ಅಮೇರಿಕಾ ಅಮೇರಿಕಾ ಸಿನೆಮಾದಲ್ಲಿ ಒಂದು ಸಂಭಾಷಣೆ
ಇತ್ತು . ಅಮೆರಿಕಾಗೆ ಹೋದ ಸೂರ್ಯ ಅರ್ಥಾತ್ ರಮೇಶ್ , ಶಶಾಂಕ್ ನನ್ನು ಅರ್ಥಾತ್ ಅಕ್ಷಯ್ ಆನಂದನನ್ನು ನಿನಗೆ
ಊರು ನೆನಪಾಗುವುದಿಲ್ಲವೇನೋ ? ಎಂದು
ಕೇಳುತ್ತಾನೆ. ಅದಕ್ಕೆ ಶಶಾಂಕ್ ‘ನಮ್ಮೂರಿನಲ್ಲಿ ಹಳೇ ಪೇಪರ್ ಕಬ್ಬಿಣಾss... ಅಂತ ಬರ್ತಿದ್ನಲ್ಲ ಸಾಬಿ, ಅವನು ನನ್ನ
ಕನಸಿನಲ್ಲಿ ದಿನಾ ಬರುತ್ತಾನೆ’ ಅಂತಾನೆ . ಕೆಲ ವ್ಯಕ್ತಿಗಳೇ ಹಾಗೆ ಅವರೊಂದಿಗಿನ ನಮ್ಮ ಒಡನಾಟ ಅಷ್ಟಾಗಿ ಇಲ್ಲದಿದ್ದರೂ
ಮನಃಪಟಲದಲ್ಲಿ ಉಳಿದುಬಿಡುತ್ತಾರೆ. ಅಂತಹ ಒಬ್ಬ
ವ್ಯಕ್ತಿಯ ಬಗ್ಗೆ ಈ ಪೋಸ್ಟು .
![]() |
|
ಚಿತ್ರಕೃಪೆ : ಅಂತರ್ಜಾಲ
|
![]() |
| ಚಿತ್ರಕೃಪೆ : ಅಂತರ್ಜಾಲ |
ನಮ್ಮೂರಿನ ಮಂಡಕ್ಕಿ ತುಂಬಾ ಪ್ರಸಿಧ್ಧ. ಸಂಜೆ ಚಹಾ ಜೊತೆ ಒಂದಷ್ಟು ಮಂಡಕ್ಕಿ ಜೊತೆಗೆ ಖಾರ , ಮೆಣಸಿನಕಾಯಿ ಬಜ್ಜಿ ಇದ್ದರೆ
ಒಂದು ಕಪ್ಪು ಚಹಾ
ಯಾವ ಮೂಲೆಗೆ ? ಬೆಳಗಿನ ತಿಂಡಿಗೆ ಕೆಲ ಕಡೆ ಸೂಸಲ, ಕೆಲಕಡೆ ಮಂಡಕ್ಕಿ ಉಸುಳಿ ಎಂದು ಕರೆಯಲ್ಪಡುವ ಮಂಡಕ್ಕಿಯನ್ನು ತೋಯಿಸಿ
ಮಾಡಿದ ಒಗ್ಗರಣೆ ತಿಂಡಿ ಫೇಮಸ್ಸು. ಇನ್ನು ದೋಸೆ ,ಪಡ್ದು ಮೆತ್ತಗಾಗೋಕೆ ಮಂಡಕ್ಕಿ ಬೇಕು.
ನಮ್ಮೂರಿನ ಕೆಲ ಅಂಗಡಿಗಳಲ್ಲಿ ಸಿಗುವ ಇನ್ನೊಂದು ತಿಂಡಿ ‘ನರ್ಗಿಸ್ ‘. ನರ್ಗಿಸ್ ಅಭಿಮಾನಿ ಈ ತಿಂಡಿಯನ್ನು ಕಂಡು ಹಿಡಿದು ಆಕೆಯ ಹೆಸರನ್ನು ಇಟ್ಟ ಅಂತ ಅಣ್ಣ
(ಅಪ್ಪ) ಹೇಳೋದನ್ನ ಕೇಳಿದ್ದೇನೆ. ಇನ್ನು ದಾವಣಗೆರೆ ದಾಟಿ ಮುಂದೆ ರಾಣಿಬೆನ್ನೂರು
ತಲುಪಿದರೆ ಗಿರಮಿಟ್ಟು ಕರೆಯುತ್ತದೆ. ಧಾರವಾಡದ
ವರೆಗೂ ಸರಿಸುಮಾರು ಮಂಡಕ್ಕಿಯ ಎಲ್ಲ ತಿಂಡಿಗಳೂ ಸಿಗುತ್ತವೆ . ನಾನು ಸಣ್ಣವಳಿದ್ದಾಗ ನಮ್ಮನೇಲಿ
ಮಂಡಕ್ಕಿಗೆ ಅಂತಲೇ ಒಂದು ದೊಡ್ಡ ಅಲ್ಯುಮಿನಿಯಂ ಡಬ್ಬ ಇತ್ತು . ಅದರಲ್ಲಿ ಯಾವಾಗಲೂ ಮಂಡಕ್ಕಿ
ಸ್ಟಾಕ್ ಇರುತಿತ್ತು . ಅಮ್ಮ ಮನೇಲಿ ಇಲ್ಲದಾಗ ಹಸಿ ಎಣ್ಣೆ , ಖಾರ ಪುಡಿ, ಟೊಮ್ಯಾಟೋ, ನೀರುಳ್ಳಿ ಹಾಕಿ ಮಸಾಲೆ ಮಂಡಕ್ಕಿ ಮಾಡಿ ತಿಂದದ್ದೂ ಇದೆ.
ಒಟ್ಟಿನಲ್ಲಿ ಎಲ್ಲೆಡೆಯೂ. ಎಲ್ಲದಕ್ಕೂ ಸಲ್ಲುವ ಮಂಡಕ್ಕಿ ಎಂದರೆ ನಮ್ಮೂರಿನವರಿಗೆ ಬಲು ಪ್ರೀತಿ.
ಮೈಸೂರು ಪುರಿಯಷ್ಟು ಗಟ್ಟಿಯಲ್ಲದ ರುಚಿಯೂ ಬೇರೆಯಾದ ದಾವಣಗೆರೆ ಮಂಡಕ್ಕಿ ಈಗ ಬೆಂಗಳೂರಲ್ಲೂ ತನ್ನ
ಸ್ಥಾನ ಕಲ್ಪಿಸಿಕೊಂಡಿದೆ. ೨ ದಶಕಗಳ ಹಿಂದೆ ೭೫ ಪೈಸೆ ಲೀಟರ್ ಇದ್ದ ಮಂಡಕ್ಕಿ ಈಗ ೪ ರಿಂದ ೫
ರೂಪಾಯಿ ಆಗಿದೆ. ದಾವಣಗೆರೆಯ ಕೆಲ
ಪರಿವಾರಗಳಿಗೆ ಮಂಡಕ್ಕಿ ತಯಾರಿಸುವ ಭಟ್ಟಿಯೇ
ಜೀವನಾಧಾರ.
ಇಂತಿಪ್ಪ
ಮಂಡಕ್ಕಿಯನ್ನ ಸೈಕಲ್ಲಿನ ಮೇಲೆ ಒಂದು ಚೀಲದಲ್ಲಿ ಹೊತ್ತು ಮಾರಾಟ ಮಾಡೋದನ್ನ ಇಂದಿಗೂ
ನೋಡಬಹುದು. ಆದರೆ ೨ ದಶಕಗಳ ಹಿಂದೆ ತನ್ನ ತಲೆಯ
ಮೇಲೆ ಒಂದು ಚೀಲ ಮಂಡಕ್ಕಿ ಹೊತ್ತು ಒಬ್ಬ ಅಜ್ಜ ಮಧ್ಯಾಹ್ನ ಊಟ ಮುಗಿಸಿ, ಹೆಂಗಸರು ಒಂದು ಸಣ್ಣ
ನಿದ್ದೆ ತೆಗೆದು, ಕಟ್ಟೆ ಮೀಟಿಂಗ್ ಶುರುಮಾಡೋ ಹೊತ್ತಿಗೆ ‘ಮಂಡಕ್ಕಿಯವ್ವಾss‘ ಅಂತ ಕೂಗುತ್ತಾ ಬರುತ್ತಿದ್ದ . ಕೂಗು ಕೇಳಿ ಯಾರಾದರೂ ಹೆಂಗಸರು ಮನೆ ಬಾಗಿಲಿಗೆ ಬರದೇ
ಹೋದರೆ , ಅವರ ಮನೆ ಮುಂದೆ ನಿಂತು ಮತ್ತೆ ದೊಡ್ಡ
ದನಿಯಲ್ಲಿ ಕೂಗುತ್ತಿದ್ದ. ಹೆಂಗಸರು ಹೊರ ಬಂದು ‘ಯಾಕಜ ಕೂಗಿ ಕೂಗಿ ನಿದ್ದಿ ಕೆಡಿಸಾಕತ್ತಿ’ ಅಂತ ಬೈಯ್ಯೋದು ಸಾಮಾನ್ಯವಾಗಿತ್ತು. ಅರ್ಧ ಕಚ್ಚೆ ಉಟ್ಟು , ತಲೆಗೆ ಒಂದು ಮುಂಡಾಸು ಬಿಗಿದ ಅಜ್ಜ ಯಾವಾಗಲೂ ಬಿಳಿ ಜುಬ್ಬಾ
ಧರಿಸಿರುತ್ತಿದ್ದ.
![]() |
| ಚಿತ್ರಕೃಪೆ : ಅಂತರ್ಜಾಲ |
ಅಜ್ಜನ ಫೋಟೋ ಇಲ್ಲ
ಹಾಗಾಗಿ ಮಂಡಕ್ಕಿ ಫೋಟೋ ಮಾತ್ರ ಹಾಕಿದ್ದೇನೆ.ಅಜ್ಜನ ಹಲ್ಲೂ ಒಂಥರಾ ಬಿಳಿ ಮಂಡಕ್ಕಿಯಂತೇ
ಕಾಣುತಿತ್ತು . ಅಜ್ಜ ವ್ಯವಹಾರದಲ್ಲಿ ಪಕ್ಕಾ. ಉದ್ರಿ ಗಿದ್ರಿ ಮಾತೇ ಇಲ್ಲ. ಮಂಡಕ್ಕಿ ಗರಿ
ಗರಿಯಾಗಿದೆಯಾ ಇಲ್ಲವಾ ಅಂತ ನೋಡೋಕೆ ನಾಲ್ಕು ಕಾಳಿಗಿಂತ ಹೆಚ್ಚಿಗೆ ತೊಗೊಂಡು ತಿಂದರೆ ಅಜ್ಜ ಅರ್ಧ
ಲೀಟರ್ ದುಡ್ಡು ಕೊಡು ಅಂದು ಬಿಡುತ್ತಿದ್ದ. ‘ಮಂಡಕ್ಕಿ ಮೆತ್ತಗಾಗ್ಯಾವೆ ‘ ಅಂದರೆ ‘ಚಳಿಗೆ ನೀನೇ ಮುದುರಿಕೊಂಡಿ ಇನ್ನು ಮಂಡಕ್ಕಿ ಏನ್ ಬಿಡು’ ಅಂದು ಬಿಡುತ್ತಿದ್ದ.
ನಾವು ಅದೇ ಬಡಾವಣೆಯಲ್ಲಿ ೩ ಮನೆಗಳಲ್ಲಿ ಎರಡು ದಶಕ ಕಳೆದಿದ್ದರಿಂದ ಅಜ್ಜನಿಗೆ ಮನೆಯ ಎಲ್ಲಾ ವಿಚಾರ ಗೊತ್ತಿರುತ್ತಿತ್ತು . ಹಾಗೆ
ನೋಡಿದರೆ ಎಲ್ಲರ ಮನೆಯ ದೋಸೆಯ ತೂತುಗಳೂ
ಗೊತ್ತಿರುತ್ತಿತ್ತು ಆದರೆ ಆತ ಯಾವತ್ತೂ ಯಾರ ಮನೆಯವರ ಬಗ್ಗೆಯೂ ಹಗುರವಾಗಿ ಮಾತಾಡಿದ್ದು ನನಗೆ
ನೆನಪಿಲ್ಲ. ಎಲ್ಲ ಹೆಣ್ಣು ಮಕ್ಕಳನ್ನೂ ‘ಗೌರವ್ವಾss..’ ಎಂಬ ಒಂದೇ ಹೆಸರಿಂದ ಕರೆಯುತ್ತಿದ್ದ. ಆದರೆ ಹೆಸರಿನ ಹಿಂದೆ ಒಂದು ವಿಶೇಷಣ ಸೇರಿಸುತ್ತಿದ್ದ. ಅಡಿಗೆ ಭಟ್ಟರ ಹೆಂಡತಿ ‘ಭಟ್ರು ಗೌರವ್ವಾ ‘, ಶ್ರೇಷ್ಟಿಗಳ ಹೆಂಡತಿ
‘ಶೆಟ್ರು ಗೌರವ್ವಾ ‘, ಮೇಷ್ಟ್ರ ಹೆಂಡತಿ ‘ಮೇಷ್ಟ್ರು ಗೌರವ್ವಾ’. ಅಜ್ಜನ ನವ ನಾಮಕರಣಕ್ಕೆ ಯಾವ ಹೆಂಗಸೂ ಸಿಟ್ಟಾಗಿದ್ದು ನಾನು
ಕಂಡಿಲ್ಲ.
ಅಜ್ಜ ಬೆಳಿಗ್ಗೆ
ಐದಕ್ಕೆ ಮಂಡಕ್ಕಿ ಭಟ್ಟಿಗೆ ಹೋಗಿ ಒಂದೆರಡು ಚೀಲ ಮಂಡಕ್ಕಿ ತಂದು , ಅದರಲ್ಲಿ ಒಂದನ್ನು ಒಂದು ಮನೆಯ
ಆವರಣದಲ್ಲಿರಿಸಿ, ತಲೆಯ ಮೇಲಿನ ಚೀಲ ಖಾಲಿಯಾದ ಮೇಲೆ ಆ ಮನೆಗೆ ಹೋಗಿ ಮತ್ತೊಂದು ಚೀಲ ತರುತ್ತಿದ್ದ.
ಅದೆಷ್ಟು ವರ್ಷ ಆ ಮನೆಯವರು ಅಜ್ಜನ ಮಂಡಕ್ಕಿಗೆ
ಜಾಗ ಕೊಟ್ಟರೋ ತಿಳಿಯದು . ಬೆಳಿಗ್ಗೆ ಐದಕ್ಕೆ
ಕೆಲಸಕ್ಕೆ ಹೊರಡುತ್ತಿದ್ದ ಅಣ್ಣನಿಗೆ ದಿನವೂ ಅಜ್ಜ ಸಿಗುತ್ತಿದ್ದನಂತೆ. ‘ಒಂದು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ ....ಓಂ ನಮ ಶಿವಾಯ...’ ಅಂತ ಜೋರು ದನಿಯಲ್ಲಿ
ಭಜನೆ ಮಾಡುತ್ತಾ ಹೋಗ್ತಾ ಇರ್ತಾನೆ ಅಂತ ಅಣ್ಣ ವರ್ಣಿಸೋರು. ಹೆಚ್ಚು ಮಾತಾಡದ ಅಣ್ಣನಿಗೆ ಅಜ್ಜ ಎಂದರೆ ಇಷ್ಟ ಹಾಗೆ ಅಜ್ಜನಿಗೂ. ಅಮ್ಮ ದಿನವೂ ಮಂಡಕ್ಕಿಯನ್ನ
ಪರೀಕ್ಷಿಸಿ ಲೀಟರ್ ಸರಿಯಾಗಿ ಅಳಿ ಅಂತ ಮಂತ್ರ ಹೇಳಿ ತೊಗೊಂಡರೆ , ಅಣ್ಣ ಮಾತ್ರ ಡಬ್ಬಿಯನ್ನ ಅವನ
ಮುಂದೆ ಹಿಡಿದು, ಹಾಕಿದಷ್ಟು ಹಾಕಿಸಿಕೊಂಡು ಅವನು ಹೇಳಿದಷ್ಟು ದುಡ್ಡು ಕೊಟ್ಟು ಬಿಡೋರು. ಅದಕ್ಕೋ
ಏನೋ ಅಜ್ಜ ಯಾವಾಗಲೂ ‘ಗೌರವ್ವಾ ನೀ ಬೇಡ
ನಿನ್ನ ಗಂಡನ್ನ ಕರಿ ‘ ಅಂತ ಹೇಳಿ ‘ಹೌದೌದು ಗಂಡ ಹೆಂಡತಿ ಇಬ್ಬರೂ ಕೋಲೆ ಬಸವ ಆದ್ರೆ ಮನೆ ಉಳಿತತೇನು’ ಅಂತ ಅಮ್ಮ ದಬಾಯಿಸೋದು ಮಾಮೂಲಿಯಾಗಿತ್ತು . ಹಾಂ,
ಅಜ್ಜ ಯಾರಿಗಾದರೂ ಬಹುವಚನದಲ್ಲಿ ಕರೆದಿದ್ದು ಅಥವಾ ಅಜ್ಜನನ್ನು ಯಾರಾದರೂ ಬಹುವಚನದಲ್ಲಿ
ಕರೆದಿದ್ದು ನನಗೆ ನೆನಪಿಲ್ಲವಾದ್ದರಿಂದ ನಾನೂ ‘ಏಕ’ ದಲ್ಲೇ ಉಳಿದಿದ್ದೇನೆ .
ಕೆಲ ವರ್ಷಗಳ ನಂತರ ತಿಳಿದದ್ದು ಅಜ್ಜನ ಎಲ್ಲ ಮಕ್ಕಳು ಕೆಲಸ
ಮಾಡುವಷ್ಟು ದೊಡ್ಡವರಾಗಿದ್ದರು ಮತ್ತು ಕೆಲಸ ಮಾಡುತ್ತಿದ್ದರು. ಆದರೂ ಅಜ್ಜ ಮಾತ್ರ ಮಂಡಕ್ಕಿ
ಮಾರೋದನ್ನ ಬಿಡಲಿಲ್ಲ. ಒಂದೆರಡು ಬಾರಿ ಅಣ್ಣ ಅಜ್ಜನಿಗೆ ‘ಇನ್ನೂ ಯಾಕೆ ದುಡಿತಿಯಜ್ಜಾ , ಮನೇಲಿ ಇರಬಾರ್ದೇನು ‘ ಅಂದಿದ್ದಕ್ಕೆ ಅಜ್ಜ ‘ ಏ ಇರ್ಲಿ ಬಿಡಪ
ಕಾಯಕನೇ ಕೈಲಾಸ ಅಲ್ಲೇನು ? ‘ ಅಂದನಂತೆ .
ಇತ್ತೀಚಿಗೆ ಊರಿಗೆ
ಹೋದಾಗ ಸೈಕಲ್ಲಿನ ಮೇಲೆ ಒಬ್ಬಾತ ಮಂಡಕ್ಕಿ ಮಾರುತ್ತಾ ಬಂದ. ‘ಅಮ್ಮಾ ಮಂಡಕ್ಕಿ
ಕೊಡ್ಲಿರಿ ‘ ಅಂದರೆ ಅಮ್ಮ
ಅವರ ಹತ್ತಿರ ಮಂಡಕ್ಕಿ ತೊಗೊಂಡರು. ಕಲ್ಲನ್ನೂ ಮಾತಾಡಿಸುವ ಅಮ್ಮ ಈತನ ಕಷ್ಟ ಸುಖವನ್ನೂ
ವಿಚಾರಿಸುತ್ತಿದ್ದರು .
ನನಗೇಕೋ ಅಜ್ಜನ ನೆನಪಾಗಿ ‘ಮಂಡಕ್ಕಿ ಅಜ್ಜ ಬರ್ತಾನೇನಮ್ಮ’ ಅಂದರೆ ಅಮ್ಮ ‘ಅಜ್ಜ ಹೋಗಿ ಕೆಲ ವರ್ಷ ಆಯ್ತು ‘ ಅಂದರು .
ಕಾಯಕವೇ ಕೈಲಾಸ ಅನ್ನೋದನ್ನ ಕೇಳಿದಾಗಲೆಲ್ಲಾ ನನಗೆ ಅಜ್ಜನ
ನೆನಪಾಗತ್ತೆ. ಮಧ್ಯಾಹ್ನದ ನಿದ್ದೆಯ ಮಂಪರಿನಲ್ಲಿ ‘ಗೌರವ್ವಾss’ ಎಂದು ಅವ ಕರೆದಂತಾಗತ್ತೆ,



ಮಂಡಕ್ಕಿ ಅಜ್ಜನ ಬಗೆಗೆ ಓದುತ್ತ ಹೋದಂತೆ, ಪ್ರೀತಿ ಸ್ಫುರಿಸುತ್ತದೆ; ಮನಸ್ಸು ಉಲ್ಲಾಸಗೊಳ್ಳುತ್ತದೆ; ಆಪ್ತಭಾವನೆ ನಿರ್ಮಾಣವಾಗುತ್ತದೆ. ಖುಶಿಯ ಕ್ಷಣಗಳನ್ನು ನಿರ್ಮಿಸಿಕೊಟ್ಟ ನಿಮಗೆ ಧನ್ಯವಾದಗಳು.
ReplyDeleteಕಾಕಾ ಥ್ಯಾಂಕ್ಸ್
Deleteಮಂಡಕ್ಕಿಯನ್ನು ನಮ್ಮ ಕಡೆ ಕಳ್ಳೇ ಪುರಿ ಅನ್ನೋದು ಇದೆ.
ReplyDeleteನಮ್ಮ ಕೋಲಾರದ ಕಡೆಯ ತೆಲುಗುರ ಪಾಲಿಗಿದು ಬೊರುಗುಲು.
ಅಜ್ಜನ ಪಾತ್ರ ಪರಿಚಯದ ಜೊತೆ, ಆ ಕಾಲಮಾನದ ಸಮಾಜವನ್ನೂ ಚಿತ್ರಿಸಿದ್ದೀರಿ. ಕಾಯಕವೇ ಕೈಲಾಸ ಎನುವ ಅಜ್ಜನ ಬಾಯಲ್ಲಿ ಗೌರಮ್ಮ ಪದವೇ ಚೆನ್ನ.
ನರ್ಗೀಸ್ ನನಗೂ ಬಲು ಇಷ್ಟ ಅದರ ಜೊತೆಗೆ ನನ್ನ ಹೊಟ್ಟೆಯ ಆಕಾರದ ಬಜ್ಜೀ ಮೆಣಸಿನ ಕಾಯಿ ಫೇವರೆಟ್ಟು.
ಓದಿದ ನಂತರ ಮನೆಯವರಿಗೆ ಫೋನಾಯಿಸಿ ಬೆಳಗಿನ ತಿಂಡಿಗೆ ಒದ್ದೆ ಮಂಡಕ್ಕಿ ಮಾಡಲು ಹಳಬೇಕೆಂದಿದ್ದೇನೆ. :)
ಬಹುಶಃ ಬರುವ ಕೆಟ್ಟ ಯುಗದಲ್ಲಿ ವಿದೇಶಿ ಕಂಪನಿಗಳು ಸಗಟು ಚಿಲ್ಲರೇ ಮಾರುಕಟ್ಟೆಗೂ ಲಗ್ಗೆ ಇಟ್ಟರೆ, ಮಂಡಕ್ಕಿಯೂ ಮಳೆಗೆಯಲ್ಲೇ ಕೊಳ್ಳುವಂತಾದರೆ ಇಂತಹ ಮಂಡಕ್ಕಿ, ತರಕಾರಿ ಇನ್ನಿತರ ಬಂಡಿ ವ್ಯಾಪಾರಿಗಳ ಪಾಡೇನು?
ಸರ್, ಮಂಡಕ್ಕಿ ತಿನ್ನೋಕೆ ನಮ್ಮನ್ನೂ ಕರೀರಿ.
Deleteಥ್ಯಾಂಕ್ಸ್
ಸ್ವರ್ಣ ಮಂಡಕ್ಕಿ ಅಜ್ಜನ ಬಗ್ಗೆ ಓದಿ , ನನಗೂ ನಮ್ಮ ಊರಿಗೆ ಬರುತ್ತಿದ್ದ , ಮಂಡಕ್ಕಿ ಸಾಬರು , ಬಳೆಗಾರ , ಹಾಡು ಹೇಳಿಕೊಂಡು ಬರುತ್ತಿದ್ದ ದಾಸಯ್ಯ ಎಲ್ಲ ನೆನಪಾದರು . ಅವರೆಲ್ಲ ಎಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರೆಂದರೆ ಯಾವ ಮನೆಯ ಹೆಂಗಸರೂ ಅವರೆಲ್ಲ ಬಂದರೆ ಹೆದರಿಕೊಂಡದ್ದಿಲ್ಲ. ಮನೆಯಲ್ಲಿ ಒಬ್ಬರೇ ಇದ್ದರೂ ದೈರ್ಯವಾಗಿ ಅವರುಗಳನ್ನು ಪಡಸಾಲೆಗೆ ಕರೆದು ವ್ಯಾಪಾರ ಮಾಡುತ್ತಿದ್ದರು . ಆದರೀಗ ಹಳ್ಳಿಗಳಲ್ಲೂ ಅಂತಹ ವಾತಾವರಣ ಇಲ್ಲ.
ReplyDeleteಹೌದು ಸುಮಾ ಈಗ ಹೆಂಗಸೊಬ್ಬಳು ಮನೆಯಲ್ಲಿ ಇರುವಾಗ ಯಾರನ್ನೂ ಒಲ ಕರೆಯುವಂತಿಲ್ಲ
Deleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
ಮಂಡಕ್ಕಿ ಅಂದ್ರೆ ನಂಗೆ ನೆನ್ಪಾಗೋದು ಮಸಾಲೆ ಮಂಡಕ್ಕಿ....ಅದೂ ತದ್ದಲಸೆಯ ದೇವಸ್ಥಾನದ ಕಾರ್ತೀಕದಲ್ಲಿ... ಜೊತೆಗೆ ಆಟ(ಯಕ್ಷಗಾನ) ಬೇರೆ..ಬೆಳಿಗ್ಗೆ ತನ್ಕಾ ಇರ್ತೀನಿ ಅಂತಾ ಅಪ್ಪ-ಅಮ್ಮನ ಹತ್ರ ಕೊಚ್ಚಿಕೊಂಡು ಬರೋದು.. ಅಂತೂ ಇಂತೂ ಹನ್ನೆರಡು ದಾಟಿಸಿ ಆಮೇಲೆ ಅದೆಷ್ಟು ಮಾಡಿದರೂ ನಿದ್ದೆ ತಾಳಲಾರದೆ ಹಾದಿಬಣ್ಣ ಕೂಡಿ ಬ್ಯಾಟರಿ ಹೊಡೆಯುತ್ತಾ ಮನೆಗೆ ಹೋಗೋದು...ಕೈಲಿ ಯಾರಾದರೂ ದೊಡ್ಡವರು ಕೊಡಿಸಿದ ಮಸಾಲೆಮಂಡಕ್ಕಿ (ನಮ್ಮ ಕೈಲಿದ್ದ ದುಡ್ಡು ಅದಾಗಲೇ ಬಾಂಬೆ ಮಿಟಾಯಿಗೋ ಗಿರಗಿಟ್ಟಿಗೋ ಚಾಕ್ಲೇಟಿಗೂ ಖರ್ಚಾಗಿರುತ್ತಿತ್ತು ಬಿಡಿ)..ಕತ್ತಲೆಯಲ್ಲಿ ನಾವೆಷ್ಟು ತಿಂದೆವೋ,ಅಡಿಕೆಮರದ ಬುಡಕ್ಕೆಷ್ಟೋ..
ReplyDeleteಎಲ್ಲಾ ನೆನಪಾಯಿತು....
ಧನ್ಯವಾದಗಳು ಮಂಡಕ್ಕಿ ಪುರಾಣಕ್ಕೆ :) :)
ಹಾಂ ಚಿಕ್ಕಮಗಳೂರಿನ ಪೀ.ಜಿಯಲ್ಲಿ ಬೆಳಗಿನ ತಿಂಡಿಗೆ ತಿನ್ನುತ್ತಿದ್ದ ಮಂಡಕ್ಕಿಬಾತನ್ನು ತುಂಬಾ ತಪ್ಪಿಸ್ಕೋತಾ ಇದಿನಿ ಈಗ ಬೆಂಗ್ಳೂರಲ್ಲಿ :(
ಥ್ಯಾಂಕ್ಸ್ ಚಿನ್ಮಯ್, ಹೌದು ಮಂಡಕ್ಕಿ ಮಾರುವವರು ಮತ್ತು ಮಂಡಕ್ಕಿ ಕಾಲೇಜು ಜೀವನದ ಒಂದು ಮುಖ್ಯ ಭಾಗ :)
Deleteಇಷ್ಟವಾಗುತ್ತದೆ ನಿಮ್ಮ ಬರಹ.. ಆನಂದ್ ಹಿಂದಿ ಚಿತ್ರದಲ್ಲಿ ರಾಜೇಶ್ ಖನ್ನ ಹೇಳುತ್ತಾರೆ. ಕೆಲವರು ನಿಮಗೆ ಏನೂ ಸಹಾಯ ಮಾಡೋದಿಲ್ಲ ಆದರೂ ಇಷ್ಟವಾಗುತ್ತಾರೆ.. ಕೆಲವರು ನಿಮಗೆ ತುಂಬಾ ಸಹಾಯ ಮಾಡುತ್ತಾರೆ ಆದರೂ ಅವರು ಇಷ್ಟವಾಗೋಲ್ಲ ಅಂತ..
ReplyDeleteಮನುಜನ ಗುಣವೇ ಹಾಗೆ.. ಯಾವೊದೋ ಸಣ್ಣ ಎಳೆಯ ತಂತಿನಲ್ಲಿ ಭಾವ ಅಡಗಿ ಕೂತಿರುತ್ತದೆ..
ಬಾಲ್ಯದ ನೆನಪನ್ನು ತಾಜಾ ತರುವ ಈ ಮಂಡಕ್ಕಿ, ಪುರಿ, ಕಡ್ಲೆ ಪುರಿ, ಕಳ್ಳೆ ಪುರಿ ಹೀಗೆ ಬಹುನಾಮ ಬಿರುದಾಂಕಿತ ಎರಡು ದಶಕಗಳ ಹಿಂದಿನ ಈ ಬಡ ಮಕ್ಕಳ ತಿನಿಸು ಇಂದು ಸಿರಿವಂತರ ಮನೆಯಲ್ಲೂ ಹಾಸು ಹೊಕ್ಕಾಗಿರುವುದು ವಿಶೇಷ..
ಬಹಳ ಇಷ್ಟವಾಗುವ ಲೇಖನ ಸಹೋದರಿ. ಚಿಕ್ಕ ಚಿಕ್ಕದಾಗಿ ಸ್ಮೃತಿ ಪಟಲದಿಂದ ಮರೆಯಾಗಬಹುದಾದ ಇಂತಹ ಸುಮಧುರ ಘಟನೆಗಳನ್ನು ಒಂದು ಸುಂದರ ಮಾಲಿಕಾ ಪುಷ್ಪವಾಗಿ ರಚಿಸಿರುವುದು ನಿಮ್ಮ ಬರಹದ ಶಕ್ತಿ..
ಸೂಪರ್ ಸಹೋದರಿ
ಬೇಲಿ ಬದಿಯ ಹೂಗಳಲ್ಲೂ ಸೌಂದರ್ಯ ಕಾಣುವ ನಿಮಗೆ ಶರಣು ಶ್ರೀಕಾಂತ್ ಭಾಯ್
Deletelovely write up
ReplyDeleteಬಾಯಲ್ಲಿ ನೀರು
:-)
ಥ್ಯಾಂಕ್ಸ್ ಸುಮತಿ ಇಲ್ಲಿಗೆ ಸ್ವಾಗತ :)
Delete