಲವಾರು ವರ್ಷಗಳಿಂದ ಅವರದೇ ಆದ್ ರೀತಿ-ರಿವಾಜುಗಳನ್ನು ಬೆಳೆಸಿಕೊಂಡು ಬಂದವರವರು ..ಈಗೀಗ ಇವರೆಲ್ಲಾ ಕಾಣೆಯಾಗುತ್ತಿದ್ದಾರೆ..ಇದಕ್ಕೆಲ್ಲಾ ಸಾಕ್ಷರತೆಯೋ ಅಥವಾ ಬದಲಾಗುತ್ತಿರುವ ಜೀವನ ಶೈಲಿಯೋ ಕಾರಣವಿರಬಹುದು ,ಆದರೆ ನಮ್ಮ ಸಮಾಜ ಅವರಲ್ಲಿದ್ದ ಸಾಂಸ್ಕ್ರತಿಕ ಸಂಪತ್ತನ್ನು ಕಳೆದುಕೊಳ್ಳುತ್ತಿರುವುದಂತೂ ಸತ್ಯ.
ReplyDeleteಧನ್ಯವಾದಗಳೊಂದಿಗೆ,
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್
ಧನ್ಯವಾದಗಳು ಚಿನ್ಮಯ್
ReplyDeleteಸವದತ್ತಿ ದೇವಸ್ಥಾನಕ್ಕೆ ಒಮ್ಮೆ ಹೋಗುವ ಅವಕಾಶ ಸಿಕ್ಕಿತ್ತು. ನಾವು ಜಮಖಂಡಿಗೆ ಹೋಗುತ್ತಿದ್ದೆವು. ಯಾಕೋ ನಮ್ಮ ನಿರ್ದೇಶಕರು ಬೇಡ ಎಂದು ಬಿಟ್ಟರು.
ReplyDeleteಹೆಣ್ಣೊಬ್ಬಳು ಜಗದ ತಾಯಾದ ಕಥನ ಮೆಚ್ಚುಗೆಯಾಯ್ತು.
ತೋಳ್ಪಾಡಿಯವರ ಬಗೆಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದೆ.
ನೀವು ಹಾಕಿರುವ ಹಿಂದಿ ಸಾಲುಗಳು ಯಾರವು ಸ್ವರ್ಣಾ ಅವರೇ?
ಪಡೀಲ್ ಘಟನೆಯು ಸರ್ಕಾರದ ವೈಫಲ್ಯದ, ನೈತಿಕ ಪೊಲೀಸರ ಅಟ್ಟಹಾಸದ ಮತ್ತು ಮಾಧ್ಯಮಗಳ ವಿಜೃಭಂಣೆಯ ಕೆಟ್ಟ ಸಂಕೇತ.
ಧನ್ಯವಾದಗಳು ಬದರಿ ಸರ್.
ReplyDeleteಈ ಸಾಲುಗಳು ಅಮರ್ ಪ್ರೇಂ ಚಿತ್ರದ
"ಕುಚ್ ತೊ ಲೋಗ್ ಕಹೇಂಗೆ " ಹಾಡಿನ ತುಣುಕು
ಸ್ವರ್ಣಾ,
ReplyDeleteಊರಲ್ಲಿ ಇರಲಿಲ್ಲ. ಹೀಗಾಗಿ ನಿಮ್ಮ ಲೇಖನ ನೋಡಲು ವಿಳಂಬವಾಯಿತು. ನಮ್ಮ ಸಮಾಜದ ಒಂದು ವಿಕೃತ ಮುಖವನ್ನು ಆಪ್ತವಾಗಿ ತೋರಿಸಿರುವಿರಿ. ಈ ಪದ್ಧತಿಗಳು ಹೇಗೆ ಬೆಳೆದು ಬಂದವು ಎನ್ನುವುದನ್ನು ಸಮಾಜಶಾಸ್ತ್ರಜ್ಞರೇ ವಿವರಿಸಬೇಕು!
ಹೌದು ಕಾಕಾ, ಧನ್ಯವಾದಗಳು
ReplyDeleteಮರಾಠಿ ಫಿಲ್ಮ್ ನೋಡ್ತೀರಾ ಸ್ವರ್ಣಾ?? 'ಜೋಗವಾ' ಅಂತ ಒಂದಿದೆ ನೋಡಿ...sub titles ಇದೆಯಾ ಗೊತ್ತಿಲ್ಲ. ತುಂಬ ಚಂದ ಬರೀತೀರಿ
ReplyDeletevery many years ago had been to savadatti jatre!!
:-)
ಮಾಲತಿ ಎಸ್.
ಥ್ಯಾಂಕ್ಸ್ ಮಾಲತಿ ಮೇಡಂ.
ReplyDeleteಶ್ವಾಸ್ ನೋಡ್ಬೇಕು ಅಂತ ಇದೆ.
ಇದನ್ನೂ ನೋಡ್ತೇನೆ.
ಸ್ವರ್ಣಾ